ಡಾ.ಚಿನ್ಮಯ ಎಂ.ರಾವ್
ಸಮಗ್ರ ಕವನ ಸಂಕಲನ
ಕವಿತೆ-6
ನನ್ನೀ ಕವನ
– ಡಾ.ಚಿನ್ಮಯ ಎಂ.ರಾವ್
(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)
ವಿಶಾಲ ಸವಿಸ್ತಾರ ಅಗಣಿತ ದೂರ
ಅಮಿತಸಂಚಾರಭಾವ ಅಮೂರ್ತ ಪರಿಕರ
ನಿರಂತರೋಲ್ಲಾಸ ಅನಂತಭಾವೋಲ್ಲಾಸ
ಅತ್ಯಾನಂದದ ಭಾವಾವೇಶ
ಸಶೇಷ ವಿಶೇಷ ಕವನಾವಶೇಷ
ಕಾಲಾತೀತ ಪ್ರಕಾರ ಪ್ರಖರಸಾರ
ಚಿರಕಾಲ ಕೊಡುಗೆ ಕೊಡುವ ಅಕ್ಷರ
ಕವಿತೆ ಅಕ್ಷರಾತೀತ ಪದಾತೀತ
ವಾಕ್ಯಾತೀತ ಭಾಷಾತೀತ ಭಾಷ್ಯಾತೀತ
ದಿಗಂತ ಅನಂತ ಕವನಾಂತರಂಗ
ವ್ಯವಸಾಯ ವ್ಯವಧಾನ ಸಾವಧಾನ
ನವಕಾಯ ನವಧ್ಯೇಯ ಜನನ
ಸಂಸ್ಮರಣ ಸಂಸ್ಕರಣ ಸಂವೇದನ
ಸಂಭಾವಿತ ಸಾಧ್ಯತೆಗಳ ಉತ್ಖನನ
ನನ್ನೀ ಕವನ ಶಾಶ್ವತ ಸಮಾಧಾನ
ಅವಿರತ ಅನಾವರಣ ಆಲಿಂಗನ
ಅವಾಸ್ತವಿಕತೆಗಳ ಆ ಸ್ಪಂದನ
ಪರಿವರ್ತಿಸುವ ಹಕ್ಕಿಗೆ ಒಡೆತನ
ಕಥನ ನವಸೃಷ್ಟಿಯ ರಚನ
ನನ್ನೀ ಕವನ ಮಧುಸಿಂಚನ
ರೂಪ ಅಪರೂಪದ ಆಕಾರ ನಿರಾಕಾರ
ನಿರ್ವಿಕಾರ ಸುಂದರ ಸುಮಧುರ
ಸ್ವರಸಹಿತ ಸುರಸುಸ್ವರ ಕವಿತ
ಸಾಕಾರಗೊಳಿಸಲು ತ್ವರಿತ
ಸತತ ಮನಸಾರೆ ತುಡಿತ ಮಿಡಿತ
ಈ ಕವಿತಾ..ಸುಕೃತ ಸುಕೃತ
ಚಂಚಲಾಚಲ ನವಭಾವೋದಯ
ಕ್ಷಣ ಕ್ಷಣ ನವಕಾವ್ಯ ಕಾಂಚಾಣ
ಕಂಕಣಪಣ ಅವಿಶ್ರಾಂತವಲಯ
ಸದಾ ಭಾವಾಲಯ ದೇವಾಲಯ
ಈ ಕವನಾಲಯ ಕನಸಿನಾಲಯ
ಲಯಾಲಯ ಶೃತ್ಯಾಲಯ
ಅಪಾರ ಸ್ವಭಾವ ಅಪೂರ್ವ
ಪರಸ್ಪರ ಪ್ರೇಮವ್ಯವಹಾರ
ಭಾವಾಶ್ವವ ಹತ್ತಿ ವಿಹಾರ
ಬೇಕೆಂದಲ್ಲಿಗೆ ಒಯ್ಯುವ ಸವಾರ
ಹೀಗೇ ಈ ಕವನದ ಸಂಚಾರ
ಅರ್ಪಣ ಸರ್ವಾರ್ಪಣ ಸಮರ್ಪಣ
ಸಾಮ್ಯತೆಗಳಿಗೆ ಸದಾ ದರ್ಪಣ
ವಿಭೂಷಣ ಸರ್ವಾಲಂಕಾರ ಪ್ರಾಣ
ಸವಿಯೂಟದ ವಿತರಣ
ನನ್ನೀ ಕವನ ಜಾಣ ಕಾಜಾಣ
ಮದನನ ಹೂಬಾಣ
ಬೆಳೆಸಿ ಬಳಸುತ್ತ ಬಾಂಧವ್ಯ
ಸಿರಿನಿಧಿಕಾವ್ಯ ಸಂಭಾವ್ಯ
ಗಿರಿನದಿಯಂತೆ ಕಾವ್ಯ ಭವ್ಯ
ದಿವಕಾಂತಿಯಂತೆ ದಿಟ ದಿವ್ಯ
ನವ್ಯ ನವ್ಯವೀ ಕವನ
ಚಿಂತನ ಮಂಥನ ಚಿರಂತನ
ಏಕಾಂತದಿ ಹೊಳೆವ ಕಿರಣ
ಮೌನದಾಭರಣದಿ ಅಲಂಕರಣ
ಧ್ಯಾನವೇ ಅಲ್ಲಿ ವಿಶೇಷಣ
ಕಣಕಣದ ವಿಶ್ಲೇಷಣ
ನಿತ್ಯನೂತನ ಕಿರಣ ಚೆಲ್ವ ಚೇತನ
ತನ್ನದ್ದೇ ತನ ತನ್ ತನ ಹೊಸತನ
ಸನಾತನ ವಿನೂತನ ಸಚ್ಚಿಂತನ
ಚಿತ್ರಿಸುತ ಚಿಂತಿಸುತ ಚಿಂತೆ ದಹನ
ತೇರಿನಂತೆ ಸಿಂಗಾರಗೊಂಡ ವಾಹನ
ನನ್ನೀ ಕವನ ನನ್ನೀ ಕವನ
ಚಿನ್ಮಯ ಎಂ ರಾವ್
2005
*******************