ನಾಯಕ-ನಾಯಕಿ

ದಂಡುಪಾಳ್ಯದ ಮೇಲೆ ಸ್ವಾತಿ ನಕ್ಷತ್ರದ ಕಣ್ಣು?!

ಒಂದಂತೂ ಸತ್ಯ. ದಂಡುಪಾಳ್ಯ ಎಂಬ ನೈಜಕಥೆಯಾಧಾರಿತ ವಿಚಿತ್ರ ವಿವಾದಭರಿತ ಚಿತ್ರ ಯಾರ್ಯಾರ ಜೀವನದ ಕಥೆಯನ್ನು ಬದಲು ಮಾಡುವುದೋ ಗೊತ್ತಿಲ್ಲ. ನಿರ್ಮಾಪಕರಾದಿಯಾಗಿ ಅದರಲ್ಲಿ ಕೆಲಸ ಮಾಡಿದ ಎ ಟು eóÉಡ್ ವ್ಯಕ್ತಿಗಳು ಆ ಚಿತ್ರದ ಬಗ್ಗೆ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚಿಗೆಯೇ ಆಸಕ್ತಿವಹಿಸಿದಂತೆ ಕಾಣುತ್ತಿದೆ. ಪೂಜಾಗಾಂಧಿಯೆಂಬ ಅಭಿಮಾನಿಗಳಿಂದ ಪೂಜಿಸಲ್ಪಡುವ ನಟಿಯ ಬೆತ್ತಲೆ ಬೆನ್ನು ಅದ್ಯಾವ ಮಟ್ಟಕ್ಕೆ ಚರ್ಚೆಯಾಯಿತೆಂದರೆ ಕೆಲವು ಸುದ್ದಿ ವಾಹಿನಿಗಳೂ ತಮ್ಮ ಅತ್ಯಮೂಲ್ಯ ಸಮಯವನ್ನು ನೀಡಿ ನಿರ್ಮಾಪಕರಿಗೆ ಪುಕ್ಕಟೆ ಲಾಭ ಮಾಡಿಕೊಟ್ಟರು ! ಇನ್ನೂ ಈ ಚಿತ್ರ ಬಿಡುಗಡೆಯಾಗಿ ನಿರ್ಮಾಪಕರಿಗೆ ಲಾಭ ಮಾಡಿ ಕೊಡುವುದೋ ಇಲ್ಲವೋ ಎಂಬುದು ಮುಂದಿನ ಮಾತು.

ಒಂದೆಡೆ ನೈಜತೆಗೆ ಒತ್ತು ನೀಡುವ ಸಲುವಾಗಿ ಹಿಂಸೆ, ಕ್ರೌರ್ಯ, ಬೆತ್ತಲೆ ಬೆನ್ನು ಇವೆಲ್ಲವನ್ನೂ ಸಹಜವಾಗಿಯೇ ತೋರಿಸಿದ್ದೇವೆ ಎಂದು ನಿರ್ದೇಶಕರು ಹೇಳಿಕೊಂಡರೆ ಇನ್ನೊಂದೆಡೆ ಸಮಾಜದ ಹಿತಚಿಂತಕರು “ಇವನ್ನೆಲ್ಲಾ ತೋರಿಸಿ ಸಮಾಜಕ್ಕೆ ಯಾವ ರೀತಿಯ ಸಂದೇಶ ನೀಡುತ್ತಿದ್ದಾರೆ? ಇದರ ಅಗತ್ಯವಿತ್ತಾ?” ಎಂದು ಬಿಡುಗಡೆಯಾಗುವ ಮುನ್ನವೇ ಚಿತ್ರವನ್ನು ಅನುಮಾನದಿಂದ ನೋಡಿ ಪ್ರಶ್ನಿಸುತ್ತಿದ್ದಾರೆ.

ಇಷ್ಟೆಲ್ಲಾ ಅತಂಡ ವಿತಂಡ ವಾದ ವಿವಾದಗಳು ನಡೆಯುತ್ತಿದ್ದರೂ ದಂಡುಪಾಳ್ಯ ಚಿತ್ರತಂಡ ಮಾತ್ರ ಕಂಡು ಕೇಳರಿಯದ ಬಗೆಯಲ್ಲಿ ಬಗೆ ಬಗೆಯಾಗಿ ಅದರ ಮೇಕಿಂಗ್ ಬಗ್ಗೆ ಬಣ್ಣಿಸುತ್ತ ಆಹಾ ಓಹೋ ಎನ್ನುತ್ತಿದ್ದಾರೆ ! ಚಿತ್ರದ ಬಿಡುಗಡೆಯ ಮೇಲೆ ತಲೆಗೆರಡರಂತೆ ತಮ್ಮದೊಂದು ಕಣ್ಣಿಟ್ಟಿದ್ದಾರೆ ! ಹೀಗೆ ಕಣ್ಣಿಟ್ಟವರಲ್ಲಿ ಸುಂದರ ಕಂಗಳ ಈ ಸುಂದರಿಯೂ ಒಬ್ಬಳು.

ಅವಳೊಬ್ಬಳಾದರೆ ಇವಳೊಬ್ಬಳು…!

ಎಸ್…ಇಬ್ಬರು ನಾಯಕಿಯರಿರುವ ದಂಡುಪಾಳ್ಯ ಚಿತ್ರದಲ್ಲಿ ಪೂಜಾಗಾಂಧಿ ಒಬ್ಬಳಾದರೆ ಅವಳಿಗೆ ಸರಿಸಮನಾಗಿ ನಟಿಸಿದವಳು ಸ್ವಾತಿ ಎಂಬ…ಕನ್ನಡ ಚಿತ್ರಜಗತ್ತಿನಲ್ಲಿ ಇನ್ನೂ ಕಣ್ ತೆರೆಯುತ್ತಿರುವ ನಕ್ಷತ್ರ. ಹೇಳಿಕೊಳ್ಳುವಂತಹ ಯಾವ ಹಿಟ್ ಚಿತ್ರಗಳನ್ನೂ ನೀಡದ ಇದೇ ಸ್ವಾತಿ ಅದನ್ನು ಹಾಗೆಯೇ ಹೇಳಿಕೊಳ್ಳುತ್ತಾಳಲ್ಲ..ಅದೇ ದೊಡ್ಡ ಸಂಗತಿ ! ಅಷ್ಟರ ಮಟ್ಟಿಗೆ ಆಕೆಯಲ್ಲಿ ಪ್ರಾಮಾಣಿಕತೆಯಿರುವುದನ್ನು ನೋಡಿದರೆ ಬೇರೆ ನಾಯಕಿಯರಿಗಿಂತ ಕೊಂಚ ವಿಭಿನ್ನ ಎಂದೆನಿಸುತ್ತಾಳೆ. ತಾನು ಆ ಚಿತ್ರದಲ್ಲಿ ಮಾಡಿದ್ದೇನೆ..ಈ ಚಿತ್ರದಲ್ಲಿ ಕಡಿದು ಗುಡ್ಡೆ ಹಾಕಿದ್ದೇನೆ..ಅದು ಹಿಟ್ಟು..ಇದೂ ಹಿಟ್ಟು..ಎಲ್ಲದಕ್ಕೂ ನಾನೇ ಕಾರಣ ಎಂದು ತಲೆಕೆಟ್ಟು ಎಲ್ಲಾ ಕ್ರೆಡಿಟ್ಟುಗಳನ್ನು ತನ್ನ ಮುಡಿಗೇರಿಸಿಕೊಳ್ಳುವ ದುಸ್ಸಾಹಸ ಮಾಡದ ಸ್ವಾತಿ…ಒಪ್ಪಿಕೊಳ್ಳುತ್ತಾಳೆ ತನ್ನ ಸೋಲುಗಳ ನಿಜ ಸಂಗತಿ…ಆದರೆ ತೆರೆ ಕಾಣಲು ತಯಾರಾಗಿರುವ ದಂಡುಪಾಳ್ಯ ತನ್ನ ಕೆರಿಯರ್ರನ್ನೇ ಬದಲಾಯಿಸುತ್ತದೆ..ಇದು ಗ್ಯಾರಂಟಿ ಎನ್ನುವುದು ಆಕೆಯ ಆಶಾವಾದದ ರೀತಿ.

ಮಿಸ್ ಕರ್ನಾಟಕ ಮಿಸ್ ಮಾಡಿಕೊಳ್ಳದ ಮಿಸ್..

ಮೈಮನದ ಚೆಲುವಿಗೆ ಮತ್ತೊಂದು ಹೆಸರಾದ ಮೈಸೂರಿನ ಈ ಚೆಲುವೆ ಸನ್ ಸಿಲ್ಕ್ ಅವರು 2007ರಲ್ಲಿ ನಡೆಸಿದ್ದ ಕಾಂಟೆಸ್ಟಿನಲ್ಲಿ ಮಿಸ್ ಕರ್ನಾಟಕ ಹಾಗು ಮಿಸ್ ಬ್ಯುಟಿಫುಲ್ ಐಸ್ ಅನ್ನು ಮಿಸ್ ಮಾಡಿಕೊಳ್ಳದೆ ತನ್ನ ಮುಡಿಗೇರಿಸಿಕೊಂಡಿದ್ದಳು. “ನೀನೇನು ಚೆನ್ನಾಗಿದ್ದೀಯಾ ಅಂತ ಪಾರ್ಟಿಸಿಪೇಟ್ ಮಾಡುತ್ತಿದ್ದೀಯ…ಮೊದಲ ರೌಂಡಿಗಾದರೂ ಎಂಟ್ರಿ ಸಿಗುತ್ತಾ ಎಂದು ನಕ್ಕಿದ್ದ ಗೆಳತಿಯರ ನಾಲಿಗೆಗಳನ್ನು ನಾಚುವಂತೆ ಮಾಡಿದ್ದಳು ಇದೇ ಸ್ವಾತಿ ಫಲಿತಾಂಶ ಬಂದಾಗ ! ಅಲ್ಲಿಂದ ತನ್ನ ಹೆಸರನ್ನು ಚಾಲ್ತಿಗೆ ತಂದುಕೊಂಡ ಸ್ವಾತಿ ಮಾದೇಶ ಚಿತ್ರದಲ್ಲಿ ಸೆಕೆಂಡ್ ಲೀಡ್ ರೋಲಿನಲ್ಲಿ ಅಭಿನಯಿಸಿ ಫಸ್ಟ್ ಲೀಡ್ ರೋಲ್ ಮಾಡಿದ ಮುಂಬೈ ಬೆಡಗಿಯೆದುರು ಲೀಡಿಂಗ್ ಅಂತರದಲ್ಲಿ ಗೆದ್ದಳು !
ಶಿವಣ್ಣ, ರವಿ ಬೆಳೆಗೆರೆ ಅಂಥಹ ದಿಗ್ಗಜರೊಡನೆ ನಟಿಸಿ ಎಲ್ಲರ ಮನ ಗೆದ್ದಳು. ಆದರೆ ಎರಡನೆಯ ಚಿತ್ರ “ಚಿನ್ನದ ತಾಳಿ” ಮಾತ್ರ ಜನಮನ ಗೆಲ್ಲಲಿಲ್ಲ. ಆನಂತರ ತನ್ನ ಬರ್ತ್‍ಡೆ ದಿನವೇ ಮಾಡಿಕೊಂಡ ರಸ್ತೆ ಅಪಘಾತದಿಂದ ಒಂದು ವರ್ಷ ಸ್ವಾತಿಗೆ ಮನೆ ಬಿಟ್ಟು ರಸ್ತೆಗೆ ಕೂಡ ಇಳಿಯಲಾಗಲಿಲ್ಲ !

ಸೈಕಲ್ ಸ್ವಾತಿಯಾಗಿ ಬಂದಳು…!

ಆರೊಗ್ಯವಂತಳಾಗಿ ಬಂದ ಸ್ವಾತಿ ಕಿರುತೆರೆಯ ಮೂಲಕ “ಪ್ಯಾಟೇ ಹುಡುಗಿ ಹಳ್ಳಿ ಲೈ¥sóï”ನಲ್ಲಿ ಮತ್ತೆ ಲೈಫ್ ಪಡೆದಳು. ಆ ರಿಯಾಲಿಟಿ ಶೋನಲ್ಲಿ ಸೈಕಲ್ ರೇಸ್ ವಿನ್ ಆದ ಹುಡುಗಿ ಸೈಕಲ್ ಸ್ವಾತಿ ಎಂಬ ಪುನರ್ನಾಮಕರಣದಿಂದ ಪುನರ್ಜನ್ಮ ಪಡೆದಳು ! “ಬಿಡಲಾರೆ ಎಂದೂ ನಿನ್ನ” ಎನ್ನುತ್ತಾ ಮತ್ತೆ ಚಿತ್ರರಂಗವನ್ನು ಅಪ್ಪಿಕೊಂಡಳು. ಅತ್ತ ತಮಿಳಿನ “ಉಚ್ಚಕಟ್ಟಂ” ಎಂಬ ಚಿತ್ರದಲ್ಲೂ ನಾಯಕಿಯಾಗಿ ಬಂದಳು.

ಈಗ ಎಲ್ಲಾ ಬಿಡುಗಡೆಗೆ ಬಾಕಿ..
ಸ್ವಾತಿ ಕುಳಿತಿದ್ದಾಳೆ ದಂಡುಪಾಳ್ಯದ ಮೇಲೆ ಕಣ್ಣು ಹಾಕಿ..?!

ಹೌದು..ದಂಡುಪಾಳ್ಯ ಚಿತ್ರದ ತನ್ನ ಪಾತ್ರದಿಂದ ತಾನು ಜನ ಮೆಚ್ಚುಗೆಗೆ ಪಾತ್ರಳಾಗುತ್ತೇನೆ..ಎಂದು ಖಡಕ್ಕಾಗಿ ಖಚಿತವಾಗಿ ನುಡಿಯುತ್ತಿರುವ ಸ್ವಾತಿ ಅದು ಬಿಡುಗಡೆಯಾದ ಮೆಲೆಯೇ ತಾನು ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳುತ್ತೇನೆ ಎಂದು ಬಂದ ಚಿತ್ರಗಳನ್ನೆಲ್ಲಾ ಬದಿ ಸರಿಸುತ್ತಿದ್ದಾಳೆ. ಇಷ್ಟರ ಮಟ್ಟಿಗೆ ಆ ಚಿತ್ರದ ಬಗ್ಗೆ ಆತ್ಮವಿಶ್ವಾಸ ಹೊಂದಿರುವ ಸ್ವಾತಿ ಆ ಚಿತ್ರದಿಂದ ಅಥವಾ ಮುಂಬರುವ ಚಿತ್ರಗಳಿಂದ ವಿಶ್ವಾಸಾರ್ಹ ನಟಿಯಾಗುತ್ತಾಳಾ ಎಂಬುದೇ ಅವಳ ಅಭಿಮಾನಿಗಳ ಈ ಕ್ಷಣದ ಪ್ರೆಶ್ನೆ..

ಚಿನ್ಮಯ ಎಂ.ರಾವ್ ಹೊನಗೋಡು (21-5-2012)

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.