ಶಿವಮೊಗ್ಗ ಜಿಲ್ಲಾ ಕೇಂದ್ರದ ಸಮೀಪದ ಸಿದ್ದೇಶ್ವರ ನಗರದಲ್ಲಿರುವ ಒಂದು ದೊಡ್ಡ ಗುಡ್ಡೆ ಶಕ್ತಿ ಸ್ಥಳವಾಗಿ ಮಾರ್ಪಟ್ಟಿದ್ದು ಶ್ರೀಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನ ಸದಾ ಭಕ್ತರನ್ನು ಕೈಬೀಸಿ ಕರೆಯುತ್ತದೆ.
ಗುಡ್ಡೇಕಲ್ಲು ಎಂದು ಕರೆಯಲ್ಪಡುವ ಈ ದೇವಾಲಯ ಇರುವ ಸ್ಥಳ ಗುಡ್ಡದಿಂದ ಕೂಡಿದೆ.ಈ ಗುಡ್ಡ ಕಲ್ಲುಗಳಿಂದ ಕೂಡಿದ್ದು ಸುಂದರ ಪ್ರಕೃತಿ ರಮಣೀಯತೆ ಹೊಂದಿದೆ.
ಸುಮಾರು ನೂರು ವರ್ಷಗಳ ಹಿಂದೆ ಈ ಸ್ಥಳ ದಟ್ಟ ಅರಣ್ಯದಿಂದ ಕೂಡಿದ ನಿರ್ಜನ ಪ್ರದೇಶವಾಗಿತ್ತು.
ಸ್ಥಳ ಪುರಾಣ :
ಈಗ ಸುಮಾರು 80 ವರ್ಷಗಳ ಹಿಂದೆ ತಮಿಳುನಾಡಿನಿಂದ ಕೂಲಿ ಕೆಲಸ ಹುಡುಕಿಕೊಂಡು ಶಿವಮೊಗ್ಗಕ್ಕೆ ಒಂದು ಕುಟುಂಬ ವಲಸೆ ಬಂದಿತ್ತು. ಈ ಕುಟುಂಬದ ಮಹಿಳೆ ಚೆನ್ನಮ್ಮ ಎಂಬವಳು ಪ್ರತಿದಿನ ಕೆಲಸ ಮುಗಿಸಿ ಬಂದ ನಂತರ ಸಂಜೆ ಈ ಗುಡ್ಡದಲ್ಲಿರುವ ಗವಿ ಸಿದ್ದೇಶ್ವರ ದೇವರ ವಿಗ್ರಹಕ್ಕೆ ಅಡುಗೆ ಮಾಡಿ ನೈವೇದ್ಯ ಸಮರ್ಪಿಸುತ್ತಿದ್ದಳು.
ಒಂದು ದಿನ ಅನಾರೋಗ್ಯದಿಂದ ಬಳಲುತ್ತಾ ಮಲಗಿದ್ದಳು. ರಾತ್ರಿ ಕನಸಿನಲ್ಲಿ ಶ್ರೀಸುಬ್ರಹ್ಮಣ್ಯ ಸ್ವಾಮಿ ಕಾಣಿಸಿಕೊಂಡು ಈ ಗುಡ್ಡದ ಮೇಲೆ ತಮಿಳುನಾಡಿನ ಪಳನಿಯಲ್ಲಿ ಇರುವಂತೆ ಒಂದು ವಿಗ್ರಹ ತಯಾರಿಸಿ ಪ್ರತಿಷ್ಠಾಪಿಸಬೇಕು.ಪ್ರತಿನಿತ್ಯ ಪೂಜೆ ಪುನಸ್ಕಾರ ಮಾಡಿ ಭಕ್ತಿ ಸೇವೆಯಲ್ಲಿ ನಿರತರಾದವರಿಗೆಲ್ಲ ಬರುವ ಕಾರ್ಪಣ್ಯ ನೀಗಿ ಆರೋಗ್ಯ ಮತ್ತು ಮನಶ್ಶಾಂತಿ ನೀಡುವುದಾಗಿ ತಿಳಿಸಿದನಂತೆ.
ಕನಸಿನ ಮರ್ಮವನ್ನು ಅರಿತ ಆ ಮಹಿಳೆ ಆ ಪ್ರದೇಶದ ಸುತ್ತಮುತ್ತಲ ಜನರಿಂದ ತನು,ಮನ ಧನ ಸಹಾಯ ಸ್ವೀಕರಿಸಿ ಪಳನಿಯಲ್ಲಿ ಇರುವಂತೇಯೇ ಶ್ರೀಸುಬ್ರಹ್ಮಣ್ಯ ಸ್ವಾಮಿಯ ಒಂದು ವಿಗ್ರಹ ಪ್ರತಿಷ್ಠಾಪಿಸಿ ಚಿಕ್ಕ ಗುಡಿ ಕಟ್ಟಿಸಿ ನಿತ್ಯ ಪೂಜೆ ನಡೆಸುತ್ತಾ ಬಂದಳು.ಅವಳ ಆರೋಗ್ಯ ಸುಧಾರಿಸಿ ಸದಾ ಶಾಂತಿಯ ಜೀವನ ಸಿದ್ಧಿಸಿತು.ದೇವರ ಮಹಿಮೆ ಅರಿತು ದಿನೇ ದಿನೇ ಭಕ್ತರ ಆಗಮನ ಹೆಚ್ಚುತ್ತಾ ಸಾಗಿತು.ನಂತರ ಕೇರಳ ಮೂದ ಒಬ್ಬ ಅರ್ಚಕರನ್ನು ಕರೆತಂದು ನಿತ್ಯವೂ ಶಾಸ್ತ್ರೋಕ್ತ ಪೂಜೆಗೆ ವ್ಯವಸ್ಥೆ ಕಲ್ಪಿಸಿದಳು. ಕೆಲ ವರ್ಷಗಳ ನಂತರ ವಯೋವೃದ್ಧೆಯಾದ ಆ ಮಹಿಳೆ ನಿಧನಹೊಂದಿದಳು.ಅರ್ಚಕರು ಸಮೀಪದ ತುಂಗಾ ನದಿಯಿಂದ ನೀರನ್ನು ತಂದು ದೇವರಿಗೆ ಅಭಿಷೇಕ ನಡೆಸಿ ಪೂಜಾ ಕಾರ್ಯ ಮುಂದುವರೆಸಿದರು.ತಮಿಳು ನಾಡಿನಿಂದ ಕೆಲಸವನ್ನರಸಿ ಶಿವಮೊಗ್ಗಕ್ಕೆ ಬರುವವರ ಸಂಖ್ಯೆ ಹೆಚ್ಚಾಯಿತು.ಹೀಗೆ ಬಂದವರೆಲ್ಲ ಈ ದೇವಾಲಯದ ಭಕ್ತರಾಗಿ ನಿತ್ಯ ದೇವರ ಆರಾಧನೆ ನಡೆಸಲಾರಂಭಿಸಿದರು.1948 ರಲ್ಲಿ ಸರಕಾರ ಈ ದೇವಾಲಯಕ್ಕೆ ಒಂದು ಗುಂಟೆ ಜಮೀನು ಮಂಜೂರು ಮಾಡಿತ್ತು.2010 ರಲ್ಲಿ ಯಡ್ಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದಾಗ ಈ ದೇವಾಯಕ್ಕೆ 3 ಎಕರೆ 24 ಗುಂಟೆ ಜಮೀನು ಮಂಜೂರು ಮಾಡಿದರು,ಇದರಿಂದ ಈ ದೇವಾಲಯದ ಅಭಿವೃದ್ಧಿಯ ವೇಗ ಹೆಚ್ಚಾಯಿತು. ನಂತರ ದೇವಾಲಯದ ಅಭಿವೃದ್ಧಿಗೆ ಟ್ರಸ್ಟ ಸ್ಥಾಪಿಸಿ ಕ್ರಿಯಾಶೀಲಗೊಳಿಸಲಾಯಿತು.
ನಿತ್ಯೋತ್ಸವ ಪೂಜೆ : ಪ್ರತಿ ವರ್ಷ ವೈಭವದ ವಿಶಿಷ್ಟ ಉತ್ಸವಗಳು
ಇಲ್ಲಿನ ದೇವರಿಗೆ ನಿತ್ಯವೂ ತ್ರಿಕಾಲ ಪೂಜೆ ನಡೆಸಲಾಗುತ್ತದೆ. ಶ್ರಾವಣ ಮಾಸದಲ್ಲಿ ತಿಂಗಳಿಡೀ ಅಭಿಷೇಕ ಮತ್ತು ಅಲಂಕಾರ ಪೂಜೆ ,ಕಾರ್ತಿಕ ಮಾಸದಲ್ಲಿ ನಿತ್ಯ ದೀಪೋತ್ಸವ ನಡೆಯುತ್ತದೆ. ವರ್ಷದ ಕೆಲವು ವಿಶಿಷ್ಟ ದಿನಗಳಂದು ಸ್ವಾಮಿಯ ಪರ್ವ ದಿನವೆಂದು ವೈಭವದ ಉತ್ಸವ ನಡೆಸಲಾಗುತ್ತದೆ.
ಆಡಿಕೃತ್ತಿಕೆ ಉತ್ಸವ:ಇಲ್ಲಿನ ದೇವಾಲಯದಲ್ಲಿ ಆಡಿಕೃತ್ತಿಕೆ ಉತ್ಸವ ವಿಶೇಷವಾಗಿ ಆಚರಿಸಲ್ಪಡುತ್ತದೆ.ಪ್ರತ ವರ್ಷ ಆಷಾಢ ಅಥವಾ ಶ್ರಾವಣ ಮಾಸದಲ್ಲಿ ಬರುವ ಕೃತ್ತಿಕೆ ದಿನದಂದು ಎರಡು ದಿನಗಳ ಕಾಲ ಉತ್ಸವ ಆಚರಸಲಾಗುತ್ತದೆ. ಹರಕೆ ಹೊತ್ತ ಭಕ್ತರು ಉದ್ದನೆಯ ದಂಡದಲ್ಲಿ ಒಂದು ಕಡೆಯ ಬುಟ್ಟಿಯಲ್ಲಿ ನೈವೇದ್ಯದ ಸಾಮಗ್ರಿ ,ಇನ್ನೊಂದು ಕಡೆಯ ಬುಟ್ಟಿಯಲ್ಲಿ ಪೂಜೆಯ ಸಾಮಗ್ರಿ ಇರಿಸಿಕೊಂಡು ಕಾವಡಿ ಸೇವೆ ಸಲ್ಲಿಸುತ್ತಾರೆ. ಇನ್ನು ಕೆಲವು ಭಕ್ತರು ಹರಕೆಯಾಗಿ ನಾಲಿಗೆ, ಕೆನ್ನೆ, ಬೆನ್ನು ಇತ್ಯಾದಿ ದೇಹದ ಭಾಗಗಳಿಗೆ ಚೂಪಾದ ಶೂಲದಿಂದ ಚುಚ್ಚಿ ಕೊಂಡಿಯ ಸಹಾಯದಿಂದ ದೇವರ ರಥವನ್ನು ಎಳೆದು ಕಾವಡಿ ಹರಕೆ ಸಲ್ಲಿಸುತ್ತಾರೆ. ಈ ದೃಶ್ಯಗಳನ್ನು ನೋಡಲು ಮತ್ತು ಹರಕೆ ತೀರಿಸಲು ಸಾವಿರಾರು ಭಕ್ತರು ಸೇರುತ್ತಾರೆ.ಈ ಉತ್ಸವದ ಸಂದರ್ಭದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಅಷ್ಟೇ ಹೊರ ರಾಜ್ಯಗಳಿಂದ ಸಹ ಸ್ವಾಮಿಯ ಭಕ್ತರು ಆಗಮಿಸಿ ತಮ್ಮ ಹರಕೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಪ್ರತಿ ವರ್ಷ ಕಾರ್ತಿಕ ಮಾಸದ ಕೃತಿಕಾ ದಿನದಂದು ವೈಭವದ ದೀಪೋತ್ಸವ ನಡೆಸಲಾಗುತ್ತದೆ.
ಬಾಲಸುಬ್ರಹ್ಮಣ್ಯ ಸ್ವಾಮಿ ದೇವರು ಉತ್ತರ ನಕ್ಷತ್ರದಲ್ಲಿ ಶ್ರೀವಲ್ಲಿಯನ್ನು ವಿವಾಹವಾದ ನೆನಪಿಗಾಗಿ ಪ್ರತಿ ವರ್ಷ ಬ್ರಹ್ಮೋತ್ಸವ ನಡೆಸಲಾಗುತ್ತದೆ.ಬಾಲಸುಬ್ರಹ್ಮಣ್ಯ ಸ್ವಾಮಿ ದೇವರು ಆರು ಮುಖವುಳ್ಳ ಷಣ್ಮುಖನ ಅವತಾರ ತಾಳಿ ತಾರಕಾಸುರನನ್ನು ವಧಿಸಿದ್ದರ ನೆನಪಿಗಾಗಿ ಪ್ರತಿ ತಿಂಗಳು ಶುಕ್ಲ ಪಕ್ಷದ ಷಷ್ಠಿ ತಿಥಿಯಂದು ವಿಶೇಷ ಪೂಜೆ, ಅಭಿಷೇಕ, ಹಾಗೂ ಉತ್ಸವ ನಡೆಸಲಾಗುತ್ತದೆ. ಈ ದಿನಗಳಂದು ರಾಜ್ಯದ ಹಲವು ಪ್ರದೇಶದಿಂದ ಭಕ್ತರು ಆಗಮಿಸಿ ಪೂಜೆಸಲ್ಲಿಸುತ್ತಾರೆ.
ಫೋಟೋ ಮತ್ತು ಲೇಖನ :ಎನ್.ಡಿ.ಹೆಗಡೆ ಆನಂದಪುರಂ
10-10-2015