ಕನ್ನಡಸಂಗೀತ ಸಮಯ

ಸಂಗೀತ ಸಾಧನೆಯೆಂಬುದು ಭಕ್ತ ಹಾಗೂ ಪರಮಾತ್ಮನ ನಡುವೆ ಏರ್ಪಡುವ ಅತ್ಯಂತ ವ್ಯವಸ್ಥಿತ ಸೇತುವೆ

ಬೆಂಗಳೂರು : ಈಗಷ್ಟೇ ಜ್ಯೋತಿ ಬೆಳಗುವುದರ ಮೂಲಕ ಈ ಕಾರ್ಯಕ್ರಮ ಉದ್ಘಾಟನೆಯಾಗಿದೆ. ಹೇಗೆ ಒಂದು ದೀಪದಿಂದ ನೂರಾರು ಸಾವಿರಾರು ದೀಪಗಳನ್ನು ಬೆಳಗಬಹುದೋ ಹಾಗೆ ನಮ್ಮ ಅಚ್ಚುಮೆಚ್ಚಿನ ಶಿಷ್ಯನಾದಂತಹ ಚಿನ್ಮಯ ಈ ಸಂಗೀತ ಶಾಲೆಗೆ ಒಂದು ಜ್ಯೋತಿ ಇದ್ದ ಹಾಗೆ. ಚಿನ್ಮಯ ಅವರ ಮೂಲಕ ನೂರಾರು, ಸಾವಿರಾರು ವಿದ್ಯಾರ್ಥಿಗಳು ಬೆಳಕಿಗೆ ಬರುವಂತಾಗಲಿ. ಅವರಿಂದ ಕಲಿತು ಈ ಸಂಗೀತ ಶಾಲೆಗೂ ಅವರ ಗುರುಗಳಿಗೂ ಕೀರ್ತಿ ತರುವಂತಾಗಲಿ ಎಂದು ಕಳೆದ ಮಾರ್ಚ್ ನಾಲ್ಕು ಶನಿವಾರದಂದು ರಾಜರಾಜೇಶ್ವರಿ ನಗರದಲ್ಲಿ ನಡೆದ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಸಂಗೀತ ವಿದ್ವಾನ್ ಕಲಾಶ್ರೀ ಹೊಸಹಳ್ಳಿ ಅನಂತ ಅವಧಾನಿಗಳು ಮಾತನಾಡಿದರು.

ಕಲಾವಿದನಾಗಲು ಕೆಲವು ಅಂಶಗಳಿವೆ. ಉತ್ತಮವಾದ ಶಾರೀರ, ಕಲಿಯುವ ಉತ್ಸಾಹ, ಮನೆಯವರ ಪ್ರೋತ್ಸಾಹ ಹಾಗೂ ಇವೆಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಗುರುಗಳು ಸಿಗಬೇಕು. ಆಗ ಮಾತ್ರ ಆತ ಮನೆಯವರಿಗೆ ಹಾಗೂ ಕಲಿಸಿದ ಗುರುಗಳಿಗೆ ಹೆಸರನ್ನು ತರುತ್ತಾನೆ. ಅಂತೆಯೇ ಚಿನ್ಮಯ ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗಷ್ಟೇ ಶೃತಿಶುದ್ಧವಾಗಿ, ಲಯಶುದ್ಧವಾಗಿ ನೂರಾರು ವಿದ್ಯಾರ್ಥಿಗಳು ಪಿಳ್ಳಾರಿಗೀತೆಗಳನ್ನು ಹಾಡಿರುವುದನ್ನು ಗಮನಿಸಿದರೆ ಇದರ ಹಿಂದೆ ಚಿನ್ಮಯ ಅವರ ಶ್ರಮ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಈ ಶ್ರಮ ಅವರಿಗೆ ಸಂಪೂರ್ಣವಾದಂತಹ ಫಲವನ್ನು ಕೊಡುವಂತಾಗಲಿ, ಈ ಸಂಗೀತ ಶಾಲೆ ಚಿರಕಾಲ ನಿರಂತರವಾಗಿ ಬೆಳಗಲಿ ಎಂದು ಆಶಿಸುತ್ತೇನೆ ಎಂದರು.

ಸಂಗೀತವೆಂಬುದು ಅತ್ಯುನ್ನತ ಮಹಾಧ್ಯಾನ. ಉಸಿರನ್ನು ನಾವು ಎಷ್ಟು ದೀರ್ಘವಾಗಿಸುತ್ತೇವೋ ಅಷ್ಟು ನಮ್ಮ ಆಯಸ್ಸು ವೃದ್ಧಿಸುತ್ತದೆ. ಉಸಿರನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಅಂತಹ ಉಸಿರನ್ನು ಕಾಪಾಡಲು ಸಂಗೀತ ಸಾಧನೆಯೆಂಬುದು ಅತ್ಯಂತ ಸಹಕಾರಿ. ಹಾಗಾಗಿ ಸಂಗೀತಗಾರರಿಗೆ ಆಯುಷ್ಯ, ಆರೋಗ್ಯ ಚೆನ್ನಾಗಿರುತ್ತದೆ. ಸಂಗೀತದ ಜೊತೆ ನೃತ್ಯ ಸೇರಿದರೆ ಇನ್ನೂ ಚೆಂದ. ನೃತ್ಯವಿರದೆ ಸಂಗೀತವಿರಬಹುದು. ಆದರೆ ಸಂಗೀತವಿಲ್ಲದೆ ನೃತ್ಯವೇ ಇಲ್ಲ. ಸಂಗೀತದಿಂದ ಚಿಂತೆ, ನೋವು ಜೀವನದ ಎಲ್ಲಾ ಕಷ್ಟಗಳನ್ನೂ ಮರೆಯಬಹುದು. ಇದೇ ಸಂಗೀತದ ಮಹತ್ವ. ಇಂತಹ ಸಂಗೀತದ ಸಾಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆಲ್ಲಾ ಒಳಿತಾಗಲಿ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ಡಾ.ಆರ್ ಅರುಣಾಚಲಂ ಹೇಳಿದರು.

ಇದೇ ಮಾತುಗಳನ್ನು ಅನುಮೋದಿಸಿದ ಇನ್ನೊಬ್ಬ ಮುಖ್ಯ ಅತಿಥಿ ಸುಗಮ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಸ್ವರಮೇಧಾ ಸಂಗೀತ ಶಾಲೆಯ ಬಹುಶೀಘ್ರ ಬೆಳವಣಿಗೆಯನ್ನು ಶ್ಲಾಘಿಸಿದರು. ಆನಂತರದಲ್ಲಿ ಸುಮಾರು ಮೂರುವರೆ ಗಂಟೆಗಳ ಕಾಲ ವಿದ್ಯಾಲಯದ ವಿವಿಧ ವಿದ್ಯಾರ್ಥಿಗಳಿಂದ ಸಂಗೀತ ಕಛೇರಿ ನಡೆಯಿತು. ವಿದ್ವಾನ್ ಬಳ್ಳಾರಿ ಸುರೇಶ್ ಕೆ. ಪಿಟೀಲಿನಲ್ಲಿ ಹಾಗೂ ವಿದ್ವಾನ್ ಜಿ.ಎಲ್ ರಮೇಶ್ ಮೃದಂಗದಲ್ಲಿ ಸಹಕರಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಸಂಜೆ ೭-೩೦ಕ್ಕೆ ನಡೆದ ಸಮಾರೋಪ

ಸಮಾರಂಭದಲ್ಲಿ ಮಾತನಾಡಿದ ಚಿಂತಕ ಹೆಚ್.ಎನ್ ರಾಘವೇಂದ್ರ ರಾವ್ ಶಾಸ್ತ್ರೀಯ ಸಂಗೀತ ಸಾಧನೆಯೆಂಬುದು ಭಕ್ತ ಹಾಗೂ ಪರಮಾತ್ಮನ ನಡುವೆ ಏರ್ಪಡುವ ಅತ್ಯಂತ ವ್ಯವಸ್ಥಿತ ಸೇತುವೆ. ಇಂತಹ ಸಂಗೀತದ ಆರಾಧನೆಯನ್ನು ಇಷ್ಟು ಚಿಕ್ಕ ವಯಸ್ಸಿನಲ್ಲೇ ಮಾಡುತ್ತಿರುವ ವಿದ್ಯಾರ್ಥಿಗಳು ಸರಸ್ವತಿಯ ಪುತ್ರ ಪುತ್ರಿಯರು ಎಂದು ವಿದ್ಯಾರ್ಥಿಗಳನ್ನು ಕೊಂಡಾಡಿ ಈ ಸಾಧನೆ ನಿರಂತರವಾಗಿ ನಡೆಯಲಿ ಎಂದರು.

ಈ ಸಂದರ್ಭದಲ್ಲಿ ರಾಜರಾಜೇಶ್ವರಿನಗರದ ಬಿ.ಬಿ.ಎಂ.ಪಿ ಸದಸ್ಯೆ ನಳಿನಿ ಮಂಜುನಾಥ್, ಮಂಜುನಾಥ್, ಉದ್ಯಮಿ ಗಂಗಾಧರ ಮೂರ್ತಿ, ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಖ್ಯಾತ ಕಿರುತೆರೆ ನಟ ರಾಜೇಶ್ ಧೃವ (ಅಖಿಲ್) ಸಂಸ್ಥೆಗೆ ಶುಭಕೋರುವ ಮಾತುಗಳನ್ನಾಡಿದರು. ಸಂಗೀತದ ತರಗತಿಗಳನ್ನು ನಡೆಸಲು ತಮ್ಮ ತಮ್ಮ ಮನೆಗಳನ್ನು ಬಿಟ್ಟು ಕೊಟ್ಟ ಹಲವು ಪಾಲಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಹಸ್ತ ಸಾಮುದ್ರಿಕಾ ಜ್ಯೋತಿಷಿ ಆನಂದ್, ಸಂಸ್ಥೆಯ ಅಧ್ಯಕ್ಷರಾದ ಚಾರ್ಟರ್ಡ್ ಅಕೌಂಟೆಂಟ್ ಭರತ್ ರಾವ್ ಕೆ.ಎಸ್, ಸಂಸ್ಥೆಯ ಸಂಸ್ಥಾಪಕ, ಪ್ರಾಂಶುಪಾಲಕ ಚಿನ್ಮಯ ಎಂ.ರಾವ್ ಹಾಗೂ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಈ ಸಂದರ್ಭದಲ್ಲಿ ಹಾಜರಿದ್ದರು. ಮದ್ಯಾಹ್ನ ೨-೩೦ ರಿಂದ ರಾತ್ರಿ ೮-೩೦ರವರೆಗೆ ಅಂದರೆ ಸುಮಾರು ಆರು ಗಂಟೆಗಳ ಕಾಲ ಸತತವಾಗಿ ನೆರೆದಿದ್ದ ಜನಸ್ತೋಮ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿತ್ತು.

5-3-2017

Selected Video Clips

Selected Photos Gallery

[FAG id=4747]

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.