ಕನ್ನಡನಾಯಕ-ನಾಯಕಿ

ಕಲಾರಂಗದಲ್ಲೊಂದು ಶೋಭಾಯಮಾನ ವ್ಯಕ್ತಿತ್ವ…

ಸಾಮಾನ್ಯವಾಗಿ ಭರತನಾಟ್ಯದಂತಹ ಶಾಸ್ತ್ರೀಯ ಕಲೆಗಳನ್ನು ಸಾಧನೆ ಮಾಡಿದವರು ಕಿರುತೆರೆ ಅಥವಾ ಬೆಳ್ಳಿತೆರೆಗೆ ಕಾಲಿಡುವುದೇ ಅಪರೂಪ. ಒಂದೊಮ್ಮೆ ಕಾಲಿಟ್ಟರೂ ಎರಡೂ ಕಡೆಗಳಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಅಂಥವರಿಗೆ ಕಾಲಾವಕಾಶ ಕಡಿಮೆ.

ಪ್ರತಿಭೆಯ ಆಗರವಾಗಿರುವ ಅಂಥವರಿಗೆ ಕಾಲ ಎರಡೂ ಕಡೆಗಳಲ್ಲಿ ಅವಕಾಶ ನೀಡಿದರೂ ಎರಡೂ ಕ್ಷೇತ್ರಗಳಲ್ಲಿ ತಮ್ಮ ತನದ ಛಾಪನ್ನೊತ್ತಲು ಸಕಾಲ ಕೂಡಿ ಬರಬೇಕು. ಇನ್ನು ಕೆಲವರು ಶಾಸ್ತ್ರೀಯ ನೃತ್ಯವನ್ನು ಅರ್ಧ ಹಾದಿಯಲ್ಲೇ ಬಿಟ್ಟು ಸಿನಿಮಾ ಹಾಗು ಧಾರಾವಾಹಿಗಳ ನಂಟನ್ನು ಗಂಟು ಹಾಕಿಕೊಳ್ಳುತ್ತಾರೆ. ಅಂಥವರಿಗೆ ಶಾಸ್ತ್ರೀಯ ನೃತ್ಯ ಆಟಕ್ಕುಂಟು..ಲೆಕ್ಕಕ್ಕಿಲ್ಲ. ಅದೂ ನನಗೆ ಗೊತ್ತು.. ಕಲಿತಿದ್ದೇನೆ ಎಂದು ಸುಮ್ಮನೆ ಹೇಳಿಕೊಳ್ಳುವವರಿಗೆ ಗಟ್ಟಿಯಾಗಿ ಕೇಳಿದರೆ ಬಾಯಿ ಬಿಡುತ್ತಾರೆ…”ಸ್ವಲ್ಪ ಕಲಿತಿದ್ದೇನೆ”. ಹೀಗೆ ಅದೂ ಗೊತ್ತು..ಇದೂ ಗೊತ್ತು ಎಂದೆನ್ನುತ್ತಾ ಯಾವುದೂ ಸರಿಯಾಗಿ ಗೊತ್ತಿಲ್ಲದೆ..ಗೊತ್ತು ಗುರಿಯಿಲ್ಲದೆ ತೆರೆ ಮೇಲೆ ಕಾಣಿಸಿಕೊಳ್ಳುವುದಷ್ಟೇ ಮುಖ್ಯ ಎಂದೆನ್ನುವವರು ಸದ್ದಿಲ್ಲದೆ ಕಾಲ ಸರಿದಂತೆ ತೆರೆಮರೆಗೆ ಸರಿದುಬಿಡುತ್ತಾರೆ. ಆದರೆ ಶಾಸ್ತ್ರೀಯ ನೃತ್ಯವೆಂಬುದು ಆಟಕ್ಕೂ ಉಂಟು..ಲೆಕ್ಕಕ್ಕೂ ಉಂಟು ಎಂದು ಸಾಧಿಸಿ ತೋರಿಸುತ್ತಾ ಇತ್ತ ಕಿರುತೆರೆಯಲ್ಲೂ ತಮ್ಮ ಪ್ರಬುದ್ಧ ಅಭಿನಯವನ್ನು ತೋರಿಸಿಕೊಳ್ಳುವವರು ಶೋಭಾ ಲೋಲನಾಥ್ ಅವರಂತೆ ಸದಾ ಶೋಭಾಯಮಾನವಾಗಿ ಮಿನುಗುತ್ತಲೇ ಇರುತ್ತಾರೆ. ಇಂಥವರು ಎರಡೂ ದೋಣಿಗಳಲ್ಲಿ ವಿಹರಿಸುವಷ್ಟು ಕಾಲವನ್ನು ತಾವೇ ಮಾಡಿಕೊಳ್ಳುತ್ತಾರೆ…ಎರಡಕ್ಕೂ ಕಾಲವನ್ನು ಬಿಡುವು ಮಾಡಿಕೊಳ್ಳುತ್ತಾರೆ. ಹಾಗಾಗಿ ಇಂಥವರಿಗೆ ಎಂದೆಂದೂ ಎಲ್ಲೆಲ್ಲೂ ಸಕಾಲವೇ..! ಕಾಲ ಹೇಳಿದಂತೆ ಕೇಳದೆ ಕಾಲವನ್ನೇ ತಾವು ಹೇಳಿದಂತೆ ಕೇಳುವ ಹಾಗೆ ಮಾಡುವ ತಾಕತ್ತು ಶೋಭಾ ಅವರಿಗೆ ಇದೆಯೆಂದು ಅವರ ನಿಲ್ಲದ ನಿರಂತರ ಕಾರ್ಯ ಚಟುವಟಿಕೆಗಳನ್ನು ನೋಡಿದಾಗ ನಮಗನಿಸುತ್ತದೆ. ಇವರು ಹೇಗೆ ಇದೆಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ಎಂದು ನಮಗೆ ಖಂಡಿತಾ ಆಶ್ಚರ್ಯವಾಗುತ್ತದೆ.

ಮಹತ್ವಾಕಾಂಕ್ಷೆಯ ಮಡಿಲಿಂದ..

ಕಳೆದ ಹತ್ತು ವರ್ಷಗಳಿಂದ ಕಿರುತೆರೆ ಹಾಗು ಬೆಳ್ಳಿತೆರೆ ಇವೆರಡರಲ್ಲೂ ಶೋಭಿಸುತ್ತಿರುವ ಶೋಭಾ ತಮ್ಮ ಅವಿರತ ಪರಿಶ್ರಮದಿಂದ ಪ್ರಸ್ತುತ ಕನ್ನಡದ ಪ್ರಸಿದ್ಧ ನಟಿಯಾಗಿ ಜನಪ್ರಿಯವಾಗಿದ್ದಾರೆ. ಭವಿಷ್ಯದಲ್ಲಿ ತಾನೊಬ್ಬಳು ನಟಿಯಾಗುತ್ತೇನೆಂದು ಕನಸು ಮನಸಿನಲ್ಲೂ ಅಂದುಕೊಂಡಿರಲೇ ಇಲ್ಲ ಎನ್ನುವ ಶೋಭಾ ಬಣ್ಣದ ಲೋಕಕ್ಕೆ ಬಂದದ್ದು ಆಕಸ್ಮಿಕವೇ ಸರಿ. ಸಾಫ್ಟ್‍ವೇರ್ ಲೋಕದಲ್ಲಿ ಲೋಕ ಮರೆತಿದ್ದ ಶೋಭಾಳನ್ನು ನೋಡಿದ ಇವರ ಸಂಬಂಧಿಕರ ಮಿತ್ರರೊಬ್ಬರು ತಮ್ಮ ಸೀರಿಯಲ್‍ನಲ್ಲಿ ನಟಿಸುವಂತೆ ಸಿರಿಯಸ್ಸಾಗಿ ಕೇಳಿಕೊಂಡರು. ಅದಕ್ಕೆ ಹೂಂ..ಗುಟ್ಟಿದ ಶೋಭಾ, ನಿರ್ದೇಶಕ ಪಿ.ಶೆಷಾದ್ರಿ ಅವರ “ಇಂಚರ” ಧಾರಾವಾಹಿಯಲ್ಲಿ ಪಾತ್ರವಾಗುವ ಮೂಲಕ ವಾಹಿನಿಯಲ್ಲಿ ತಮ್ಮ ಸಂಚಾರ ಪ್ರಾರಂಭಿಸಿದರು.ಮಹಿಳಾಪರ ಹೋರಾಟಕ್ಕೆ ಪೆÇೀಷಣೆ ನೀಡುವಂತಹ ಪಾತ್ರಗಳನ್ನು ಹೆಚ್ಚು ಪುರಸ್ಕರಿಸಿ ನಟಿಸುವ ಮನೋಭಾವದ ಶೋಭಾ ನಿಜ ಜೀವನದಲ್ಲೂ ಶೋಷಿತರ ದನಿಯಾಗುವ ಸ್ವಭಾವ.

ಜನ ಮೆಚ್ಚಿದ ಪಾತ್ರಗಳು
“ಲಾಲಿ”ಯಲ್ಲಿನ ಅರುಣಾ, “ಥ್ಯಾಂಕ್ಯೂ ಸರೂ”ದಲ್ಲಿನ ಸರೂ ಪಾತ್ರಗಳಿಂದ ಅತಿ ಹೆಚ್ಚು ಗುರುತಿಸಲ್ಪಡುವ ಈ ಕಲಾವಿದೆ ಒಮ್ಮೆ ಮಂತ್ರಾಲಯ ಹಾಗು ಧರ್ಮಸ್ಥಳಕ್ಕೆ ಹೋದಾಗ ಅಲ್ಲಿ ನೂರಾರು ಜನ ಇವರನ್ನು ಮುತ್ತಿಕೊಂಡರಂತೆ ! ಒಬ್ಬ ಕಲಾವಿದೆಗೆ ಇದಕ್ಕಿಂತ ಇನ್ನ್ಯಾವ ಪ್ರಶಸ್ತಿ ಬೇಕು? ಇತ್ತೀಚೆಗೆ ಹೊರಗೆ ಓಡಾಡುವಾಗ “ನಿಶಾಚರ” ಹಾಗು “ಮಾಂಗಲ್ಯ”ದ ಪಾತ್ರಧಾರಿಯೆಂದು ಗುರುತಿಸುವ ಜನ “ಮುತ್ತಿನ ತೆನೆ”ಯಲ್ಲಿನ ಗೌರಿ ಅಲ್ಲವಾ ನೀವು? ಎಂದಾಗ ಶೋಭಾಗೆ ಸ್ವರ್ಗಕ್ಕೆ ಮೂರೇ ಗೇಣು. ಹೀಗೆ ಕಾಲಕಾಲಕ್ಕೆ ಒಂದಿಲ್ಲೊಂದು ಪಾತ್ರಗಳಿಂದ ಗುರುತಿಸಲ್ಪಡುವ ಶೋಭಾ ಅವರಿಗೆ ಕಲಾರಂಗದಲ್ಲೇ ಚಿರಕಾಲ ಗುರುತಿಸಿಕೊಳ್ಳಬೇಕೆಂಬ ಹಂಬಲವಿದೆ.

ಪಾರ್ವತಮ್ಮನವರ ವಜ್ರೇಶ್ವರಿ ಕಂಬೈನ್ಸ್‍ನ ಲಾಲಿ ಧಾರಾವಾಹಿಯ ನಂತರ ಬಹುಕಾಲ ಐ.ಟಿ ಇಂಡಸ್ಟ್ರಿಯೆಡೆಗೆ ಮುಖ ಮಾಡಿದ್ದ ಶೋಭಾ ಮತ್ತೆ ಕಿರುತೆರೆಗೆ ಮುಖ ತೋರಿಸಿದ್ದು ಅದೇ ವಜ್ರೇಶ್ವರಿ ಸಂಸ್ಥೆಯಿಂದ ! “ಸೃಷ್ಠಿ” ಧಾರಾವಾಹಿಗೆ ಮತ್ತೆ ವಜ್ರೇಶ್ವರಿ ಸಂಸ್ಥೆ ಅವಕಾಶ ನೀಡಿದಾಗ ಮಗಳು ಮತ್ತೆ ತವರು ಮನೆಗೆ ಬಂದಂತಾಯಿತು ಎಂದು ಆ ತಂಡದವರು ಅಭಿಮಾನದ ಮಾತುಗಳನ್ನಾಡಿದರಂತೆ. ಮುಂದೆ ಎಸ್.ನಾರಾಯಣ್ ನಿರ್ದೇಶನ “ಚಂದ್ರಿಕಾ” ಧಾರಾವಾಹಿಯಲ್ಲಿ ಈಕೆ ನಿಭಾಯಿಸಿದ್ದ ಮಹಿಳಾಪರ ಹೊರಾಟಗಾರ್ತಿ ಅರುಣಾ ಪಾತ್ರ, ಮಾಟಗಾತಿಯಲ್ಲಿನ ಜ್ವಾಲಾಮಾಲಿನಿ ಪಾತ್ರ ಕೂಡ ಪ್ರೇಕ್ಷಕವರ್ಗದ ಗಮನ ಸೆಳೆಯಿತು. ಒಟ್ಟಾರೆ ಎಲ್ಲಾ ವಾಹಿನಿಗಳದ್ದೂ ಸೇರಿದರೆ ಶೋಭಾ 50ಕ್ಕೂ ಹೆಚ್ಚು ಧಾರಾವಾಹಿಗಳಿಗೆ ನಮ್ಮ ಅಭಿನಯ ಸೇವೆಯನ್ನು ಸಲ್ಲಿಸಿದ್ದಾರೆ !

“ಭೂಪತಿ” ಚಿತ್ರದಲ್ಲಿ ದರ್ಶನ್ ತೂಗುದೀಪ್ ಅವರ ಸಹೋದರಿಯ ಪಾತ್ರದಲ್ಲಿ ಅಭಿನಯಿಸಿದ ಶೋಭಾ “ಎ.ಕೆ 56” ಚಿತ್ರದಲ್ಲಿ ನಟಿಸಿ ಬೆಳ್ಳಿತೆರೆಯಲ್ಲೂ ತಮ್ಮ ಹೆಜ್ಜೆ ಗುರುತನ್ನಿತ್ತಿದ್ದಾರೆ.

ಮಯೂರಿ..ನಾಟ್ಯಮಯೂರಿ…

ಈ ಲೇಖನದ ಮೊದಲೇ ತಿಳಿಸಿದಂತೆ ಶೋಭಾಗೆ ಭರತನಾಟ್ಯವೆಂಬುದು ಆಟಕ್ಕೂ ಉಂಟು..ಲೆಕ್ಕಕ್ಕೂ ಉಂಟು. ಶಾಸ್ತ್ರೀಯ ನೃತ್ಯದಲ್ಲಿ ಅಪಾರ ಪಾಂಡಿತ್ಯ ಹೊಂದಿರುವ ಶೋಭಾ ಇಂದಿಗೂ ತಾವೂ ಕಲಿಯುತ್ತಾರೆ..ಇತರರಿಗೂ ಕಲಿಸುತ್ತಾರೆ. ಅವರ “ಗರುಡ ನಾಟ್ಯ ಸಂಘ” ನೂರಾರು ವಿದ್ಯಾರ್ಥಿಗಳನ್ನು ಹೊಂದಿದೆ. ಪ್ರತೀ ವಾರಾಂತ್ಯದಲ್ಲಿ ನೃತ್ಯ ತರಗತಿಗಳನ್ನು ನಡೆಸುವ ಶೋಭಾ ಅವರನ್ನೆಲ್ಲಾ ಜೊತೆ ಸೇರಿಸಿಕೊಂಡು ದೇಶದಾದ್ಯಂತ ಹಲವಾರು ನರ್ತನ ಕಾರ್ಯಕ್ರಮಗಳನ್ನು ನೀಡಿ ಯಶಸ್ವಿಯಾಗಿದ್ದಾರೆ ಎಂದರೆ ಅದು ಸಾಧಾರಣದ ಮಾತಲ್ಲ. ಇಷ್ಟಲ್ಲದೆ ಬರವಣಿಗೆಯ ಹವ್ಯಾಸವನ್ನೂ ಇಟ್ಟುಕೊಂಡಿರುವ ಶೋಭಾ “ಯಾಮಿನಿ” ಎಂಬ ಅಂತರ್ಜಾಲ ಪತ್ರಿಕೆಯನ್ನೂ ನಡೆಸುತ್ತಿದ್ದಾರೆ.

ಹೀಗೆ ಶಾಸ್ತ್ರೀಯ ನರ್ತಕಿಯಾಗಿ, ನಟಿಯಾಗಿ ಹಾಗು ಲೇಖಕಿಯಾಗಿ ಬಹುಮುಖ ಪ್ರತಿಭೆಯಾಗಿರುವ ಶೋಭಾ ಲೋಲನಾಥ್ ಅವರ ಕಲಾಸಾಧನೆ ಈ ನಾಡಿನಲ್ಲಿ ನಿರಂತರವಾಗಿ ಶೋಭಿಸುತ್ತಿರಲಿ.

-ಚಿನ್ಮಯ ಎಂ.ರಾವ್ ಹೊನಗೋಡು

Tuesday, ‎July ‎10, ‎2012

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.