ನಾಯಕ-ನಾಯಕಿ

ಅಭಿನಯದ ಮೇಲಿನ ಮಮತೆ… ಮಮತಾಳನ್ನು ಎತ್ತರಕ್ಕೆ ಏರಿಸೀತೇ?

MAMATA-11-ಚಿನ್ಮಯ ಎಂ.ರಾವ್ ಹೊನಗೋಡು

ನಿರೂಪಕಿ…ಆದಳು ನಾಯಕಿ..!

ಅಂತಹ ಸುಂದರಿಯೇನು ಅಲ್ಲದಿದ್ದರೂ ಸಿನಿಮಾಕ್ಕೆ ಬಂದು ಸೀದಾ ನಾಯಕಿಯೇ ಆಗಬೇಕೆಂಬ ಹಗಲುಗನಸು ಕಾಣುವವರೇ ನಮ್ಮಲ್ಲಿ ಹೆಚ್ಚು. ಅಂಥವರಿಗೆ ಕೇವಲ ಸಿನಿಮಾದಲ್ಲಿ ನಟಿಸುವ ಹುಚ್ಚು. ಚಿತ್ರರಂಗವನ್ನು ಹಾಬಿಯಾಗಿ ತೆಗೆದುಕೊಂಡು ಅಭಿನಯವನ್ನು ಹಳ್ಳ ಹತ್ತಿಸಿ ಚಿತ್ರದ ಗುಣಮಟ್ಟವನ್ನು ಕಳಪೆಯಾಗಿಸುವಲ್ಲಿ ಪ್ರಮುಖ”ಪಾತ್ರ”ವಹಿಸುವ ಇಂಥವರ ಹೊರತಾಗಿ ನಟನೆಯನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳುವ ಕೆಲವರು ಮಾತ್ರ ಶ್ರಮ ಹಾಕಿ ಮೇಲೇರುತ್ತಾರೆ. ಮೇಲೇರಿದರೂ ಭೂಮಿಯ ಮೇಲೇ ಇದ್ದು ಎಲ್ಲರೊಡನೆ ಜನಸಾಮಾನ್ಯರಾಗಿ ಅಸಮಾನ್ಯರೆನಿಸಿಕೊಳ್ಳುತ್ತಾರೆ. ಜೀವನದಲ್ಲಿ ಕಷ್ಟ ಸುಖದ ಅನುಭವವನ್ನು ಚೆನ್ನಾಗಿ ಪಡೆದವರು ನಟನೆಯಲ್ಲೂ ಪಾತ್ರಗಳನ್ನು ಅನುಭವಿಸಿ ಮಾಗಿದ ಅನುಭವವನ್ನು ನೀಡುತ್ತಾರೆ. ಯಾವ ಪ್ರಭಾವ..ಯಾರ ಪ್ರಭಾವವೂ ಇಲ್ಲದೆ ಬರೀ ತಮ್ಮ ಪ್ರತಿಭೆಯನ್ನೇ ಮಾನದಂಡವಾಗಿರಿಸಿಕೊಂಡು ಸಾಲುಸಾಲಾಗಿ ಒಂದಾದ ನಂತರ ಇನ್ನೊಂದು ಚಿತ್ರಗಳಲ್ಲಿ ನಟಿಸುತ್ತಾ ನಿಧಾನವಾಗಿ ಚಿತ್ರಪ್ರೇಮಿಗಳ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತಾರೆ. ಹೀಗೆ ನಿಧಾನವಾಗಿ ಪ್ರಭಾವವ ಬೀರುತ್ತಿರುವ ಸಹಜ ಸ್ವಭಾವದ ಸರಳ ಸುಂದರಿಯೇ ಮಮತಾ ರಾಹುತ್.

MAMATA-5ನಿರೂಪಣೆ..ಕಿರುತೆರೆಗೆ ಪಾದಾರ್ಪಣೆ

ಶಾಲಾಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಮಮತಾಳಿಗೆ ಮುಂದೆ ಸಿಟಿ ಕೇಬಲ್ ವಾಹಿನಿಯಲ್ಲಿ ನಿರೂಪಕಿಯಾಗುವ ಅವಕಾಶ ಸಿಕ್ಕಿತು. ಸುಂದರವಾಗಿ ನಿರೂಪಣೆ ಮಾಡುತ್ತಿದ್ದ ಸುಂದರಿ ಮಮತಾಳಿಗೆ ಬೇರೆ ಬೇರೆ ವಾಹಿನಿಗಳಿಂದಲ್ಲೂ ನಿರೂಪಣೆಗೆ ಕರೆ ಬಂತು. ಅವಕಾಶವನ್ನು ಸದುಪಯೋಗಪಡಿಸಿಕೊಂಡು ಐಸ್ ಟಿ.ವಿ, ೪ ಎಮ್ ಹಾಗು ಅಮೋಘ್ ಹೀಗೆ ಹೀಗೆ ಹತ್ತು ಹಲವಾರು ವಾಹಿನಿಗಳಲ್ಲಿ ಮಮತಾಮಯಿ ಮಿಂಚಿದಳು. ಡ್ರೀಮ್ ಗರ್ಲ್ ಹಾಗು ಜ಼ಿ ಕನ್ನಡದ ಟಾಪ್ ಟೆನ್ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಳು.

ತಮ್ಮನನ್ನು ಸಿನಿಮಾಕ್ಕೆ ಸೇರಿಸಲು ಹೋಗಿ ತಾನೇ ಸಿನಿಮಾಕ್ಕೆ ಸೇರುವಂತಾಯಿತು!

ಒಮ್ಮೆ “ಪುಟಾಣಿ ಫೋರ್ಸ್ ಎ ಟು ಜ಼ೆಡ್” ಎಂಬ ಮಕ್ಕಳ ಚಿತ್ರಕ್ಕೆ ನಟನಟಿಯರನ್ನು ಆಯ್ಕೆ ಮಾಡಲು ಸಂದರ್ಶನವನ್ನೇರ್ಪಡಿಸಿದ್ದರು. ಮಮತಾ ಸುರಸುಂದರಾಂಗ ಸಹೋದರನನ್ನು ಅಲ್ಲಿ ಕರೆದುಕೊಂಡು ಹೋದಳು. ಸಂದರ್ಶಕರ ಮುಂದೆ ತಮ್ಮ ಹೆದರಿದ ಎಂದು ತಾನೇ ನೇರವಾಗಿ ಮಾತಿಗಾರಂಭಿಸಿದಳು. ಆತನ ಬಗ್ಗೆ “ನಿರೂಪಣೆ” ಮಾಡಿದಳು. ಆಗ ಐಸ್ ಟಿ.ವಿಯಲ್ಲಿ ನಿರೂಪಕಿಯಾಗಿದ್ದ ಮಮತಾಳ ಕಣ್ಣಿನಿಂದ ಪ್ರಖರವಾಗಿ ಹೊರಡುತ್ತಿದ್ದ ಕಾಂತಿ..ನಿಖರವಾಗಿ ನಿರೂಪಣೆಯಾಗುತ್ತಿದ್ದ ಮಾತು..ಇವನ್ನೆಲ್ಲ ಗಮನಿಸಿದ ಸಂದರ್ಶಕರು ಈ ಚಿತ್ರದಲ್ಲಿ ಪತ್ರಕೆರ್ತೆಯೊಬ್ಬಳ ಪಾತ್ರ ಇದೆ..ನೀವೇ ಮಾಡಿ ಬಿಡಿ ಮೇಡಂ..ಎಂದರು! ಬಯಸದೇ ಬಂದ ಭಾಗ್ಯವನ್ನು ಬರಸೆಳೆದು ಅಪ್ಪಿದ ಮಮತಾ ಆ ಚಿತ್ರದಲ್ಲಿ ನಟಿಸಲು ಒಪ್ಪಿದಳು.

MAMATA-3ಬೀದಿ ಮಕ್ಕಳಿಗೆ ಸಹಾಯ ಮಾಡುತ್ತಿದ್ದ ಮಮತಾಮಯಿ ಮಮತಕ್ಕಳಿಗೆ ಆ ಚಿತ್ರದಲ್ಲೂ ಅಂಥಹುದೇ ಪಾತ್ರ ಸಿಕ್ಕಿತು. ಅಲ್ಲಿಂದ ತನ್ನ ದೆಸೆ ಬದಲಿಸಿಕೊಂಡ ಮಮತಾ ಕೋಡಗನ ಕೋಳಿ ನುಂಗಿತ್ತಾ, ಸತ್ಯ ಇನ್ ಲವ್, ಗಂಗೆ ಬಾರೆ ತುಂಗೆ ಬಾರೆ ಹೀಗೆ ಹಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ಅಭಿಮಾನಿಗಳು ತನ್ನ ಮುಖ ಗುರುತು ಹಿಡಿವಷ್ಟು ಹಿಡಿಸಿಬಿಟ್ಟಳು. ಮಾವಳ್ಳಿ ಹಾಗು ನಿಮಾನ್ಸ್ ಚಿತ್ರಗಳ ಮೂಲಕ ಮತ್ತೆ ತನ್ನನ್ನು ಗುರುತಿಸುವಷ್ಟು ಗುರಿ ತಲುಪಿದ ಮಮತಾ ಈಗ ಮಂಡ್ಯಾದ ಜ್ಯೂನಿಯರ್ ಮಾಲಾಶ್ರೀಯಾಗಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿಲು ರೆಡಿಯಾಗಿದ್ದಾಳೆ! ಕನ್ನಡ ಚಿತ್ರರಂಗದಲ್ಲಿ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾಳೆ. ಬಿ.ರಾಮ್‌ಮೂರ್ತಿ ನಿರ್ದೇಶನದ ತಮಿಳು ಚಿತ್ರವೊಂದರ ಮೂಲಕ ಚೆನ್ನೈ ಅಂಗಳದಲ್ಲೂ ತನ್ನ ಛಾಪನ್ನು ಮೂಡಿಸಿಬಂದಿದ್ದಾಳೆ! “ನೀನು ಚಿತ್ರರಂಗಕ್ಕೆ ಬರಲು ನಾನೇ ಕಾರಣ..ನನ್ನನ್ನು ಮರೆಯಬೇಡ” ಎಂದು ಈಗ ಪಕ್ಕದಲ್ಲಿರುವ ತಮ್ಮ ಅಕ್ಕನನ್ನು ಚಿವುಟಿ ನಗೆ ಚೆಲ್ಲುತ್ತಿದ್ದಾನೆ.

ತಾನು ನಾಯಕಿಯಾಗಿಯೇ ಮೆರೆಯಬೇಕೆಂಬ ಹುಚ್ಚು ಆಸೆ ಕಲ್ಪನೆಗಳು ತನಗಿಲ್ಲ..ಎಂದೆನ್ನುವ ಮಮತಾ ನಮ್ಮ ಚಿತ್ರರಂಗದಲ್ಲಿ ತಾರಾ, ಉಮಾಶ್ರೀ ಹಾಗು ವಿನಯ ಪ್ರಸಾದ್ ಇವರೆಲ್ಲಾ ಚಿರಕಾಲ ನಾಯಕಿಯರಲ್ಲವೇ? ಒಳ್ಳೊಳ್ಳೆಯ ಪಾತ್ರಗಳಿಂದಲೇ ಇಂದಿಗೂ ಅವರು ನಮ್ಮ ಮುಂದಿದ್ದಾರೆ. ಅದೇ ನಾಯಕಿಯೇ ಆಗಿರಬೇಕೆಂದು ಹಠ ಹಿಡಿದ ಅದೆಷ್ಟೋ ಕಲಾವಿದರು ಒಂದೆರಡು ಚಿತ್ರಗಳಲ್ಲಿ ಹೀಗೆ ಬಂದು ಹಾಗೆ ಹೋಗಿ ಕಡೆಗೆ ಏನೂ ಆಗದೆ ಮರೆಯಾಗಿದ್ದಾರೆ ಅಲ್ಲವೇ? ಎಂದು ಮಮತಾ ತನ್ನ ವಿಚಾರಧಾರೆಯನ್ನು ನಮ್ಮ ಮುಂದಿಡುವಾಗ ನಮಗೂ ಅಹುದಲ್ಲವೇ? ಎಂದೆನಿಸುತ್ತದೆ. ಒಳ್ಳೆಯ ಪಾತ್ರಗಳಲ್ಲಿ ಅಬಿನಯಿಸುತ್ತಾ ಸದಾ ತನ್ನನ್ನು ತಾನು ಮರೆಯಬೇಕು…ಅಭಿಮಾನಿಗಳು ತನ್ನ ಅಭಿನಯವನ್ನು ನೋಡಿ ತಮ್ಮ ಕಷ್ಟಗಳನ್ನು ಮರೆಯಬೇಕು-ಇದು ಮಮತಾಳ ಜೀವನದ ಧ್ಯೇಯ.

ಸೊಂಪಾದ ಸೌಂದರ್ಯ..ಇಂಪಾದ ಕನ್ನಡ..ತಂಪಾಗಿ ಮಾತನಾಡಿ ಎದುರಿಗಿದ್ದವರನ್ನು ತನ್ನತ್ತ ಸೆಳೆದುಕೊಳ್ಳುವ ಸರಳ ವ್ಯಕ್ತಿತ್ವ ಇವಿಷ್ಟಿದ್ದರೆ ಸಾಕು ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಾಯಕಿಯಾಗಿ ಬೆಳೆಯಬೇಕೆಂಬುದಕ್ಕೆ ಮಮತಾ ತಾಜ ಉದಾಹರಣೆ. ಇಂಥವರನ್ನೇ ನಮ್ಮ ನಾಡಿನಲ್ಲಿ ಬೆಳೆಸಬೇಕಿದೆ..ಅದು ಗಾಂಧೀನಗರದವರ ಹೊಣೆ.

-ಚಿನ್ಮಯ ಎಂ.ರಾವ್ ಹೊನಗೋಡು

6-8-2012

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.