ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ‘ಹೊಂದಿಸಿ ಬರೆಯಿರಿ’ ಚಿತ್ರದ ಟಾಕ್ ಸ್ಯಾಂಡಲ್ ವುಡ್ ಅಂಗಳದಲ್ಲಿ ಜೋರಾಗಿದೆ. ನವೆಂಬರ್ 18 ರಂದು ಪ್ರೇಕ್ಷಕರೆದುರು ಬರಲು ಡೇಟ್ ಫಿಕ್ಸ್ ಮಾಡಿಕೊಂಡಿರುವ ಈ ಚಿತ್ರದ ಮೆಲೋಡಿ ಸಾಂಗ್ ಇಂದು ರಿಲೀಸ್ ಆಗಿದೆ. ಸ್ಯಾಂಡಲ್ ವುಡ್ ಕ್ವೀನ್ ಮೋಹಕ ತಾರೆ ರಮ್ಯಾ ಈ ಹಾಡನ್ನು ಮೆಚ್ಚಿ ಬಿಡುಗಡೆ ಮಾಡೊರೋದು ಈ ಸಾಂಗ್ ಸ್ಪೆಷಾಲಿಟಿ.
ಹೌದು, ‘ಹೊಂದಿಸಿ ಬರೆಯಿರಿ’ ಸಿನಿಮಾ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ಎಲ್ಲಾ ತುಣುಕುಗಳು ಸಿನಿರಸಿಕರ ಮನಸ್ಸಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿವೆ. ಚಿತ್ರದ ಕಲರ್ ಫುಲ್ ತಾರಾಬಳಗವೂ ಈ ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಮೂಡಲು ಮತ್ತೊಂದು ಕಾರಣ. ಬಿಡುಗಡೆಯಾಗಲು ಸಜ್ಜಾಗಿರುವ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಈ ಮೊದಲು ಒಂದು ಸಾಂಗ್ ರಿಲೀಸ್ ಮಾಡಿ ಗಮನ ಸೆಳೆದಿದ್ದ ಚಿತ್ರತಂಡವೀಗ ಮೋಹಕ ತಾರೆ ರಮ್ಯಾ ಅವರಿಂದ ಚಿತ್ರದ ಎರಡನೇ ಸಾಂಗ್ ‘ಓ ಕವನ’ ರಿಲೀಸ್ ಮಾಡಿದೆ. ‘ಓ ಕವನ’ ಹಾಡು ಕೇಳಿ ಫಿದಾ ಆಗಿರುವ ರಮ್ಯಾ ಸೋಶಿಯಲ್ ಮೀಡಿಯಾಲ್ಲಿ ಶೇರ್ ಕೂಡ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಾಡಿಗೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಬರೆದಿದ್ದು, ಆದಿತ್ಯ ಆರ್ ಕೆ ಮೆಲುವಾದ ದನಿ, ಜೋ ಕೋಸ್ಟ ಹಿತವಾದ ಸಂಗೀತ ನಿರ್ದೇಶನವಿದೆ. ಹಾಡಿನಲ್ಲಿ ಪ್ರವೀಣ್ ತೇಜ್ ಹಾಗೂ ಸಂಯುಕ್ತ ಹೊರನಾಡು ಕಾಣಿಸಿಕೊಂಡಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ನವೆಂಬರ್ 18ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದ್ದು, ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್, ಭಾವನಾ ರಾವ್, ನವೀನ್ ಶಂಕರ್, ಅರ್ಚನಾ ಜೋಯಿಸ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ತಾರಾಬಳಗದಲ್ಲಿದ್ದಾರೆ.
ಜೀವನ ಹೊಂದಾಣಿಕೆಯಲ್ಲಿ ಸಾಗಬೇಕು ಎನ್ನುವ ಮೂಲ ಆಶಯ ಈ ಚಿತ್ರದ ಕಥಾವಸ್ತು. ಇದರ ಸುತ್ತ ಕಥೆ ಹೆಣೆದಿರುವ ರಾಮೇನಹಳ್ಳಿ ಜಗನ್ನಾಥ್ ಐದು ಜನ ಸ್ನೇಹಿತರ ಭಾವನಾತ್ಮಕ ಜರ್ನಿಯನ್ನು ಇಲ್ಲಿ ಹೇಳ ಹೊರಟಿದ್ದಾರೆ. ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಶಾಂತಿ ಸಾಗರ್ ಕ್ಯಾಮೆರಾ ನಿರ್ದೇಶನವಿದೆ. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. “ಸಂಡೇ ಸಿನಿಮಾಸ್ “ಬ್ಯಾನರ್ ನಡಿ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸಿನಿಮಾ ನಿರ್ಮಾಣ ಮಾಡಿದ್ದಾರೆ.