ಟೈಟಲ್ ಮೂಲಕ ಸಖತ್ ಸುದ್ದಿ ಮಾಡಿರುವ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕ ನಟನಾಗಿ ಅಭಿನಯಿಸಿರುವ ಚಿತ್ರ ‘ದೂರದರ್ಶನ’. ಸುಕೇಶ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಈ ಸಿನಿಮಾ ಚಿತ್ರೀಕರಣ ಮುಗಿಸಿ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ವಿಭಿನ್ನ ಪೋಸ್ಟರ್ ಹಾಗೂ ಟೀಸರ್ ಮೂಲಕ ಎಲ್ಲರ ಗಮನ ಸೆಳೆದ ಈ ಚಿತ್ರತಂಡ ಬಿಡುಗಡೆಗೆ ಎದುರು ನೋಡುತ್ತಿದ್ದು ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಸದ್ಯ ಈ ಚಿತ್ರದ ಬಹು ನಿರೀಕ್ಷಿತ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಪ್ರಮೋದ್ ಮರವಂತೆ ಸಾಹಿತ್ಯ ಕೃಷಿಯಲ್ಲಿ ಅರಳಿರುವ ಚಿತ್ರದ ಮೊದಲ ಹಾಡು ‘ಕಣ್ಣು ಕಣ್ಣು ಕಾದಾಡುತ ಇರಲಿ’ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್ ಸಂಗೀತ ಸಂಯೋಜನೆ ಜೊತೆಗೆ ಈ ಹಾಡಿಗೆ ದನಿಯಾಗಿದ್ದಾರೆ. 80,90 ದಶಕದ ಪ್ರೀತಿ, ಪ್ರೇಮವನ್ನು ನೆನಪಿಸುವ ಹಾಡು ಇದಾಗಿದ್ದು, ಅದರ ಮರುಸೃಷ್ಟಿ ಮಾಡುವ ಕೆಲಸವನ್ನು ಈ ಹಾಡಿನಲ್ಲಿ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಛಾಯಾಗ್ರಾಹಕ ಅರುಣ್ ಸುರೇಶ್ ಈ ಹಾಡನ್ನು ಸೆರೆ ಹಿಡಿದಿದ್ದು, ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಮೆಚ್ಚುಗೆ ಜೊತೆಗೆ ಒಂದು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ.
ಸುಕೇಶ್ ಶೆಟ್ಟಿ ಕಥೆ ಚಿತ್ರಕಥೆ ಬರೆದು ‘ದೂರದರ್ಶನ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದು ಇವರ ಮೊದಲ ಸಿನಿಮಾ. ದೂರದರ್ಶನ 80, 90 ದಶಕದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದ್ದು, ಹಳ್ಳಿಯೊಂದಕ್ಕೆ ಟಿವಿ ಎಂಟ್ರಿ ಕೊಟ್ಟಾಗ ಏನೆಲ್ಲ ಆಗುತ್ತೆ ಅನ್ನೋದು ಈ ಚಿತ್ರದ ಒನ್ ಲೈನ್ ಕಹಾನಿ. ಡ್ರಾಮಾ ಹಾಗೂ ಹ್ಯೂಮರ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಹಾಗೂ ಅಯಾನ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಉಗ್ರಂ ಮಂಜು, ಸುಂದರ್ ವೀಣಾ, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಒಳಗೊಂಡ ತಾರಾಗಣ ಸಿನಿಮಾದಲ್ಲಿದೆ. ಚಿತ್ರೀಕರಣ ಮುಗಿಸಿ, ಡಬ್ಬಿಂಗ್ ಪೂರ್ಣಗೊಳಿಸಿರುವ ಸಿನಿಮಾ ತಂಡ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದ್ದು ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ ಚಿತ್ರತಂಡ.
ಈ ಚಿತ್ರವನ್ನು ವಿ ಎಸ್
ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ಪ್ರದೀಪ್ ಆರ್ ರಾವ್ ಸಂಕಲನ ಸಿನಿಮಾಕ್ಕಿದೆ.