ಚಿತ್ರಸಂಗೀತ

ಕನ್ನಡ ಚಲನಚಿತ್ರಸಂಗೀತದ ಕೀರ್ತಿ ಶಿಖರ ಮನೋಮೂರ್ತಿ…ಇದು ನಿಖರ…

MANOMURTHY IN COMPOSING (3)ಲೇಖನ-ಸಂದರ್ಶನ-ಚಿನ್ಮಯ ಎಂ.ರಾವ್ ಹೊನಗೋಡು

ಕಳೆದ ಒಂದುವರೆ ದಶಕದಿಂದ ಕನ್ನಡ ಚಲನಚಿತ್ರ ಸಂಗೀತದಲ್ಲಿ ಹೊಸ ಗಾಳಿ ಬೀಸಲಾರಂಭಿಸಿದೆ. ಒಂದೇ ಬಗೆಯ ಸಂಗೀತದಿಂದ ತುಕ್ಕು ಹಿಡಿದಂತಾಗಿದ್ದ ಕನ್ನಡದ ಕಿವಿಗಳಿಗೆ ಹಾಗು ಕನ್ನಡ ಚಿತ್ರಗೀತೆಗಳೆಂದರೆ ಕಿವುಡಾಗಿ ಹೋಗುತ್ತಿದ್ದ ಕನ್ನಡೇತರ ಸಂಗೀತಪ್ರೇಮಿಗಳಿಗೆ ಪರಿಸ್ಥಿತಿಯಲ್ಲಾಗುತ್ತಿರುವ ಬದಲವಾಣೆ ನಿಧಾನವಾಗಿ ಮನವರಿಕೆಯಾಗುತ್ತಿದೆ. ಕನ್ನಡ ಚಿತ್ರಗೀತೆಗಳನ್ನು ಮನಸ್ಸಿಟ್ಟು ಮನಸ್ಸು ಕೊಟ್ಟು ಕೇಳಬೇಕೆಂಬ ಮನೋಭಾವ ಅತ್ಯಂತ ಸಹಜವಾಗಿ ಮೂಡುತ್ತಿದೆ. ಹೀಗೆ ನವಿರಾಗಿ ಮೂಡಲು ಕಾರಣ ಕೇಳಿದಾಕ್ಷಣ ಹೊಸದೊಂದು ಮೂಡಿಗೆ ನಮ್ಮನ್ನು ಕರೆದುಕೊಂಡು ಹೋಗುವ ಇಂಪಾದ ತಂಪಾದ ಸೊಂಪಾದ ಸಂಗೀತ….ಅದುವೇ ಮನೋಮೂರ್ತಿಯವರ ಹೊಸಬಗೆಯ ಸಂಗೀತ.

ಕನ್ನಡ ಚಿತ್ರರಂಗದ ೭೫ ವರ್ಷಗಳ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಹೊರಬೀಳುವ ಒಂದೇ ಒಂದಂಶವೆಂದರೆ ಎಲ್ಲೆಲ್ಲಿ ಸಂಗೀತ ನಿರ್ದೇಶಕರು ಏಕತಾನತೆಯನ್ನು ಎದೆ ಕೊಟ್ಟು ಎದುರಿಸಿದ್ದಾರೋ ಅಲ್ಲೆಲ್ಲಾ ಏಕಮಾವದ್ವಿತೀಯ ಎಂಬಂತಹ ಸಂಗೀತ ಹೊರಹೊಮ್ಮಿದೆ. ಇದನ್ನೇ ತಾನೆ ಆಂಗ್ಲ ಭಾಷೆಯಲ್ಲಿ ನಾವು “ಟ್ರೆಂಡ್ ಸೆಟರ್” ಎನ್ನುವುದು? ಇಂತಹ ಟ್ರೆಂಡ್ ಸೆಟರ್‌ಗಳಲ್ಲಿ ಪ್ರಮುಖರು ಈ ನಮ್ಮ ಮನೋಮೂರ್ತಿಯವರು. “ಅಮೇರಿಕಾ ಅಮೇರಿಕಾ” ಚಿತ್ರದಿಂದ ಆರಂಭಿಸಿ ಸಂಗೀತದ ಅಲೆಯನ್ನೆಬ್ಬಿಸಿದ ಈ ಅನಿವಾಸಿ ಭಾರತೀಯ ಕನ್ನಡಿಗನ ರಾಗಸಂಯೋಜನೆ “ಮುಂಗಾರು ಮಳೆ”ಯಲ್ಲಿ ಧಾರಾಕಾರವಾಗಿ ಸುರಿದು ಕನ್ನಡ ಚಿತ್ರಸಂಗೀತದ ಮಟ್ಟಿಗೆ “ಅಮೃತಧಾರೆ”ಯಾಗಿದ್ದು ಕನ್ನಡಿಗರ ಸೌಭಾಗ್ಯ. ಇಂತಹ ಸಂಗೀತ ಸಾಧಕನ ಅಂತರಂಗದಲ್ಲಡಗಿರುವ ಸಂಗೀತ ಸೃಷ್ಠಿಯ ಸೊಬಗನ್ನು ಸವಿಯಲು, ಸಂಗೀತ ಸಂಯೋಜನೆಯ ಮರ್ಮವನ್ನು ಬೇಧಿಸಲು ಈ ವಿಶೇಷ ಲೇಖನ ಸಂದರ್ಶನ ನಮ್ಮ ಓದುಗರಿಗಾಗಿ. ಇದು ಕೇವಲ ಈ ಕ್ಷಣದ ಆಗು ಹೋಗುಗಳ ಪ್ರೆಶ್ನೋತ್ತರವಲ್ಲ, ಬದಲಿಗೆ ಕಾಲಘಟ್ಟವೊಂದರ ಸಂಗೀತ ಸಮಾರಾಧನೆಯನ್ನು ಸಾರ್ವಕಾಲಿಕವಾಗಿ ಕಾಪಾಡಿಕೊಳ್ಳಬಹುದಾದ ದಾಖಲಾರ್ಹ ವಿಚಾರ ವಿನಿಮಯ ! ನನ್ನಂತಹ ಯುವ ಸಂಗೀತ ನಿರ್ದೇಶಕನೊಬ್ಬ ಹಿರಿಯ ಹೆಸರಾಂತ ಸಂಗೀತ ನಿರ್ದೇಶಕರೊಡನೆ ನಡೆಸಿದ ನೇರ ಚರ್ಚೆ…ಸಂವಾದ…

MANOMURTHY IN COMPOSING (2)೧-ಈ ದಶಕದಲ್ಲಿ ಸಂಗೀತ ನಿರ್ದೇಶಕರಾಗಿ ಜನಪ್ರಿಯತೆ ಪಡೆದ ತಾವು ಬಹಳ ತಡವಾಗಿ ಚಿತ್ರರಂಗಕ್ಕೆ ಬಂದಿದ್ದೇಕೆ? ನಿಮ್ಮ ಆಗಮನ ಇನ್ನೂ ಮುಂಚಿತವಾಗಿಯೇ ಆಗಬಹುದಿತ್ತಲ್ಲ..?

ಹೌದು.. ಚಿತ್ರರಂಗಕ್ಕೆ ನಾನು ಸ್ವಲ್ಪ ಮುಂಚಿತವಾಗಿಯೇ ಬರಬಹುದಾಗಿತ್ತು, ಅದು ನನ್ನ ಆಸೆ ಕೂಡ ಆಗಿತ್ತು.. ಆದರೆ ವಾಸ್ತವ್ಯದ ಅರಿವು ಬಲು ಮುಖ್ಯ. ದುರದೃಷ್ಟವೆಂದರೆ ನಮ್ಮ ದೇಶದ ಸಂಗೀತ ಕ್ಷೇತ್ರ ಕಲಾವಿದರಿಗೆ ಆರ್ಥಿಕವಾಗಿ ಸಹಕರಿಸಲು ವಿಫಲವಾಗಿದೆ. ಎಲ್ಲೋ ಕೆಲ ಆಯ್ದ ಕಲಾವಿದರಿಗೆ ಮಾತ್ರ ಸ್ವಲ್ಪ ಮಟ್ಟಿಗೆ ಆ ಅದೃಷ್ಟ ದೊರೆತಿರಬಹುದು.. ಹಾಗಾಗಿ ತನಗೆ ಮತ್ತು ತನ್ನ ಕುಟುಂಬಕ್ಕೆ ಸುಸಜ್ಜಿತ ಜೀವನ ಶೈಲಿ ಒದಗಿಸಲು ಪ್ರತಿಯೊಬ್ಬರೂ ಬೇರೆಯ ಆದಾಯ ಮಾರ್ಗ ಹುಡುಕಬೇಕಾಗುತ್ತದೆ.
ಈ ನಿಟ್ಟಿನಲ್ಲಿ ನಾನು ಆಯ್ದುಕೊಂಡದ್ದು ಐ.ಟಿ. ಕ್ಷೇತ್ರವನ್ನ. ಇದರ ಜೊತೆಯಲ್ಲೇ ಸಂಗೀತದಲ್ಲೂ ಕೂಡ ಆಸಕ್ತಿ ಮತ್ತು ಅಭಿಲಾಷೆ ವಹಿಸಿ ಅದನ್ನು ನನ್ನ ಮತ್ತೊಂದು ಜೀವನೋಪಾಯವಾಗಿ ನಿಭಾಯಿಸಿಕೊಂಡು ಬಂದೆ.
ನಾನು ನನ್ನ ಕುಟುಂಬದ ಅಪೇಕ್ಷೆಗೆ ತಕ್ಕ ಜೀವನಶೈಲಿ ಒದಗಿಸಿದೆ ಎಂದು ಮನವರಿಕೆ ಆದ ಮೇಲೆ, ನನ್ನ ಸಂಗೀತ ವೃತ್ತಿಯನ್ನು ಸಂಪೂರ್ಣವಾಗಿ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಯಿತು.

With Dave — with Dave Takahashi at Hollywood, California.೨-ಕನ್ನಡ ಚಿತ್ರಗೀತೆಗಳ ಇತಿಹಾಸದಲ್ಲಿ ತಾವೊಬ್ಬ “ಟ್ರೆಂಡ್ ಸೆಟ್ಟರ್” ಎಂಬ ಮಾತಿದೆ…ಇದು ಹೇಗೆ ಸಾಧ್ಯವಾಯಿತು?

ನಾವು ಸಂಗೀತ ನಿರ್ದೇಶನದಲ್ಲಿ ಕ್ರಿಯಾಶೀಲರಾಗಿ ನಮ್ಮ ಸಾಮರ್ಥ್ಯದ ಗರಿಷ್ಠ ಮಟ್ಟದವರೆಗೆ ತಲುಪಿ ಗೀತೆಯೊಂದನ್ನು ಸೃಷ್ಠಿಸಬಹುದು. ಆದರೆ ಫಲಿತಾಂಶವೆಂಬುದು ಕೇಳುಗರ ಕೈಯ್ಯಲ್ಲಿದೆ, ಮನಸ್ಸಿನಲ್ಲಿದೆ ಹಾಗು ಆತ್ಮದಲ್ಲಿದೆ. ಅಂತಿಮ ನಿರ್ಧಾರ ಅವರದ್ದೇ. ಕೇಳುಗರು ಯಾವುದನ್ನು ಅತಿಯಾಗಿ ಇಷ್ಟ ಪಡಲು ಆರಂಭಿಸುತ್ತಾರೋ ಅಲ್ಲಿ ಹೊಸಶೈಲಿಯೊಂದು ಆರಂಭವಾಗಿ ಯಶಸ್ವಿಯಾಯಿತು ಎನ್ನಬಹುದು. ನನ್ನ ಸಂಗೀತದಲ್ಲೂ ಇದೇ ಆಗಿದೆಯೆಂಬುದು ನನ್ನ ಭಾವನೆ. ನನ್ನ ರಾಗಸಂಯೋಜನೆಯ ಜನಪ್ರಿಯತೆಯಲ್ಲಿ ಟ್ರೆಂಡ್ ಸೆಟ್ಟರ್ ಎಂಬ ಮಾತು ಅಡಗಿದೆ ಎನ್ನಬಹುದು.

೩-ಚಿತ್ರಗೀತೆಗಳಿಗೆ ಸಂಗೀತ ನೀಡುವಾಗ ವಾದ್ಯ ಸಂಯೋಜನೆ ಎಷ್ಟರ ಮಟ್ಟಿಗೆ ಪಾತ್ರ ನಿರ್ವಹಿಸುತ್ತದೆ? ಸಂಗೀತ ನಿರ್ದೇಶಕ ಪಾತ್ರವೆಷ್ಟು? ಸಂಗೀತ ನಿರ್ವಾಹಕನ ಪಾತ್ರವೆಷ್ಟು?

ಅದು ಯಾವುದೇ ಚಿತ್ರಗೀತೆಗಳು ಅಥವಾ ಸಂಗೀತವಿರಬಹುದು ಎಲ್ಲಕೂ ಮೂಲ ರಾಗಸಂಯೋಜನೆ ಎಂಬುದು. ಹಾಗಾಗಿ ರಾಗಸಂಯೋಜನೆ ಎಂಬುದೇ ಗೀತೆಯ ಆತ್ಮ. ವಾದ್ಯಸಂಯೋಜನೆ ಹಾಗು ಮಿಕ್ಕೆಲ್ಲವೂ ಹೊರಕವಚವಿದ್ದಂತೆ, ಗೀತೆಯೊಂದರ ಆತ್ಮವನ್ನು ವ್ಯವಸ್ಥಿತವಾಗಿ ಪ್ರಸ್ತುತಪಡಿಸಬೇಕು. ವಿವಿಧ ಸಂಗೀತ ನಿರ್ದೇಶಕರು ವಿವಿಧ ರೀತಿಯಲ್ಲಿ ವಾದ್ಯಸಂಯೋಜನೆಯ ಕೆಲಸದಲ್ಲಿ ಭಾಗಿಯಾಗುತ್ತಾರೆ. ನಾನು ವಾದ್ಯಸಂಯೋಜನೆಯಲ್ಲೂ ಆಳವಾಗಿ ತೊಡಗಿಸಿಕೊಳ್ಳುತ್ತೇನೆ. ಎಷ್ಟೋ ಗೀತೆಗಳಿಗೆ ನಾನೇ ಸ್ವತಹ ವಾದ್ಯಸಂಯೋಜನೆಯನ್ನೂ ಮಾಡಿದ್ದೇನೆ.

This is inside the studio with Rene Van Verseveld - he owns the studio — with Rene Van Verseveld೪-ಒಂದು ಚಿತ್ರಗೀತೆಯ ಯಶಸ್ಸಿನಲ್ಲಿ ರಾಗಸಂಯೋಜನೆ ಹಾಗು ವಾದ್ಯಸಂಯೋಜನೆ ಇವೆರಡರಲ್ಲಿ ಯಾವುದರ ಪಾಲು ಹೆಚ್ಚು? ಏಕೆ?

ಗೀತೆಯೊಂದರ ಆತ್ಮ ಹಾಗು ಅದರ ಆಯಸ್ಸು ರಾಗಸಂಯೋಜನೆಯಿಂದ ನಿರ್ಧಾರವಾಗುತ್ತದೆ. ಅದೆಂತಹ ವಾದ್ಯಸಂಯೋಜನೆಗಳಿದ್ದರೂ ಗೀತೆಯೊಂದು ರಾಗಸಂಯೋಜನೆಯಲ್ಲಿ ಎಡವಿದರೆ ಆತ್ಮವಿಲ್ಲದ ದೇಹದಂತಾಗುತ್ತದೆ. ಜನ ಚಿರಕಾಲ ಗೀತೆಯ ರಾಗವನ್ನು ಗುನುಗುತ್ತಾರೆ ಹೊರತು ಅದರಲ್ಲಿ ಬರುವ ವಾದ್ಯಗಳನ್ನಲ್ಲ. ಒಂದು ಚಿತ್ರಗೀತೆಯ ಯಶಸ್ಸಿನಲ್ಲಿ ಅದರ ರಾಗಸಂಯೋಜನೆಯ ಪಾಲು ಮೊದಲು. ಆದರೂ ವಾದ್ಯಸಂಯೋಜನೆ, ಒಳ್ಳೆಯ ಸಾಹಿತ್ಯ, ಚಿತ್ರದಲ್ಲಿ ಅದು ಬರುವ ಸಂದರ್ಭ, ಅದರ ನೃತ್ಯ ಸಂಯೋಜನೆ ಹಾಗು ಒಟ್ಟಾರೆಯಾಗಿ ಚಿತ್ರೀಕರಿಸಿದ ಬಗೆ ಇವೆಲ್ಲಾ ಒಂದು ಚಿತ್ರಗೀತೆಯ ಯಶಸ್ಸಿನಲ್ಲಿ ಅದರದ್ದೇ ಆದ ಪ್ರಮುಖ ಪಾಲನ್ನು ಹೊಂದಿರುತ್ತದೆ.

೫-ನೀವು ಈವರೆಗೆ ಸಂಗೀತ ನೀಡಿದ ಚಿತ್ರಗೀತೆಗಳಿಗೆ ಯಾರು ಯಾರು ವಾದ್ಯಸಂಯೋಜಕರಾಗಿ ಕೆಲಸ ಮಾಡಿದ್ದಾರೆ?

ಈವರೆಗೆ ಸ್ಟಿಫನ್, ಪ್ರಕಾಶ್ ಪೀಟರ್ಸ್, ಅವಿನಾಶ್, ಚಂದ್ರಚೂಡ್ ಹಾಗು ಮತ್ತಿತರರ ಜೊತೆ ಕೆಲಸ ಮಾಡುವ ಸದವಕಾಶ ನನ್ನದಾಗಿದೆ.

With Ray (bass guitar) and Rene — with Rene Van Verseveld and Ray Big-Blunt Myrie at Hollywood, C೬-ಆಧುನಿಕ ತಂತ್ರಜ್ನಾನದಿಂದಾಗಿ ಚಿತ್ರಗೀತೆಗಳಲ್ಲಿ ವಾದ್ಯವೃಂದದ ಬಳಕೆ ಕಡಿಮೆಯಾಗುತ್ತಿದೆಯಾ? ನಿಮ್ಮ ಸಂಗೀತ ನಿರ್ದೇಶನದಲ್ಲಿ ಲೈವ್ ಇನ್ಸ್ಟ್ರುಮೆಂಟ್ಸ್‌ಗಳಿಗೆ ಎಷ್ಟು ಪ್ರಾಧಾನ್ಯತೆ ನೀಡಿದ್ದೀರಿ?

ನಿಜ…ಲೈವ್ ವಾದ್ಯಗಳು ಇತ್ತೀಚೆಗೆ ಅವಕಾಶವಂಚಿತವಾಗುತ್ತಿವೆ. ಆಧುನಿಕ ತಂತ್ರಜ್ಞಾನದ ದೆಸೆಯಿಂದ ಎನ್ನುವುದಕ್ಕಿಂತ ಹಣಕಾಸಿನ ಕೊರತೆಯಿಂದ ಎನ್ನಬಹುದು. ಒಂದು ಚಿತ್ರಗೀತೆಗೆ ಲೈವ್ ವಾದ್ಯಗಳು ಹಾಗು ಆಧುನಿಕ ತಂತ್ರಜ್ನಾನ ಎರಡೂ ಅತ್ಯವಶ್ಯಕವಾಗಿ ಬೇಕು. ಆದರೆ ಹಣಕಾಸಿನ ಕೊರತೆ ಕ್ರಿಯಾಶೀಲತೆಗೆ ಒಮ್ಮೊಮ್ಮೆ ಧಕ್ಕೆ ತರುತ್ತದೆ. ಆಗ ಲೈವ್ ವಾದ್ಯಗಳನ್ನು ಬಿಟ್ಟು ಆಧುನಿಕ ತಂತ್ರಜ್ನಾನದ ಮೊರೆ ಹೋಗಬೇಕು. ನಾನು ಎಲ್ಲಾ ಗೀತೆಗಳಲ್ಲೂ ಒಂದು ಹಂತ ಅಥವಾ ಇನ್ನೊಂದು ಹಂತದಲ್ಲಿ ಲೈವ್ ವಾದ್ಯಗಳನ್ನು ಬಳಸುತ್ತೇನೆ.

೭-ನೀವು ಸಂಗೀತಕ್ಕೆ ಸಾಹಿತ್ಯ ಬರೆಸುತ್ತೀರೋ? ಅಥವಾ ಸಾಹಿತ್ಯಕ್ಕೆ ಸಂಗೀತ ನೀಡುತ್ತೀರೊ? ಯಾವುದು ನಿಮಗೆ ಸರಿಹೊಂದುತ್ತದೆ?

ಬಹಳಷ್ಟು ಸಾರಿ….ನೂರಕ್ಕೆ ತೊಬತ್ತೈದರಷ್ಟು ಸಂದರ್ಭಗಳಲ್ಲಿ ರಾಗಸಂಯೋಜಿಸಿದ ಸ್ವರಗಳಿಗೆ ಸಾಹಿತ್ಯ ಬರೆಯಲಾಗಿದೆ. ಬಹಳಷ್ಟು ನಿರ್ದೇಶಕರು ಮೊದಲು ಟ್ಯುನ್ ಆಯ್ಕೆ ಮಾಡಲು ಮುಂದಾಗುತ್ತಾರೆ. ಹಾಗೆಯೇ ಸಾಹಿತ್ಯ ಬರೆಯುವವರೂ ಕೂಡ ಮೊದಲು ಹಾಡಿನ ರಾಗ ಸಿಕ್ಕಿದರೆ ಹಾಡು ಬರೆಯಲು ಅನುಕೂಲವಾಗುತ್ತದೆ ಎನ್ನುತ್ತಾರೆ. ಇನ್ನು ಎಲ್ಲೋ ಒಮ್ಮೊಮ್ಮೆ ನಾಗತಿಹಳ್ಳಿ ಚಂದ್ರಶೆಖರ್ ಅಂತಹ ನಿರ್ದೇಶಕರು ಹಳೆಯ ಸುಪ್ರಸಿದ್ಧ ಕವಿತೆಗೆ ರಾಗಸಂಯೋಜಿಸಲು ನೀಡುತ್ತಾರೆ. ಆಗ ಮಾತ್ರ ನಾನು ನೀಡಿದ ಕವಿತೆಗೆ ರಾಗಸಂಯೋಜಿಸುತ್ತೇನೆ.

With Michael Duffy who played the percussion — with Michael Duffy at Hollywood, California.೮-ಸಂಖ್ಯಾವಾರು ಗಮನಿಸಿದಾಗ ನಿಮ್ಮ ಸಂಗೀತದ ಹೆಚ್ಚಿನ ಗೀತೆಗಳಲ್ಲಿ ಮುಂಬೈ ಗಾಯಕರು ಹಾಡಿದ್ದಾರೆ…ಇದಕ್ಕೆ ಕಾರಣ ಯಾರು? ಇದು ಹೀಗೇಕೆ?

ಬಹಳಷ್ಟು ಮಂದಿ ನನಗೆ ಈ ಪ್ರೆಶ್ನೆಯನ್ನು ಆಗಾಗ ಕೇಳುತ್ತಲೇ ಇರುತ್ತಾರೆ. ಆಗೆಲ್ಲಾ ನಾನು ಮುಂಬೈ ಗಾಯಕರು ಹಾಗು ದಕ್ಷಿಣದ ಗಾಯಕರು ಹಾಡಿರುವ ಹಾಡುಗಳ ಸಂಖ್ಯೆಯನ್ನು ಲೆಕ್ಕಿಸುತ್ತಲೇ ಇದ್ದೇನೆ. ಹಾಗೆ ನೋಡಿದರೆ ನನ್ನ ೭೧ ಗೀತೆಗಳಿಗೆ ಮುಂಬೈ ಗಾಯಕರು ಹಾಗು ಅದಕ್ಕಿಂತ ಹೆಚ್ಚು ಅಂದರೆ ೮೦ ಗೀತೆಗಳಿಗೆ ದಕ್ಷಿಣ ಭಾರತದ ಗಾಯಕರು ಹಾಡಿದ್ದಾರೆ ! ನನ್ನ ಬಹುಮುಖ್ಯ ಜವಾಬ್ದಾರಿ ನನ್ನ ಗೀತೆಗಳ ಕೇಳುಗರನ್ನು ಸಂತೃಪ್ತರನ್ನಾಗಿಸುವುದು, ನಿರ್ಮಾಪಕರು ಹಾಗು ನಿರ್ದೇಶಕರೆಲ್ಲಾ ಆನಂತರದ ಆಧ್ಯತೆ. ಒಂದು ಸಿಡಿಯನ್ನು ಯಾರಾದರು ಪ್ಲೆ ಮಾಡುವಾಗ ಅವರು ಯಾವಾಗಲೂ ಸೋನು ನಿಗಮ್ ಅಥವಾ ಶ್ರೇಯಾ ಘೋಶಾಲ್ ಗೀತೆಗಳಿಗೇ ಯಾಕೆ ಹಿಂದಿರುಗುತ್ತಾರೆ? ಎಫ್.ಎಂ ರೇಡಿಯೋಗಳೂ ಸಹ ಯಾಕೆ ಅಂಥವರ ಗೀತೆಗಳನ್ನೇ ಹೆಚ್ಚು ಹೆಚ್ಚು ಪ್ರಸಾರ ಮಾಡುತ್ತಾರೆ? ಕೇಳುಗರು ಯಾವುದನ್ನು ಹೆಚ್ಚು ಇಷ್ಟ ಪಡುತ್ತಾರೋ ಅದನ್ನೇ ತಾನೇ ಅವರು ಮತ್ತೆ ಮತ್ತೆ ಪ್ರಸಾರ ಮಾಡುವುದು? ಅಂದರೆ ಇದರರ್ಥ ಇಂದಿನ ಕೇಳುಗರು ಹಾಗು ಇಂದಿನ ಟ್ರೆಂಡ್ ಅದನ್ನೇ ಬಯಸುತ್ತಿದೆ ಎಂದಲ್ಲವೆ? ನಾನು ಈ ಮೊದಲೇ ಹೆಳಿದಂತೆ ಯಾವಾಗಲೂ ಕೇಳುಗರೇ ಟ್ರೆಂಡ್ ಸೆಟ್ ಮಾಡುತ್ತಾರೆ. ನಾವು ಸೃಷ್ಟಿಸುವವರು ಕೇಳುಗರ ಅಪೇಕ್ಷೆಯಂತೆ ಕೆಲಸ ಮಾಡುತ್ತೇವೆ ಅಷ್ಟೇ.

mano murthy with his family೯-ಸಂಗೀತ ನಿರ್ದೇಶನದಲ್ಲಿ ಎಲ್ಲೆಲ್ಲಿ ಒಲ್ಲದ ಮನಸ್ಸಿನಿಂದ ರಾಜಿಯಾಗಿದ್ದೀರಿ?

ಈ ಹಿಂದೂ ಆ ರೀತಿ ರಾಜಿಯಾಗಿಲ್ಲ…ಮುಂದೂ ಆಗುವುದಿಲ್ಲ. ಚಿತ್ರಕಥೆಗೆ ಪೂರಕವಾಗಿ ಸಣ್ಣ ಪುಟ್ಟ ಬದಲಾವಣೆಯ ಹೊರತಾಗಿ ಗುಣಮಟ್ಟದ ವಿಚಾರದಲ್ಲಿ ನಾನು ಎಲ್ಲೂ ಯಾರೊಡನೆಯೂ ರಾಜಿಯಾಗಿಲ್ಲ. ಆಗುವುದೂ ಇಲ್ಲ.

೧೦-ಕನ್ನಡ ಚಿತ್ರಗೀತೆಗಳು ಹಿಂದೆ ಹೇಗಿತ್ತು? ಈಗ ಹೇಗಿದೆ? ಮುಂದೆ ಹೇಗಿರಬಹುದು?

ಸಂಗೀತವೆಂಬುದೊಂದು ಕಲಾ ಪ್ರಕಾರ. ಇಲ್ಲಿ ತಪ್ಪು-ಒಪ್ಪುಗಳ ಮಾತಿಲ್ಲ. ಇದು ವೈಚಾರಿಕ. ಒಂದು ಕಲಾಕೃತಿಯನ್ನು ಇಷ್ಟವಾಗಬಹುದು…ಇಷ್ಟವಾಗದೇ ಇರಬಹುದು ಅಥವ ಎರಡೂ ಅಲ್ಲದೆ ಎರಡರ ಮಧ್ಯೆ ನಿಮ್ಮ ಮನೋಸ್ಥಿತಿಯಿರಬಹುದು. ನಾನು ವಯಕ್ತಿಕವಾಗಿ ಎಲ್ಲಾ ಬಗೆಯ ಸಂಗೀತವನ್ನೂ ಕೇಳುತ್ತೇನೆ. ನಾನು ನನ್ನ ಭಾವನೆಯನ್ನು ವ್ಯಕ್ತಪಡಿಸಬಹುದಷ್ಟೇ…ಆದರೆ ಚಿತ್ರರಂಗದಲ್ಲಿ ಬೇರೆಯದೇ ಆಗಿರುತ್ತದೆ. ಆದರೆ ನಾವು ಸಂಗೀತದ ಸೃಷ್ಟಿಕರ್ತರಾಗಿ ಕೇಳುಗರು ಏನನ್ನು ಬಯಸುತ್ತರೋ ಆದನ್ನು ನೀಡಬೇಕೆ ಹೊರತು ನಮಗೆ ಬೇಕಾಗಿರುವುದನ್ನಲ್ಲ. ನಮ್ಮ ದೃಷ್ಟಿಕೋನವನ್ನು ಹೀಗೆ ನೋಡಿದಲ್ಲಿ ಅದು ಉತ್ತಮ. ಒಂದೊಮ್ಮೆ ಕೇಳುಗರು ಇಂದು ಚಾಲ್ತಿಯಲ್ಲಿರುವ ಶೈಲಿಯನ್ನು ಮತ್ತೆ ಮತ್ತೆ ಕೇಳುತ್ತಿದ್ದಾರೆ ಎಂದಾದರೆ ಅದನ್ನೇ ನಾವು ಮತ್ತೆ ಮತ್ತೆ ನೀಡಬೇಕಾಗುತ್ತದೆ. ಒಮ್ಮೆ ಇದು ಸಾಕು ನಿಲ್ಲಿಸಿ ಬೇರೆ ಇನ್ನೂ ಅತ್ಯುತ್ತಮ ನೀಡಿ ಎಂದರೆ ನಾವು ಅವರ ಪ್ರತಿಕ್ರಿಯೆಗನುಸಾರವಾಗಿ ನಮ್ಮ ಕೆಲಸವನ್ನಾರಂಭಿಸಬೇಕಾಗುತ್ತದೆ. ಇಲ್ಲಿ ಚಿತ್ರ ತಯಾರಕರು ಕೂಡ ಪ್ರೇಕ್ಷಕರ ಅಭಿರುಚಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕನಾಗಿ ಸ್ಪಂದಿಸಬೇಕು. ಆದರೆ ದೌರ್ಭಾಗ್ಯವೆಂದರೆ ಇದು ಆಗುತ್ತಿಲ್ಲ. ಕೇಳುಗರ ಮಾತನ್ನು ಕೇಳುವುದನ್ನು ನಾವು ನಿಲ್ಲಿಸಬಾರದು, ಏಕೆಂದರೆ ಅವರು ನಮ್ಮನ್ನು ನಂಬಿ, ನಮ್ಮ ಮೇಲೆ ನಿರೀಕ್ಷೆಗಳನ್ನಿಟ್ಟುಕೊಂಡು ತಮ್ಮ ಅತ್ಯಮೂಲ್ಯ ಸಮಯ ಹಾಗು ಹಣವನ್ನು ವಿನಿಯೋಗಿಸುತ್ತಿದ್ದಾರೆ ಅಲ್ಲವೇ?

mano murthy with his family (1)ಮನೋಮೂರ್ತಿ ಸಂಸಾರ ಸರಿಗಮ

ಎಲಕ್ಟ್ರಿಕ್ ಇಂಜಿನಿಯರ್‌ನಲ್ಲಿ ಸ್ನಾತಕ ಪದವಿಯನ್ನು ಬೆಂಗಳೂರಿನಲ್ಲಿ ಪಡೆದ ಮನೋಮೂರ್ತಿ ಅದೇ ವಿಷಯದ ಸ್ನಾತಕೋತ್ತರ ಪದವಿಯನ್ನು ಕ್ಯಾಲಿಫೋರ್ನಿಯಾದಲ್ಲಿ ಪಡೆದರು. ನಂತರ ಕಂಪ್ಯೂಟರ್ ಸೈನ್ಸ್‌ನಲ್ಲಿಯೂ ಸ್ನಾತಕೋತ್ತರ ಪದವಿಯನ್ನು ಪಡೆದರು. ಸಂಗೀತ ಸಂಯೋಜನೆ ಹಾಗು ವಾದ್ಯ ಸಂಯೋಜನೆಯ ಪದವೈಯನ್ನು ಬರ್ಕ್ಲಿ ಕಾಲೆಜ್ ಆಫ್ ಮ್ಯುಸಿಕ್‌ನಲ್ಲಿ ಪಡೆದರು. “ಮಿಲನ” ಚಿತ್ರಕ್ಕೆ ಸಂಗೀತ ನೀಡುವವರೆಗೂ ಐಟಿ ಉದ್ಯೋಗಿಯಾಗಿ ಸುಮಾರು ಇಪ್ಪತ್ತೈದು ವರ್ಷ ದುಡಿದ ಮನೋಮೂರ್ತಿ ಅಷ್ಟರ ನಂತರ ಅಂದರೆ ಈಗ ಅವೆಲ್ಲವನ್ನೂ ತೊರೆದು ಪೂರ್ಣ ಪ್ರಮಾಣದಲ್ಲಿ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಧರ್ಮಪತ್ನಿ ಲತಾ, ಪುತ್ರ ನೆವಿನ್ ಹಾಗು ಪುತ್ರಿ ಸೋನಿಯಾ ಕ್ಯಾಲಿಫೋರ್ನಿಯಾದಲ್ಲೇ ನೆಲೆಸಿದ್ದಾರೆ. ಮನೋಮೂರ್ತಿ ಮಾತ್ರ ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ಮೂಲ ಮನೆಗೆ ಆಗಾಗ ಕೆಲಸದ ನಿಮಿತ್ತ ಬರುತ್ತಿರುತ್ತಾರೆ. ಈ ಸಂದರ್ಶನಕ್ಕೆ ತೆರಳಿದಾಗ ಮನೋಮೂರ್ತಿ ಸದಾಶಿವನಗರದ ತಮ್ಮ ಮನೆಯಲ್ಲೇ ಮಾಡಿಕೊಂಡಿರುವ ಪುಟ್ಟ ಸ್ಟೂಡಿಯೋದಲ್ಲಿ ಸಂಗೀತ ಸಂಯೋಜನೆ ಮಾಡುತ್ತಿದ್ದರು.

ಮನೋಮೂರ್ತಿ ಸಂಗೀತ ನೀಡಿರುವ ಚಿತ್ರಗಳ ವಿವರ

ತೆರೆ ಕಂಡ ವರ್ಷ-ಚಿತ್ರದ ಹೆಸರು

೧೯೯೫-ಅಮೇರಿಕಾ ಅಮೇರಿಕಾ

೨೦೦೧-ನನ್ನ ಪ್ರೀತಿಯ ಹುಡುಗಿ

೨೦೦೩-ಪ್ರೀತಿ ಪ್ರೇಮ ಪ್ರಣಯ

೨೦೦೪-ಜೋಕ್ ಫಾಲ್ಸ್

೨೦೦೫-ಅಮೃತಧಾರೆ

೨೦೦೬-ಮುಂಗಾರು ಮಳೆ

೨೦೦೭-ಚೆಲುವಿನ ಚಿತ್ತಾರ, ಮಾತಾಡ್ ಮಾತಾಡ್ ಮಲ್ಲಿಗೆ, ಗೆಳೆಯ, ಮಿಲನ
ಹೆತ್ತರೆ ಹೆಣ್ಣನ್ನೇ ಹೆರಬೇಕು, ಈ ಬಂಧನ

೨೦೦೮-ವಾನ (ಮುಂಗಾರು ಮಳೆಯ ತೆಲುಗು ಅವತರಿಣಿಕೆ)

೨೦೦೮-ಮೊಗ್ಗಿನ ಮನಸು, ಮಾದೇಶ, ಬೊಂಬಾಟ್, ಹಾಗೆ ಸುಮ್ಮನೆ

೨೦೦೯-ಒಲವೆ ಜೀವನ ಲೆಕ್ಕಾಚಾರ, ಮಳೆ ಬರಲಿ ಮಂಜೂ ಇರಲಿ,
ಮನಸಾರೆ, ಜನುಮ ಜನುಮದಲ್ಲೂ, ನೀನೆ ಬರಿ ನೀನೆ (ಆಲ್ಬಮ್)
ಗೋಕುಲ

೨೦೧೦-ಪಂಚರಂಗಿ

೨೦೧೧-ಲೈಫು ಇಷ್ಟೇನೆ, ಮಿಸ್ಟರ್ ಡೂಪ್ಲಿಕೇಟ್

೨೦೧೨-ಪಾರಿಜಾತ

೨೦೧೩-ಅತಿ ಅಪರೂಪ, ಅಲೆ (ಇನ್ನೂ ತೆರೆ ಕಾಣಬೇಕು)

**********

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.