ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ಆರೆಂಜ್, ದಳಪತಿ, ಜೂಮ್, ಲವ್ ಗುರು ಸಿನಿಮಾಗಳ ಸಾರಥಿ ಪ್ರಶಾಂತ್ ರಾಜ್ ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವುದು ಗೊತ್ತೇ ಇದೆ. ಕಾಲಿವುಡ್ ನ ಖ್ಯಾತ ಹಾಸ್ಯನಟ ಕಂ ನಾಯಕ ಸಂತಾನಂ ಜೊತೆಗೂಡಿ ಹೊಸ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಪ್ರತಿ ಸಿನಿಮಾದಲ್ಲೂ ಆಕರ್ಷಕ ಶೀರ್ಷಿಕೆ ಇಡುವ ಪ್ರಶಾಂತ್ ಈ ಬಾರಿ ಕೂಡ ತಮ್ಮ ಚೊಚ್ಚಲ ತಮಿಳು ಚಿತ್ರಕ್ಕೆ ಕಿಕ್ ಎಂಬ ಕ್ಯಾಚಿ ಟೈಟಲ್ ಇಟ್ಟಿದ್ದಾರೆ.
ಗಣೇಶ್ ಚತುರ್ಥಿಗೆ ಸಿನಿಮಾದ ಟೈಟಲ್ ಜೊತೆಗೆ ಫಸ್ಟ್ ಲುಕ್ ಕೂಡ ಅನಾವರಣಗೊಂಡಿದೆ. ವಿಭಿನ್ನವಾಗಿ ಮೂಡಿಬಂದಿರುವ ಪೋಸ್ಟರ್ ನಲ್ಲಿ ಸಂತಾನಂಗೆ ಎಂಟು ಕೈಗಳಿದ್ದು, ಒಂದೊಂದು ಕೈಯಲ್ಲಿ ಒಂದೊಂದು ವಸ್ತುಗಳನ್ನು ಹಿಡಿದುಕೊಂಡಿದ್ದಾರೆ. ಇಪ್ರೆಸಿವ್ ಆಗಿ ಮೂಡಿಬಂದಿರುವ ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ರೋಮ್ಯಾಂಟಿಕ್ ಕಂ ಕಾಮಿಡಿ ಕಥಾಹಂದರ ಹೊಂದಿರುವ ಕಿಕ್ ಸಿನಿಮಾದಲ್ಲಿ ಸಂತಾನಂಗೆ ಜೋಡಿಯಾಗಿ ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್ ನಟಿಸಿದ್ದಾರೆ. ಉಳಿದಂತೆ ರಾಗಿಣಿ, ಸುಧು ಕೋಕಿಲಾ ಸೇರಿದಂತೆ ಹಲವು ಪ್ರತಿಭಾನ್ವಿತ ಕಲಾದಂಡು ಚಿತ್ರದಲ್ಲಿದೆ.
ಫಾರ್ಚ್ಯೂನ್ ಫಿಲ್ಮಂ ಪ್ರೊಡಕ್ಷನ್ ನಡಿ ನವೀನ್ ರಾಜ್ ಬಹುಕೋಟಿ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಿನಿಮಾಕ್ಕಿದೆ. ಈ ಹಿಂದೆ ಪ್ರಶಾಂತ್ ರಾಜ್ ಹಾಗೂ ಅರ್ಜುನ್ ಜನ್ಯ ಕಾಂಬಿನೇಷನ್ ಮೂಡಿ ಬಂದಿದ್ದ ಹಾಡುಗಳು ಮೋಡಿ ಮಾಡಿದ್ದವು. ಇದೀಗ ಅದೇ ನಿರೀಕ್ಷೆ ಸಕಲ ಚಿತ್ರರಸಿಕರಲ್ಲಿದೆ. ಬೆಂಗಳೂರು, ಚೆನ್ನೈ, ಬ್ಯಾಂಕಕ್, ಪಟಾಯ್ ಸೇರಿದಮತೆ ಹಲವೆಡೆ ಚಿತ್ರೀಕರಣ ಮಾಡಲಾಗಿದ್ದು, ಸುಧಾಕರ್ ಕ್ಯಾಮೆರಾ, ನಾಗೂರನ್ ರಾಮಚಂದ್ರ ಸಂಕಲನ ಸಿನಿಮಾಕ್ಕಿದೆ. ಸದ್ಯ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಪ್ರಶಾಂತ್ ರಾಜ್ ಬಳಗ ಶೀಘ್ರದಲ್ಲಿಯೇ ಚಿತ್ರಪ್ರೇಮಿಗಳಿಗೆ ಕಿಕ್ ಕೊಡಲು ಸಜ್ಜಾಗುತ್ತಿದ್ದಾರೆ.