ಕಾಲಿವುಡ್

ಅಡವಿ ಶೇಷ್ ‘ಹಿಟ್ -2’ ಡಿಸೆಂಬರ್ 2ಕ್ಕೆ ಬಿಡುಗಡೆ- ಶೈಲೇಶ್ ಕೊಲನು ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ

‘ಮೇಜರ್’ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ತೆಲುಗು ನಟ ಅಡವಿ ಶೇಷ್ ‘ಹಿಟ್-2’ ಸಿನಿಮಾ ಡಿಸೆಂಬರ್ 2ರಂದು ಬಿಡುಗಡೆಯಾಗುತ್ತಿದೆ. ಚಿತ್ರವನ್ನು ‘ಹಿಟ್’ ಸಿನಿಮಾ ಖ್ಯಾತಿಯ ಡಾ. ಶೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿದ್ದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಚಿತ್ರದ ನಿರ್ದೇಶಕ ಶೈಲೇಶ್ ಕೊಲನು ಮಾತನಾಡಿ ‘ಹಿಟ್ 1’ಗೆ ಬಹಳ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿತ್ತು. ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾದ ಮೇಲೆ ಹೆಚ್ಚಿನ ಜನತೆ ಚಿತ್ರವನ್ನು ನೋಡಿ, ಮೆಚ್ಚುಗೆ ಸೂಚಿಸಿದ್ದಾರೆ. ಅದರಲ್ಲೂ ಕರ್ನಾಟಕದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಸಿನಿಮಾ ನೋಡಿ ಪ್ರೀತಿ ವ್ಯಕ್ತ ಪಡಿಸಿದ್ದಾರೆ. ಆ ಕಾರಣಕ್ಕೆ ಕರ್ನಾಟಕ ಜನತೆ ಆಶೀರ್ವಾದ ಪಡೆಯಲು ಚಿತ್ರತಂಡ ಇಲ್ಲಿ ಬಂದಿದ್ದೇವೆ. ವಿಶಾಖಪಟ್ಟಣದ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕ್ರೈಂ ಘಟನೆಗಳು ಹೇಗೆ ಒಬ್ಬ ಪೊಲೀಸ್ ಆಫೀಸರ್ ನಿದ್ದೆಗೆಡಿಸುತ್ತೆ. ಆತ ಅದನ್ನು ಹೇಗೆ ಬಗೆಹರಿಸುತ್ತಾನೆ ಅನ್ನೋದು ‘ಹಿಟ್ 2’ ಸಿನಿಮಾ ಒನ್ ಲೈನ್ ಕಹಾನಿ. ಖಂಡಿತ ಈ ಸಿನಿಮಾ ಎಲ್ಲರಿಗೂ ಥ್ರಿಲ್ ನೀಡಲಿದೆ ಎಂದು ನಿರ್ದೇಶಕ ಶೈಲೇಶ್ ಕೊಲನು ತಿಳಿಸಿದ್ರು. ‘ಹಿಟ್’ ನಲ್ಲಿ ಒಟ್ಟು 7 ಸಿರೀಸ್ ಗಳಿವೆ ‘ಹಿಟ್ 2’ ನಂತರ ಇನ್ನೂ ಐದು ಸಿರೀಸ್ ಗಳು ಬರಲಿವೆ. ಪ್ರತಿ ಸಿರೀಸ್ ನಲ್ಲೂ ಬೇರೆ ಬೇರೆ ನಟರು ಲೀಡ್ ನಲ್ಲಿ ನಟಿಸಲಿದ್ದಾರೆ ಎಂದು ನಿರ್ದೇಶಕ ಶೈಲೇಶ್ ಕೊಲನು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ನಾಯಕಿ ಮೀನಾಕ್ಷಿ ಚೌಧರಿ ಮಾತನಾಡಿ ನಾನು ಈ ಚಿತ್ರದಲ್ಲಿ ಆರ್ಯ ಪಾತ್ರವನ್ನು ನಿರ್ವಹಿಸಿದ್ದೇನೆ. ಈ ಸಿನಿಮಾ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಪ್ರತಿರೂಪ ಎನ್ನಬಹುದು. ಇದು ನನ್ನ ಮೂರನೇ ತೆಲುಗು ಸಿನಿಮಾ. ಖಂಡಿತ ನೀವೆಲ್ಲರೂ ಚಿತ್ರದಲ್ಲಿ ನನ್ನ ಪಾತ್ರವನ್ನು ಎಂಜಾಯ್ ಮಾಡ್ತೀರ ಹಾಗೆಯೇ ಈ ಚಿತ್ರವನ್ನು ಎಂಜಾಯ್ ಮಾಡುತ್ತೀರ ಎಂಬ ಭರವಸೆ ನನಗಿದೆ ಎಂದು ಸಂತಸ ಹಂಚಿಕೊಂಡ್ರು.

ಅಡವಿ ಶೇಷ್ ಮಾತನಾಡಿ ನನ್ನ ಲಾಸ್ಟ್ ಐದು ಸಿನಿಮಾಗಳಿಗೆ ಹೈದ್ರಾಬಾದ್ ನಂತರ ಹೆಚ್ಚಿನ ಪ್ರೇಕ್ಷಕರ ಪ್ರೀತಿ ಸಿಕ್ಕಿದ್ದು ಬೆಂಗಳೂರಿನಿಂದ. ಮೇಜರ್ ಸಿನಿಮಾ ನಂತರ ಬೆಂಗಳೂರು ನನಗೆ ಎರಡನೇ ಮನೆಯಂತಾಗಿದೆ. ಇಲ್ಲಿಯೇ ಒಂದು ಮನೆ ಖರೀದಿ ಮಾಡಲು ನಾನು ಪ್ಲ್ಯಾನ್ ಮಾಡಿದ್ದೇನೆ. ‘ಹಿಟ್ 2’ ಚಿತ್ರಕ್ಕೆ ನಾನು ಹೊಸ ಎಂಟ್ರಿ. ಒಂದು ಚಿಕ್ಕ ಹಳ್ಳಿಯಲ್ಲಿರುವ ತನ್ನ ಊರಿನಲ್ಲಿ ಏನ್ ಆಗ್ತಿದೆ ಎಂದು ಗೊತ್ತೇ ಇಲ್ಲದ ಒಬ್ಬ ಲೇಜಿ ಪೊಲೀಸ್ ಆಫೀಸರ್ ಗೆ ಒಂದು ದೊಡ್ಡ ಸೀರಿಯಲ್ ಕಿಲ್ಲರ್ ಕೇಸ್ ಸಿಕ್ಕಾಗ ಆತ ಅದನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದು ಈ ಚಿತ್ರದ ಕಥಾಹಂದರ. ಕನ್ನಡದಲ್ಲೂ ‘ಹಿಟ್ 2’ ಸಿನಿಮಾ ಡಬ್ ಆಗಲಿದೆ. ಡಿಸೆಂಬರ್ 2ಕ್ಕೆ ತೆಲುಗಿನಲ್ಲಿ ಮೊದಲು ರಿಲೀಸ್ ಮಾಡಿ ನಂತರ ದಿನಗಳಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಡೇಟ್ ಅನೌನ್ಸ್ ಮಾಡಲಿದ್ದೇವೆ ಎಂದು ಅಡವಿ ಶೇಷ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ಚಿತ್ರದಲ್ಲಿ ಮೀನಾಕ್ಷಿ ಚೌಧರಿ ನಾಯಕಿಯಾಗಿ ನಟಿಸಿದ್ದು, ರಾವ್ ರಮೇಶ್, ಶ್ರೀಕಾಂತ್ ಮಗಂಟಿ, ಕೋಮಲಿ ಪ್ರಸಾದ್, ಪೋಸನಿ ಕೃಷ್ಣ ಮುರಳಿ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ವಾಲ್ ಪೋಸ್ಟರ್ ಬ್ಯಾನರ್ ನಡಿ ಪ್ರಶಾಂತಿ ತ್ರಿಪಿರನೆನಿ ಚಿತ್ರವನ್ನು ನಿರ್ಮಾಣ ಮಾಡಿದ್ದು, ಮಣಿಕಾಂದನ್ ಎಸ್ ಕ್ಯಾಮೆರ್ ವರ್ಕ್, ಜಾನ್ ಸ್ಟಿವರ್ಟ್ ಎಡುರಿ ಸಂಗೀತ ನಿರ್ದೇಶನ, ಗ್ರಾರಿ ಬಿ.ಹೆಚ್ ಸಂಕಲನ ‘ಹಿಟ್ 2’ ಚಿತ್ರಕ್ಕಿದೆ.

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.