ಜ್ಯೋತಿಷ್ಯ

ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದ ಪಕ್ಷದಲ್ಲಿ ಅದರದ್ದೇ ಆದ ವಿಶೇಷ ಫಲವನ್ನು ಅನುಭವಿಸುತ್ತಾರೆ..!

ನಕ್ಷತ್ರ ಪ್ರಕರಣದಲ್ಲಿ ರಾಕ್ಷಸ ಗಣಕ್ಕೆ ಸೇರಿ ತೀಕ್ಷ್ಣಗುಣದೊಂದಿಗೆ ಅಧೋಮುಖವಾಗಿ ಚಲಿಸಿ ಮಂದ ದೃಷ್ಟಿಯುಳ್ಳ ಅದ್ಭುತವಾದ ನಕ್ಷತ್ರವೇ ಈ ಆಶ್ಲೇಷಾ ನಕ್ಷತ್ರ. ‘ಆಶ್ರೇಷಾ ನಕ್ಷತ್ರಗಂ ಸರ್ಪಾ ದೇವತಾ’ ಎಂದು ಯರ್ಜುವೇದದ ಸಂಹಿತಾ ನಾಲ್ಕನೇಯ ಕಾಂಡದಲ್ಲಿ ತಿಳಿಸಿದಂತೆ ಸರ್ಪ (ನಾಗ) ಆಶ್ಲೇಷಾ ನಕ್ಷತ್ರ ನಿಯಾಮಕ ಪ್ರಧಾನ ದೇವತೆ. ಈ ನಕ್ಷತ್ರದ ನಾಲ್ಕೂ ಪಾದಗಳು ಕರ್ಕ ರಾಶಿಗೆ ಸೇರಿದ್ದು, ಚಂದ್ರ ಅಧಿಪನಾಗಿರುತ್ತಾನೆ.

ಅಶ್ವಿನ್ಯಾದಿ ಯಾವುದಾದರೊಂದು ನಕ್ಷತ್ರಗಳಲ್ಲಿ ಜನಿಸುವ ಮನುಷ್ಯ ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದ ಪಕ್ಷದಲ್ಲಿ ಅದರದ್ದೇ ಆದ ವಿಶೇಷ ಫಲವನ್ನು ಅನುಭವಿಸುತ್ತಾನೆ. ಉದಾ:- ಆಶ್ಲೇಷಾ ನಕ್ಷತ್ರದವರು ಕರ್ಕ ರಾಶಿಗೆ ಸೇರುವುದರಿಂದ, ಏಳನೇ ಮನೆಯ ಅಧಿಪತಿ ಶನೇಶ್ಚರ ! ಅಂತಹವರ ಜಾತಕದಲ್ಲಿ ಶನೇಶ್ಚರ ಗ್ರಹ ಉಚ್ಛ ಸ್ಥಿತಿಯಲ್ಲಿ ಅಥವಾ ಮಿತ್ರ ಗ್ರಹಗಳೊಂದಿಗೆ ಮಿತ್ರ ರಾಶಿಯಲ್ಲಿ ಇಲ್ಲದೇ ಇದ್ದಾಗ ಬಾಳ ಸಂಗಾತಿಯೊಂದಿಗೆ ಸುಖಮಯ ಜೀವನ ಕಷ್ಟಸಾಧ್ಯ.

     ‘ಧೈರ್ಯಂ ಸರ್ವತ್ರ ಸಾಧನಂ’ ಎಂಬ ವಾಕ್ಯವನ್ನು ಜೀವನದುದ್ದಕ್ಕೂ ತಮ್ಮ ಧ್ಯೇಯ ವಾಕ್ಯವಾಗಿ ಪರಿಗಣಿಸುವ ಆಶ್ಲೇಷಾ ನಕ್ಷತ್ರದವರು ಸ್ವಭಾವತಹ ಬಹಳ ಧೈರ್ಯಶಾಲಿಗಳು. ವಾಕ್ ಕಾರಕನಾದ ಬುಧನು  ರಾಶ್ಯಾನುಸಾರ ಇವರಿಗೆ ವ್ಯಯಾಧಿಪತಿ ಆಗುವುದರಿಂದ ಮಾತಿನ ಮೇಲೆ ಹಿಡಿತ ಇಲ್ಲದೇ ಅನ್ಯರ ಮನಸ್ಸಿಗೆ ತಮ್ಮ ಕಟುವಾದ ಮಾತುಗಳಿಂದ ದುಃಖಪಡಿಸಿ ಅವರ ದೃಷ್ಟಿಯಲ್ಲಿ ಕೆಟ್ಟವರಾಗುತ್ತಾರೆ.

ಮನಸ್ಸಿನಲ್ಲಿ ಧನ ಹಾಗೂ ಕೀರ್ತಿಯ ಬಗ್ಗೆ ಎಷ್ಟೇ ಆಸೆ ಇದ್ದರೂ ಪ್ರಪಂಚಕ್ಕೆಲ್ಲಾ ಅದನ್ನು ತೋರ್ಪಡಿಸದೇ  ತಮ್ಮನ್ನು ತಾವು ಅಂತಹ ವಿಚಾರಗಳಲ್ಲಿ ಆಸಕ್ತಿರಹಿತರಂತೆ ತೋರ್ಪಡಿಸುತ್ತಾರೆ. ಕೆಲವೊಮ್ಮೆ ಧಾರಾಳತೆ, ಇನ್ನು ಕೆಲವೊಮ್ಮೆ ಅತೀ ಜಿಪುಣರಂತೆ ವರ್ತಿಸುವ ಇವರು ತಾವು ಕೊಡಬೇಕಾದ ಹಣದ ಪ್ರಮಾಣಕ್ಕಿಂತಲೂ ತಮಗೆ ಬರಬೇಕಾದ ಹಣ ಬರದೇ ಹಣದ ವ್ಯವಹಾರಗಳಲ್ಲಿ ಇಕ್ಕಟ್ಟಿಗೆ ಸಿಲುಕುತ್ತಾರೆ.

ಕೋಪಿಷ್ಠರೆಂದೇ ನಿಕಟವರ್ತಿಗಳಲ್ಲಿ ಕುಖ್ಯಾತಿ  ಪಡೆಯುವ ಇವರು ಆ ಕೋಪದ ಹಿಂದಿನ ಕಾರಣವನ್ನು ತಿಳಿಸಲು ನಿರಾಕರಿಸುತ್ತಾರೆ. ‘ನಾನು ಹೀಗೆ ಹೀಗೆಯೇ ಇರುತ್ತೇನೆ’ ಎಂಬ ಮೊಂಡುವಾದವನ್ನು ಸದಾ ಪ್ರಸ್ತಾಪಿಸುವ ಇವರು ‘ಹೊಂದಾಣಿಕೆ’ ಎಂಬುದನ್ನು ಜೀವನದುದ್ದಕ್ಕೂ ಬಳಸುವುದೇ ಇಲ್ಲಾ ಇದರ ಪ್ರತಿಫಲವೋ ಎಂಬಂತೆ ಯಾವುದೇ ಪ್ರಶಸ್ತಿಗಳಿಗಾಗಲಿ ಪ್ರಶಂಸೆಗಳಿಗಾಗಲಿ ಪಾತ್ರರಾಗದೇ ಕ್ಷುಲ್ಲಕ ಕಾರಣಗಳಿಂದಾಗಿ ಎಲೆ ಮರೆಯ ಕಾಯಿಗಳಂತೇ ಉಳಿದು ಬಿಡುತ್ತಾರೆ.

ಶಾಸ್ತ್ರಗಳಲ್ಲಿ  ಆಶ್ಲೇಷಾ ನಕ್ಷತ್ರದ ಫಲ ವಿಭಾಗವನ್ನು ವಿವರಿಸುವಾಗ

|| ಆದ್ಯೇ ಪಾದೇ ಶುಭಃ | ದ್ವಿತೀಯೇ ಧನನಾಶಃ |

ತೃತಿಯೇ ಮಾತುಃ ನಾಶಃ | ಚತುರ್ಥೇ ಪಿತುಃ ||

ಎಂಬಿತ್ಯಾದಿಯಾಗಿ ವಿಶ್ಲೇಷಿಸಿದ್ದಾರೆ. ಅಂದರೆ ಆಶ್ಲೇಷಾ ನಕ್ಷತ್ರದ ಮೊದಲನೇಯ ಪಾದದಲ್ಲಿ ಹುಟ್ಟಿದವರಿಗೆ ಶುಭ ಎಂದು ತಿಳಿಸಿದರೆ, ಎರಡನೇಯ ಪಾದದಲ್ಲಿ ಧನನಾಶವನ್ನೂ, ಹೇಳುತ್ತಾರೆ ಮೂರನೇಯ ಮತ್ತು ನಾಲ್ಕನೇಯ ಪಾದಗಳಿಗೆ ತಂದೆ ಹಾಗು ತಾಯಿಗೆ ಅನಿಷ್ಟ ಎಂದು ತಿಳಿಸುತ್ತದೆ. ಇಲ್ಲಿ ಗಮನಿಸಲೇ ಬೇಕಾದ ಅಂಶ ಎಂದರೆ ಅನಿಷ್ಟ ಎಂಬ ಶಬ್ದಕ್ಕೆ  ನಾವು ಸರ್ವನಾಶ ಅಥವಾ ಸಾವು ಎಂದು ಖಂಡಿತಾ ಪರಿಗಣಿಸಬಾರದು.  ಪ್ರಮುಖವಾಗಿ ಈ ಎಲ್ಲಾ ದೊಷಗಳ ಪರಿಹಾರವನ್ನು ಶಾಸ್ತ್ರಗಳಲ್ಲಿ ಅತ್ಯಂತ ಸುಸ್ಪಷ್ಟವಾಗಿ ವಿವರಿಸಿರುತ್ತಾರೆ. ಶಾಸ್ತ್ರಗಳಲ್ಲಿ ತಿಳಿಸಿದಂತೆ ಆಶ್ಲೇಷಾ ನಕ್ಷತ್ರದಲ್ಲಿ ಶಿಶು ಜನನವಾದರೆ ದಶರಾತ್ರಿಗಳ ಜಾತಾಶೌಚ ಮುಗಿದ ನಂತರ ನಾಮಕರಣ ಮಾಡುವ ಮೊದಲು ಗೋಮುಖ ಪ್ರಸವ ಶಾಂತಿ ಸಹಿತವಾಗಿ ಆಶ್ಲೇಷಾ ನಕ್ಷತ್ರ ಜನನ ಶಾಂತಿ ಹವನ ಮಾಡಬೇಕಾಗುತ್ತದೆ. ಒಂದು ವೇಳೆ ಜನನ ಸಮಯದಲ್ಲಿ ಈ ಶಾಂತಿ ಮಾಡದೇ ಇದ್ದಲ್ಲಿ ಜೀವನದ ಯಾವುದೇ ಘಟ್ಟದಲ್ಲಿದ್ದರೂ ಸಹ ಆಶ್ಲೇಷಾ ನಕ್ಷತ್ರ ಜನನ ಶಾಂತಿಯನ್ನು ಒಮ್ಮೆ ಮಾಡಿಸಬೇಕು.

ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದಂತಹವರಿಗೆ ಉಂಟಾಗುವ ಎಲ್ಲಾ ದುಷ್ಪರಿಣಾಮಗಳು ಭಕ್ತಿಪೂರ್ವಕವಾಗಿ ಹಾಗು ಕ್ರಮಬದ್ಧವಾಗಿ ಈ ಶಾಂತಿಯನ್ನು ಮಾಡಿಸುವುದರಿಂದ ಪರಿಹಾರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ :- 9845682380

ದಿನಾಂಕ:- 01-02-2014                             ಲೇಖಕರು :_ ವಿಠ್ಠಲ್‍ಭಟ್

 

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.