ನಮಗೆ ಧನಪ್ರಾಪ್ತಿ ಯಾರಿಂದ ?
ಎಲ್ಲರಿಗೂ ದುಡ್ಡೆಂದರೆ ಮೋಹ. ಈಗಿನ ಕಾಲದ ಜೀವನದಲ್ಲಿ ದುಡ್ಡಿನ ಮೋಹವೂ ಸಹಜವೇ. ಅದರಲ್ಲೂ ಬೆಂಗಳೂರಿನಂತ ನಗರದಲ್ಲಿ ವಾಸಿಸುವ ಜನರಿಗಂತೂ ದುಡ್ದು ಬೇಕೇ ಬೇಕು. ಹಳ್ಳಿಗಳಲ್ಲಿರುವ ಜನರ ಬಳಿ ಹತ್ತು ರೂಪಾಯಿ ಇಲ್ಲದಿದ್ದರೆ ಆರಾಮವಾಗಿ ಒಂದು ವಾರ ಜೀವನ ಸಾಗಿಸಬಹುದು ಆದರೆ ನಗರಗಳಲ್ಲಿ ಅದು ಸಾಧ್ಯವಿಲ್ಲವಾಗಿದೆ. ಆದ್ದರಿಂದಲೇ ಹಣಕ್ಕೆ ಅಷ್ಟು ಪ್ರಾಶಸ್ತ್ಯ.
ನಮಗೆ ಹಣ ಯಾರಿಂದ ಹೇಗೆ ಸಿಗುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ನಮ್ಮ ಜಾತಕದ ಮೂಲಕ ಹಣ ಯಾರಿಂದ ಹೇಗೆ ಸಿಗುತ್ತದೆ ಎಂಬುದನ್ನು ತಿಳಿಯಬಹುದಾಗಿದೆ. ಅಂದರೆ ನಮ್ಮ ಜಾತಕದಲ್ಲಿರುವ ಗ್ರಹಗಳು ಯಾವ ಸ್ಥಾನದಲ್ಲಿವೆ ಎಂಬ ಆಧಾರದ ಮೇಲೆ ತಿಳಿಯುತ್ತದೆ.
ಜಾತಕದಲ್ಲಿ ಒಂದು ಕೋಷ್ಟಕದಲ್ಲಿ ಲಗ್ನ ಎಂದು ಬರೆದಿರುತ್ತದೆ ಆ ಕೋಷ್ಟಕದಿಂದ ಹತ್ತನೇ ಕೋಷ್ಟಕದಲ್ಲಿ ಯಾವ ಗ್ರಹವಿದೆ ಎಂದು ತಿಳಿದುಕೊಂಡು ವ್ಯಕ್ತಿಗೆ ಯಾರಿಂದ ಹಣ ದೊರೆಯುತ್ತದೆ ಎಂದು ಸರಳವಾಗಿ ಹೇಳಬಹುದು. ಇದಕ್ಕೆ ಆಧಾರ ವರಾಹ ಮಿಹಿರ ಬರೆದಿರುವ ಬೃಹಜ್ಜಾತಕ ಗ್ರಂಥದ ಕರ್ಮಜೀವಾಧ್ಯಾಯದ ಮೊದಲನೇ ಶ್ಲೋಕ –
ಅರ್ಥಾಪ್ತಿ: ಪಿತೃಜನನೀ ಸಪತ್ನ ಮಿತ್ರ |
ಭ್ರಾತೃಸ್ತ್ರೀ ಭೃತಕಜನಾದ್ದಿವಾಕರಾದ್ಯೈ: ||
ಹೋರೇಂದ್ವೋರ್ದಶಮಗತೈರ್ವಿಕಲ್ಪನೀಯಾ |
ಭೇಂದ್ವರ್ಕಾಸ್ಪದ ಪತಿರಂಶನಾಥ ವೃತ್ತ್ಯಾ ||
ಸೂರ್ಯನು ಲಗ್ನ ಕೋಷ್ಟಕದಿಂದ ಹತ್ತನೇ ಕೋಷ್ಟಕದಲ್ಲಿದ್ದರೆ ಆ ವ್ಯಕ್ತಿಗೆ ತಂದೆಯಿಂದ ಹಣ ಅಥವಾ ಆಸ್ತಿ ದೊರೆಯುತ್ತದೆ. ಪಿತ್ರಾರ್ಜಿತ ಆಸ್ತಿ ಎಂದು ಊಹಿಸಬಹುದು.
ದಶಮದಲ್ಲಿ ಚಂದ್ರ ಗ್ರಹವಿದ್ದರೆ ತಾಯಿಯಿಂದ ಹಣ ಪ್ರಾಪ್ತಿ. ಅಂದರೆ ತಾಯಿ ಕೂಡಿಟ್ಟ ಹಣ ಅಥವಾ ತಾಯಿಯ ತವರು ಮನೆಯಿಂದ ಆಸ್ತಿ ಸಿಗುವ ಸಂಭವ.
ಕುಜ(ಮಂಗಳ ಗ್ರಹ) ಗ್ರಹವಿದ್ದರೆ ಶತ್ರುಗಳಿಂದ ಹಣ ದೊರೆಯುತ್ತದೆ.
ಬುಧ ಗ್ರಹವಿದ್ದರೆ ಸ್ನೇಹಿತರಿಂದ ಗುರು ಗ್ರಹ ಇದ್ದರೆ ಸಹೋದರರಿಂದಲೂ ಶುಕ್ರ ಗ್ರಹವಿದ್ದರೆ ಸ್ತ್ರೀಯರಿಂದಲೂ ಶನಿ ಇದ್ದರೆ ತನ್ನ ಕೆಲಸಗಾರರಿಂದ ಅಥವಾ ಸೇವಕರಿಂದ ಹಣ ದೊರೆಯುತ್ತದೆ.
“ ಶನಿವತ್ ರಾಹು: ಕುಜವತ್ ಕೇತು: ” ಅಂದರೆ ಉಳಿದ ರಾಹು ಹಾಗೂ ಕೇತು ಗ್ರಹ, ಶನಿ ಮತ್ತು ಮಂಗಳ ಗ್ರಹಗಳಂತೆ ಫಲ ನೀಡುತ್ತವೆ ಎಂದು ಶಾಸ್ತ್ರದಲ್ಲಿದೆ.
ಒಂದು ವೇಳೆ ಲಗ್ನ ಕೋಷ್ಟಕದಿಂದ ಹತ್ತನೇ ಕೋಷ್ಟಕದಲ್ಲಿ ಯಾವುದೇ ಗ್ರಹ ಇರದಿದ್ದರೆ ಆ ಹತ್ತನೇ ಕೋಷ್ಟಕದ ಅಧಿಪತಿ ಗ್ರಹ ಯಾವುದೆಂದು ತಿಳಿದು ಆ ಗ್ರಹದ ಪ್ರಕಾರ ಹಣ ಪ್ರಾಪ್ತಿ ನೋಡಬೇಕು. ಈ ರೀತಿ ನಮಗೆ ಯಾರಿಂದ ಹಣ ಸಿಗುತ್ತದೆ ಎಂಬ ಕುತೂಹಲಕ್ಕೆ ಉತ್ತರ ಸಿಗುತ್ತದೆ.
ಶುಭಮಸ್ತು .
ಜ್ಯೋತಿಷ್ಯ ವಿದ್ವಾನ್ ವಿನಯ್ ಭಟ್
ದೂರವಾಣಿ ಸಂಖ್ಯೆ – 9448824575 / 8660425633