ಕನ್ನಡಪುಣ್ಯಕ್ಷೇತ್ರ

ಕನಾಟಕದ ಶಬರಿಮಲೆ ಬೆಜ್ಜವಳ್ಳಿಯ ಶ್ರೀಅಯ್ಯಪ್ಪ ಸ್ವಾಮಿ ಸನ್ನಿಧಾನ

ಶಬರಿಮಲೆ ಶ್ರೀಅಯ್ಯಪ್ಪಸ್ವಾಮಿ ದೇಶದಲ್ಲಿಯೇ ಪ್ರಸಿದ್ಧವಾಗಿರುವಂತೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿರುವ ಬೆಜ್ಜವಳ್ಳಿಯ ಶ್ರೀಅಯ್ಯಪ್ಪ ಸ್ವಾಮಿ ಸನ್ನಿಧಾನ ಕರ್ನಾಟಕದಲ್ಲೇ ಪ್ರಸಿದ್ಧಿ ಹೊಂದಿದೆ. ಪ್ರತಿ ವರ್ಷ ಮಕರ ಸಂಕ್ರಾಂತಿ ಹಬ್ಬದಂದು ಇಲ್ಲಿ ವೈಭವದ ಮಹಾ ಪೂಜೆ, ಉತ್ಸವ, ಗರುಡ ದರ್ಶನ ಮತ್ತು ಜ್ಯೋತಿಗಳು ಕಂಡು ಬರುವ ಕಾರಣ ವರ್ಷ ವರ್ಷ ಭಕ್ತರ ಸಂಖ್ಯೆ ಅತ್ಯಧಿಕಗೊಳ್ಳುತ್ತಿದೆ.

ಶಿವಮೊಗ್ಗದಿಂದ ತೀರ್ಥಹಳ್ಳಿ ಹೆದ್ದಾರಿಗೆ ಹೊಂದಿಕೊಂಡಿರುವ ಬೆಜ್ಜವಳ್ಳಿ ಚಿಕ್ಕ ಗ್ರಾಮ. ಆದರೆ ಶ್ರೀಅಯ್ಯಪ್ಪನ ಸನ್ನಿಧಾನ, ತ್ರಿಕೂಟಾಚಲ ಲಕ್ಷಣ ಮತ್ತು ಸ್ವಾಮಿಯ ಸಾನಿಧ್ಯಗಳಿಂದ ಬಹು ಖ್ಯಾತಿಗಳಿಸಿದೆ. ಮಕರ ಸಂಕ್ರಾಂತಿಯ ಹಬ್ಬದಂದು ಇಲ್ಲಿನ ಶ್ರೀಅಯ್ಯಪ್ಪಸ್ವಾಮಿ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಲಕ್ಷಾತರ ಭಕ್ತರು ಆಗಮಿಸುತ್ತಾರೆ. ದೂರದ ಶಬರಿಮಲೆಯಲ್ಲಿ ನಡೆಯುವಂತೆ ಪೂಜೆ, ಉತ್ಸವಗಳು ಇಲ್ಲಿ ವಿಧಿಬದ್ಧವಾಗಿ ನಡೆಯುತ್ತದೆ. ಆ ದಿನ ಹೋಮ ಹವನ, ಮಹಾ ಮಂಗಳಾರತಿ, ನೈವೇದ್ಯ ಸಮರ್ಪಣೆ ಇತ್ಯಾದಿಗಳನ್ನು ಕಣ್ಣಾರೆ ನೋಡಲು ಹಲವು ದಿನಗಳಿಂದ ಕಾತರಿಸಿ ಆಗಮಿಸಿರುತ್ತಾರೆ.

ಕ್ಷೇತ್ರದ ಚರಿತ್ರೆ: ಕನಸಿನಲ್ಲಿ ಅಯ್ಯಪ್ಪ ಪ್ರತ್ಯಕ್ಷ:

ವಿಷ್ಣುವಿನ ವಾಹನ ಗರುಡ ಪಕ್ಷಿಯ ಆಗಮನ, ಮಕರ ಜ್ಯೋತಿಯ ದರ್ಶನ ಇತ್ಯಾದಿ ನಡೆಯುವ ಈ ಕ್ಷೇತ್ರ ತೀರಾ ಪುರಾತನವಂತೂ ಅಲ್ಲ. ಮೂಲತಃ ಉಡುಪಿ ಜಿಲ್ಲೆಯ ಸೋಮೇಶ್ವರದ ಕೃಷ್ಣಯ್ಯ ಶೆಟ್ಟಿ ಎಂಬವರು ಬೆಜ್ಜವಳ್ಳಿಯ ವಿಜಯ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿ ಇಲ್ಲಿಗೆ ಬಂದು ನೆಲೆಸಿದ್ದರು. ಅಯ್ಯಪ್ಪ ಸ್ವಾಮಿ ವೃತದ ದೀಕ್ಷೆ ಪಡೆದು ಪ್ರತಿ ವರ್ಷ ಸ್ವಾಮಿಯ ದರ್ಶನಕ್ಕೆ ಶಬರಿಮಲೆಗೆ ಹೋಗಿ ಬರುತ್ತಿದ್ದರು. ೧೯೭೮ ರಲ್ಲಿ ಯಾತ್ರೆಗೆ ಸಿದ್ಧತೆ ನಡೆಸಿದ್ದ ಇವರಿಗೆ ಕನಸಿನಲ್ಲಿ ಶ್ರೀಅಯ್ಯಪ್ಪಸ್ವಾಮಿಯ ದರ್ಶನವಾಯಿತಂತೆ.ತನಗೆ ಈ ಸ್ಥಳದಲ್ಲಿ ದೇಗುಲ ನಿರ್ಮಿಸಿಕೊಡುವಂತೆ ಅಯ್ಯಪ್ಪಸ್ವಾಮಿ ತಿಳಿಸಿದನಂತೆ,ಇದು ಬರಿ ಕನಸೆಂದು ಶೆಟ್ಟರು ಸುಮ್ಮನಾಗಿ ಬಿಟ್ಟಿದ್ದರು. ಇದೇ ರೀತಿ ಮುಂದಿನ ಮೂರು ವರ್ಷಗಳ ಕಾಲ ಮಕರ ಸಂಕ್ರಾಂತಿಯಂದು ಕನಸಿನಲ್ಲಿ ಶ್ರೀಅಯ್ಯಪ್ಪಸ್ವಾಮಿ ಕಾಣಿಸಿಕೊಂಡು ದೇಗುಲ ನಿರ್ಮಿಸಿಕೊಡುವಂತೆ ಅಪ್ಪಣೆ ಮಾಡಿದನಂತೆ. ಆಗ ಶೆಟ್ಟರು ಈ ಕನಸಿನ ವಿಚಾರವಾಗಿ ಶಿವಮೊಗ್ಗದ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿಯ ಗುರುಗಳಾದ ರೋಜಾ ಷಣ್ಮುಗಮ್, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಗಡೆ, ಉಡುಪಿಯ ಪೇಜಾವರ ಮಠದ ಶ್ರೀವಿಶ್ವೇಶ್ವರ ತೀರ್ಥ ಸ್ವಾಮೀಜಿ ಮುಂತಾದವರಿಗೆ ಅವರಿಗೆ ತಿಳಿಸಿದರು. ಷಣ್ಮುಗಂ ಬೆಜ್ಜವಲ್ಳಿ ಗ್ರಾಮಕ್ಕೆ ಆಗಮಿಸಿ ದೇಗುಲ ನಿರ್ಮಾಣಕ್ಕೆ ಸೂಕ್ತ ಸ್ಥಳಯಾವುದೆಂದು ಪರಿಶೀಲಿಸುತ್ತಾ ಓಡಾಡುತ್ತಿರುವಾಗ ಆಕಾಶದಲ್ಲಿ ಗರುಡ ಪಕ್ಷಿ ಪ್ರತ್ಯಕ್ಷವಾಗಿ ಈಗ ದೇಗುಲ ಕಟ್ಟಲಾದ ಸ್ಥಳದ ಮೇಲ್ಭಾಗದಲ್ಲಿ ಪ್ರದಕ್ಷಿಣೆ ಹಾಕಿ ಎತ್ತಲೋ ಹಾರಿ ಹೋಯಿತು. ಇದೇ ಸೂಕ್ತ ಸ್ಥಳವೆಂದು ನಿರ್ಧರಿಸಿ ದೇಗುಲ ನಿರ್ಮಾಣಕ್ಕೆ ಆರಂಭಿಸಿಯೇ ಬಿಟ್ಟರು.

ತ್ರಿಕೂಟಾಚಲ ರಚನೆ:ತಾಂತ್ರಿಕ ಶಕ್ತಿ ಕ್ಷೇತ್ರ:

ದೇವಸ್ಥಾನದಲ್ಲಿ ಆಗಮ ಶಾಸ್ತ್ರದ ಪ್ರಕಾರ ಶ್ರೀಅಯ್ಯಪ್ಪಸ್ವಾಮಿ ದೇವರು, ಶಕ್ತಿ ಗಣಪತಿ ಹಾಗೂ ಭಗವತಿ ಅಮ್ಮನವರ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ. ಧ್ವಜಾಯದಲ್ಲಿ ಈ ಮೂರು ಗರ್ಭಗುಡಿಗಳೂ ಒಂದೇ ಸ್ಥಳದಲ್ಲಿ ಇರುವುದರಿಂದ ಇದು ಶಬರಿ ಮಲೆಯಂತೆ ತ್ರಿಕೂಟಾಚಲ ಕ್ಷೇತ್ರವಾಗಿದೆ. ಅಯ್ಯಪ್ಪಸ್ವಾಮಿ ದೇವರ ಗರ್ಭಗುಡಿಯ ಒಳ ಭಾಗದಲ್ಲಿ ಅಯ್ಯಪ್ಪಸ್ವಾಮಿಯ ವಿಶೇಷ ಕಥಾ ಮಾಲಿಕೆಯ ಚಿತ್ರಗಳನ್ನು ಚಿತ್ರಿಸಲಾಗಿದ್ದು ಭಕ್ತರಲ್ಲಿ ಪುಳಕ ಹರಿಸುವಂತಿದೆ. ದೇವಾಲಯದ ರಕ್ಷಣೆಗೆ ಕ್ಷೇತ್ರ ಗಣಗಳು ಹಾಗೂ ಗುರುಸ್ವಾಮಿಯ ರಕ್ಷಣೆಗೆ ಮಂತ್ರಗಣಗಳನ್ನು ಪ್ರತಿಷ್ಠಾಪಿಸಲಾಗಿದ್ದು ಇದ್ದು ಕ್ಷೇತ್ರಕ್ಕೆ ತಾಂತ್ರಿಕ ಶಕ್ತಿ ಸ್ಥಳವನ್ನಾಗಿಸಿದೆ. ದೇಗುಲದ ಬಾಗಿಲಿನ ಎದುರು ದ್ವಾರ ಪಾಲಕರಂತೆ ಕ್ಷೇತ್ರಗಣಗಳಾದ ಕರುಪ್ಪಸ್ವಾಮಿ, ಕುರುಪ್ಪಮಾಯಿ ಮತ್ತು ಗರುಡ ಗಣಗಳ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ದೇಗುಲದ ಎದುರು ನಾಗಬನ ಸಹ ಇದ್ದು ನಾಗರ ಹಾವು ಸದಾ ಓಡಾಡುತ್ತಾ ಇರುವುದು ವಿಶೇವಾಗಿದೆ.

ನವಗ್ರಹ ಕಟ್ಟೆ: ನವ ಗ್ರಹ ವೃಕ್ಷಗಳು:

ದೇಗುಲದ ಎದುರು ನವಗ್ರಹ ಕಟ್ಟೆ ನಿರ್ಮಿಸಿ ನವಗ್ರಹ ದೇವತೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿ ಗ್ರಹ ದೇವತೆಗೆ ಸಂಬಂಧಪಟ್ಟ ವೃಕ್ಷಗಳನ್ನು ನೆಟ್ಟಿ ಬೆಳೆಸಿರುವುದು ಇಲ್ಲಿನ ವಿಶೇಷವಾಗಿದ್ದು ಭಕ್ತರು ಇಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.

ವರ್ಷವಿಡೀ ಪೂಜೆ:
ಇಲ್ಲಿನ ಶ್ರೀಅಯ್ಯಪ್ಪಸ್ವಾಮಿ ಮತ್ತು ಇತರ ಪರಿವಾರ ದೇವತೆಗಳಿಗೆ ವರ್ಷವಿಡೀ ತ್ರಿಕಾಲ ಪೂಜೆ ಸಲ್ಲುತ್ತದೆ. ಪ್ರತಿ ಸಂಕ್ರಮಣದಂದು ವಿಶೇಷ ಪೂಜೆ ಹೋಮ ನಡೆಸಲಾಗುತ್ತದೆ. ದಕ್ಷಿಣಾಯಣ ಪುಣ್ಯ ಕಾಲದ ತುಲಾ ಸಂಕ್ರಮಣ ಮತ್ತು ಉತ್ತರಾಯಣ ಪುಣ್ಯ ಕಾಲದ ಮಕರ ಸಂಕ್ರಮಣದಂದು ಸಾಮೂಹಿಕ ಗಣಹೋಮ, ಮಂಡಲ ಪೂಜೆ, ಪಲ್ಲಕ್ಕಿ ಉತ್ಸವ, ಪ್ರದಕ್ಷಿಣಾ ಸೇವೆ, ಅಖಂಡ ಭಜನೆ, ಪ್ರದಕ್ಷಿಣಾ ಬಲಿ,ಜಾತ್ರೋತ್ಸವ ನಡೆಸಲಾಗುತ್ತದೆ.ಪಲಕ್ಕಿಯಲ್ಲಿ ಸಾಗುವ ಶ್ರೀಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯನ್ನು ನೋಡಲು ಜನಸಾಗರವೇ ನೆರೆಯುತ್ತದೆ. ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಧ್ವನಿ ಇಲ್ಲಿ ಪ್ರತಿನಿತ್ಯ ಮುಗಿಲು ಮುಟ್ಟುವಂತೆ ಮೊಳಗುತ್ತಿರುತ್ತದೆ. ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಕಾರ್ತಿಕ ಮಾಸದಲ್ಲಿ ನಿತ್ಯ ದೀಪೋತ್ಸವ, ಶಿವರಾತ್ರಿಯಲ್ಲಿ ಜಾಗರಣೆ, ಯುಗಾದಿಯಂದು ಉತ್ಸವ ನಡೆಯುತ್ತದೆ.

ಫೋಟೋ ಮತ್ತು ಲೇಖನ- ಕಲಾವತಿ ಹೆಗಡೆ ಆನಂದಪುರಂ

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.