ಬಹು ಮಹತ್ವಾಕಾಂಕ್ಷೆಯಿಂದ ಹುಟ್ಟಿಕೊಳ್ಳುವ ಅದೆಷ್ಟೋ ಉದ್ದಿಮೆಗಳು ಗ್ರಾಮೀಣ ಪ್ರದೇಶದಲ್ಲಿ ವಿಫಲತೆ ಹೊಂದಿ ಕೆಲ ವರ್ಷಗಳಲ್ಲಿಯೇ ಖಾಲಿಯಾಗುತ್ತದೆ. ಆದರೆ ಬಹು ಉದ್ದೇಶ, ವ್ಯಾಪಕ ದೃಷ್ಠಿಕೋನ ಮತ್ತು ನಿರಂತರವಾಗಿ ಉದ್ಯೋಗ ನೀಡುವ ಮುಂದಾಲೋಚನೆಗಳಿಂದ ಸುಸಂಘಟಿತವಾಗಿ ಮೈ ತಳೆಯುವ ಉದ್ದಿಮೆಗಳು, ಸಣ್ಣ ಕೈಗಾರಿಕೆಗಳು ಯಶಸ್ಸು ಪಡೆಯುತ್ತಾ ಪ್ರಗತಿ ಪಥದಲ್ಲಿ ಸಾಗುತ್ತದೆ. ಸಾಗರ ತಾಲೂಕಿನ ಹೆಗ್ಗೋಡಿನಲ್ಲಿರುವ ಚರಕ ಸಂಸ್ಥೆ ಅಚ್ಚ ದೇಶಿಯ ಎರಕದಿಂದ ದೇಶ ವಿದೇಶಗಳಲ್ಲಿ ತನ್ನ ಖ್ಯಾತಿಯನ್ನು ಹರಡಿದೆ. ಮೇಲ್ನೋಟಕ್ಕೆ ಚರಕ ಎಂದಾಕ್ಷಣ ಕೈ ಮಗ್ಗದ ಬಟ್ಟೆ ತಯಾರಿಕೆಗೆ ಸಿಮೀತವಾದ ಸಂಸ್ಥೆ ಎಂದು ಅನಿಸಿದರೂ ಒಳ ಹೊಕ್ಕು ಸ್ಥೂಲವಾಗಿ ಅವಲೋಕಿಸಿದಾಗ ಗ್ರಾಮೀಣ ಮಹಿಳೆಯರಿಗೆ ತರಬೇತಿ, ಬಣ್ಣದ ಕಲೆಯ ವಿನೂತನ ಪ್ರಯೋಗ, ಮಳೆ ನೀರಿನ ಸಂಗ್ರಹ ಮತ್ತು ಬಳಕೆ, ಪರಿಸರ ಕಾಳಜಿ ಮೂಡಿಸುವ ನಿರಂತರ ಚಟುವಟಿಕೆಗಳು, ಗ್ರಾಮೀಣ ಜನರಿಗೆ ಸ್ಬಯಂ ಉದ್ಯೋಗದ ಪ್ರೇರಣೆ ಇತ್ಯಾದಿ ಯಶಸ್ವಿ ಚಟುವಟಿಕೆಳು ಗಮನ ಸೆಳೆಯುತ್ತವೆ.
ಸಾಗರ ತಾಲೂಕು ಕೇಂದ್ರದಿಂದ ಸುಮಾರು ೯ ಕಿ.ಮೀ.ದೂರದಲ್ಲಿ ಚರಕ ಸಂಸ್ಥೆ :
ಸಾಗರ ತಾಲೂಕು ಕೇಂದ್ರದಿಂದ ಸುಮಾರು ೯ ಕಿ.ಮೀ.ದೂರದಲ್ಲಿರುವ ಹೆಗ್ಗೋಡು ಚರಕ ಸಂಸ್ಥೆ ಮತ್ತು ನೀನಾಸಂ ದೇಶದ ನಕ್ಷೆಯಲ್ಲಿ ಗುರುತಿಸಿಕೊಂಡಿದೆ. ಮಲೆನಾಡಿನ ಜನರಿಗೆ ಕೃಷಿಗೆ ಪರ್ಯಾಯವಾದ ಮತ್ತು ಪರಿಸರ ಸ್ನೇಹಿಯಾದ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಕನಸಿನೊಂದಿಗೆ ಈ ಸಂಸ್ಥೆ ೧೯೯೪ ರಲ್ಲಿ ಆರಂಭವಾಯಿತು. ಗ್ರಾಮದ ಕವಿಕಾವ್ಯ ಟ್ರಸ್ಟ್ನಿಂದ ಆರಂಭವಾದ ಈ ಸಂಸ್ಥೆ ೧೯೯೬ರ ಅಕ್ಟೋಬರ್ ೪ ರಂದು ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕಾ ಸಹಕಾರ ಸಂಘ ಎಂಬ ಹೆಸರಿನಲ್ಲಿ ನೊಂದಾಯಿಸಲ್ಪಟ್ಟಿತು. ಅಲ್ಲಿಂದ ಮುಂದೆ ಮಾತೃ ಸಂಸ್ಥೆಯಾದ ಕವಿ ಕಾವ್ಯ ಟ್ರಸ್ಟ್ ಚರಕದ ಉತ್ಪನ್ನಗಳನ್ನು ಮಾರಾಟ ಮಾಡುವ ಜವಾಬ್ದಾರಿ ನಿರ್ವಹಿಸುತ್ತಾ ಪ್ರಗತಿಗೆ ಕಾರಣವಾಯಿತು. ಕೇವಲ ೧೮ ವರ್ಷಗಳಲ್ಲಿ ಗ್ರಾಮೀಣ ಕೈಗಾರಿಕೆಯ ಯಶಸ್ಸಿ ಸಂಸ್ಥೆಯಾಗಿ ಬೆಳೆದ ಈ ಸಂಸ್ಥೆ ೩೫೦ ಕ್ಕೂ ಅಧಿಕ (ಬಹುತೇಕ ಮಹಿಳೆಯರಿಗೆ) ಉದ್ಯೋಗ ನೀಡುವ ದೊಡ್ಡ ಸಂಸ್ಥೆಯಾಗಿ ತಲೆಯೆತ್ತಿದೆ. ಈ ಸಂಸ್ಥೆ ಕೇವಲ ನೇಯ್ಗೆ ಘಟಕವಾಗಿ ಮಾತ್ರವಲ್ಲ ನೂಲಿಗೆ ಬಣ್ಣ ಹಾಕುವುದು, ಬ್ಲಾಕ್ ಪ್ರಿಂಟಿಂಗ್, ಸ್ಕ್ರೀನ್ ಪ್ರಿಂಟಿಂಗ್,ಹೊಲಿಗೆ, ಕಸೂತಿ, ಮಗ್ಗ ತಯಾರಿಕೆ, ತರಬೇತಿ ,ವಿನ್ಯಾಸ ಇತ್ಯಾದಿಗಳ ಬಗ್ಗೆ ತರಬೇತಿ ಮತ್ತು ನಿರಂತರ ಪ್ರಯೋಗ ನಡೆಸುತ್ತಾ ಮಹಿಳೆಯರು ಮತ್ತು ಪುರುಷರ ಉಡುಪುಗಳ ೧೫೯ ಕ್ಕೂ ಅಧಿಕ ಉತ್ಪನ್ನಗಳನ್ನು ತಯಾರಿಸುತ್ತಿದೆ. ಮಲೆನಾಡಿನ ಪ್ರದೇಶದಲ್ಲಿ ಪಾರಂಪರಿಕ ನೇಕಾರರು ಇಲ್ಲದ ಕಾರಣ ಈ ಸಂಸ್ಥೆ ಯಶಸ್ಸು ಕಾಣದು ಎಂಬ ಟೀಕೆ ಅರಂಭದಲ್ಲಿ ಕೇಳಿ ಬಂದಿತ್ತು. ನುರಿತ ತರಬೇತುದಾರಿಂದ ತರಬೇತಿ ನೀಡಿ ಹೊಸ ನೇಕಾರರನ್ನು ಸೃಷ್ಠಿಸಿ ಚರಕ ಸಂಸ್ಥೆ ಹೊಸ ದಾಖಲೆ ಸೃಷ್ಟಿಸಿದೆ. ಕೈ ಮಗ್ಗದ ಬಟ್ಟೆಯ ಮೇಲೆ ಮಲೆನಾಡಿನ ಪಾರಂಪರಿಕ ಹಸೆ ಚಿತ್ರ ಮೂಡಿಸುವುದು, ಬ್ಲಾಕ್ ಪ್ರಿಂಟಿಂಗ್ ನಂತಹ ಅಪರೂಪದ ಪ್ರಯೋಗ ಕೈಗೊಂಡಿರುವುದು ಈ ಸಂಸ್ಥೆಯ ಯಶಸ್ಸಿನ ಗುಟ್ಟಾಗಿದೆ.
ರಾಸಾಯಿನಿಕ ಬಣ್ಣಗಳ ಅಳವಡಿಕೆಯಿಂದ ಹಲವು ಚರ್ಮ ರೋಗಗಳು ಕಾಣಿಸುವ ಹಿನ್ನೆಯಲ್ಲಿ ಈ ಸಂಸ್ಥೆ ನೈಸರ್ಗಿಕ ಬಣ್ಣ ತಯಾರಿಕೆ ಮತ್ತು ಕೈ ಮಗ್ಗದ ಬಟ್ಟೆಯಲ್ಲಿ ಅವನ್ನು ಅಳವಡಿಸಿಕೊಂಡು ಹೊಸ ಆಕರ್ಷಣೆಯ ವಿನ್ಯಾಸ ನೀಡಿದೆ. ಬಣ್ಣ ತಯಾರಿಕೆಗೆ ಚರಕ ಎರಡು ಘಟಕ ನಿರ್ಮಿಸಿಕೊಂಡಿದೆ.ಅಳಲೆಕಾಯಿ, ದಾಳಿಂಬೆ ಸಿಪ್ಪೆ, ಇಂಡಿಗೋ ನೀಲಿ,ರಂಗಮಾಲೆ ಬೀಜ,ಅಂಟುವಾಳ, ಶೀಗೆ ಇತ್ಯಾದಿ ವನ್ಯ ಉತ್ಪನ್ನಗಳನ್ನು ಇಲ್ಲಿ ಬಣ್ಣ ತಯಾರಿಕೆಗೆ ಬಳಸಲಾಗುತ್ತಿದೆ. ಹೊಸ ಹೊಸ ಬಣ್ಣ ತಯಾರಿಸುವ ಚರಕದ ಬಣ್ಣದ ಮನೆ ಬಣ್ಣಗಾರಿಕೆಯ ಪ್ರಯೋಗ ಶಾಲೆಯಾಗಿ ಕಾರ್ಯ ನಿರ್ವಹಸುತ್ತಿದೆ.
ದೇಸಿ ಟ್ರಸ್ಟ್ ಚರಕದ ಉತ್ಪನ್ನಗಳನ್ನು ಮಾರಾಟ ಮಾಡಲು ಬೆಂಗಳೂರನ್ನು ಕೇಂದ್ರ ಕಚೇರಿಯನ್ನಾಗಿ ಹೊಂದಿದೆ.ರಾಜ್ಯದಾದ್ಯಂತ ಮತ್ತು ಹೊರ ರಾಜ್ಯಗಳಲ್ಲಿ ಚರಕದ ಉತ್ಪನ್ನ ಮಾರಾಟಕ್ಕೆ ಈ ದೇಸಿ ಟ್ರಸ್ಟ್ ಹಲವು ಮಳಿಗೆ ನಡೆಸುತ್ತಿದೆ.ಪ್ರತಿ ವರ್ಷ ಜನವರಿಯಲ್ಲಿ ಮೂರುದಿನಗಳ ಕಾಲ ಚರಕ ಸಂಸ್ಥೆಯಲ್ಲಿ ಚರಕ ಉತ್ಸವ ನಡೆಸಲಾಗುತ್ತಿದೆ. ಯಕ್ಷಗಾನ, ತಾಳಮದ್ದಲೆ,ಕೋಲಾಟ, ಸಂಪ್ರದಾಯದ ಹಾಡು, ಕವಿಗೋಷ್ಠಿ, ಬೀದಿ ನಾಟಕ, ಹಲವು ವೈಚಾರಿಕ ಗೋಷ್ಠಿಗಳು ಇತ್ಯಾದಿಗಳು ಸಮ್ಮೇಳನದಲ್ಲಿ ನಡೆಯುತ್ತದೆ. ಕೈ ಮಗ್ಗ ಕ್ಷೇತ್ರದಲ್ಲಿ ಸಾಧನೆ ತೋರಿದ ಸಂಸ್ಥೆ ಮತ್ತು ವ್ಯಕ್ತಿಗಳಿಗೆ ಪ್ರತಿ ವರ್ಷ ದಾಸಿಮಯ್ಯ ಕೈ ಮಗ್ಗ ಪ್ರಶಸ್ತಿಯನ್ನು ನೀಡಿ ಗೌರವಿಸುವ ಸಂಪ್ರದಾಯವನ್ನು ಈ ಸಂಸ್ಥೆ ಬೆಳೆಸಿಕೊಂಡಿದೆ.
ಮಾಹಿತಿ-ಎನ್.ಡಿ. ಹೆಗಡೆ ಆನಂದಪುರಂ
26-11-2013