ಜನಪದ ಸಾಹಿತ್ಯದಲ್ಲಿ ಗೀತೆಯೊಂದು ಪ್ರಮುಖ ಪ್ರಕಾರ. ಅದು ಮುಟ್ಟದ ವಸ್ತುವಿಲ್ಲ, ಸಂಸಾರದ ಮುಖಗಳೆಲ್ಲವೂ ಇಲ್ಲಿ ಚಿತ್ರಣಗೊಂಡಿವೆ. ತಾಯಿ ಮಗಳು, ಅತ್ತೆ ಸೊಸೆ, ಅಣ್ಣ ತಂಗಿ, ಅತ್ತಿಗೆ ನಾದಿನಿ ಮೈದುನರು, ಸವತಿ ಓರಗಿತ್ತಿಯರು, ಪತಿ ಪತ್ನಿಯರು, ತಂದೆ ಮಗ, ತವರು ಸೂಳೆಗಾರಿಕೆ, ಹೆಣ್ಣು ಜನ್ಮ, ಮಕ್ಕಳು ಮೊಮ್ಮಕ್ಕಳು, ಬಸಿರು ಬಯಕೆ, ಗೆಣೆಯ ಗೆಣೆತಿಯರು, ಸಾವು ನೋವು, ಬಾಣಂತಿತನ, ನೆಂಟರು, ಬಂಜೆತನ, ಪ್ರೇಮ ದ್ವೇಷ, ಮುನಿಸು ಜಗಳ ಹೀಗೆ ನೂರಾರು ಸಂಗತಿಗಳು ಇಡೀ ಹಳ್ಳಿಯ ಬದುಕಿನ ಉಸಿರು ಹಾಡಾಗಿ ಹೊಮ್ಮುತ್ತವೆ. ಹಾಡಿನ ಜೋಡಿಯಿಲ್ಲದೇ ಯಾವ ಕೆಲಸವೂ ಸಾಗುವುದಿಲ್ಲ.
ಕುಟ್ಟುವುದು, ಬೀಸುವುದು, ಮೊಸರು ಕಡೆಯುವುದು, ಅಡಿಕೆ ಸುಲಿಯುವುದು, ಹಚ್ಚೆ ಹೊಯ್ಯುವುದು, ಮಗು ಮಲಗಿಸುವುದು, ಯಾವ ಕೆಲಸವೇ ಆಗಲಿ ಹಾಡು ಕಲಿತರೆ ಸರಾಗವಾಗಿ ಆಗುತ್ತದೆ. ಬೇಸಾಯ, ನೇಯ್ಗೆ ಮೊದಲಾದ ವೃತ್ತಿಗಳ, ಕುಣಿತಗಳ ಒಂದು ಅವಿಭಾಜ್ಯ ಅಂಗವಾಗಿ ಹಾಡು ಬರುತ್ತದೆ. ಬಿತ್ತನೆ ಮಾಡುವಾಗ, ಕೂರಿಗೆ ಹೊಡೆಯುವಾಗ, ನಾಟಿ ಹಾಕುವಾಗ, ಕಳೆ ಕೀಳುವಾಗ, ಹೊಲ ಕೊಯ್ಯುವಾಗ, ಕಾಳು ಒಕ್ಕುವಾಗ, ಮಣ್ಣು ಹೊರುವಾಗ, ಗಾಡಿ ಹೊಡೆಯುವಾಗ ಸಾಮೂಹಿಕವಾಗಿಯೊ, ವೈಯುಕ್ತಿಕವಾಗಿಯೊ ಗೀತಾಪ್ರವಾಹ ಹರಿಯಲೇ ಬೇಕು. ಹಬ್ಬ ಹರಿದಿನ ಮದುವೆಯೊಸಗೆ ಯಾವುದೇ ಶುಭಕಾರ್ಯವಾಗಲೀ ಶಾಸ್ತ್ರವೇ ಆಗಲೀ, ದೇವರಕಾರ್ಯವೇ ಆಗಲೀ ಹಾಡಿನಿಂದ ಮೊದಲಾಗಬೇಕು. ಹಾಡಿನಿಂದಲೇ ಅಂತ್ಯ ವಾಗಬೇಕು. ಬಹುತೇಕವಾಗಿ ಜನಪದಗೀತೆಗಳೆಲ್ಲ ಕ್ರಿಯಾತ್ಮಕವಾದುವು; ಯಾವುದಾದರೊಂದು ಕ್ರಿಯೆಯ ಪ್ರೇರಣೆಯಿಂದ ಉಗಮಗೊಳ್ಳುತ್ತವೆ. ಕ್ರಿಯೆಯನ್ನು ಸೃಜನಾತ್ಮಕವನ್ನಾಗಿ ಮಾಡುತ್ತವೆ. ಹಳ್ಳಿಗರ ಆಸರು ಬೇಸರುಗಳಿಗೆ ಇವು ಹಿರಿಮದ್ದುಗಳಾಗಿವೆ.