ಸಾಗರ : 80ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಡಾ.ನಾ.ಡಿಸೋಜ ಅವರಿಗೆ “ಕನ್ನಡ ಟೈಮ್ಸ್” ಸಂಸ್ಥೆಯ ವತಿಯಿಂದ ಅಭಿನಂದನಾ ಪತ್ರವನ್ನು ನೀಡಲಾಯಿತು. ಶುಕ್ರವಾರ ಸಂಜೆ (3-1-2014) ನಾಡಿ ಅವರ ಸ್ವಗೃಹಕ್ಕೆ ತೆರಳಿದ ಕನ್ನಡ ಟೈಮ್ಸ್ ಬಳಗ ಕಳೆದ ಜುಲೈ ತಿಂಗಳಿನಲ್ಲಿ ನಡೆದ ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ನಾಡಿ ಅವರು ಮಾಡಿದ್ದ ಆಶಯ ಭಾಷಣವನ್ನು ಮೆಲುಕು ಹಾಕಿದರು. ಕನ್ನಡ ಸಾಹಿತ್ಯ ಸಮ್ಮೇಳನಗಳು ಈ ಹಿಂದೆ ತೆಗೆದುಕೊಂಡ ನಿರ್ಣಯಗಳನ್ನು ಸರ್ಕಾರಗಳು ಎಷ್ಟರ ಮಟ್ಟಿಗೆ ಈಡೇರಿಸಿವೆ ಎಂಬ ಬಗ್ಗೆ ವಿಚಾರ ವಿಮರ್ಶೆ ಕೂಡ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಟೈಮ್ಸ್ ಸಂಸ್ಥೆಯ ಸಂಸ್ಥಾಪಕರಾದ ಚಿನ್ಮಯ ಎಂ.ರಾವ್ “ನಾಡಿ ಎಂದೇ ನಾಡಿನಾದ್ಯಂತ ಪ್ರೀತಿಯಿಂದ ಕರೆಯಲ್ಪಡುವ ತಾವು ಈ ಬಾರಿಯ ಅಂದರೆ 80ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇಡೀ ವಿಶ್ವಕನ್ನಡಿಗರು ಹೆಮ್ಮೆ ಪಡುವಂತಹ ವಿಚಾರ. ಅದರಲ್ಲೂ ವಿಶೇಷವಾಗಿ ನಮ್ಮ ಸಾಗರ ಜನತೆಗಂತೂ ಇನ್ನಿಲ್ಲದ ಸಡಗರ.
ನಾಡಿಯವರು ತಮ್ಮ ಸಾಹಿತ್ಯಗಳ ಮೂಲಕ ಸಮಸ್ತ ಕನ್ನಡಿಗರ ಅಂತರಂಗವನ್ನು ಮುಟ್ಟಿದ್ದು ಅದೆಷ್ಟು ದಿಟವೋ ಅದಕ್ಕಿಂತ ಹೆಚ್ಚಾಗಿ ಹಲವಾರು ಜನಪರ ಹೋರಾಟಗಳಲ್ಲಿ ಸ್ವತಹ ಸಕ್ರಿಯರಾಗಿ ಪಾಲ್ಗೊಂಡು ಈ ನಾಡಿನ ಜನರ ದನಿಗೆ ದನಿಗೂಡಿಸಿದ್ದಾರೆ. ಇದು ಒಬ್ಬ ಯಶ್ವಸ್ವಿ ಸಾಹಿತಿಯೊಬ್ಬರಲ್ಲಿರಬೇಕಾದ ಅತ್ಯಗತ್ಯ ಸಂಗತಿ. ನಾಡಿಯವರಿಗೆ ಸಾಹಿತ್ಯವೆಂಬುದು ಬರೀ ಭಾಷೆ ಅಥವ ಕಲ್ಪನೆಗಳಿಗೆ ಮಾತ್ರ ಸೀಮಿತವಾಗಿರುವ ವಸ್ತುವಲ್ಲ. ಅದಕ್ಕಿಂತಲೂ ಅತೀತವಾಗಿ ಅದರಾಚೆಗೂ ಸಾಗುವ ಆನಂತವಸ್ತು. ಹಾಗಾಗಿಯೇ ಅವರು ಬರೀ
ತಾವಾಯಿತು ತಮ್ಮ ಪಾಡಾಯಿತು ತಮ್ಮ ಸಾಹಿತ್ಯವಾಯಿತು ಎಂದು ಸ್ವಾರ್ಥಿಯಾಗಿ ಕುಳಿತವರಲ್ಲ. ಸ್ವತಹ ಬೀದಿಗಿಳಿದು ಹಲವು ಹೋರಾಟಗಳನ್ನು ಮಾಡಿ ಯಶಸ್ಸು ಗಳಿಸಿದ್ದಾರೆ. ಅದು ಅವರ ಹೆಗ್ಗಳಿಕೆ ಮಾತ್ರವಲ್ಲ ಅದಕ್ಕಿಂತ ಹೆಚ್ಚಾಗಿ ಈ ನಾಡಿನ ಸೌಭಾಗ್ಯ. ನಾಡಿಯವರ ಸಾಹಿತ್ಯ ಹಾಗು ಸಾಮಾಜಿಕ ಕಳಕಳಿ ಮುಂದಿನ ಪೀಳಿಗೆಗೆ ಆದರ್ಶಪ್ರಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನೂ ನೂರಾರು ಕಾಲ ನಾಡಿ ಅವರು ಬಾಳಿ ಬದುಕಿ ಅವರ ಕೃತಿಗಳೆಲ್ಲವೂ ಚಿರಾಯುವಾಗಲಿ ಎಂಬುದೇ ನಮ್ಮೆಲ್ಲರ ಆಶಯ “ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜಿ.ಟಿ ಶ್ರೀಧರ ಶರ್ಮ, ಕನ್ನಡ ಟೈಮ್ಸ್ ಬಳಗದ ರಾಜು ಭಾಗವತ್ ಕಾಸ್ಪಾಡಿ, ಸೀನು, ಕೆ.ಎಸ್ ರಾಘವೇಂದ್ರ, ಆರ್ಯಮಿತ್ರ ಹಾಗು ದೀಪಕ್ ಕೋರಡಿ ಮತ್ತಿತರರು ಉಪಸ್ಥಿತರಿದ್ದರು.
*********