ಕನ್ನಡಸಂಗೀತ

ಕೊಳಲ ಗಾರುಡಿಯ ನೀವಣೆ ಪಿ.ಆನಂದ ರಾಮ್

ವೃತ್ತಿಯಲ್ಲಿ ಶಿಕ್ಷಕರಾಗಿ ಸಂಗೀತದ ಹವ್ಯಾಸ ರೂಢಿಸಿಕೊಂಡು ಕೊಳಲು ಮತ್ತು ಮೃದಂಗದಲ್ಲಿ ಮಾಂತ್ರಿಕ ಸ್ವರ ಧಾರೆ ಸೃಷ್ಠಿಸುವ ಶಿವಮೊಗ್ಗ ನಗರದಲ್ಲಿ ನಿವಾಸಿಯಾಗಿರುವ ನೀವಣೆ ಪಿ.ಆನಂದರಾಮ್ ನಾಡಿನಾದ್ಯಂತ ಹೆಸರುಗಳಿಸಿದ್ದಾರೆ.

ಇವರ ತಂದೆ ನೀವಣೆ ಪಾಂಡುರಂಗ ಭಟ್ ಕೊಳಲು, ಮೃದಂಗ ಮತ್ತು  ಘಟಂ ಗಳಲ್ಲಿ ಸುಪ್ರಸಿದ್ದರು. ತಂದೆಯ ಗರಡಿಯಲ್ಲಿ ಬೆಳೆದ ಇವರು ಅತಿ ಚಿಕ್ಕವಯಸ್ಸಿನಲ್ಲಿಯೇ ಸಂಗೀತಾಬ್ಯಾಸ ಕೈಗೊಂಡು ಕೊಳಲು ,ಮೃದಂಗ ವಾದನಗಳನ್ನು ಕಲಿತರು. ನಂತರ  ಈ.ಬಾಲಕೃಷ್ಣ ತಂತ್ರಿ, ಹೊಸಳ್ಳಿ ಕೆ.ವೆಂಕರಾಮ್, ಹೊಸಳ್ಳಿ ಜಿ.ಅನಂತ ಇವರುಗಳಲ್ಲಿ ಕೊಳಲಿನ ವಿವಿಧ ಶೃತಿ ಲಯಗಳನ್ನು ಕಲಿತುಕೊಂಡರು. ಶಾಸ್ತ್ರೀಯ ಸಂಗೀತದಲ್ಲಿ ವಿದ್ವಾನ ಪದವಿ ಪಡೆದಿರುವ ಇವರು ನಾಡಿನ ಹಲವೆಡೆ ಸಂಗೀತ ಕಾರ್ಯಕ್ರಮ ನೀಡಿ ಸಂಗೀತ ಪ್ರೇಮಿಗಳ ಮನ ಗೆದ್ದಿದ್ದಾರೆ.

ಕಲ್ಯಾಣಿ, ಮೋಹನ, ಹಿಂದೋಳ, ಶಂಕರಾಭರಣ,ತೋಡಿ, ಭೈರವಿ ಹೀಗೆ ವಿವಿಧ ರಾಗಗಳಲ್ಲಿ ಕೊಳಲ ನಿನಾದವನ್ನು ಲೀಲಾಜಾಲವಾಗಿ ಹರಿಸುತ್ತಾರೆ. ಎಂದರೋ ಮಹನುಭಾವರು, ಮಹಾಗಣಪತಿ, ವಾತಾಪಿ ಗಣಪತಿಂ, ಮುತ್ತುಸ್ವಾಮಿ ದೀಕ್ಷಿತರ ಶ್ರೀವರಲಕ್ಷ್ಮೀ ನಮೋಸ್ತುತೆ  ಇತ್ಯಾದಿ ಹಾಡುಗಳನ್ನು ಕೊಳಲಿನ ಮೂಲತ ಸುಮಧುರವಾಗಿ ಹೊರ ಹೊಮ್ಮಿಸುವ ಇವರು ಸಂಗೀತದಲ್ಲಿ ಮೈಮರೆಯುತ್ತಾರೆ.    ಪ್ರತಿನಿತ್ಯ ಸಂಜೆ ಮತ್ತು ಶನಿವಾರ ಭಾನುವಾರ ಇತ್ಯಾದಿ ಬಿಡುವಿನ ಸಮಯದಲ್ಲಿ ಸಂಗೀತ ಪಾಠ ಕಲಿಸುವ ಇವರು ಈಗಾಗಲೇ 70 ಕ್ಕೂ ಅಧಿಕ ಜನರಿಗೆ ತರಬೇತಿ ನೀಡಿ ಶಿಷ್ಯ ಪರಂಪರೆ ಸೃಷ್ಠಿಸಿದ್ದಾರೆ.

ರೇಡಿಯೋ ಮತ್ತು ದೂರದರ್ಶನಗಳಲ್ಲಿ ಪ್ರಸಾರವಾದ ದಾಸರ ಪದಗಳ ಧ್ವನಿ ಮುದ್ರಿಸಿಕೊಂಡು ರಾಗ ಸಂಯೋಜನೆ ನಡೆಸಿ ಹೊಸ ಹೊಸ ತಾಳ ಲಯಗಳನ್ನು ಸೃಷ್ಠಿಸಿ ಪ್ರಯೋಗಿಸುತ್ತಿದ್ದಾರೆ. ರಾಮಚಂದ್ರಾಪುರ ಮಠದಲ್ಲಿ ನಡೆದ ವಿಶ್ವ ಗೋಸಮ್ಮೇಳನ, ಮೈಸುರು ಅರಮನೆಯಲ್ಲಿ ದಸರಾ ಸಂಗೀತ ಕಚೇರಿ, ಶಿವಮೊಗ್ಗದಲ್ಲಿ ನಡೆದ ಮಲೆನಾಡು ಉತ್ಸವ, ಸಹ್ಯಾದ್ರಿ ಉತ್ಸವ, ಕೊಡಚಾದ್ರಿ ಉತ್ಸವ, ಮುರುಡೇಶ್ವರದಲ್ಲಿ ನಡೆದ ಕರಾವಳಿ ಉತ್ಸವ, ಹಂಪಿ ಉತ್ಸವಗಳಲ್ಲಿ ಪಾಲ್ಗೊಂಡು ಕಚೇರಿ ನೀಡಿದ್ದಾರೆ. ಶಿವಮೊಗ್ಗದ ನಾದಸುಧಾ, ವಿದ್ಯಾಗಣಪತಿ ಟ್ರಸ್ಟ್, ಹರಿಹರಪುರ ಮಠ, ಹೊನ್ನಾಳಿ,ಶಿಕಾರಿಪುರ,ಹರತಾಳುಗಳ ರಾಘವೇಂದ್ರ ಸ್ವಾಮಿ ಮಠಗಳು , ವಿವಿಧ ಸಂಘ ಸಂಸ್ಥೆಗಳು  ಇವರನ್ನು ಕರೆಸಿ ಸನ್ಮಾನಿ ಗೌರವಿಸಿದೆ. ಸದಾ ತಮ್ಮ ಜೊತೆ ಕೊಳಲನ್ನು ಹಿಡಿದು ಹೊರಡುವ ಇವರು ಯಾವುದೇ ಸಮಯದಲ್ಲಿ ಯಾರೇ ಇಚ್ಛಿಸಿದರೂ ಕೊಳಲಿನ ನಿನಾದ ಹೊರಹೊಮ್ಮಿಸಿ ತೃಪ್ತಿ ಪಡಿಸುತ್ತಾರೆ.

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಪ್ರಸ್ತುತ ಪುರಾದಾಳು ಪ್ರಾಥಮಿಕ ಶಾಲೆಯಲ್ಲಿ ಸೇವೆಸಲ್ಲಿಸುತ್ತಿರುವ ಇವರು  ಶಿಕ್ಷಕ ನಿರಂತರ ಅಧ್ಯನಶೀಲನಾಗರಬೇಕು ಎಂಬ ಮಾತಿಗೆ ಪುಟ ನೀಡುವಂತೆ ಎಲ್.ಎಲ್.ಬಿ ವ್ಯಾಸಂಗ ಮುಗಿಸಿರುವ ಇವರು ಬಿ.ಇಡಿ. ಪದವಿಯನ್ನು ಸಹ ಪಡೆದುಕೊಂಡಿದ್ದಾರೆ.

ಇವರ ಮೊಬೈಲ್ ಸಂಖ್ಯೆ- 9880839568

ಲೇಖನ ಮತ್ತು ಫೋಟೋ- ಎನ್.ಡಿ,ಹೆಗಡೆ ಆನಮದಪುರ

Related Articles

Back to top button

Adblock Detected

Kindly unblock this website.