ಸರ್ಕಾರಗಳು, ಮಂತ್ರಿಗಳು ಬರುತ್ತಾರೆ ಹೋಗುತ್ತಾರೆ, ಆದರೆ ಇಲಾಖೆ ಇರುತ್ತದೆ, ಅಧಿಕಾರಿಗಳು ಇರುತ್ತಾರೆ,
ನಾವು ಕೊಡುಗೆ ನೀಡಿದರೆ ಅದು ಮಾತ್ರ ಉಳಿಯುತ್ತದೆ…
ಸಂದರ್ಶಕರು : ಚಿನ್ಮಯ ಎಂ.ರಾವ್, ಹೊನಗೋಡು
ಉಡುಪಿ ಕ್ಷೇತ್ರದ ಶಾಸಕ ಪ್ರಮೋದ್ ಮಧ್ವರಾಜ್ ಈಗ ಕರ್ನಾಟಕ ಸರ್ಕಾರದ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಚಿವರು. ಇವರು ಅತ್ಯಂತ ಪ್ರಭಾವಿ ಮಂತ್ರಿ. ಪ್ರಭಾವಿ ಎಂದರೆ ರಾಜಕೀಯದ ಪರಿಭಾಷೆಯಿಂದ ನಾವಿಲ್ಲಿ ಈ ಪದವನ್ನು ಬಳಸುತ್ತಿಲ್ಲ. ತಮ್ಮ ಇಲಾಖೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವುದರಲ್ಲಿ ಅವರಿಗಿರುವ ಆಸಕ್ತಿ, ಅಭಿರುಚಿ, ಪರಿಕಲ್ಪನೆ, ಅದಕ್ಕೆ ತಕ್ಕಂತೆ ಅವರಲ್ಲಿರುವ ಅಧ್ಯಯನಶೀಲತೆ ಈ ಎಲ್ಲಾ ವಿಚಾರಗಳಲ್ಲಿ ಅವರು ತಮ್ಮ ಪ್ರಭಾವವನ್ನು ಸಾರ್ವಜನಿಕವಾಗಿ ಬೀರುತ್ತಿರುವುದು ಅವರು ಆಡುವ ತೂಕದ ಮಾತುಗಳಿಂದಲೇ ನಮಗೆ ಗೊತ್ತಾಗುತ್ತದೆ. ಹಾಗಾಗಿ ಅವರು ಆ ಬಗೆಯಲ್ಲಿ ಅವರು ಅತ್ಯಂತ ಪ್ರಭಾವಿ ಮಂತ್ರಿ. ಇತ್ತೀಚೆಗಷ್ಟೇ ನಮ್ಮ “ಕನ್ನಡ ಟೈಮ್ಸ್” ಪತ್ರಿಕಾ ಬಳಗ ಅವರನ್ನು ಭೇಟಿಯಾದಾಗ ಈ ಬಗೆಯ ಸಂದರ್ಶನ ನಮ್ಮ ಓದುಗರಿಗಾಗಿ ತಯಾರಾಯಿತು.
೧-ಕ್ರೀಡಾ ಸಾಧಕರಿಗೆ ಈ ಹಿಂದೆ ಸರ್ಕಾರಿ ನೌಕರಿ ಕೊಡುವ ವ್ಯವಸ್ಥೆ ಇತ್ತು, ಅದನ್ನು ಇತ್ತೀಚೆಗೆ ಕೈ ಬಿಟ್ಟಿದ್ದಾರೆ, ಕ್ರೀಡಾ ಸಾಧಕರಿಗೆ ಆರ್ಥಿಕ ಭದ್ರತೆಯಂತಾಗಿದ್ದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಮತ್ತೆ ಏಕೆ ರೂಪಿಸಬಾರದು?
ಈಗ ಹೊಸ ಕ್ರೀಡಾನೀತಿಯನ್ನು ರೂಪಿಸುತ್ತಿದ್ದೇವೆ. ಅದರಲ್ಲಿ ಈ ಎಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಂಡಿದ್ದೇವೆ. ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ನಂತರದಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ.
೨-ಪ್ರತಿ ಗ್ರಾಮ ಪಂಚಾಯಿತಿ ಹಾಗು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲಾಖೆಯಿಂದ ಕ್ರೀಡಾಂಗಣ ಹಾಗು ವಾಕಿಂಗ್ ಟ್ರ್ಯಾಕ್ ಮಾಡುವ ಯೋಜನೆಯನ್ನು ರೂಪಿಸಬಹುದಾ? ಇದರಿಂದ ಯುವಜನರಿಗೆ ಹಾಗು ವಯಸ್ಕರಿಗೆ ಏಕಕಾಲಕ್ಕೆ ಉಪಯೋಗವಾಗುತ್ತದೆ ಅಲ್ಲವೇ?
ಈಗಾಗಲೇ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳನ್ನು ನಾವು ಈ ಸೌಲಭ್ಯಗಳನ್ನು ಕವರ್ ಮಾಡಿದ್ದೇವೆ. ನಮ್ಮ ಇಲಾಖೆಗೆ ಸೀಮಿತ ಬಜೆಟ್ ಇರುವ ಕಾರಣ ಮೂರನೇ ಹಂತದಲ್ಲಿ ತಳಮಟ್ಟದಲ್ಲೂ ಈ ಸೌಕರ್ಯವನ್ನು ಒದಗಿಸಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಇದನ್ನು ಎಂ.ಎಲ್.ಎ ಹಾಗು ಎಂ.ಪಿ ಫಂಡ್‌ಗಳಿಂದಲೂ ಮಾಡಬಹುದು. ನಾನೀಗ ನನ್ನ ಕ್ಷೇತ್ರದಲ್ಲಿ ಮಾಡಿದ್ದೇನೆ. ಎಲ್ಲವನ್ನೂ ಕ್ರೀಡಾ ಇಲಾಖೆಯಿಂದಲೇ ಮಾಡಬೇಕೆಂದರೆ ಅದು ಸಾಧ್ಯವಿಲ್ಲ. ಇದು ಎಲ್ಲರೂ ಸೇರಿ ಮಾಡಬೇಕಾದ ಕೆಲಸ.
೩-ಪ್ರತಿ ಗ್ರಾಮ ಪಂಚಾಯಿತಿ ಹಾಗು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲಾಖೆಯಿಂದ ಈಜು ಕೊಳಗಳನ್ನು ನಿರ್ಮಿಸಿ ತರಬೇತಿ ನೀಡುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ, ನಿಮ್ಮ ಅಭಿಪ್ರಾಯ?
ಈಗಾಗಲೇ ನಾವು ಎರಡೂವರೆ ಕೋಟಿ ರೂಪಾಯಿ ಖರ್ಚು ಮಾಡಿ ಉಡುಪಿಯಲ್ಲೊಂದು ಈಜು ಕೊಳ ನಿರ್ಮಿಸಿದ್ದೇವೆ. ಇದೇನು ಸಣ್ಣ ಮೊತ್ತವಲ್ಲ. ಈಜುಕೊಳ ಅಥವಾ ಇನ್ನಾವುದೇ ಇನ್ಫ್ರಾಸ್ಟ್ರಕ್ಚರ್ ಅನ್ನು ಮಾಡುವುದು ಸುಲಭ ಆದರೆ ಅದನ್ನು ಉಳಿಸುವುದು ಹಾಗೂ ವ್ಯವಸ್ಥಿತವಾಗಿ ಮೆಯಿಂಟೈನ್ ಮಾಡುವುದೂ ಅಷ್ಟೇ ಕಷ್ಟ. ಒಳ್ಳೆಯ ನೀರಿನ ವ್ಯವಸ್ಥೆ, ಒಳ್ಳೆಯ ಶುದ್ಧೀಕರಣ ಘಟಕಗಳು ಹಾಗು ಒಳ್ಳೆಯ ತರಬೇತಿದಾರರಿರಬೇಕು. ಇವೆಲ್ಲಕ್ಕೆ ಹೆಚ್ಚಿನ ಹಣ ಬೇಕಾಗುತ್ತದೆ. ಇದಕ್ಕೆಲ್ಲಾ ನಿರಂತರವಾಗಿ ಸಾರ್ವಜನಿಕರ ಸಹಕಾರವೂ ಬೇಕಾಗುತ್ತದೆ.
ಉದಾಹರಣೆಗೆ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಪಯೋಗ ಪಡೆಯಬೇಕೆಂದರೆ ನಾವು ಹಣ ಪಡೆಯುತ್ತೇವೆ. ಉಚಿತವಾಗಿ ನೀಡುವುದಿಲ್ಲ. ಕಳೆದ ವರ್ಷ ಹೀಗೆ ಒಟ್ಟು ಹತ್ತು ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಆ ಹಣವನ್ನು ಮತ್ತೆ ತಿರುಗಿ ಅದೇ ಕ್ರೀಡಾಂಗಣದ ಅಭಿವೃದ್ಧಿಗೆ ಬಳಸಿದೆವು. ಪ್ರತೀ ಸಲ ಹಣಕ್ಕಾಗಿ ಸರ್ಕಾರವನ್ನೇ ಕೇಳುವ ಬದಲು ಅಲ್ಲೇ ಉತ್ಪನ್ನವಾಗುವಂತೆ ಮಾಡಿ ಅಲ್ಲೇ ಅಭಿವೃದ್ಧಿಗೆ ಬಳಸಿದರೆ ಅದೊಂದು ಮಾದರಿಯಾಗುತ್ತದೆ ಅಲ್ಲವೇ? ಇಂತಹ ಕಾರ್ಯಗಳಿಗೆ ಸ್ಥಳೀಯ ಜನಪ್ರತಿನಿಧಿಗಳೂ ಅಧಿಕಾರಿಗಳೂ ಕೈಜೋಡಿಸಬೇಕಾಗುತ್ತದೆ. ಉಡುಪಿಯಲ್ಲಿ ಈಗ ಚಾಲ್ತಿಯಲ್ಲಿರುವ ಈ ಮಾದರಿ ವ್ಯವಸ್ಥೆಯನ್ನೇ ನಾನು ರಾಜ್ಯಾದಾದ್ಯಂತ ವಿಸ್ತರಿಸಬೇಕೆಂಬ ಅಭಿಪ್ರಾಯವನ್ನು ಹೊಂದಿದ್ದೇನೆ, ಆ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತನಾಗಿದ್ದೇನೆ.
೪-ಒಲಂಪಿಕ್ ಅಂತಹ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಇಲಾಖೆಯ ವತಿಯಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ತಯಾರು ಮಾಡಲು ಯೋಜನೆಗಳನ್ನು ರೂಪಿಸಬಾರದೇಕೆ? ಎಲ್ಲವೂ ನಗರಕೇಂದ್ರಿತವಾಗುತ್ತಿರುವಾಗ ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿಲ್ಲವೇ?
ಕ್ರೀಡೆಗೆ ಪ್ರೋತ್ಸಾಹ ಮೊದಲು ಮನೆಮನೆಯಿಂದ, ಆನಂತರದಲ್ಲಿ ಶಾಲಾ ಕಾಲೇಜುಗಳಿಂದ. ಈಗ ಗ್ರಾಮೀಣ ಭಾಗದಲ್ಲೂ ಬಹುಪಾಲು ಮಂದಿ ಪೋಷಕರು ತಮ್ಮ ತಮ್ಮ ಮಕ್ಕಳು ಇಂಜಿನಿಯರ್ ಹಾಗೂ ಡಾಕ್ಟರ್ ಆಗಲೇಬೇಕೆಂಬ ಚಿಂತನೆಯನ್ನು ಹೊಂದಿರುವಾಗ ಕ್ರೀಡಾಲೋಕದಲ್ಲಿ ಮಕ್ಕಳು ಸಾಧನೆ ಮಾಡಲು ಅದೆಷ್ಟು ಮಂದಿ ಪ್ರೋತ್ಸಾಹ ನೀಡಬಹುದೆನ್ನುವುದನ್ನು ನೀವೇ ಊಹಿಸಿ. ಇನ್ನು ಶಾಲಾಕಾಲೇಜುಗಳಲ್ಲಿ ಪಿ.ಟೀಚರ್ ಹೇಗೆ ತರಬೇತಿ ಹಾಗು ಪ್ರೋತ್ಸಾಹ ನೀಡುತ್ತಾರೆ ಎನ್ನುವುದೂ ಮುಖ್ಯ. ದೈಹಿಕ ಶಿಕ್ಷಕರ ಆಸಕ್ತಿ ಅಭಿರುಚಿ ಹೇಗಿರುತ್ತದೇ ಎನ್ನುವುದೂ ಮುಖ್ಯ. ನಾನೀಗ ತನ್ವೀರ್ ಸೇಟ್ ಅವರ ಬಳಿ ಚರ್ಚಿಸಿದ್ದೇನೆ. ಶಿಕ್ಷಣ ಇಲಾಖೆ ಹಾಗು ಕ್ರೀಡಾ ಇಲಾಖೆ ಈ ನಿಟ್ಟಿನಲ್ಲಿ ಪರಸ್ಪರ ಪೂರಕವಾಗಿ ಕೆಲಸ ಮಾಡುವಂತಾದರೆ ಅಭಿವೃದ್ಧಿ ಸಾಧ್ಯ ಎಂದು.
ವಿದೇಶಗಳಲ್ಲಿ ನಾಲ್ಕು ವರ್ಷದ ಮಗುವನ್ನೂ ಸ್ವಿಮ್ಮಿಂಗಿಗೆ ನೀರಿಗೆ ಇಳಿಸುತ್ತಾರೆ. ಆದರೆ ನಮ್ಮಲ್ಲಿ ನೀರಿನ ಹತ್ತಿರವೂ ಹೋಗಬೇಡ, ಅಪಾಯ ಎಂಬಂತೆ ಮನೋಭಾವವನ್ನು ರೂಪಿಸುತ್ತಾರೆ ! ಈಜುಪಟುವಾಗಲು ಬಾಲ್ಯದಿಂದಲೇ ಆಸಕ್ತಿ ಬರಬೇಕು, ಅದನ್ನು ಪ್ರೋತ್ಸಾಹಿಸುವ ಮನೋಭಾವವೂ ಪಾಲಕರಲ್ಲಿರಬೇಕು. ಇದಕ್ಕೆ ವಿದ್ಯಾರ್ಥಿಯ ಕುಟುಂಬ, ಶಾಲೆ, ಶಾಲೆಯ ದೈಹಿಕ ಶಿಕ್ಷಕರು ಈ ಮೂವರೂ ಸಹಕರಿಸಬೇಕಾಗುತ್ತದೆ. ಆದರೆ ಈಗೇನಾಗಿದೆ? ಪಿ.ಟೀಚರ್ ಎಲ್ಲಾ ಶಾಲೆಗಳಲ್ಲಿ ಇಲ್ಲ. ಇಂತಿಷ್ಟು ಮಕ್ಕಳಿರುವ ಶಾಲೆಗಳಿಗೆ ಮಾತ್ರ ಪಿ.ಟೀಚರ್‌ಗಳನ್ನು ನೇಮಿಸಲಾಗುತ್ತದೆ. ಹಾಗಾಗಿ ಪಿ.ಟೀಚರ್ ಇಲ್ಲದ ಶಾಲೆಗಳ ಪ್ರತಿಭಾವಂತರಿಗೆ ತರಬೇತಿ ಹಾಗೂ ಪ್ರೋತ್ಸಾಹ ನೀಡುವವರು ಯಾರು ಎನ್ನುವ ಪ್ರೆಶ್ನೆ ಉದ್ಭವಿಸುತ್ತದೆ.
೫-ಕ್ರೀಡಾ ಇಲಾಖೆಗಳಲ್ಲಿ ಆಡಳಿತಾತ್ಮಕವಾಗಿ ಹಾಗು ತರಬೇತುದಾರ ಸಿಬ್ಬಂದಿಗಳ ಕೊರತೆಯಿದೆ ಎಂಬ ಅಭಿಪ್ರಾಯವಿದೆ…ಹೌದಾ?
ನಾನಿನ್ನೂ ಈ ಬಗ್ಗೆ ಸ್ಟಡಿ ಮಾಡಿಲ್ಲ. ಮಂತ್ರಿ ಆದ ನಂತರ ಉಡುಪಿ ಕಡೆ ಹೋದೆ. ಅಷ್ಟರಲ್ಲೇ ಅಧಿವೇಶನ ಆರಂಭವಾಯಿತು. ಹಾಗಾಗಿ ಇಲಾಖೆಯ ಬಗ್ಗೆ ಈಗಷ್ಟೇ ಇನ್ ಡೆಪ್ತ್ ಸ್ಟಡಿ ಮಾಡುತ್ತಿದ್ದೇನೆ. ಈ ಬಗ್ಗೆ ಗಮನಹರಿಸುತ್ತೇನೆ.
೬-ಯುವಜನರಿಗೆ ನಿರುದ್ಯೋಗ ನಿವಾರಣೆಗೆ ಇಲಾಖೆಯಿಂದ ವಿಶೇಷವಾಗಿ ಏನಾದರೂ ಕಾರ್ಯಕ್ರಮ ರೂಪಿಸಿದ್ದೀರಾ?
ನೋಡಿ, ಯುವಜನಸೇವಾ ಇಲಾಖೆ ಯುವಕರಿಗೆ ಉದ್ಯೋಗ ನೀಡುವ ಇಲಾಖೆಯಲ್ಲ. ಯುವಜನರನ್ನು ರಾಷ್ಟ್ರಕಟ್ಟಲು ಜಾಗೃತರನ್ನಾಗಿಸುವಿದು ನಮ್ಮ ಕೆಲಸ. ಯುವಜನರನ್ನು ಸರಿದಾರಿಯಲ್ಲಿ ಸಾಗುವಂತೆ ಮಾಡಿ ವಿವಿಧ ಸಮಾಜಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದಷ್ಟೇ ನಮ್ಮ ಕೆಲಸ. ಉದ್ಯೋಗವನ್ನು ಸೃಷ್ಟಿ ಮಾಡುವ ಇಲಾಖೆ ನಮ್ಮದಲ್ಲ. ಯುವಜನರಿಗೆ ಉದ್ಯೋಗ ನೀಡುವ ಜವಾಬ್ದಾರಿಯನ್ನು ನಮ್ಮ ಇಲಾಖೆ ಮಾತ್ರ ಹೊರಲಿಕ್ಕಾಗುವುದಿಲ್ಲ. ಅದನ್ನು ಇಡೀ ಸರ್ಕಾರವೇ ಹೊರಬೇಕಾಗುತ್ತದೆ.
೭-ಇಲಾಖೆಯ ಸಚಿವರಾಗಿ ಒಂದು ಸರ್ಕಾರದ ಮಧ್ಯ ಅವಧಿಯಲ್ಲಿ ತಾವು ಅಧಿಕಾರ ವಹಿಸಿಕೊಂಡಿದ್ದೀರಿ? ಇದೊಂದು ಬಗೆಯ ಸವಾಲಲ್ಲವೇ? ಇದನ್ನು ಹೇಗೆ ಎದುರಿಸುವಿರಿ? ಇಲಾಖೆಯ ವಿಚಾರವಾಗಿ ನಿಮ್ಮ ಒಟ್ಟಾರೆ ಮುಂದಿನ ಧ್ಯೇಯೋದ್ದೇಶಗಳೇನು?
ಇದೊಂದು ಸರ್ಕಾರದ ಕೆಲಸ. ಇದು ನಿರಂತರ ಕೆಲಸ. ಹಿಂದಿನ ಮಂತ್ರಿಗಳು ಮಾಡಿರುವುದನ್ನು ಮುಂದುವರಿಸಿಕೊಂಡು ಹೋಗುತ್ತಾ ಅದಕ್ಕೆ ಇನ್ನಷ್ಟನ್ನು ನಾನು ಸೇರಿಸಬೇಕಾಗುತ್ತದೆ. ಸ್ವಾತಂತ್ರ್ಯ ಸಿಕ್ಕ ನಂತರದಿಂದ ಇಂದಿನವರೆಗೂ ಸರ್ಕಾರಗಳು, ಮಂತ್ರಿಗಳು ಬರುತ್ತಾರೆ ಹೋಗುತ್ತಾರೆ. ಆದರೆ ಇಲಾಖೆ ಇರುತ್ತದೆ, ಅಧಿಕಾರಿಗಳು ಇರುತ್ತಾರೆ. ನಾವು ಕೊಡುಗೆ ನೀಡಿದರೆ ಅದು ಮಾತ್ರ ಉಳಿಯುತ್ತದೆ. ಹಾಗಾಗಿ ಇದೇನು ಸವಾಲು ಎನ್ನಲಾಗುವುದಿಲ್ಲ. ನಮ್ಮ ನಮ್ಮ ಪ್ರತಿಭೆ, ಆಸಕ್ತಿ, ಅಭಿರುಚಿಗಳಿಗೆ ತಕ್ಕಂತೆ ಇಲಾಖೆಗೆ ಹೇಗೆ ಕೊಡುಗೆ ನೀಡಬಹುದು ಎನ್ನುವುದಷ್ಟೇ ಮುಖ್ಯ. ಇದು ಆಯಾ ಮಂತ್ರಿಗಳ ಸಾಮಾರ್ಥ್ಯಕ್ಕನುಗುಣವಾಗಿರುತ್ತದೆ. ಕೆಲವರು ಹೆಚ್ಚು ಪ್ರತಿಭೆ ಸಾಮರ್ಥ್ಯ ಹೊಂದಿರಬಹುದು, ಕೆಲವರದ್ದು ಕಡಿಮೆ ಇರಬಹುದು. ಹತ್ತೂ ಬೆರಳೂ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ಒಬ್ಬೊಬ್ಬರ ಕೊಡುಗೆಯೂ ಒಂದೊಂದು ರೀತಿಯಿರುತ್ತದೆ. ಕೆಲವರು ಏನೂ ಕೊಡುಗೆ ನೀಡದೆಯೂ ಹಾಗೇ ಹೋಗಬಹುದು. ಕೆಲವರು ಅತ್ಯದ್ಭುತವಾಗಿ ಕೊಡುಗೆ ನೀಡಿ ಮಾದರಿ ಎಂದೆನಿಸಿಕೊಳ್ಳಬಹುದು. ಇದೊಂದು ಬಗೆಯ ಹರಿಯುವ ನೀರಿನಂತೆ, ನದಿಯಂತೆ, ದೋಣಿಗಳು ಬರುತ್ತವೆ ಹೋಗುತ್ತವೆ, ಜನ ಬರುತ್ತಾರೆ ಹೋಗುತ್ತಾರೆ.
12-7-2016
************