ವಿಚಾರಲಹರಿ

ನಾಡಿನ ಕಾನೂನನ್ನು ಗೌರವಿಸುವ ನಾಗರೀಕರಾಗುವುದು ಯಾವಾಗ..?

-ಮಹೇಶ್‌ಕುಮಾರ್.ಪಿ

ಹಿರಿಯ ಶೀಘ್ರಲಿಪಿಗಾರರು
ಪೊಲೀಸ್ ಆಯುಕ್ತರವರ ಕಚೇರಿ
ಮೈಸೂರು ನಗರ

ಘಟನೆ ೧.

ಸಾಮಾಜಿಕ ಜಾಲ ತಾಣ ವಾಟ್ಸ್‌ಆಪ್ ನಲ್ಲಿ ಶಾಲಾ ಗೆಳೆಯರ ಗುಂಪಿನಲ್ಲಿ ಸಂವಾದ ನಡೆಯುತ್ತಿತ್ತು, ಗುಂಪಿನಲ್ಲಿ ಒಬ್ಬರ ಕಾಲನ್ನೊಬ್ಬ ಎಳೆಯುವುದು ಹಾಸ್ಯ ಚಟಾಕಿಗಳು ನಡೆಯುತ್ತಿದ್ದವು. ಹೀಗೆ ಚರ್ಚೆ ನಡೆಯುವಾಗ ಚರ್ಚೆಯ ನಡುವೆ ತೃತೀಯ ಲಿಂಗಿಗಳ ವಿಚಾರ ಅಚಾನಕ್ಕಾಗಿ ಬಂತು. ತಕ್ಷಣ ಗುಂಪಿನ ಫಾರಿನ್ ರಿಟರ್ನ್ಡ್ ಗೆಳೆಯನೊಬ್ಬ ಬೆಂಗಳೂರಿನ ಟ್ರಾಪಿಕ್ ಸಿಗ್ನಲ್‌ಗಳಲ್ಲಿ ಈ ತೃತೀಯ ಲಿಂಗಿಗಳ ಕಾಟ ಜಾಸ್ತಿಯಾಗಿದೆ, ದುಡ್ಡು ಕೊಡದಿದ್ದರೆ, ಅವ್ಯಾಚ ಶಬ್ದಗಳಿಂದ ಬೈದು ಹೋಗುತ್ತಾರೆ ಇತ್ಯಾದಿ, ಪೊಲೀಸಿನವರು ಏನು ಮಾಡುತ್ತಿದ್ದಾರೆ, ಏನು ಕ್ರಮ ಕೈಗೊಳ್ಳುವುದುದಿಲ್ಲ ಅವರು ವಸೂಲಿ ಮಾಡುವ ಹಣದಲ್ಲಿ ಪೊಲೀಸಿನವರಿಗೂ ಪಾಲು ಹೋಗುತ್ತಾ? ಎಂಬ ಹಂತದವರೆಗೂ ಹೋಯಿತು, ನಂತರ ಅವನಿಗೆ ಸೂಕ್ತ ತಿಳುವಳಿಕೆಯನ್ನು ನೀಡಿ ತೃತೀಯ ಲಿಂಗಿಗಳ ವಿಚಾರಕ್ಕೆ ಮಂಗಳ ಹಾಡಿದ್ದಾಯ್ತು. ನಂತರ ಫಾರಿನ್ ರಿಟರ್ನ್ಡ್ ಗೆಳೆಯ ತನ್ನ ವಿದೇಶಿ ಅನುಭವಗಳ ಸರಮಾಲೆಯನ್ನು ಶುರುಮಾಡಿದ, ಅಮೇರಿಕಾದಲ್ಲಿ ಹೀಗೆಲ್ಲ ಇಲ್ಲ, ಇಲ್ಲಿ ಜನಕ್ಕೆ ಶಿಸ್ತಿಲ್ಲ, ಸಂಚಾರ ನಿಯಮಗಳ ಅರಿವಿಲ್ಲ, ಪೊಲೀಸರು ಸರಿ ಇಲ್ಲ, ಅಮೇರಿಕಾದಲ್ಲಿ ಹೀಗೆಲ್ಲ ಮಾಡಿದ್ರೆ ದಂಡ ವಿದಿಸುತ್ತಾರೆ, ಶಿಕ್ಷೆ ನೀಡುತ್ತಾರೆ ಅಮೇರಿಕಾದಲ್ಲಿ ರಸ್ತೆಯಲ್ಲಿ ಉಗುಳುವಂತಿಲ್ಲ, ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡುವ ಹಾಗಿಲ್ಲ ಇತ್ಯಾದಿ ಇತ್ಯಾದಿ ಹೇಳುತ್ತಾ ಹೊರಟ ಕ್ರಮೇಣ ಗುಂಪಿನ ಚರ್ಚೆ ನಿಶ್ಶಬ್ದವಾಯ್ತು.

ಘಟನೆ ೨

ನಾನು ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲ, ಒಂದು ವಿದ್ಯಾರ್ಥಿ ಸಂಘಟನೆಯಲ್ಲಿ ಸದಸ್ಯನಾಗಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಕಾಲ, ಆ ಸಂಘಟನೆಯಲ್ಲಿ ಮಾಸಿಕ ಏನಾದರೊಂದು ಕಾರ್ಯಕ್ರಮಗಳು, ಸಭೆ, ಸಂವಾದ, ಭೈಟಕ್ ಇತ್ಯಾದಿಗಳು ಜರುಗುತ್ತಿದ್ದವು. ಹೀಗೆ ಒಮ್ಮೆ ಒಂದು ಕಾಲೇಜಿನಲ್ಲಿ ಸಂಘಟನೆಯ ಒಂದು ಸದಸ್ಯರ ಸಭೆ ನಡೆಯುತ್ತಿದ್ದಾಗ ಅಲ್ಲಿಗೆ ವಿವಿಧ ಕ್ಷೇತ್ರಗಳ ಭಾಷಣಕಾರರುಗಳನ್ನು ಕರೆಸಿ ಭಾಷಣಗಳನ್ನು ಏರ್ಪಡಿಸುವುದು ವಾಡಿಕೆ. ಆ ಸಭೆಗೆ ರಾಮನಗರದ ಕಾಲೇಜಿನ ಒಬ್ಬ ಉಪನ್ಯಾಸಕರನ್ನು ಭಾಷಣ ನೀಡಲು ಕರೆಸಲಾಗಿತ್ತು, ಶ್ರೀಯುತರು ಒಳ್ಳೆಯ ಭಾಷಣಕಾರರಾಗಿದ್ದು, ತುಂಬ ಉತ್ಸಾಹದಿಂದ ಭಾಷಣ ಪ್ರಾರಂಭಿಸಿದರು, ಭಾಷಣದ ಮದ್ಯೆ ಶ್ರೀಯುತರು ಒಂದು ಕಥೆ ಹೇಳಿದರು, ಆ ಕಥೆ ಹೀಗಿದೆ.

ಒಮ್ಮೆ, ಸ್ವಾಮಿ ವಿವೇಕಾನಂದರವರು ಜಪಾನಿನ ಒಂದು ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು ಅಲ್ಲಿ ಒಬ್ಬ ಬಾಲಕನನ್ನು ಕುರಿತು ನಿನ್ನ ಆದರ್ಶವ್ಯಕ್ತಿ ಯಾರು ಎಂದು ಕೇಳುತ್ತಾರೆ, ಆಗ ಆ ಬಾಲಕ ಭಗವಾನ್ ಬುದ್ಧ ಎಂದು ಉತ್ತರಿಸುತ್ತಾನೆ. ಆಗ ಸ್ವಾಮಿ ವಿವೇಕಾನಂದರು ಆ ಬಾಲಕನನ್ನು ಕುರಿತು ಏನಾದರು ನಿನ್ನ ಭಗವಾನ್ ಬುದ್ಧ ದಂಡು ಕಟ್ಟಿಕೊಂಡು ನಿನ್ನ ದೇಶದ ವಿರುದ್ದ ದಂಡೆತ್ತಿ ಬಂದರೆ ಏನು ಮಾಡುವೆ ಎಂದು ಕೇಳಿದರು. ಆಗ ಆ ಬಾಲಕ ಅವನು ದೇವರಾದರೇನು, ಯಾರಾದರೇನು, ನನ್ನ ದೇಶದ ವಿರುದ್ದ ದಂಡೆತ್ತಿ ಬಂದರೆ ನನ್ನ ಎಡಗಾಲಿನಿಂದ ಅವನ ಎದೆಗೆ ಜಾಡಿಸಿ ಒದೆಯುವುದು ನಿಶ್ಚಿತ ಎಂದನಂತೆ. ಇಲ್ಲಿ ಆ ಪ್ರಾಥಮಿಕ ಶಾಲೆಯ ಬಾಲಕ ತನ್ನ ಆದರ್ಶವ್ಯಕ್ತಿ ತನ್ನ ದೇಶದ ವಿರುದ್ದ ದಂಡೆತ್ತಿ ಬಂದರೆ ಅವನ ಎದೆಗೆ ಎಡಗಾಲಿನಿಂದ ಜಾಡಿಸಿ ಒದೆಯುವೆ ಎಂದು ಹೇಳುವುದು ಅತಿಶಯೋಕ್ತಿಯಾದರೂ ಇಲ್ಲಿ ಆ ಬಾಲಕನ ಅಪರಿಮಿತ ದೇಶಪ್ರೇಮವನ್ನು ತಿಳಿಸುವುದು ಈ ಕಥೆಯ ಉದ್ದೇಶ, ಇದು ಮೆಚ್ಚುವಂತದ್ದೂ ಸಹ.

ನಮ್ಮ ದೇಶದಲ್ಲೇ ಹುಟ್ಟಿ ಇಲ್ಲಿಯೇ ಕಲಿತು ಪರದೇಶದಲ್ಲಿ ನೆಲೆಸಿದ ನಮ್ಮ ಭಾರತಾಂಬೆಯ ಮಕ್ಕಳು ವಿದೇಶದಲ್ಲಿನ ಕಾನೂನಿಗೆ ಶಿರಬಾಗಿ ಕಾನೂನು ಪಾಲಿಸುವುದು ಎಷ್ಟು ಸತ್ಯವೋ ಅದೇ ವಿದ್ಯಾವಂತರು ನಮ್ಮ ದೇಶಕ್ಕೆ ಬಂದಾಗ ನಮ್ಮಲ್ಲಿನ ವ್ಯವಸ್ಥೆಗೆ, ಸ್ಥಿತಿಗತಿಗಳಿಗೆ ಟೀಕೆ ಟಿಪ್ಪಣಿ ಮಾಡುವುದು ಅಷ್ಟೇ ಸತ್ಯ. ವಿದೇಶಿ ಕಾನೂನನ್ನು ಪಾಲಿಸುವ ನಮ್ಮ ಭಾರತೀಯರು, ನಮ್ಮ ನೆಲದ ಕಾನೂನನ್ನು ಪಾಲಿಸುವಲ್ಲಿ ಏಕೆ ವಿಫಲರು? ಉದಾ: ನಮ್ಮ ಭಾರತೀಯರು ವಿದೇಶದಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಚಾಲಕ ಮತ್ತು ಹಿಂಬದಿ ಸವಾರರು ಕಮಕ್ ಕಿಮಕ್ ಎನ್ನದೆ ಶಿರಸ್ತ್ರಾಣವನ್ನು ಧರಿಸಿ, ನಿಗದಿತ ವಾಹನ ನಿಲುಗಡೆ ಸ್ಥಳದಲ್ಲೇ ವಾಹನ ನಿಲ್ಲಿಸಿ ರಸ್ತೆನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಅದೇ ವ್ಯಕ್ತಿ ತನ್ನ ತಾಯ್ನಾಡಿಗೆ ಹಿಂದಿರುಗಿದಾಗ ನಮ್ಮ ನೆಲದ ಕಾನೂನನ್ನು ಹಗುರವಾಗಿ ಕಾಣುವುದು ಎಷ್ಟು ಸರಿ?

ಇತ್ತೀಚೆಗೆ ಹಿಂಬದಿ ಸವಾರರಿಗೂ ಶಿರಸ್ತ್ರಾಣವನ್ನು ಖಡ್ಡಾಯಗೊಳಿಸಿದ ಕಾನೂನು ಜಾರಿಮಾಡಿದಾಗ, ನೂರೆಂಟು ಕೊಂಕು ಮಾತುಗಳು, ಬೇಕಾಗಿತ್ತಾ ಇದು? ರಾಜಕಾರಣಿಗಳು ಹೆಲ್ಮೆಟ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರ್‍ಬೇಕು, ಪೊಲೀಸರಿಗೆ ದುಡ್ಡು ಸಾಲ್ತಿಲ್ಲ ಅನ್ಸುತ್ತೆ, ಇತ್ಯಾದಿ ಟಿವಿ ವಾಹಿನಿಗಳಲ್ಲಿ ಪರ ವಿರೋಧಗಳ ಚರ್ಚೆ ಪ್ರಾರಂಭ. ಇರಬಹುದು, ಪ್ರಜಾಪ್ರಭುತ್ವದ ನಾಡಿನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ ಎಲ್ಲರಿಗೂ ಉಂಟು. ಆದರೆ ಒಂದು ಕ್ಷಣ ಈ ಅಂಕಿ ಅಂಶಗಳನ್ನು ನೋಡೋಣ. ಬೆಂಗಳೂರು ನಗರವೊಂದರಲ್ಲೇ ೨೦೧೫ನೇ ಸಾಲಿನಲ್ಲಿ, ೪೮೨೮ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ ೪೦೪೭ಜನ ಗಾಯಾಳುಗಳಾಗಿ ೭೪೦ಜನ ಮೃತಪಟ್ಟಿದ್ದಾರೆ. ಬೆಂಗಳೂರು ಮಹಾನಗರದಲ್ಲಿ ಈ ಅಂಕಿ ಅಂಶವಾದರೆ, ಮೈಸೂರಿನಂತಹ ನಗರದಲ್ಲಿ ೨೦೧೫ನೇ ಸಾಲಿನಲ್ಲಿ ಒಟ್ಟು ೮೩೭ ಅಪಘಾತಗಳಲ್ಲಿ ೮೧೮ಜನ ಗಾಯಗೊಂಡರೆ ೧೨೪ಜನರು ಮೃತಪಟ್ಟಿದ್ದಾರೆ. ಬೆಂಗಳೂರು, ಮೈಸೂರು ನಗರಗಳಲ್ಲಿನ ಚಿತ್ರಣ ಇದಾದರೆ, ಇನ್ನು ದೇಶಾದ್ಯಂತ ಎಷ್ಟು ಜನ ರಸ್ತೆ ಅಪಘಾತಗಳಲ್ಲಿ ಅಂಗವಿಕಲರಾಗುತ್ತಿದ್ದಾರೆ, ಮೃತಪಡುತ್ತಿದ್ದಾರೆ ಚಿಂತಿಸಬೇಕಾದ ವಿಷಯ.

ಪೊಲೀಸರು ಹಗಲು ರಾತ್ರಿ ಎನ್ನದೆ ಬಿಸಿಲು ಮಳೆ ಎನ್ನದೆ ರಸ್ತೆಗಳಲ್ಲಿ ನಿಂತು (ತಮ್ಮೆಲ್ಲ ವೈಯಕ್ತಿಕ ನೋವುಗಳನ್ನೂ ಮರೆತು) ಸಂಚಾರ ನಿಯಂತ್ರಣ ಮಾಡುವುದು ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರು, ಮನೆಗಳಲ್ಲಿ ತಮಗಾಗಿ ಕಾಯುತ್ತಿರುವ ತಂದೆ ತಾಯಿಗಳು, ಮಡದಿ ಮಕ್ಕಳು ಕುಟುಂಬ ಸದಸ್ಯರನ್ನು ಕ್ಷೇಮವಾಗಿ ತಲುಪಲೆಂದು. ಕೊಲೆ, ದರೋಡೆ ದ್ವೇಷಾಸೂಯೆಗಳಿಂದಾಗುವ ಕೊಲೆಗಳಂತಹ ಅಪರಾಧ ಕೃತ್ಯಗಳು ಒಂದು ಉದ್ದೇಶಪೂರ್ವಕವಾಗಿ ಘಟಿಸುವ ಅಪರಾಧಗಳಾಗಿದ್ದರೆ, ರಸ್ತೆ ಅಪಘಾತಗಳಲ್ಲಿ ನಿರಪರಾಧಿಗಳು ತಾವು ರಸ್ತೆ ನಿಯಮಗಳಲ್ಲಿ ಸರಿ ಇದ್ದರೂ ಕೂಡ ಯಾರದೋ ತಪ್ಪಿಗಾಗಿ, ಅಥವಾ ರಸ್ತೆಗಳಲ್ಲಿ ಮಸ್ತಿಮಾಡುವಂತಹ ಕಿಡಿಗೇಡಿಗಳ ಕೃತ್ಯಗಳಿಂದಾಗಿ, ತಮ್ಮದಲ್ಲದ ತಪ್ಪಿಗೆ ಜೀವ ತೆರಬೇಕಾದ ಪ್ರಸಂಗಗಳಾಗಿವೆ.

ಶಿರಸ್ತ್ರಾಣ ಧರಿಸಿ ದ್ವಿಚಕ್ರವಾಹನ ಚಲಾಯಿಸಿ, ಪಾನಮತ್ತರಾಗಿ ವಾಹನ ಚಲಾಯಿಸದಿರಿ, ಸೀಟ್‌ಬೆಲ್ಟ್ ಧರಿಸಿ ವಾಹನ ಚಲಾಯಿಸಿ, ನಿರ್ಧಿಷ್ಟ ಪ್ರದೇಶದಲ್ಲೇ ವಾಹನ ನಿಲುಗಡೆ ಮಾಡಿ ಇತ್ಯಾದಿ ಇತ್ಯಾದಿ ಸಂಚಾರ ಘೋಷಣೆಗಳು, ಹಲವಾರು ಸಂಚಾರ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಎಲ್ಲ ನಗರಗಳಲ್ಲಿ ಹಮ್ಮಿಕೊಂಡು ಜಾಗೃತಿ ಮೂಡಿಸಿದರೂ ನಿಯಮ ಉಲ್ಲಂಘನೆ ದಿನೇ ದಿನೇ ಏರುಗತಿಯಲ್ಲೇ ಇದೆ ಪ್ರಸ್ತುತ ಹಿಂಬದಿಯ ಸವಾರರಿಗೂ ಶಿರಸ್ತ್ರಾಣ ಕಡ್ಡಾಯಗೊಳಿಸಿ ಕಾನೂನು ನಮಗಲ್ಲ, ಎಂಬ ಧೋರಣೆ, ಹೇಳೋದು ಪೊಲೀಸಿನವರ ಕರ್ತವ್ಯ ಅವರು ಜಾಗೃತಿ ಕಾರ್ಯಕ್ರಮ ಮಾಡುತ್ತಾರೆ, ಅವ್ರು ಹೇಳೋದು ಹೇಳಿಕೊಳ್ಳಲಿ ಬಿಡಿ ಎಂಬ ಧೋರಣೆ ಏಕೆ, ಪೊಲೀಸಿನವರು ಮಾಡುತ್ತಿರುವುದು ನಿಮ್ಮ ಒಳಿತಿಗಾಗಿ ಎಂದು ಏಕೆ ಯೋಚಿಸುವುದಿಲ್ಲ, ಪರದೇಶಗಳಲ್ಲಿ ಶಿರಭಾಗಿ ಕಾನೂನು ಪಾಲಿಸುವ ನಾವು ನಮ್ಮ ದೇಶದಲ್ಲೇ ಏಕೆ ನಮ್ಮ ಕಾನೂನನ್ನು ಗೌರವಿಸುವುದಿಲ್ಲ. ಜಪಾನ್ ದೇಶದ ಆ ಪ್ರಾಥಮಿಕ ಶಾಲಾ ಬಾಲಕನಿಗಿರುವ ದೇಶಪ್ರೇಮ ನಮಗೇಕಿಲ್ಲ, ನಾವು ನಮ್ಮ ತಾಯ್ನಾಡನ್ನು ಗೌರವಿಸದಿದ್ದರೆ, ವಿದೇಶಿಯರು ಗೌರವಿಸುತ್ತಾರೆಯೇ? ನಿಯಮ ಉಲ್ಲಂಘಿಸಿ, ಪೊಲೀಸರಿಂದ ತಪ್ಪಿಸಿಕೊಂಡು ಅವರನ್ನು ಯಾಮಾರಿಸಿ ನುಗ್ಗುವ ಭರದಲ್ಲಿ ಅಪಘಾತಗಳು ಸಂಭವಿಸಿ ಪ್ರಾಣಹಾನಿಯಾಗಿರುವ ಪ್ರಕರಣಗಳೂ ಉಂಟು. ಕೇವಲ ದಂಡ ತಪ್ಪಿಸುವ ಭರದಲ್ಲಿ ಅತ್ಯಮೂಲ್ಯ ಪ್ರಾಣವನ್ನು ಕಳೆದುಕೊಳ್ಳುವುದು ಎಂಥ ವಿಪರ್ಯಾಸ.

ಒಂದು ವೇಳೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡರೆ, ಪ್ರಭಾವಿಗಳ ಕಡೆಯಿಂದಲೋ, ಮತ್ಯಾರಿಂದಲೋ ಶಿಫಾರಸ್ಸು ಮಾಡಿಸುವುದು ದಂಡ ತಪ್ಪಿಸಿಕೊಳ್ಳುವುದು, ಪೊಲೀಸರೊಂದಿಗೆ ವಾಗ್ವಾದಕ್ಕಿಳಿಯುವುದು ಸರ್ವೇಸಾಮಾನ್ಯವಾಗಿದೆ. ಕೇವಲ ಸಂಚಾರಿ ನಿಯಮಗಳಲ್ಲದೇ, ರಸ್ತೆಯಲ್ಲಿ ಉಗುಳುವುದು, ಕಂಡ ಕಂಡಲ್ಲಿ ಮೂತ್ರ ವಿಸರ್ಜಿಸುವುದು, ಎಲೆ ಅಡಿಕೆ ಜಗಿದು ಉಗಿಯುವುದು, ಖಾಲಿ ಬಾಟಲ್‌ಗಳನ್ನು ಕಂಡ ಕಂಡಲ್ಲಿ ಎಸೆಯುವುದು, ಎಲ್ಲಿಯ ನಾಗರೀಕತೆ? ಯಾವುದಾದರೂ ನಾಗರೀಕ ಸೇವೆ ವ್ಯತ್ಯಾಸವಾದಲ್ಲಿ ಇಡೀ ವ್ಯವಸ್ಥೆಯನ್ನೇ ತೆಗಳುವುದು, ಈ ದೇಶದ ಕಥೇನೆ ಇಷ್ಟು ಕಣ್ರಿ ಎಂದು ಗೊಣಗುವುದು. ಒಂದು ಕ್ಷಣ ಯೋಚಿಸಿ, ನೀವು ಈ ದೇಶದ ಜವಾಬ್ದಾರಿಯುತ ನಾಗರೀಕರಲ್ಲವೇ? ದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿಯಲ್ಲವೇ? ಕೇವಲ ವಿದೇಶಗಳ ಸ್ವಚ್ಚತೆ ಬಗ್ಗೆ ಹೊಗಳುವ ನಾವು ಅಲ್ಲಿನ ಪ್ರಜೆಗಳು ಸ್ವಚ್ಚತೆಗೆ ನೀಡುವ ಪ್ರಾಶಸ್ತ್ಯವನ್ನು, ಅವರು ನಿಭಾಯಿಸುವ ನಾಗರೀಕ ಜವಾಬ್ದಾರಿಯನ್ನು, ನಾವು ನಿಭಾಯಿಸುತ್ತಿದ್ದೇವೆಯೇ ಯೋಚಿಸಿ. ಚುನಾವಣೆಗಳು ಘೋಷಣೆಯಾದಾಗ ರಜೆ ಸಿಕ್ಕಿತೆಂದು ಕುಟುಂಬದೊಂದಿಗೆ ಪ್ರವಾಸ ಯೋಜಿಸುವ ವಿದ್ಯಾವಂತರು, ಹೈ-ಸೊಸೈಟಿಯ ಜನರು, ತಮ್ಮ ಸಂವಿಧಾನಬದ್ಧ ನಾಗರಿಕ ಜವಾಬ್ದಾರಿಯನ್ನು ಏಕೆ ನಿಭಾಯಿಸುವುದಿಲ್ಲ, ಮತದಾನವನ್ನೇ ಮಾಡದೇ ಜನಪ್ರತಿನಿಧಿಯನ್ನು ತೆಗಳುವ, ನಿಂದಿಸುವ ಹಕ್ಕು ನಮಗೇನಿದೆ? ನಮ್ಮ ನಾಗರೀಕ ಜವಾಬ್ದಾರಿಯನ್ನು ಮರೆತದ್ದಕ್ಕಾಗಿ ಸಿಲಿಕಾನ್ ವ್ಯಾಲಿ ಎಂದು ಪ್ರಸಿದ್ದವಾದ ಬೆಂಗಳೂರು ನಗರದಲ್ಲಿ ಕಂಡ ಕಂಡಲ್ಲಿ ಕಸದ ತೊಟ್ಟಿಗಳು, ರಸ್ತೆಗಳಲ್ಲಿ ಗುಂಡಿಗಳು, ಅಲ್ಲಲ್ಲಿ ಗುಂಡಿಗಳಲ್ಲಿ ರಸ್ತೆಗಳು ! ಇದಕ್ಕೆಲ್ಲ ಕೇವಲ ಜನಪ್ರತಿನಿಧಿಗಳನ್ನು ದೂರುವ ಮೊದಲು ನಾವು ಕಂಡ ಕಂಡಲ್ಲಿ ಕಸಹಾಕುವಾಗ ನಮಗೆ ಇದು ನನ್ನ ಊರು ನಾನೇ ತಿರುಗಾಡುವ ಪ್ರದೇಶ, ಗಲೀಜು ಮಾಡಬಾರದೆಂಬ ಕನಿಷ್ಟ ನಾಗರೀಕಪ್ರಜ್ಞೆ ಬೆಳೆಸಿಕೊಳ್ಳಬೇಕಲ್ಲವೆ?

ಕೇವಲ ದೂಷಿಸುವುದರಲ್ಲೇ ಕಾಲ ಕಳೆಯುವ ನಾವು ನಮ್ಮ ದೇಶಕ್ಕಾಗಿ ನಾವೇನು ಮಾಡಿದ್ದೇವೆ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತೇವೆಯೇ? ನಾಗರೀಕ ಜವಾಬ್ದಾರಿಯನ್ನು ಮೆರೆದಿದ್ದೇವೆಯೇ? ತಪ್ಪು ಕಂಡಲ್ಲಿ ಖಂಡಿಸುವ ನೇರವಂತಿಕೆಯನ್ನು ಬೆಳೆಸಿಕೊಂಡಿದ್ದೇವೆಯೇ, ಎಲ್ಲದಕ್ಕೂ ಬೇರೆಯವರನ್ನು ದೂಷಿಸುವುದನ್ನು ಬಿಟ್ಟು ನಾವೇ ಏಕೆ ಬದಲಾವಣೆಗೆ ನಾಂದಿಯಾಗಬಾರದೆಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಂಡರೆ ಉತ್ತರ ಶೂನ್ಯ. ನಾವು ನಮ್ಮ ದೇಶಕ್ಕಾಗಿ ವಿಶೇಷವಾಗಿ ಏನೂ ಮಾಡುವುದು ಬೇಡ, ಸಂವಿಧಾನಬದ್ಧ ಹಕ್ಕುಗಳನ್ನು ಪ್ರತಿಪಾದಿಸುವ ನಾವುಗಳು ಸಂವಿಧಾನದಲ್ಲಿ ಉಲ್ಲೇಖಿತ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಬೇಡವೇ? ಸತತ ಪ್ರಕೃತಿ ವಿಕೋಪಗಳಿಂದ ನಿರಂತವಾಗಿ ನಲುಗುವ ಜಪಾನ್‌ನಂತಹ ರಾಷ್ಟ್ರ, ಪ್ರಕೃತಿ ವಿಕೋಪಕ್ಕೆ ಒಳಗಾದಾಗ, ಫೀನಿಕ್ಸ್‌ನಂತೆ ಕೇವಲ ಕಡಿಮೆ ಅವಧಿಯಲ್ಲಿ ಮೈಕೊಡವಿ ನಿಲ್ಲುವುದು ಅಲ್ಲಿಯ ಜನಪ್ರತಿನಿಧಿಗಳಲ್ಲದೇ ಪ್ರಜೆಗಳ ದೇಶಪ್ರೇಮದ ಸಂಕೇತವಾಗಿದೆ. ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆ, ನೈಸರ್ಗಿಕ ಸಂಪತ್ತುಗಳನ್ನು ಹೊಂದಿರುವ ನಮ್ಮ ದೇಶದಲ್ಲಿ, ಜಗತ್ತಿಗೆ ವೀರವಾಣಿಯಿಂದ ನಮ್ಮ ದೇಶದ ಶಕ್ತಿಯನ್ನು ತೋರಿಸಿದ ಸ್ವಾಮಿ ವಿವೇಕಾನಂದರು ಹುಟ್ಟ್ಟಿದಂತಹ ನಾಡಲ್ಲಿ, ವಿಶ್ವವೇ ಮೆಚ್ಚುವ ಮಾನವತಾವಾದಿ ಬಾಬಾಸಾಹೇಬ್ ಅಂಬೇಡ್ಕರ್ ಹುಟ್ಟಿದಂತಹ ನಾಡಲ್ಲಿ, ಕಾಯಕವೇ ಕೈಲಾಸವೆನ್ನುವ ಮಾತನ್ನು ವಿಶ್ವಕ್ಕೆ ಕೊಟ್ಟ ಬಸವಣ್ಣನ ನಾಡಿನಲ್ಲಿ, ವಿಶ್ವಮಾನ್ಯ ಅಬ್ದುಲ್ ಕಲಾಂರಂತಹ ಸರ್ವಶ್ರೇಷ್ಟ, ಮಾನವತಾವಾದಿಯನ್ನು ಕೊಟ್ಟಂತಹ ದೇಶದಲ್ಲಿ, ಏಕಾಗಿ ದೇಶಪ್ರೇಮದ ಕೊರತೆ? ಇದು ನನ್ನ ದೇಶ, ನನ್ನ ಊರು, ನಾನು ನಾಗರೀಕ ಕರ್ತವ್ಯಗಳನ್ನು ನಿಭಾಯಿಸುವುದು ನನ್ನ ಕರ್ತವ್ಯ ಎಂಬ ದೇಶಪ್ರೇಮ ಎಂದಿಗೆ ? ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗುವುದು ಎಂದಿಗೆ? ನಾಡಿನ ಕಾನೂನನ್ನು ಗೌರವಿಸುವ ಜವಾಬ್ದಾರಿಯುತ ನಾಗರೀಕರಾಗುವುದು ಎಂದಿಗೆ? ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಣ ಅಲ್ಲವೇ..?

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.