ಕಥಾಕಣಜ

ಶಿಖಾರಿ

ನೆನಪಿನಂಗಳದಿಂದ ಹೊರಬಂದ ಮೂವರೂ ಕಲ್ಲಾಗಿದ್ದರು !

-ಮೂಲಕಥೆ: ರಾಜೇಶ್ ಧ್ರುವ
ನಿರೂಪಣೆ: ಶುಭಶ್ರೀ ಭಟ್ಟ

ಮುಂಜಾನೆಯ ಬಾಲರವಿ ಚಾದರವ ಕಿತ್ತೆಸೆದು ಭೂತಾಯ ಮಡಿಲಿಗೆ ದಾಂಗುಟ್ಟಿಯಿಟ್ಟಿದ್ದ, ಆಗ ತಾನೆ ಮಿಂದೆದ್ದು ಶುಭ್ರ ಹರಿದ್ವರ್ಣದ ನಡುವೆ ಹೂಗಳ ಚುಕ್ಕಿಯಿದ್ದ ಸೀರೆಯನ್ನುಟ್ಟು ಪ್ರಕೃತಿಮಾತೆ ನಳನಳಿಸುತ್ತಿದ್ದಳು,ಜಗತ್ತಿನ ವ್ಯಥೆಯನ್ನೆಲ್ಲಾ ಬರಸೆಳೆದೊಯ್ಯುವನೆಂದು ಕಸ್ತೂರಿ ಪರಿಮಳವ ಹೊತ್ತ ತಂಗಾಳಿಯೊಂದು ಹಟಕ್ಕೆ ಬಿದ್ದಂತಿತ್ತು..ವ್ಯಥೆ ತೇಲಿಸುವ ಆ ತಂಗಾಳಿಯಲ್ಲಿ ಎದೆಯಲ್ಲಿ ಮಡುಗಟ್ಟಿದ್ದ ನೋವೆಲ್ಲಾ ನೆನಪಾಗಿ ಹರಿದು ಬಂತು..ಅಲ್ಲಿ ಕುಳಿತ ತ್ರಿಮೂರ್ತಿಗಳಂತಿದ್ದ ಗೆಳೆಯರು ‘ಏನೆಲ್ಲಾ ಆಯ್ತಲ್ಲಾ ನಮ್ಮ್ ಜೀವ್ನದಲ್ಲಿ’ ಎಂಬೋ ಉದ್ಗಾರದೊಡನೆ ನಿಡಿದಾದ ನಿಟ್ಟುಸಿರಿಟ್ಟು ನೆನಪಿನ ಕದ ತೆರೆದ ಬಂಟಿಯೆಂಬ ಹುಡುಗನ ಹಿಂಬಾಲಿಸಿ ಶಂಭು-ಟೋನಿಯೂ ಹೊರಟರು..

-ಬಂಟಿಯ ನೆನಪಿನ ಕೋಣೆ;ಗೆಳಯರಿಬ್ಬರ ಇಣಿಕುವಿಕೆ-

ನಾನೊಂಥರಾ ಜೀವನದ ಈ ಕ್ಷಣವನ್ನು ಅನುಭವಿಸುವವನು. ಭವಿಷ್ಯದ ಬಗ್ಗೆ ಅತಿಯಾಗಿ ಯೋಚಿಸದಿದ್ದರೂ ನನಗೂ ಕೆಲವು ಕನಸುಗಳಿವೆ. ‘ದುಡ್ಡು ಕೊಟ್ಟರೆ ಏನ್ ಬೇಕಾದ್ರೂ ಮಾಡ್ತಿಯಾ’ ಎಂದು ಸದಾ ಛೇಡಿಸಿಕೊಳ್ಳುತ್ತಿರುತ್ತೇನೆ. ಯಾವುದೇ/ಯಾರದ್ದೇ ಕೆಲಸವನ್ನು ಯಾವುದೇ ಸರಕಾರಿ ಕಛೇರಿಗಳ ಸಹಾಯವಿಲ್ಲದೆ (ಕಾನೂನು ಬಾಹಿರವೆಂದು ತಿಳಿದು) ಮಾಡಿಕೊಡುವುದು ನನ್ನ ವಿಶೇಷತೆ.ಚೆನ್ನಾಗಿ ದುಡ್ಡು ಮಾಡಿ ಆ ಕ್ಷಣ ಸುಖವಾಗಿರುವುದು ನನಗೆ ಮುಖ್ಯವಾಗಿತ್ತು.ಜೊತೆಗೆ ನಾನಿಷ್ಟ ಪಡುವ ಹುಡುಗಿ ಕಾಂತಿಯ ಜೊತೆಗೆ ಜಗತ್ತನ್ನು ಸುತ್ತುವುದು ನನ್ನ ಅತ್ಯಮೂಲ್ಯ ಕನಸುಗಳಲ್ಲೊಂದು. ನನ್ನ ದಿನಚರಿ ಶುರುವಾಗುವುದೇ ನನ್ನ ಗೆಳೆಯ ಟೋನಿಯ ಗ್ಯಾರೇಜ್ ಅಲ್ಲಿ.ನಾನು ಟೋನಿ ಮತ್ತು ಶಂಭು ತ್ರಿಮೂರ್ತಿಗಳಂತಹ ಚಡ್ಡಿದೋಸ್ತುಗಳು. ನಮ್ಮ ಸ್ನೇಹಕ್ಕೆ ರಕ್ತಸಂಬಂಧದ ಲೇಪವಾಗಲಿ, ಜಾತಿ-ಧರ್ಮಗಳ ಕರ್ಮವಾಗಲಿ ಇರಲಿಲ್ಲ.

ಶಂಭುವಿನ ವಿಷಯಕ್ಕೆ ಬಂದರೆ ಅವನು ನಮ್ಮ ಮೂವರಲ್ಲೇ ತುಂಬಾ ಜಬರದಸ್ತ್ ಮನುಷ್ಯ,ಹುಟ್ಟಿದಾರಭ್ಯ ಮರಿರೌಡಿಯೆಂದೇ ಊರಲ್ಲೆಲ್ಲಾ ಹೆಸರುವಾಸಿ. ಕಾರಣ ಶಂಭು ಊರಿನ ದೊಡ್ಡನಾಯಕ(ಖಳ)ರಾದ ವಿಷ್ಣುಪ್ರಸಾದರ ನಂಬಿಕಸ್ಥ,ಅವರ ಮಗ ಕೃಷ್ಣನ ಆತ್ಮೀಯ ಗೆಳೆಯ ಕೂಡ.ಶಂಭುವಿನ ಅಪ್ಪನನ್ನು ವಿಷ್ಣುಪ್ರಸಾದರೇ ಕೊಲ್ಲಿಸಿದ್ದಾರೆಂಬ ಸತ್ಯ ಊರಿನ ಚಳ್ಳೆಪಿಳ್ಳೆಗಳಿಗೂ ಗೊತ್ತಿದ್ದರೂ,ಶಂಭು ಮಾತ್ರ ತನಗೂ ಅದಕ್ಕೂ ಸಂಬಂಧವೇ ಇಲ್ಲವೆಂದು ಅವರ ಕೆಲಸ ಮಾಡಿಕೊಡುವ ಭಂಟನಾಗಿದ್ದ.

ನಮ್ಮಂತಹ ಪುಢಾರಿಗಳ ಪ್ರಾಣ ಸ್ನೇಹಿತನಾಗಿದ್ದರೂ ಸಂಘದಿಂದ ಕೆಡದೇ, ಪ್ರಾಮಾಣಿಕವಾಗಿ ತನ್ನ ಸ್ವಂತ ಪರಿಶ್ರಮದಿಂದ ಗ್ಯಾರೇಜ್ನಲ್ಲಿ ಹಗಲಿರುಳು ದುಡಿಯುವ ಟೋನಿ ಮಾತ್ರ ನಮ್ಮೆಲ್ಲರಿಗಿಂತ ಭಿನ್ನ. ವಾರದ ಮಿತಿಯಿಲ್ಲದೇ,ರಜೆ,ಹಬ್ಬ-ಹರಿದಿನಗಳ ಭೇದವಿಲ್ಲದೇ ದುಡಿಯುವ ಟೋನಿಯನ್ನು ಕಂಡರೆ ನನಗೂ-ಶಂಭುಗೂ ಒಂದು ತೂಕ ಹೆಚ್ಚೇ ಪ್ರೀತಿ. ಇಷ್ಟು ಕಠಿಣ ಪರಿಶ್ರಮಿಯಾಗಿದ್ದ ಟೋನಿಯ ತದ್ವಿರುದ್ಧವಾದ ಮತ್ತೊಂದು ಜೀವವೆಂದರೆ ಅವರಣ್ಣ ಚಕ್ಲಿ. ಸೊಂಬೇರಿಸಿದ್ಧನಾಗಿ ಸದಾ ಮೊಬೈಲ್ ಅಲ್ಲಿ ಹಾಡು ಕೇಳುತ್ತಾ ಗ್ಯಾರೇಜ್ ಮೂಲೆಯಲ್ಲಿ ಎಮ್ಮೆಯ ತರಹ ಬಿದ್ದಿರುತ್ತಿದ್ದ ಚಕ್ಲಿಗೂ-ಟೋನಿಗೂ ಯಾವಾಗಲೂ ಕಿರಿಕಿರಿಯಾಗುತ್ತಿತ್ತು. ಗ್ಯಾರೇಜ್ ಕೆಲಸವಿಲ್ಲದ್ದಾಗ ಪಕ್ಕದ ತುಂಗಾ ಕಾಲೇಜ್ ಗೆ ಓಡಾಡುವ ಹುಡುಗಿಯರನ್ನು ನೋಡುವುದು ಮಾತ್ರ ಟೋನಿಯ ಸಣ್ಣ ಚಪಲಗಳಲ್ಲೊಂದು. ಅದನ್ನೇ ಎತ್ತಾಡಿಸಿ ತಮ್ಮನ ಬಾಯ್ಮುಚ್ಚಿಸುತ್ತಿದ್ದ ಚಕ್ಲಿ.ನಾವೆಲ್ಲ ಅವರಿಬ್ಬರ ಕೋಳಿಜಗಳವನ್ನು ಮನಸಾರೆ ಆನಂದಿಸುತ್ತಿದ್ದೆವು..

ಇತ್ತಿಚೀಗೆ ನೆಮ್ಮದಿಯಿಲ್ಲದ ಅತಂತ್ರ ಜೀವನದ ಬಗ್ಗೆ ರೋಸಿ ಹೋಗಿದ್ದ ಶಂಭು ಇನ್ನು ಮೇಲೆ ವಿಷ್ಣುಪ್ರಸಾದರ ಸಹವಾಸ ಬಿಟ್ಟು ತನ್ನಮ್ಮನೊಂದಿಗೆ ನೆಮ್ಮದಿಯ ಜೀವನ ನಡೆಸಲು ನಿರ್ಧರಿಸುತ್ತಾನೆ. ಒಂದು ದಿನ ವಿಷ್ಣುಪ್ರಸಾದ್ ಮೇಲೆ ಹಳೆದ್ವೇಷ ಇಟ್ಕೊಂಡಿರುವ ವ್ಯಕ್ತಿಯೊರ್ವ ಅವರ ಪುಟ್ಟ ಮೊಮ್ಮಗನನ್ನು ಅಪಹರಿಸಿ ಬೆದರಿಕೆಯೊಡ್ಡುತ್ತಾನೆ. ಆಗವರು ತಮ್ಮ ಅತ್ಯಂತ ನಂಬಿಕಸ್ಥನಾದ ಶಂಭುವನ್ನು ಕರೆದು ಸಹಾಯ ಯಾಚಿಸಿದಾಗ,ಮತ್ತೇನನ್ನೂ ಯೋಚಿಸದ ಶಂಭು ಅಪಹರಣಕಾರನಿಂದ ಅವರ ಮೊಮ್ಮಗುವನ್ನು ಕಾಪಾಡುತ್ತಾನೆ. ಅಪಹರಣ ಸುಖಾಂತ್ಯವಾದ ನಂತರ ವಿಷ್ಣುಪ್ರಸಾದರ ಬಳಿ ತಾನು ತೆಗೆದುಕೊಂಡ ನಿಲುವಿನ ಬಗ್ಗೆ ತಿಳಿಸುತ್ತಾನೆ. ಅದವರಿಗೆ ಒಂಚೂರು ಇಷ್ಟವಾಗಲಿಲ್ಲವೆಂದೂ ಅವರ ಮುಖಭವಾವೇ ಹೇಳುತ್ತಿದ್ದರೂ,ಕ್ಷಣಮಾತ್ರ ಯೋಚಿಸುವಂತೆ ನಾಟಕವಾಡಿ, ಕೊನೆಯಬಾರಿ ತನಗೊಂದು ಸಹಾಯ ಮಾಡೆಂದು ಅಲವತ್ತುಕೊಳ್ಳುತ್ತಾರೆ.ತನಗೊಬ್ಬ ಜಾನಕಿರಾಮ್ ಎಂಬ ಎದುರಾಳಿಯಿದ್ದಾನೆಂದು,ಅವನಿಂದ ತನಗೆ ಮತ್ತು ಕುಟುಂಬಕ್ಕೆ ತೊಂದರೆಯಿರುವುದೆಂದು ಹಳವಂಡ ಮಾಡಿ ಕೇಳಿಕೊಂಡಾಗ ಶಂಭುವಿಗೆ ಇಲ್ಲವೆನ್ನಲಾಗಲಿಲ್ಲ ಮುಲಾಜಿಲ್ಲದೆ.. ಶಂಭುವೊಪ್ಪಿದ್ದೇ ತಡ ಅವನಿಗೆ ಸಹಾಯ ಮಾಡಲು ಮುಂಬೈನಿಂದ ‘ಮಾಸ್ಟರ್ ಪ್ಲಾನ್ ಡೀಲರಾದ ಪೀಟರ್’ನನ್ನು ಕರೆಸಲಾಗುತ್ತದೆ. ಆ ಪೀಟರನ ವಂಶಸ್ಥರೆಲ್ಲಾ ಇಂತಹುದೇ ‘ಮಾಸ್ಟರ್ ಪ್ಲಾನ್’ ಮಾಡುವವರಾಗಿದ್ದು,ಇವನೂ ಅದರಲ್ಲಿ ನೈಪುಣ್ಯತೆ ಪಡೆದಿರುವುದಕ್ಕೆ ವಿಷ್ಣುಪ್ರಸಾದ್ ಅವನನ್ನು ಕರೆಸಿಕೊಂಡಿರುತ್ತಾನೆ. ಅವನು ಶಂಭುವಿಗೆ ಎದುರಾಳಿಯನ್ನು ಬಾಂಬ್ ಹಾಕಿ ಹೇಗೆ ಮುಗಿಸಬೇಕು,ಅದಕ್ಕೆ ನೇರ ಅಖಾಡಕ್ಕಿಳಿಯದೇ ಬೇರೆ-ಬೇರೆಯವರನ್ನುಪಯೋಗಿಸಿ ಹೇಗೆ ಕೆಲಸ ಮುಗಿಸಬೇಕೆಂದು ಹೇಳಿಕೊಟ್ಟಿದ್ದ. ಇದ್ಯಾವುದರ ಸುಳಿವನ್ನೂ ಶಂಭು ನಮಗೆ ಬಿಟ್ಟುಕೊಡಲಿಲ್ಲ,ಅದಾಗೇ ನಮಗೆ ಗೊತ್ತಾಗುವ ತನಕ..

ಅಷ್ಟರಲ್ಲಾಗಲೇ ಕಳ್ಳನೊಬ್ಬ ನನ್ನ ಮೊಬೈಲ್ ಅನ್ನು ಎಗರಿಸಿಕೊಂಡು ಓಡತೊಡಗಿದ. ಹಠಾತ್ ಧಾಳಿಯಿಂದ ಕ್ಷಣಕ್ಕೆ ದಿಗಿಲಾದರೂ ಕಳ್ಳನ ಬೆನ್ನತ್ತಿ ಓಡಿ, ನಾಲ್ಕೇಟು ಬೀಗಿದು ಮೊಬೈಲ್ ಕಿತ್ತುಕೊಂಡು ವಾಪಸ್ಸಾಗುತ್ತಿದ್ದೆ,ಆಗಲೇ ರಸ್ತೆಯಲ್ಲಿ ಬಿದ್ದ ಮತ್ತೊಂದು ಮೊಬೈಲ್ ರಿಂಗಣಿಸಿದ್ದು ಕೇಳಿಸಿತು. ಅದನ್ನೆತ್ತಿಕೊಂಡೆ ‘ಶಂಭು ಕಾಲಿಂಗ್’ ಅಂತ ಬರುತ್ತಿತ್ತು. ನಾನು ಅಚ್ಚರಿಯಿಂದ ಫೋನೆತ್ತಿಕೊಂಡು ಮಾತನಾಡುವಷ್ಟರಲ್ಲಿ ಅವನು ‘ಎಲ್ಲಾ ನಮ್ಮ ಯೋಚನೆಯಂತೆ ಆಗ್ತಿದೆ. ಅದು-ಇದು ಬಾಂಬ್-ಮತ್ತೊಂದು’ ಅಂತೆಲ್ಲಾ ಬಡಬಡಿಸಿ ಫೋನಿಟ್ಟುಬಿಟ್ಟ. ನನ್ನ ಜೀವದ ಗೆಳೆಯ ಆ ಸಾಹುಕಾರ ಖಳನಾಯಕನಿಗೋಸ್ಕರ ಅಡ್ಡದಾರಿ ಹಿಡಿದು ದೊಡ್ಡ ಅಪಾಯಕಾರಿ ಕೆಲಸಕ್ಕೆ ಕೈ ಹಾಕಿರುವುದು ಕಂಡು ಕೆಂಡಾಮಂಡಲ ಕೋಪ ಬಂತು. ಮತ್ತೆ ಫೋನ್ ಮಾಡಲು ಮನಸ್ಸಾಗದೇ ಗ್ಯಾರೇಜ್ ಕಡೆ ತೆರಳಿದೆ,ಅಲ್ಲೇ ಶಂಭುವನ್ನು ಕರೆಸಿ ಮಾತನಾಡುವುದೇ ಸರಿಯೆನಿಸಿದ್ದಕ್ಕೆ. ಹರಳೆಣ್ಣೆ ಕುಡಿದವರಂತೆ ಮುಖಮಾಡಿ ಚಪ್ಪೆಚೂರೂ ಮಾತನಾಡದೇ ಕುಳಿತಿದ್ದ ನನ್ನ ಕಂಡು ಗಾಭರಿಬಿದ್ದ ಟೋನಿ,ತಾನೇ ಶಂಭುವನ್ನು ಕರೆಸಿದ. ಅಲ್ಲಿಗೆ ಬಂದ ಶಂಭು ನನ್ನ ಮೌನವನ್ನು ಕೆಣಕತೊಡಗಿದ. ಸಾತ್ವಿಕ ಮೌನವೊಂದು ಗೆಳೆಯನ ಜೀವನವೇ ಹಾಳಾಗುವ ಭಯಕ್ಕೆ ಕೆಂಡದುಂಡೆ ಕಾರತೊಡಗಿತ್ತು. ಶಂಭುವಿಗೂ ತಾನು ಪೀಟರ್ ಗೆ ಫೋನ್ ಮಾಡಿಟ್ಟಮೇಲೆ,ಪೀಟರ್ ಬೇರೆ ನಂಬರಿಂದ ಕರೆಮಾಡಿ ತನ್ನ ಮೊಬೈಲ್ ತನ್ನ ಮೊಬೈಲ್ ಕಳೆದುಕೊಂಡದ್ದು,ತಾನು ಪೀಟರ್ ಅಂದ್ಕೊಂಡು ಯಾರೊಂದಿಗೋ ಮಾತನಾಡಿದ್ದು,ಈಗ ನಾನು ಹೇಳುತ್ತಿದ್ದುದು ಎಲ್ಲವೂ ತಾಳೆಯಾದಂತಾಯ್ತು. ಅವನದನ್ನು ವಿವರಿಸಲು ಬಂದಾಗ ನಾನು ಮತ್ತಷ್ಟು ಸಿಡಿದುಕೊಂಡೆ,ಸ್ನೇಹವನ್ನು ಕಡಿದುಕೊಂಡು ಹೊರಟೆ. ಅದರಿಂದಲಾದರೂ ಶಂಭುವಿಗೆ ತನ್ನ ತಪ್ಪಿನ ಅರಿವಾಗಬಹುದೆಂಬ ಕನಿಷ್ಟ ಆಸೆಯನ್ನ ಹೊತ್ತು..ಅಲ್ಲಿ ಟೋನಿಯೂ ಅಸಹಾಯಕನಾಗಿದ್ದ..

ನಂತರದ ದಿನಗಳಲ್ಲಿ ನಾನವನ ಮುಖವನ್ನು ತಿರುಗಿ ಸಹಾ ನೋಡುತ್ತಿರಲಿಲ್ಲ,ಶಂಭುವಿದ್ದಲ್ಲಿ ನಾನಿರುತ್ತಿರಲಿಲ್ಲ,ಅಲ್ಲಿಂದೆದ್ದು ಹೊರಟುಬಿಡುತ್ತಿದ್ದೆ. ಇಷ್ಟಾದರೂ ಅವನು ಮನಸ್ಸು ಬದಲಾಯಿಸದ್ದ ಕಂಡು ರೋಸಿಹೋಗಿದ್ದೆ. ಈ ಗೆಳೆಯನನ್ನು ಹೇಗೆ ಸರಿದಾರಿಗೆ ತರಬೇಕೆಂಬ ಯೋಚನೆಯಲ್ಲೇ ಸದಾ ಮುಳುಗಿರುತ್ತಿದ್ದ ನನಗೆ ಒಮ್ಮೆ ಅನಾಥಾಶ್ರಮದ ಮುಂದೆ ಹಾದುಹೋಗುವಾಗ ಬಾಲ್ಯದ ನೆನಪೆಲ್ಲವೂ ಹಟಾತ್ತನೇ ಧಾಳಿ ಮಾಡಿದವು. ನಾನು ಹುಟ್ಟಾದಮೇಲಿನ ತವರುಮನೆ, ಅದೇ ಅನಾಥಭಾವ,ಹೆತ್ತವರ ಮಮತೆಯನ್ನೇ ಕಾಣದ ಮುಗ್ಧ ಜೀವಗಳು,ದೊಡ್ಡವರ ಪ್ರತಿಷ್ಠೆಯಿಂದ ಮತ್ತಷ್ಟು ಹೆಚ್ಚುವ ಅನಾಥಭಾವ,ಶ್ರೀಮಂತಿಕೆಯ ಸಂಭ್ರಮಕ್ಕೆ ಸಿಗುವ ಎಂಜಲೆನಿಸುವ ಊಟ..ಒಟ್ಟಿನಲ್ಲಿ ಆಗಿನ ಪರಿಸ್ಥಿತಿಗೂ ಈಗಿನದಕ್ಕೂ ಯಾವ ವ್ಯತ್ಯಾಸವೂ ಇರಲಿಲ್ಲ. ಕಣ್ತುಂಬಿಕೊಂಡು,ಅನಾಥಾಶ್ರಮದ ಉದ್ಧಾರವನ್ನೂ ನನ್ನ ಕನಸಿನ ಮೂಟೆಯಲ್ಲಿ ಪೇರಿಸಿಟ್ಟುಕೊಂಡೆ. ಅಲ್ಲಿಂದ ಹೊರಬಂದಾಗ ಶಂಭು ನಿಂತಿದ್ದನಲ್ಲಿ,ಕೋಪ ನೆತ್ತಿಗೇರಿ ತೆರಳಿದೆ ಅವನ ಮುಖ ಸಪ್ಪಗಾದ್ದನ್ನು ಕಂಡೂ.. ಅಲ್ಲಿಂದ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ‘ಪಟೇಲ್’ ಎನ್ನುವವನಿಂದ ಫೋನ್ ಬಂತು. ಇದ್ಯಾಕಪ್ಪಾ ಈ ಮಹಾನುಭಾವನಿಗೆ ನನ್ನ ನೆನಪಾಯ್ತೋ ಎನಿಸಿ ಫೋನೆತ್ತಿಕೊಂಡೆ. ಅಷ್ಟು ಸುಲಭದಲ್ಲಿ ಯಾರನ್ನೂ ನಂಬದ,ಸಿಕ್ಕ ಸಿಕ್ಕವರಿಗೆ ಕೆಲಸ ಒಪ್ಪಿಸದ ‘ಕುಖ್ಯಾತ ಡೀಲರ್’ ಎಂದೇ ಹೆಸರಾದ ಪಟೇಲ್ ‘೧೦ ಲಕ್ಷ ಕೊಡ್ತಿನಿ, ನಾನು ಕೊಡುವ ಸೂಟಕೇಸ್ ಅನ್ನು ನಾನ್ ಹೇಳಿದ ಕಾರಲ್ಲಿ ಇಟ್ಟು ಬರಬೇಕು’ ಎಂದಾಗ ನಾನು ಕಣ್ಮುಚ್ಚಿಕೊಂಡು ಕೆಲಸ ಒಪ್ಪಿಕೊಂಡು ಕುಣಿದಾಡಿಬಿಟ್ಟೆ ಅಕ್ಷರಶಃ. ಹತ್ತು ಲಕ್ಷದ ಹೆಸರೇ ಕೇಳಿದವನಿಗೆ,ಅಷ್ಟು ದುಡ್ಡು ಸಿಗುತ್ತಿರುವುದು ಕೊಪ್ಪರಿಗೆ ಚಿನ್ನ ಸಿಕ್ಕಷ್ಟು ಖುಶಿಯಾಗಿತ್ತು.

ಹೋಳಿಹುಣ್ಣಿಮೆಯ ಸಡಗರ ಎಲ್ಲೆಲ್ಲೂ,ಜಗತ್ತೆಲ್ಲಾ ಬಣ್ಣದಲ್ಲಿ ಮುಳುಗಿ ಹೋಗಿತ್ತು. ಟೋನಿಯ ಗ್ಯಾರೇಜ್ ಅಲ್ಲಿಯೂ ಎಲ್ಲಾ ಹುಡುಗರು ಬಣ್ಣವೆರೆಚಿಕೊಂಡು ಕುಣಿದಾಡ್ತಾ ಇದ್ದರೆ,ಪಾಪದ ಟೋನಿ ಎಂದಿನಂತೇ ಕೆಲಸದಲ್ಲಿ ಮಗ್ನನಾಗಿದ್ದ. ಬಣ್ಣದ ಧೂಳಿಯ ನಡುವೆ ಅಲ್ಲಿಗೆ ಬಂದ ಕಾರಿಂದಿಳಿದ ವ್ಯಕ್ತಿಯೊಬ್ಬರು ಆ ಕಾರನ್ನು ಅರ್ಜೆಂಟಾಗಿ ರಿಪೇರಿ ಮಾಡಿಕೊಡೆಂದು ಕೇಳಿಕೊಳ್ಳುತ್ತಾನೆ. ರಿಪೇರಿ ಮಾಡಲು ನಿಂತ ಟೋನಿಗೆ ಅದು ತನ್ನಿಂದಾಗದ ಕೆಲಸವೆಂದು ಕ್ಷಣದಲ್ಲೇ ಅರಿವಾಗಿ, ಅವರನ್ನು ಬೆಂಗಳೂರಿನಲ್ಲಿರುವ ಶೋರೂಮ್ ಗೆ ಹೋಗಲು ತಿಳಿಸುತ್ತಾನೆ. ಆಗ ಆ ವ್ಯಕ್ತಿ ದಾರಿಯಲ್ಲೆನಾದರೂ ಕೆಟ್ಟು ನಿಂತರೆ ಬೇಕಾಗುತ್ತದೆಯೆಂದು ಟೋನಿಯನ್ನೂ ಜೊತೆಗೆ ಬರಲು ಒಪ್ಪಿಸಿ,ಬೇರೊಂದು ಕೆಲಸ ಮುಗಿಸಿ ಬರಲು ತೆರಳುತ್ತಾನೆ.ಅವನತ್ತ ತೆರಳಲು ನಾನು ಗ್ಯಾರೇಜ್ ಗೆ ಬಂದೆ.ಹಬ್ಬದಲ್ಲೂ ಕೆಲಸ ಮಾಡುವ ಟೋನಿಯನ್ನು ಕಿಚಾಯಿಸುತ್ತಾ ಇದ್ದಾಗ,ಚೆಂದದ ಕಾರನ್ನು ಕಂಡು ಕುತೂಹಲದಿಂದ ಕೈಯಿಟ್ಟೆನಷ್ಟೇ ಟೋನಿ ಕೂಗಿಕೊಂಡ. ನಕ್ಕು ಹಿಂತಿರುಗಿದವನಿಗೆ ಕಣ್ಸೆಳೆದದ್ದು ಆ ಕಾರಿನ ಸಂಖ್ಯೆ,ಹೌದಲ್ಲಾ ಅದೇ ಸಂಖ್ಯೆಯೆಂದು ಅಚ್ಚರಿಗೊಂಡೆ. ಆ ಕ್ಷಣಕ್ಕೆ ಕೈಕಾಲು ನಡುಗಿದರೂ ಅದರಲ್ಲಿ ನಾನಿಡಬೇಕಾದ ಪಟೇಲನ ಸೂಟಕೇಸ್ ಅನ್ನು ಟೋನಿಗೂ ಗೊತ್ತಾಗದಂತೆ ಇಟ್ಟು ಹೊರಬಂದೆ..

ಆಗ ಇದ್ದಕ್ಕಿದ್ದಂತೆ ತಾನು ವರುಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ ಕಾಂತಿಯಿಂದ ಫೋನ್ ಬಂತು,ಉಕ್ಕಿ ಬರುತ್ತಿದ್ದ ಸಂತಸವ ಹತ್ತಿಕ್ಕಿ ಕರೆ ಸ್ವೀಕರಿಸಿದೆ ಕೆನ್ನೆಗೆಂಪಾಗಿಸಿಕೊಂಡು. ಅರ್ಜೆಂಟಾಗಿ ಅವಳ ಕಾಲೇಜ್ ಬಳಿಯಿರುವ ಎಳನೀರು ಅಂಗಡಿಗೆ ಕರೆದರಳು ಅವಸರವಾಗಿ. ಅವಳ ದನಿಯಲ್ಲಿದ್ದ ಗಾಭರಿಯ ಭಾವ ನನ್ನ ತಟ್ಟಲೇ ಇಲ್ಲ. ಪತರುಗುಟ್ಟುತ್ತಿದ್ದ ಕಾಂತಿಯನ್ನು ಸರಿಯಾಗಿ ಗಮನಿಸದೇ ಬಣ್ಣವೆರಚಿದೆ ತುಂಟತನದಿಂದ.. ಅದಕ್ಕವಳು ಸಿಡುಕಿ ಕೆನ್ನೆಗೆರಡು ಬಿಗಿದು ಪೀಟರ್ ಎಂಬುವವನೊಬ್ಬ ವಿಷ್ಣುಪ್ರಸಾದ್ ಗೆ ಕರೆಮಾಡಿ ‘ಎಲ್ಲವೂ ತಾವೆಣಿಸಿದಂತೆ ನಡೆಯುವುದೆಂದೂ,ಬಂಟಿ ಎನ್ನುವವ ಈಗಾಗಲೇ ಬಾಂಬ್ ಇರೋ ಸೂಟಕೇಸ್ ನಿಮ್ಮ ಶತ್ರುವಿನ ಕಾರಲ್ಲಿಟ್ಟಿದ್ದಾನೆಂದೂ,ಆ ಕಾರ್ ಈಗಾಗ್ಲೇ ಹೊರಟಿದೆಯೆಂದು’ ಮಾತನಾಡಿದ್ದನ್ನು ಹೆದರುತ್ತಲೇ ಹೇಳಿಮುಗಿಸಿದಳು.

ಕಾಂತಿಯ ಮಾತು ಕೇಳಿದ ಬಂಟಿಗೆ ಭೂಮಿಯೇ ಬಾಯ್ತೆರದ ಅನುಭವ. ಕ್ಷಣವೂ ಯೋಚನೆ ಮಾಡದೆ ಗ್ಯಾರೇಜ್ ಕಡೆ ಓಡಿದ ನನಗೆ ಟೋನಿಯೂ ಹೊರಟಿದ್ದು ಅರಿವಾಗಿ ಹುಚ್ಚು ಹಿಡಿದಂತಾಯ್ತು. ನಂತರ ಸಿಕ್ಕಿದ ಕಾರ್ ತೆಗೆದುಕೊಂಡು ಅವರು ಹೊರಟಿರುವ ದಾರಿಯಲ್ಲಿ ಗಾಡಿಯೋಡಿಸತೊಡಗಿದೆ.

ಅತ್ತ ಟೋನಿಯಿದ್ದ ಕಾರಿನಲ್ಲಿದ್ದ ಹುಡುಗರಿಗೆ ದಡಬಡವೆನ್ನುತ್ತಿದ್ದ ಆ ಅಪರಿಚಿತ ಸೂಟಕೇಸ್ ಮೇಲೆ ಕಣ್ಣಿತ್ತು. ತಮ್ಮ ಬಾಸ್ ಜಾನಕಿರಾಮ್ ಅವರದ್ದೂ ಅಲ್ಲವೆಂದು ತಿಳಿದು ಅದನ್ನು ತೆರೆಯಲು ಮುಂದಾದಾಗ,ತಮ್ಮ ಕಾರನ್ನೇ ಬೆದರಿಸಿಕೊಂಡು ಬರುತ್ತಿದ್ದ ನನ್ನನ್ನು ಕಂಡು ಅಚ್ಚರಿಗೊಂಡು ಏನಾಯ್ತೆಂದು ಕೇಳಿದ. ನಾನು ಕಿರುಚಿಕೊಳ್ಳುತ್ತಿದ್ದೆ ಆ ಸೂಟಕೇಸ್ ಅಲ್ಲಿ ಬಾಂಬ್ ಇದೆಯೆಂದು,ನನ್ನ ದನಿ ಅವನ ತಲುಪುವ ಮೊದಲೇ ಬೆಂಕಿಯುಂಡೆಯೊಂದು ಉರಿದುರಿದು ನನ್ನ ಗೆಳೆಯ ದಹಿಸಿ ಹೋಗುವುದನ್ನು ಕಂಡರೂ ಅಸಹಾಯಕನಾಗಿ ಕಣ್ತುಂಬಿಕೊಂಡಿದ್ದೆ. ಅದರ ದಗೆಯಾರುವ ಮೊದಲೇ ಮತ್ತೊಂದು ಬೆಂಕಿಯುಂಡೆಯಂತಹ ಗುಂಡೊಂದು ನನ್ನ ಬೆನ್ನು ಹೊಕ್ಕಿತ್ತು. ಗುಟ್ಟನ್ನು ಅರಿತ ನನ್ನನ್ನು ಉಳಿಸುವುದು ಅಪಾಯವೆಂದರಿತ ಪಟೇಲ್ ನನಗೆ ಗುಂಡಿಕ್ಕಿ,ಪೊದೆಯೊಂದರಲ್ಲಿ ಎಸೆದು ಹೊರಟ..ಬಿದ್ದಿದ್ದೆ ಅಲ್ಲೇ ಅದೇಷ್ಟೋ ಹೊತ್ತು ನರಳುತ್ತಾ..

ಇದ್ದಕ್ಕಿದ್ದಂತೆ ನನ್ನ ಸಮೀಪವೇ ಮತ್ತೊಂದು ಕಾರ್ ಬಂದು ನಿಂತ ಅನುಭವವಾಗಿ ನರಳುವುದನ್ನು ಜೋರು ಮಾಡಿದೆ. ತಮ್ಮದೇ ಆದ ವಿಜಯೋತ್ಸವದಲ್ಲಿ ಮುಳುಗಿದ್ದ ಅವರಿಗೆ ನನ್ನ ಕೇಳಲೇ ಇಲ್ಲ.ಆದರೂ ಅವರಲ್ಲೊಬ್ಬ ನನ್ನನ್ನೆತ್ತಿಕೊಂಡು ಅವರಿದ್ದಲ್ಲಿಗೆ ಕರೆತಂದು ಮಲಗಿಸಿ ಅವ ಬಿಕ್ಕುತ್ತಿದ್ದದ ಕಂಡು ಕಣ್ತೆರೆದರೆ ಅಲ್ಲಿರುವುದು ಶಂಭು. ನಡೆದ ಘಟನೆಯನ್ನು ಎಳೆಯೆಳೆಯಾಗಿ ಬಿಡಿಸಿಟ್ಟಾಗ ಅವ ಕುಗ್ಗಿಹೋದ. ನನ್ನಿಂದ ಟೋನಿ ಸತ್ತನೆಂದು ನಾನು ದುಃಖಿಸುತ್ತಿದ್ದರೆ, ತನ್ನಿಂದಲೇ ಗೆಳೆಯರಿಗೆ ಈ ಗತಿ ಬಂದಿತೆಂದು ಶಂಭು ಬಿಕ್ಕುತ್ತಿದ್ದ. ನಂತರ ವಿಷ್ಣುಪ್ರಸಾದನನ್ನು ಸರಿಯಾಗಿ ತರಾಟೆ ತೆಗೆದುಕೊಂಡ. ಇಷ್ಟಾದ ಮೇಲೂ ಶಂಭುವನ್ನು ಬದುಕಲು ಬಿಡುವುದು ಮೂರ್ಖತನವೆಂದರಿತ ವಿಷ್ಣುಪ್ರಸಾದ್ ತಮ್ಮ ಮಗ ಕೃಷ್ಣನಿಂದಲೇ ಶಂಭುವನ್ನು ಕೊಲ್ಲಿಸಿದರು. ನನ್ನ ಮುಂದೆಯೇ ಗೆಳೆಯರಿಬ್ಬರ ಸಾವು, ಬದುಕಲು ಕಾರಣಗಳೇ ಉಳಿದಿರಲಿಲ್ಲ. ಕಣ್ಮುಚ್ಚುತ್ತಲೇ ಇದ್ದೆ ದೂರದಲ್ಲಿ ಕಾಂತಿ,ಗ್ಯಾರೇಜ್ ನ ಗೆಳೆಯರೆಲ್ಲಾ ಓಡುತ್ತಾ ಸಮೀಪಿಸುವುದನ್ನು ಕಾಣುತ್ತಲೇ ನಿಟ್ಟುಸಿರು ಬಿಟ್ಟೆ, ಅದೇ ಕೊನೆಯ ಉಸಿರಾಗಿತ್ತು..
……….
ನೆನಪಿನಂಗಳದಿಂದ ಹೊರಬಂದ ಮೂವರೂ ಕಲ್ಲಾಗಿದ್ದರು ನೋವಿನಿಂದ. ತಂಗಾಳಿಯ ತಂಪಿಗೂ ಅವರ ಬೇಗೆಯನ್ನು ಕಡಿಮೆ ಮಾಡುವ ಶಕ್ತಿಯಿರದೇ ಬೆಟ್ಟದ ಮರೆಯಲ್ಲಿ ಅಡಗಿಕೊಳ್ಳುತ್ತಿದ್ದವು ನಾಚಿಕೆಯಿಂದ. ತಾವು ಗೊತ್ತಿದ್ದೂ ಗೊತ್ತಿಲ್ಲದೆಯೂ ಮಾಡಿದ ಪಾಪಕ್ಕೆ ಅತೃಪ್ತ ಆತ್ಮಗಳಾಗಿ ಅಲೆಯುವುದು ಬಿಟ್ಟು ಸಧ್ಯ ಮುಕ್ತಿಯಿರಲಿಲ್ಲ ಎಂದುಕೊಳ್ಳುತ್ತಲೇ ಆ ಮೂವರು ಗೆಳೆಯರು ಕಾಣದ ನಭದತ್ತ ಹಾರಿ ಕಣ್ಮರೆಯಾದರು..

-ಮೂಲಕಥೆ: ರಾಜೇಶ್ ಧ್ರುವ
ನಿರೂಪಣೆ: ಶುಭಶ್ರೀ ಭಟ್ಟ

Back to top button

Adblock Detected

Kindly unblock this website.