ಅಸಾಮಾನ್ಯರು

ನುಡಿಸೇವೆಯಲ್ಲಿ ಗೌರಿ ಸುಂದರ-ಕನ್ನಡಿಗರಿಗೆ ವರ

ಒಂದೊಳ್ಳೊಯ ಪುಸ್ತಕ ಅತ್ಮೀಯ ಗೆಳೆಯನಂತೆ. ಗೆಳೆಯನಾದರೂ ಕೋಪಿಸಿಕೊಂಡು ಮಾತು ಬಿಡಬಹುದು. ಆದರೆ ಅಚ್ಚಾದ ಪುಸ್ತಕವೊಂದನ್ನು ಓದಿ ಅದರ ಭಾವ ಮನದೊಳಗೆ ಒಮ್ಮೆ ಅಚ್ಚಾದರೆ….ಅಚ್ಚುಮೆಚ್ಚಾದರೆ ಜೀವನಪರ್ಯಂತ ಆ ಹೊತ್ತಿಗೆಯ ಸಾರ ಅಚ್ಚಳಿಯದೆ ಉಳಿದುಬಿಡುತ್ತದೆ. ಓದಬೇಕೆನ್ನುವ ಹುಚ್ಚು ನಮಗಿರಬೇಕಷ್ಟೆ. ಇತ್ತೀಚೆಗೆ ಕನ್ನಡದಲ್ಲಿ ಓದುಗುಳಿ ಕಡಿಮೆಯಾಗಿದೆ ಎಂದು ಒಂದಷ್ಟು ಮಂದಿ ಹೇಳುತ್ತಿರುವುದು ನಿಜ. ಆದರೂ ರಾಜ್ಯದಾದ್ಯಂತ ತಿಂಗಳಿಗೆ ನೂರಾರು ಪುಸ್ತಕಗಳು ಕನ್ನಡ ಸಾರಸ್ವತಲೋಕಕ್ಕೆ ಸೇರ್ಪಡೆಯಾಗುತ್ತಿರುವುದೂ ನಿಜ ! ಈ ಕಷ್ಟಸಾಧ್ಯ ಕಾರ್ಯಕ್ಕೆ ಕೆಲವು ಪ್ರಕಾಶನಗಳ ಹರಸಾಹಸವೇ ಕಾರಣ. ಇಂತಹ ಹರಸಾಹಸದಲ್ಲಿ ಸುಂದರ ಪ್ರಕಾಶನ ಕೂಡ ತನ್ನ ಛಾಪನ್ನು ಇತ್ತೀಚೆಗಿನ ವರ್ಷಗಳಲ್ಲಿ ಮೂಡಿಸುತ್ತಿದೆ.

ಹಾಗಾಗಿ ಸುಂದರ ಪ್ರಕಾಶನದ ಸ್ಥಾಪಕ ಗೌರಿ ಸುಂದರ್ ಅವರ ಬಗ್ಗೆ ಒಂದಷ್ಟು ರೋಚಕ ವಿಚಾರಗಳನ್ನು ನಮ್ಮದಾಗಿಸಿಕೊಳ್ಳುವುದು ಸೂಕ್ತವೆನಿಸುತ್ತದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹುಟ್ಟಿ ಬೆಳೆದಿದ್ದ ಸುಂದರ್ ತುಂಬಾ ಓದಿದವರೇನಲ್ಲ. ಪ್ರಕಾಶನ ಇವರ ಕುಟುಂಬದ ಒಂದು ಭಾಗವೇ ಆಗಿತ್ತು. “ಡೈಲಿ ಸಮಾಚಾರ್”ಎಂಬ ಆಂಗ್ಲ ದಿನಪತ್ರಿಕೆಯನ್ನು ೪೯ ವರ್ಷಗಳಷ್ಟು ದೀರ್ಘಕಾಲ ನಡೆಸಿದ ಕೀರ್ತಿ ಇವರ ತಂದೆಯವರದು. ಬಹಳಷ್ಟು ಕಿರುಕೈಪಿಡಿಗಳನ್ನು ಮುದ್ರಿಸಿ ಉಚಿತವಾಗಿ ಹಂಚುವ ಮೂಲಕ ಸರಸ್ವತಿಯ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದರು.

ಆದರೆ ಇತ್ತ ದೇವಾನಂದ್ ಅವರ “ಗೈಡ್” ಹಾಗು “ಹಂಸಗೀತೆ” ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದ

ಸುಂದರ್‌ಗೆ ಆಗಲೇ ಚಿತ್ರರಂಗದಲ್ಲಿ ತಾನೇನಾದರೂ ಸಾಧಿಸಬೇಕೆಂಬ ಛಲ ಮೂಡಿತ್ತು. ಅದರ ಫಲವೇ….

ಕನ್ನಡದ ಮೊದಲ ಬಹುತಾರೆಗಳ ಚಿತ್ರ !

೧೯೭೯ ರಲ್ಲಿ ವಿಷ್ಣುವರ್ಧನ್,ಅನಂತನಾಗ್,ಗಿರೀಶ್ ಕಾರ್ನಾಡ್,ಕಲ್ಪನಾ,ಭಾರತಿ ಇನ್ನಿತರ ತಾರೆಗಳನ್ನು ಸೇರಿಸಿ “ಸಂದರ್ಭ” ಎಂಬ ಕನ್ನಡದ ಮೊದಲ ಮಲ್ಟಿಸ್ಟಾರ್ ಚಲನಚಿತ್ರವನ್ನು ನಿರ್ಮಿಸಿದ ಕೀರ್ತಿ ಸುಂದರ ಅವರದು. ಸಂದರ್ಭ ಚಿತ್ರದ ಕುರಿತು ವಿಜಯ ಭಾಸ್ಕರ್ ಅವರ ಜೊತೆ ಮದ್ರಾಸಿನಲ್ಲಿ ಚರ್ಚೆಗೆ ಕುಳಿತಾಗಲೇ

ವಿಚಿತ್ರವಾದ ಸಂದರ್ಭವೊಂದು ಒದಗಿ ಬಂತು. ಅದು ಬಯಸದೆ ಬಂದ ಭಾಗ್ಯ….

ಗಾನದಿಗ್ಗಜನ ಸುಂದರ ಕೊಡುಗೆ

ಗೌರಿ ಸುಂದರ್ ಅವರ ಹೊಸಪ್ರಯತ್ನವನ್ನು ಕೇಳಿದ ಗಾನಗಂಧರ್ವ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಮ್‌ಗೆ ಅದೇನನಿಸಿತೋ ಏನೊ…”ನಾನೇ ಈ ಚಿತ್ರಕ್ಕೆ ಸಂಗೀತ ನೀಡುತ್ತೇನೆ” ಎಂದುಬಿಟ್ಟರು. ತಮ್ಮ ಸದ್ಗುಣದಿಂದ ಎಸ್.ಪಿ.ಬಿ ಅವರ ಮನಗೆದ್ದ ಸುಂದರ್ ಎಸ್.ಪಿ.ಬಿ ಅವರನ್ನು ಚಲನಚಿತ್ರ ಸಂಗೀತ ನಿರ್ದೇಶಕರಾಗಿ ಪರಿಚಯಿಸಿದ ಕೀರ್ತಿಯನ್ನೂ ಪಡೆದರು.

ಆನಂತರ ಚಿತ್ರಕೂಟ, ಇಂದಿರಾಯಣ ಚಿತ್ರಗಳನ್ನು ನಿರ್ಮಿಸಿದ್ದಲ್ಲದೆ ರಾಷ್ಟ್ರಪ್ರಶಸ್ತಿ ಪಡೆದ ಆರು ಕನ್ನಡ ಚಲಚಿತ್ರಗಳಿಗೆ ಹಂಚಿಕೆದಾರರಾಗಿ ಪ್ರೋತ್ಸಾಹಿಸಿದರು. ದೂರದರ್ಶನಕ್ಕಾಗಿ ೪೦೦ ಡಾಕ್ಯುಮೆಂಟರಿಗಳನ್ನು ನಿರ್ಮಿಸಿ ನಿರ್ದೇಶಿಸಿದರು. ದಕ್ಷಿಣ ಭಾರತದ ಪ್ರವಾಸೋದ್ಯಮದಲ್ಲಿ ಅಪ್ರೂವ್ಡ್ ಗೈಡ್ ಆಗಿದ್ದ ಗೌರಿ ಸುಂದರ್ ದೇಶ ಸುತ್ತುತ್ತಾ ಕೋಶ ಓದುತ್ತಾ ತಮ್ಮ ಜ್ನಾನವನ್ನು ವೃದ್ಧಿಸಿಕೊಂಡಿದ್ದರು. ಹೀಗೆ ಸದಾ ಕ್ರಿಯಾಶೀಲರಾಗಿದ್ದ ಸುಂದರ್‌ಗೆ ಈಗ ಮೂರು ವರ್ಷಗಳ ಹಿಂದೆ ಕಣ್ಣಿನ ಸಮಸ್ಯೆ ಆರಂಭವಾಯಿತು. ಇಷ್ಟಲ್ಲದೆ ಪ್ರತೀ ತಿಂಗಳಿಗೆ ಹದಿನೆಂಟು ಸಾವಿರ ಖರ್ಚುಮಾಡಿ ಡಯಾಲಿಸಿಸ್ ಮಾಡುವ ಪರಿಸ್ಥಿತಿಯೂ ಬಂತು. ಓಡಾಡಲಾಗದೆ ಮನೆಯಲ್ಲೇ ಕೂರುವಂತಾಯಿತು!

ಸುಂದರ್‌ಗೆ ದುರಾದೃಷ್ಟ- ಕನ್ನಡ ಪುಸ್ತಕಲೋಕಕ್ಕೆ ಅದೃಷ್ಟ

ತನಗೆ ಹೀಗಾಯಿತಲ್ಲ ಎಂದು ಕೂತು ಕೊರಗುವ ಬದಲು “ಸುಂದರ ಪ್ರಕಾಶನ”ವನ್ನಾರಂಭಿಸಿ ಮತ್ತೆ ಬಾಳನ್ನು ಸುಂದರವಾಗಿಸಿಕೊಂಡ ಸುಂದರ್‌ಗೆ ಈಗ ಅನಾರೋಗ್ಯ ಮರೆತು ಹೋಗಿದೆ. ವಯಸ್ಸು ಅರವತ್ತೆರಡಾದರೂ ಆರದ ಉತ್ಸಾಹ. ತಿಂಗಳಿಗೊಮ್ಮೆ ಪುಸ್ತಕ ಬಿಡುಗಡೆಯ ಉತ್ಸವ!

ಕೆರೆಯ ನೀರನು ಕೆರೆಗೆ ಚೆಲ್ಲಿ….

ಕಷ್ಟ ಕಾಲದಲ್ಲಿ ಪುಸ್ತಕೋದ್ಯಮಕ್ಕೆ ಕಾಲಿಟ್ಟ ಸುಂದರ್ ಒಂದರ್ಥದಲ್ಲಿ ತಮ್ಮ ಮೂಲ ವೃತ್ತಿಗೆ ಮತ್ತೆ ಬಂದಿದ್ದಾರೆ. ಅಚ್ಚುಕಟ್ಟಾಗಿ ವ್ಯವಹಾರವನ್ನು ನಿರ್ವಹಿಸುತ್ತಾ ಪುಸ್ತಕ ಮಾರಾಟದಿಂದ ಸಂಗ್ರಹವಾದ ಲಾಭವನ್ನು ಮತ್ತೆ ಮತ್ತೆ ಹೊಸ ಹೊಸಪುಸ್ತಕಗಳನ್ನು ಮುದ್ರಿಸಲು ಉಪಯೋಗಿಸಿತ್ತಿದ್ದಾರೆ. “ಪುಸ್ತಕೋದ್ಯಮ ಕಷ್ಟ.ಮಾರಾಟವಾಗೋಲ್ಲ. ಹಣ ಬರೋಲ್ಲ” ಇಂತಹ ಮಾತುಗಳು ಸುಳ್ಳು. ಕಷ್ಟ ಎಲ್ಲಾ ಕ್ಷೇತ್ರಗಳಲ್ಲೂ ಇದೆ ಎನ್ನುತ್ತಾರೆ ಸುಂದರ್. ಕಥೆ ಕಾದಂಬರಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡದೆ ಐತಿಹಾಸಿಕವಾಗಿ ದಾಖಲಾಗುವಂತಹ ವೈಚಾರಿಕ ವಿಚಾರಧಾರೆಗಳನ್ನು ಹೊತ್ತ ಹೊತ್ತಿಗೆಗಳನ್ನು ಮಾತ್ರ ಹೊರತರುತ್ತಿರುವ ಸುಂದರ ಪ್ರಕಾಶನ ಈಗಾಗಲೇ ಹೊರತಂದಿರುವ ೧೯೪ ಪುಸ್ತಕಗಳಲ್ಲಿ ಒಂದೊಂದೂ ಅತ್ಯಮೂಲ್ಯರತ್ನಗಳು. ಸುಮತೀಂದ್ರ ನಾಡಿಗರು ಬರೆದಿರುವ ಭೈರಪ್ಪ ಕೃತಿಗಳ ವಿಮರ್ಶೆ ಹಾಗು ವಿಶ್ವೇಶ್ವರ ಭಟ್ ಅವರ “ರಾಷ್ಟ್ರಪತಿಗಳ ಜೊತೆ ೧೪ ದಿನಗಳು” ಈ ಪ್ರಕಾಶನದ ಪ್ರಸಿದ್ಧ ಕೃತಿಗಳು.

ಕನ್ನಡದ ನುಡಿಸೇವೆಯಲ್ಲಿ ತಲ್ಲೀನರಾಗಿರುವ ಗೌರಿ ಸುಂದರ್ ಅವರ ಆಯಸ್ಸು ವಯಸ್ಸಾದಂತೆ ಹೆಚ್ಚಾಗುತ್ತಾ ಹೋದರೆ ಅದೇ ಕನ್ನಡಿಗರ ಪಾಲಿಗೆ ವರ. ಅವರಾಗಲಿ ಚಿರಕುವರ.

-ಚಿನ್ಮಯ.ಎಮ್.ರಾವ್ ಹೊನಗೋಡು 

15-9-2011

****************

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.