ಅಸಾಮಾನ್ಯರುಜೀವನ ಕಲೆ

ಅವರು ಪಾಠ ಮಾಡಿದ್ದು ಎರಡೇ ಅವಧಿ , ನೆನಪು ಮಾತ್ರ ನಮ್ಮ ಜೀವಿತಾವಧಿ

RAMACHANDRA BHAT KOTEMANE-ಚಿನ್ಮಯ.ಎಮ್.ರಾವ್ ಹೊನಗೋಡು

ಭೋರ್ಗರೆಯುವ ಆಷಾಡದ ಮಳೆ. ಆಗಷ್ಟೇ ಶಾಲೆ ಪುನರಾರಂಭವಾಗುವ ವೇಳೆ. ನಮ್ಮದೊಂದು ಹಳ್ಳಿಯ ಮೂಲೆ. ದೂರದ ಸಾಗರ ತಾಲೂಕು ಕೇಂದ್ರಕ್ಕೆ ಪ್ರತಿದಿನ ಓಡಾಡಲು ಸರಿಯಾಗಿ ವಾಹನಸೌಕರ್ಯವಿರದ ಕಾರಣ ವಿದ್ಯಾರ್ಥಿನಿಲಯವಿರುವ ಶಿಕ್ಷಣ ಕೇಂದ್ರಕ್ಕೆ ಸೇರಬೇಕೆನಿಸಿದ್ದು ಆವಾಗಲೇ. ಮೊದಲಿನಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಲೆಯಲ್ಲೇ (ಸಾಗರದ ಸೇವಾ ಸಾಗರ) ಓದಿ ಬೆಳೆದಿದ್ದ ನಾನು ಸಂಘ ಪರಿವಾರದ ಚನ್ನೇನಹಳ್ಳಿಯ ಹಾಸ್ಟೆಲ್ ಬಗ್ಗೆ, ಅಲ್ಲಿಂದ ಓಡಿ ಬಂದ ಹುಡುಗರ ಬಗ್ಗೆ ಅವರಿವರು ಮತಾಡುವುದನ್ನು ಕೇಳಿ ತಿಳಿದು ಕುತೂಹಲ ತಾಳಿದ್ದೆ. ಅತಿ ಶಿಕ್ಷೆ ತಾಳಲಾರದೆ ವಿದ್ಯಾರ್ಥಿಗಳು ಬೇಲಿ ಹಾರಿ ಮನೆವರೆಗೂ ಓಡಿಯೇ ಬರುತ್ತಾರೆಂಬ ತಪ್ಪು ಕಲ್ಪನೆ ಆಗ ನನಗೆ. ನನ್ನೊಡನೆ ಸಹಪಾಠಿಯಾಗಿದ್ದ ಜೀವದ ಗೆಳೆಯ ಜಿತೇಂದ್ರ ಆರನೆಯ ತರಗತಿಗೇ ಚನ್ನೇನಹಳ್ಳಿಗೆ ಸೇರಿದ್ದ.. ಅವನ ಪುಂಡಾಟವನ್ನು ತಾಳಲಾರದೆ ಅವನಪ್ಪ ಅಲ್ಲಿಗೆ ಸೇರಿಸಿರಬಹುದೆಂದು ನಾನಂದುಕೊಂಡಿದ್ದೆ. ಆದರೆ ನಾನೂ ಅಲ್ಲಿ ಸೇರಬೇಕೆಂಬ (ಅವನನ್ನು ಸೇರಬೇಕೆಂಬ) ಕನಸು ಕ್ರಮೇಣ ಚಿಗುರೊಡೆದು ಪ್ರೌಢಶಿಕ್ಷಣಕ್ಕೆ ಜಿಗಿಯುವ ಸಂಕ್ರಮಣ ಕಾಲದಲ್ಲಿ ಕೈಗೂಡಿತು. ಆದರೆ ಇನ್ನೊಂದೆಡೆ ಮನೆಯನ್ನು ಬಿಟ್ಟಿರಲಾಗದ ಹೋಮ್ ಸಿಕ್‌ಗೆ ಸಿಕ್ಕಿಹಾಕಿಕೊಂಡಿದ್ದೆ. ಅಂತೂ ಅರೆಮನಸ್ಸಿನಿಂದ ಗಂಟು ಮೂಟೆ ಕಟ್ಟಿದೆ.

ಶಿಲೆಗಲ್ಲಿನ ಬೃಹತ್‌ಕೋಟೆಯಂತಿದ್ದ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೆಂದ್ರದ ಎಂಟನೇ ತರಗತಿಯ ಕೋಣೆಯಲ್ಲಿ ಮೊದಲದಿನ ಮೊದಲ ಅವಧಿಗೆ ಕುಳಿತಾಗ ನನಗೆ ಅವ್ಯಕ್ತ ಭಯ. ತುಂಬಾ ಸ್ಟ್ರಿಕ್ಟ್ ಅಂತೆ ಅಂತ ಕೇಳಿದ್ದ ನನಗೆ ಎಂತಹ ಶಿಕ್ಷಕರು ಶಿಕ್ಷೆ ಕೊಡಲು ಬರುವರೋ ಏನೊ ಎಂಬ ಆತಂಕ. ಮತ್ತೊಂದೆಡೆ ಮನೆ ಬಿಟ್ಟು ದೂರದ ಯಾವುದೋ ಲೋಕಕ್ಕೆ ಬಂದಂತೆ ಭಾಸ. ನನಗಿರಲಿಲ್ಲ ಪಾಲಕರನ್ನು ಬಿಟ್ಟಿರುವ ಅಭ್ಯಾಸ. ಸುರಿಯುತ್ತಿದ್ದ ಕಣ್ಣೀರು ಜೂನ್ ತಿಂಗಳ ಮಳೆಗೆ ಸ್ಪರ್ಧೆ ನೀಡುತ್ತಿತ್ತು. ಬಹುತೇಕ ಎಲ್ಲಾ ವಿದ್ಯಾರ್ಥಿಗಳದ್ದೂ ಇದೇ ಪರಿಸ್ಥಿತಿ ಮನೋಸ್ಥಿತಿಯಾದ್ದರಿಂದ ತರಗತಿ ಶಾಂತವಾಗಿತ್ತು.

ಆಗ ಶಿಕ್ಷಕರೊಬ್ಬರ ಪ್ರವೇಶ. ಬಿಳಿ ಅಂಗಿಯ ಮೇಲೆ ಹಾಫ್ ಕಪ್ಪು ಕೋಟು, ಕಚ್ಚೆ ಪಂಚೆ ಧರಿಸಿದ್ದ ಅವರ ಕೈಯ್ಯಲ್ಲಿ ಸವೆದು ಹೋಗಿದ್ದ ೨ ಹಳೆಯ ಪುಸ್ತಕಗಳು, ಅದರ ಮೇಲೆ ದೇವನಾಗರಿಲಿಪಿಯಲ್ಲಿ ಕೆಂಪು ಅಕ್ಷರಗಳು ಗೋಚರವಾದ ಕಾರಣ ಇವರು ಸಂಸ್ಕೃತ ಶಿಕ್ಷಕರಿರಬಹುದೆಂದು ನಮ್ಮ ಊಹೆ…ಅಷ್ಟೇನು ಎತ್ತರವಿರದ ಅವರು ನಡೆದು ಬರುವಾಗಿನ ಗಾಂಭೀರ್ಯ ನೋಡಿದರೆ ಬಹಳ ಎತ್ತರ ಏರಿದ ಮೇರು ವ್ಯಕ್ತಿತ್ವ ಎನಿಸುತ್ತಿತ್ತು. ಹಣೆಯ ಮೇಲಿನ ಕುಂಕುಮದ ಬೊಟ್ಟು, ಕಾಂತಿ ಚೆಲ್ಲುವ ಕಂಗಳು ಎಲ್ಲರನ್ನೊಮ್ಮೆ ಬೊಟ್ಟು ಮಾಡಿ ನೋಡುವಾಗ ಯಾವುದೋ ಚೈತನ್ಯವೊಂದು ನಮ್ಮೊಳಗೆ ಸೇರಿ ಒಡಲು ಒಡನೆಯೇ ಜಾಗೃತವಾದಂತಾಯಿತು.

ಸಪ್ರೇಮ ಭಾವದಿಂದ ನಗುವ ಬೀರಿ ತಮ್ಮ ಪರಿಚಯ ಮಾಡಿಕೊಂಡ ರಾಮಚಂದ್ರ ಜಿ ಭಟ್ ಕೋಟೆಮನೆ, ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಎದ್ದು ನಿಂತು ಹೆಸರು ಊರು ಸಮೇತ ಸಂಕ್ಷಿಪ್ತವಾಗಿ ತಮ್ಮ ಪರಿಚಯ ಮಾಡಿಕೊಳ್ಳಬೇಕೆಂದು ಸೂಚಿಸಿದರು. ಅವರ ದನಿಯಲ್ಲಿ ದರ್ಪ,ಆದೇಶ ಅಥವಾ ತಾನು ಆಜ್ನೆ ಮಾಡುತ್ತಿರುವ ಶಿಕ್ಷಕ ಎಂಬ ಲವಲೇಶವೂ ಇರಲಿಲ್ಲ. ಬದಲಿಗೆ ಇವರೂ ನಮ್ಮ ಕುಟುಂಬದವರೇ ಎಂದೆನಿಸುತ್ತಿತ್ತು.

ಉಭಯ ಕುಶಲೋಪರಿಯ ನಂತರ “ಸಂಸ್ಕೃತ” ಎಂಬ ಪದದ ಭಾವಾರ್ಥವೇನು? ಎಂದು ನಮ್ಮೆಲ್ಲರನ್ನೂ ಚಿಂತನೆಗೆ ಇಳಿಸಿ ಚರ್ಚೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಮಾಡಿದರು. ಅಷ್ಟೊತ್ತಿಗೆ ಭಯ ಮಾಯವಾಗಿ ಮನಸ್ಸು ನಿರಾಳವಾಗಿತ್ತು. ಆನಂತರ ಪಠ್ಯದ ಮೊದಲ ಪದ್ಯ ” ಅಂಗವಂಗ ಸಿಂಧುರಾಷ್ಟ್ರ ಕೂಟಕೋಟಿ ಸಂಯುತಾಮ್…..ನಮಾಮಿ ಭಾರತಾಂಬಿಕಾಮ್…” ರಾಗವಾಗಿ ಭಾವಪೂರ್ಣವಾಗಿ ಹೇಳಿಕೊಟ್ಟರು. ನಾಳೆ ನೀವೆಷ್ಟು ವಿದ್ಯಾರ್ಥಿಗಳು ಇದನ್ನು ಹಾಡಿ ತೋರಿಸುತ್ತೀರೋ ನೋಡೋಣವೆಂದು ಸವಾಲು ಹಾಕಿ ನಿರ್ಗಮಿಸಿದರು.

RGB-PHOTO3ಕೇವಲ ಒಂದು ಹಾಡಿನಿಂದ ಬಾಡಿ ಹೋಗಿದ್ದ ನನ್ನ ಮನ ಅರಳಿ ನಗುವ ಹೂವಿನಂತಾಯಿತು. ಸಂಗೀತ ಪ್ರಿಯನಾಗಿದ್ದ ನಾನು ಮರುದಿನವೇ ಅದನ್ನು ಚೆನ್ನಾಗಿ ಅಭ್ಯಾಸ ಮಾಡಿ ತರಗತಿಯಲ್ಲಿ ಒಪ್ಪಿಸಿದೆ. ಅವರ ಪ್ರೋತ್ಸಾಹದಿಂದ ನಾನೇ ಹಾಡನ್ನು ಹೇಳಿಕೊಡುವಂತಾದೆ. ಅಂದಿನ ತರಗತಿಯಲ್ಲಿ ಆ ಪದ್ಯದ ವರ್ಣನೆಯನ್ನು ಸೊಗಸಾಗಿ ಮಾಡಿದ ಆರ್.ಜಿ.ಬಿ ನಮ್ಮೆಲ್ಲರ ಹೃದಯಸಿಂಹಾಸನದಲ್ಲಿ ಭಾರತಾಂಬೆಯನ್ನು ಕೂರಿಸಿ ಮರಳಿದರು. ಮೂರನೆಯ ದಿನ ಅವರು ಬರುತ್ತಾರೆಂದು ನಾವು ಕಾದೆವು, ಬರಲೇ ಇಲ್ಲ. ನಾಲ್ಕು…ಐದು..ಅರನೇ ದಿನ ನಿರೀಕ್ಷೆ ಹುಸಿಯಾಗಿ ನಿರಾಸೆ. ಶಬರಿ ರಾಮನಿಗೆ ಕಾದಂತಾಯಿತು ನಮ್ಮ ಪಾಡು. ವಿದ್ಯಾರ್ಥಿನಿಲಯದ ಆವರಣದಲ್ಲೂ ಕಾಣದೆ ಕಾಣೆಯಾಗಿ ಬಿಟ್ಟರು. ಅವರು ನಿವೃತ್ತಿಯಾದರೆಂದು ಬಲ್ಲ ಮೂಲಗಳಿಂದ ತಿಳಿದಾಗ ಅಳು ಬಂತು.

ಒಮ್ಮೆ ಆಟದ ಅವಧಿಯಲ್ಲಿ ಮೈದಾನದ ಅಂಚಿನಲ್ಲಿದ್ದ ಅವರ ಮನೆಯನ್ನು ಹಿರಿಯ ವಿದ್ಯಾರ್ಥಿಯೊಬ್ಬ ತೋರಿಸಿದ. ಅವರು ಬ್ರಹ್ಮಚಾರಿಗಳು, ಸಂಘದ ಸಕ್ರಿಯ ಕಾರ್ಯಕರ್ತರು, ಕರ್ನಾಟಕದ ಗುರುಕುಲಗಳಿಗೆಲ್ಲಾ ಅವರೇ ಮುಖ್ಯಸ್ಥರು, ಈಗ ಪ್ರವಾಸದಲ್ಲಿದ್ದಾರೆ. ಮತ್ತೆ ಇಲ್ಲಿಗೆ ಬರುತ್ತಾರೆ ಎಂದಾಗ ಬೆಳಕು ಮತ್ತೆ ಬಳಿ ಬಂದಂತಾಯಿತು. ಅವರ ಮನೆಯ ಸಮೀಪ ಒಮ್ಮೆ ಹೋದರೂ ಸಾಕು ನಮಗೆ ಏನೋ ಪುಳಕ, ಆನಂದ ಅವರನ್ನು ನೋಡಿದಷ್ಟೇ ಸಂತಸವಾಗುತ್ತಿತ್ತು.

ಚನ್ನೇನಹಳ್ಳಿಯ ಪಕ್ಕದಲ್ಲೇ ವೇದವಿಜ್ನಾನ ಗುರುಕುಲವನ್ನು ಆರಂಭಿಸಲು ತಯಾರಿ ನಡೆಸಿದ್ದ ಆರ್.ಜಿ.ಬಿಯವರ ದರ್ಶನ-ಸಂದರ್ಶನ ಆಗಾಗ ನಮಗಾಗುತ್ತಿತ್ತು. ಮುಂಜಾನೆಯ ಪ್ರಾರ್ಥನೆ ಮುಗಿಸಿ ಹೊರಬರುವಾಗ ವಿದ್ಯಾರ್ಥಿನಿಲಯದ ಎದುರು ಉದ್ಯಾನವನದಲ್ಲಿ ದಪ್ಪನೆಯ ಯಾವುದೋ ಗ್ರಂಥವನ್ನು ಹಿಡಿದು ಅತ್ತಿತ್ತ ಓಡಾಡುತ್ತಿದ್ದ ಅವರನ್ನು ನೋಡಿದರೆ ನಮಗೆ ಎಲ್ಲಿಲ್ಲದ ಗೌರವ. ಭಾನುವಾರದ ಬೆಳಗಿನ ಬೌದ್ಧಿಕ್‌ನಲ್ಲಿ ಒಮ್ಮೊಮ್ಮೆ ಉಪನ್ಯಾಸ ನೀಡುತ್ತಾರೆ ಎಂದು ಗೊತ್ತಾದರೆ ಸಾಕು…ನಿದ್ದೆ ಮಾಡಲೆಂದು ತಪ್ಪಿಸಿಕೊಳ್ಳುವ ಸೋಮಾರಿ ಹುಡುಗರೂ ಎದ್ದು ಓಡೋಡಿ ಬರುತ್ತಿದ್ದರು.

P2070077ಹೀಗೆ ಶಾಲೆಯಲ್ಲಿ ಅವರನ್ನು ಕಳೆದುಕೊಂಡ ನಾವು ಪಠ್ಯೇತರ ಚಟುವಟಿಕೆಗಳಲ್ಲಿ ಅವರೊಡನೆ ಓಡನಾಡುವಂತಾಯಿತು. ಶಿಕ್ಷಣ ಎಂದರೆ ಯಾವುದು? ಶಿಕ್ಷಕ ಹೇಗಿರಬೇಕು? ಶಿಕ್ಷೆ ನೀಡುವುದು ಹೇಗೆ? ಈ ಪ್ರೆಶ್ನೆಗಳಿಗೆಲ್ಲಾ ಸ್ಪಷ್ಟ ಉತ್ತರ ನಮ್ಮ ಆರ್.ಜಿ.ಬಿ. ಹಾಗೊಮ್ಮೆ ಶಿಕ್ಷಿಸಬೇಕೆಂದಲ್ಲಿ ಅವರು ನಮ್ಮನ್ನು ದೈಹಿಕವಾಗಿ ಶಿಕ್ಷಿಸುತ್ತಿರಲಿಲ್ಲ. ಅವರ ಎದುರಲ್ಲಿ ನಾವು ಚಲಿಸುವಾಗ ನಾಲ್ಕಾರು ದಿನ ಅವರು ನಮ್ಮತ್ತ ಗಮನ ಹರಿಸದೆ ನಿರ್ಲಕ್ಷಿಸಿ ನೋಡದೆ ಹೋದರೂ ಸಾಕು, ಅದೇ ನಮಗೆ ಶಿಕ್ಷೆ. ಅವರೊಬ್ಬ ಆದರ್ಶ ಶಿಕ್ಷಕ, ಅದಕ್ಕೂ ಮಿಗಿಲಾಗಿ ಶಿಕ್ಷಕ ಎಂಬ ಹುದ್ದೆಯಿಂದ ಅತೀತರಾದ “ಗುರು”. ಶಿಕ್ಷಣವನ್ನು ನೀಡುವವನು ಶಿಕ್ಷಕ. ಆದರೆ ವಿದ್ಯೆಯನ್ನು ತನ್ನ ಅಂತರಂಗದಿಂದ ವಿದ್ಯಾರ್ಥಿಯ ಅಂತರಂಗಕ್ಕೆ ಸಂವಹನ ಮಾಡಿ ಜ್ನಾನವನ್ನು ಶಾಶ್ವತವಾಗಿ ಅಂತರ್ಗತಗೊಳಿಸುವವನೇ ಗುರು. ಅಂತಹ ಗುರು ನಮ್ಮ ಆರ್.ಜಿ.ಬಿ. ನಮಗೆ ಆಪ್ತವಾಗಿದ್ದ ಅವರನ್ನೂ ಅವರ ಪರಿಪೂರ್ಣ ವ್ಯಕ್ತಿತ್ವವನ್ನೂ ಜೀವನ ಪರ್ಯಂತ ನಮ್ಮ ಮನಸ್ಸು ಆರಾಧಿಸುತ್ತಾ ಅನುಸರಿಸುವ ಮಾರ್ಗದಲ್ಲಿದೆ. ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಅವರ ಸ್ಮರಣೆಯೇ ನಾವು ಅವರಿಗೆ ನೀಡುವ ಕೊಡುಗೆ. ವೇದವಿಜ್ನಾನ ಗುರುಕುಲದಲ್ಲಿ ಗುರುವಾಗಿರುವ ಕೋಟೆಮನೆ ರಾಮಚಂದ್ರ ಜಿ ಭಟ್ ಅವರ ಶೈಕ್ಷಣಿಕ ಸೇವೆ ನೂರಾರು ಕಾಲ ಬಾಳಿ ಅಮರವಾಗಲಿ ಹೀಗೇ….

ಚಿನ್ಮಯ.ಎಮ್.ರಾವ್ ಹೊನಗೋಡು

23-8-2011

 

One Comment

  1. Brilliant writing! Thank you took me to 8th Std. Remember your singing skills.
    RGB is a legendary Guru.

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.