ಕೆಲವ್ಯಕ್ತಿಗಳೇ ಹಾಗೆ. ಸದಾ ಎನನ್ನಾದರೂ ಸಾಧಿಸಬೇಕೆಂಬ ಕನಸು ಕಾಣುತ್ತಲೇ ಇರುತ್ತಾರೆ. ಕನಸನ್ನು ನನಸುಮಾಡುವಲ್ಲಿ ಚಂಚಲರಾಗದೆ ಹಿಡಿದ ಕೆಲಸವನ್ನು ಛಲದಿಂದ ಮಾಡಲು ಹವಣಿಸುತ್ತಾರೆ.ಅದಕ್ಕೆ ಬೇಕಾದ ಪೂರ್ವತಯಾರಿಯನ್ನು ಹಲವಾರು ವರುಷಗಳಿಂದ ಮಾಡಿರುತ್ತಾರೆ. ಅವರ ಮನಸ್ಸು ಅದಕ್ಕಾಗಿ ಮಿಡಿಯುತ್ತಲೇ ಇರುತ್ತದೆ. ತಮಗೆ ಬಿಡುವೇ ಇಲ್ಲ ಎನ್ನುವುದೂ ತಮ್ಮ ಘನತೆಯನ್ನು ಹೆಚ್ಚಿಸುತ್ತದೆ ಎಂಬ ಒಣಪ್ರತಿಷ್ಠೆ ಮಾಡುವರ ಆಚೆ ಪ್ರತ್ಯೇಕವಾಗುವ ಇವರು ಬಿಡುವು ಮಾಡಿಕೊಂಡು ಒಂದಷ್ಟನ್ನು ನಮ್ಮ ಸಮಾಜ,ನಾಡು-ನುಡಿಗೆ ಮುಡಿಪಾಗಿರಿಸುತ್ತಾರೆ. ಹೀಗೆ ಮುಡಿಪಾಗಿರಿಸಿ ಕಳೆದ ಹತ್ತಾರು ವರುಷಗಳಿಂದ ಕನ್ನಡನುಡಿಸೇವೆಯಲ್ಲಿರುವ ಆ ಕನ್ನಡ ಕುವರ ಬೇರಾರು ಅಲ್ಲ..ಲಂಡನ್‌ನಲ್ಲಿ ನೆಲೆಸಿರುವ “ಕುಮಾರ್“.
ಕುಮಾರ್ ಮೂಲತಃ ಕಾಸರಗೋಡು ಸನಿಹದ ಕನ್ನಡದ ಕುಡಿ. ಕುಂಟಿಕಾನಮಠ ಎಂಬ ಊರಿನ ಇವರಿಗೆ ಮೊದಲಿನಿಂದಲೂ ಬಲು ಇಷ್ಟ ಕನ್ನಡನುಡಿ. ತಂದೆ ಬಾಲಕೃಷ್ಣ ಭಟ್ ಕನ್ನಡದ ಅಧ್ಯಾಪಕ. ಕನ್ನಡದ ಸೇವಕ. ಮಾಡುತ್ತಲೇ ಇರುತ್ತಾರೆ ಕನ್ನಡದ ಕಾಯಕ. ಇನ್ನು ಕೇಳಬೇಕೆ? ಅಪ್ಪನಂತೆ ಮಗ. ಬಾಲ್ಯದಿಂದಲೂ ಕನ್ನಡವೆಂದರೆ ಪಂಚಪ್ರಾಣ ಓದುವಾಗ.ಎಂ.ಬಿ.ಎ ವ್ಯಾಸಂಗ ಮುಗಿಸಿ ಕೆಲಸಕ್ಕೆಂದು ದೂರದ ಲಂಡನ್ನಿಗೆ ಹೋದಾಗ ಅಮ್ಮನ ನೆನಪು. ಜೊತೆಗೆ ಕನ್ನಡಮ್ಮನ ನೆನಪು. ಅಮ್ಮನ ನೆನಪಾದಾಗ ಅಮ್ಮನೊಡನೆ ಒಂದಷ್ಟು ಕಾಲ ಮಾತನಾಡಿ ಸಂತಸಗೊಳ್ಳಬಹುದು. ಆದರೆ ಕನ್ನಡಮ್ಮನ ನೆನಪಾದರೆ?
ಕನ್ನಡಮ್ಮನ ನೆನಪಾದಾಗಲೆಲ್ಲಾ ಕನ್ನಡ ನಾಡು ನುಡಿಗೆ ಸಂಬಂಧಪಟ್ಟಂತೆ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಯೂರೋಪಿನಾದ್ಯಂತ ಕನ್ನಡ ನುಡಿತೇರನ್ನು ಹೊತ್ತು ತಿರುಗುತ್ತಿದ್ದಾರೆ. ಕನ್ನಡೇತರರ ಗಮನವನ್ನೂ ಸೆಳೆದಿದ್ದಾರೆ. ಸಾಗರದಾಚೆಯ ಬ್ರಿಟೀಷರ ದೇಶದಲ್ಲಿರುವ ನಮ್ಮ ಕನ್ನಡಿಗರಿಗೆ ಕನ್ನಡಮ್ಮನ ನೆನಪನ್ನು ಸದಾ ಮಾಡುಕೊಡುತ್ತಿದ್ದಾರೆ. ಕನ್ನಡಿಗರು ಕನ್ನಡವನ್ನು ಮರೆಯಬಾರದೆಂದು ಕರೆಕರೆದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಕುಮಾರ್ ಸಕ್ರಿಯರಾಗಿದ್ದಾರೆ. ನಾಡಿನ ಬಡರೈತನ ಜೀವನ ಹಾಗು ಹೇಗೆ ಆತ ಉದ್ಯಮಿಗಳಿಂದ, ರಾಜಕಾರಣಿಗಳಿಂದ, ಜಾಗತೀಕರಣದಿಂದ ಶೋತನಾಗುತ್ತಿದ್ದನೆ ಎಂಬುದರ ಬಗ್ಗೆ ಅರಿವು,ಜಾಗೃತಿ ಮೂಡಿಸಲು ಸ್ವತಃ ಕನ್ನಡದ ನಾಟಕವನ್ನು ಬರೆದು,ನಿರ್ದೇಶಿಸಿ ಅಭಿನುಸಿದ್ದಾರೆ. ಯಕ್ಷಗಾನವನ್ನು ಯೂರೋಪಿನವರೆದುರು ಪ್ರದರ್ಶಿಸಿ ರಂಜಿಸಿದ್ದಾರೆ.”ಕನ್ನಡ ಸಾಹಿತ್ಯ ವೈಭವ“ವನ್ನು ನಿರ್ದೇಶಿಸಿ ಕನ್ನಡ ಸಾರಸ್ವತ ಲೋಕದ ದಿಗ್ಗಜರನ್ನೂ,ಅವರ ಕೊಡುಗೆಯನ್ನೂ ವಿದೇಶಿಯರ ಲೋಕಕ್ಕೆ ಪರಿಚಯಿಸಿದ್ದಾರೆ.
ಇದಕ್ಕೆ ಅವರ ಪತ್ನಿ ಸಾಫ್ಟ್ವೇರ್ ಉದ್ಯೋಗಿ ದೀಪಿಕ ಕೂಡ ಬೆನ್ನೆಲುಬಾಗಿ ಸಹಕರಿಸುತ್ತಿದ್ದಾರೆ. ತಮ್ಮ ಗೆಳೆಯರ ಬಳಗವನ್ನು ಜೊತೆಗಿಟ್ಟುಕೊಂಡು ವಿಶ್ವದ ಕನ್ನಡಿಗರನ್ನೆಲ್ಲಾ ಜೊತೆ ಸೇರಿಸುವ ಉತ್ಸಾಹದಲ್ಲಿದ್ದಾರೆ. ಗಡಿನಾಡ ಕನ್ನಡಿಗನ ಭಾಷಾಪ್ರೇಮ ಗಡಿಯಾಚೆಯೂ ವಿಸ್ತಾರಗೊಂಡು ವಿಸ್ತಾರವಾಗಿ ಹರಡಿರುವುದೇ ವಿಶೇಷ. ಹೀಗೇ ಅವರ ಕನ್ನಡಾಭಿಮಾನ ನಿರಂತರವಾಗಲಿ ಎಂಬುದೇ ಕನ್ನಡಾಭಿಮಾನಿಗಳೆಲ್ಲರ ಶುಭಹಾರೈಕೆ.
ಲೇಖನ–ಚಿನ್ಮಯ.ಎಂ.ರಾವ್,ಹೊನಗೋಡು [೧–೪–೨೦೧೧]
*********************