ಅಸಾಮಾನ್ಯರು

ಪ್ರಜಾ”ಪ್ರಭುತ್ವದಲ್ಲಿ” ಎಲ್ಲವೂ ಸಾಧ್ಯ

ಚಿನ್ಮಯ.ಎಂ.ರಾವ್ ಹೊನಗೋಡು

“ಆಗದು ಎಂದು…ಕೈಲಾಗದು ಎಂದು…ಕೈಕಟ್ಟಿಕುಳಿತರೆ..ಆಗದು ಕೆಲಸವು ಮುಂದೆ ಆಗದು ಕೆಲಸವು ಮುಂದೆ “, ಬಂಗಾರದ ಮನುಷ್ಯ ಚಿತ್ರದ ಈ ಹಾಡನ್ನು ಕೇಳದ ಕನ್ನಡಿಗ ಕಿವುಡನೇ ಸರಿ. ಇದೇನು ಚಿತ್ರಗೀತೆಯ ಈ ಸಾಲಿಗೂ ಮೇಲಿನ ಶೀರ್ಷಿಕೆ ಹೊತ್ತ ಈ ಲೇಖನಕ್ಕೂ ಎತ್ತಣ ಸಂಬಂಧವಯ್ಯ? ಎಂದು ನೀವು ಕೇಳಬಹುದು. ಆದರೆ ಸಂಬಂಧವಿದೆ. “ಅಯ್ಯೋ ನಮ್ ದೇಶದ್ ಕಥೆ ಇಷ್ಟೇ ಬಿಡಿ,ಇದು ಉದ್ಧಾರ ಆಗಲ್ಲ ಬಿಡಿ” ಎಂದು ಸದಾ ನಿರಾಶಾವಾದಿಗಳಾಗಿ ನರಳುವ ನೀರಸ ನರೋತ್ತಮರಿಗೂ ಇಲ್ಲಿ ಉತ್ತರವಿದೆ. ನಮ್ಮ ದೇಶದಲ್ಲಿ ಪ್ರೆಶ್ನೆಗಳಾಗಿಯೇ ಉಳಿಯುವ ಸಮಸ್ಯೆಗಳಿಗೆ ಉತ್ತರಕಂಡುಕೊಳ್ಳದಿರುವ ನಾವೇ ಸಮಸ್ಯೆ ಎಂದು ನಮಗನಿಸುತ್ತದೆ.

ಅವರು ಮಾಡಿಲ್ಲ ಇವರು ಮಾಡಿಲ್ಲ ಎಂದು ಮನೆಯಲ್ಲೇ ಬೆಚ್ಚಗೆ ಕುಳಿತುಕೊಂಡು ರಾಜಕಾರಣಿಗಳನ್ನು ದೂಷಿಸುವ ನಾವು ಅವರು ಅದನ್ನು ಮಾಡುವಂತೆ ನಾವು ಮಾಡಿಲ್ಲ ಎಂಬ ನಮ್ಮ ಜಡತ್ವವನ್ನು ನಾವು ಸರಿಪಡಿಸಿಕೊಂಡಿಲ್ಲ. ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ನಾವು ಸರಿಯಾಗಿ ಕೆಲಸ ಮಾಡುವ ಜನಪ್ರತಿನಿಧಿಗಳನ್ನು ಆರಿಸಿಲ್ಲ. ಅಥವಾ ನಂಬಿಕೆ ಇಟ್ಟು ನಾವು ಆರಿಸಿದಾಗಲೂ ಅವರು ಹಾದಿ ತಪ್ಪಿದಾಗ ಹಾದಿಯಲ್ಲೇ ಅವರನ್ನು ನಿಲ್ಲಿಸಿಕೊಂಡು ಆ ಬಗ್ಗೆ ವಿಚಾರಿಸಿಲ್ಲ. ಹಾಗೆ ವಿಚಾರಿಸಬೇಕಾದ ನಾವು ನಮ್ಮ ಸುತ್ತಲಿನ ಸಮಸ್ಯೆಗಳನ್ನು ಅವರ ಬಳಿ ತೆಗೆದುಕೊಂಡು ಹೋಗಿಲ್ಲ. ತೆಗೆದುಕೊಂಡು ಹೋಗಲು ನಮಗೆ ಸಮಯವಿಲ್ಲ. ಸಮಯವಿದ್ದರೂ ನಾವು ಒಬ್ಬರೇ ಹೋಗುವುದಿಲ್ಲ. ಹೋದರೆ ಅದು ನಮ್ಮ ಘನತೆಗೆ ತಕ್ಕುದಲ್ಲ. ಅವರು ಹೋಗಬಹುದಲ್ಲ,ಇವರು ಹೋಗಬಹುದಲ್ಲ, ಪಕ್ಕದ ಮನೆ…ಆಚೆ ಮನೆ..ಈಚೆ ಮನೆ…ಛೇ..ಯಾರಾದರೂ ಹೋಗಬಹುದಲ್ಲ. ಒಗ್ಗೂಡಿ ಹೋಗಬಹುದಲ್ಲ. ಒಗ್ಗೂಡಲು ಆಗುವುದೇ ಇಲ್ಲ! ಅವರನ್ನು ಕಂಡರೆ ಇವರಿಗೆ, ಇವರನ್ನು ಕಂಡರೆ ಅವರಿಗಾಗುವುದಿಲ್ಲ. ಅಂತೂ ಕಡೆಗೂ ಒಂದು ಮನವಿಯನ್ನು ಸಲ್ಲಿಸಲೂ ನಮಗಾಗುವುದಿಲ್ಲ. ಮಗು ಅತ್ತರೆ ತಾನೆ ತಾಯಿ ಹಾಲನ್ನುಣಿಸುವುದು. ನಾವೆಲ್ಲಾ ನಮ್ಮ ನಮ್ಮ ಸ್ವಾರ್ಥಕ್ಕಾಗಿ ಅತ್ತು ಸಾಯುತ್ತೇವೆ ಬಿಟ್ಟರೆ ಸಮಾಜ,ದೇಶಕ್ಕಾಗಿ ಬದುಕುವುದೇ ಇಲ್ಲ. ನಮ್ಮ ಮನೆಗಷ್ಟೇ ಸೀಮಿತವಾಗುವ ನಾವು ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳುವುದೆಂದು? ಸಾಮಾಜಿಕ ಕಳಕಳಿ ಎಂದರೇನು? ತಿಳಿದು ಸ್ವಲ್ಪ ನಮ್ಮ ಸ್ವಾರ್ಥವನ್ನು ಕಳೆದುಕೊಳ್ಳೋಣ ಬನ್ನಿ. ನಮ್ಮ ಸುತ್ತಮುತ್ತಲಿನ ಅಭಿವೃದ್ಧಿಗಾಗಿ ನಾವೇ ಸರ್ಕಾರಕ್ಕೆ ಒತ್ತಡತಂದು ಹತ್ತಾರು ಬಾರಿ ಮತ್ತೆ ಮತ್ತೆ ಕಛೇರಿಯತ್ತ ಸುತ್ತಾಡಿದರೆ ಜನಪ್ರತಿನಿಧಿಗಳಿಗೆ ಕೆಲಸ ಮಾಡದೆ ನಿದ್ರಿಸುವ ಪ್ರಮೇಯವೇ ಬರುವುದಿಲ್ಲ ಎಂಬುದಕ್ಕೆ ಸಾಗರದ ಕ್ರೀಯಾಶೀಲವ್ಯಕ್ತಿಯೊಬ್ಬರ ಉದಾಹರಣೆಯೇ ಸಾಕು.

ಯಾರೀ ವ್ಯಕ್ತಿ? ಈತ ಮಾಡಿದ್ದೇನು?

ನಿವೃತ್ತ ಪ್ರೌಢಶಾಲಾ ಶಿಕ್ಷಕ,ಹವ್ಯಾಸಿ ಬರಹಗಾರ ಜಿ.ಟಿ ಶ್ರೀಧರ ಶರ್ಮ ಎಂಬ ಸಾಗರದ ವಿಜಯನಗರ ಬಡಾವಣೆಯ ಈ ವ್ಯಕ್ತಿಯ ಪಾದರಕ್ಷೆಗಳೇನಾದರು ಬೇಗ ಸವೆದು ಹೋಗಿದ್ದರೆ ಅದಕ್ಕೆ ಕಾರಣ ನಗರಸಭೆಗೆ ಇವರ ಅಲೆದಾಟ. ಅದು ಇವರ ಮನೆಯ ಸಮಸ್ಯೆಗಲ್ಲ. ಮನೆಯಾಚೆಗಿನ ಅಭಿವೃದ್ಧಿಗೆ.

ತರಿಕೆರೆ ತಾಲೂಕು ಅಜ್ಜಂಪುರದಲ್ಲಿ ಮೂರು ದಶಕಗಳ ಕಾಲ ಆದರ್ಶ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ತಮ್ಮ ಮೂಲ ಊರು ಸಾಗರಕ್ಕೆ ಬಂದು ವಿಜಯನಗರದಲ್ಲಿ ಸ್ವಂತ ಮನೆ ಕಟ್ಟಿಸಿರುವ ಶರ್ಮ ಸುಮ್ಮನೆ ಕೂತು ಮಾತಿನ ಪಟಾಕಿ ಹಾರಿಸುವವರಲ್ಲ. ಬದಲಿಗೆ ಮೌನವಾಗಿಯೇ ಒಂದಷ್ಟು ಅರ್ಜಿಗಳನ್ನು ನಗರಸಭೆಗೆ ಹೊತ್ತೊಯ್ದು ಒಂದಷ್ಟು ಯೋಜನೆಗಳನ್ನು ತನ್ನ ಬಡಾವಣೆಗೆ ಎತ್ತಿಕೊಂಡು ಬಂದು ಯಶಸ್ವಿಯಾಗಿದ್ದಾರೆ. ಇನ್ನೂ ಒಂದಷ್ಟು ಕೆಲಸಗಳನ್ನು ತನ್ನ ಬಡಾವಣೆಗಾಗಿ ತಾವೇ ಓಡಾಡಿ ಮಾಡಿಸುತ್ತಿದ್ದಾರೆ. ಇವರೇನು ಜನಪ್ರತಿನಿಧಿಯಲ್ಲ. ಅಥವ ಯಾವ ಪುಡಾರಿಯ ಚೇಲಾ ಕೂಡ ಅಲ್ಲ. ಒಬ್ಬ ಸಾಮಾನ್ಯ ನಾಗರಿಕ.

ಬಡಾವಣೆ-ಬದಲಾವಣೆ

ಇವರ ಮನೆಯ ಮುಂಭಾಗದ ಬೀದಿಯಲ್ಲಿ ಅಂದರೆ ವಿಜಯನಗರದ ಮೂರನೇ ಅಡ್ಡರಸ್ತೆಯಲ್ಲಿ ವಿಪರೀತ ಹರಿಯುವ ನೀರು ೮೦ ಅಡಿ ಮುಖ್ಯರಸ್ತೆಯತ್ತ ಮುನ್ನುಗ್ಗಿ ಹರಿಯುತ್ತಿತ್ತು. ಅಡ್ಡರಸ್ತೆ ಮುಖ್ಯರಸ್ತೆಗೆ ಸೇರುವಲ್ಲಿ ಸಿಮೆಂಟ್ ಪೈಪ್ ಹಾಕುವಂತೆ ಶರ್ಮ ನಗರಸಭೆಗೆ ಮನವಿಪತ್ರಸಲ್ಲಿಸಿ ಸುಮ್ಮನೆ ಕೂರಲಿಲ್ಲ. ಬದಲಿಗೆ ನೂರಾರು ಬಾರಿ ಅಲೆದು ಒತ್ತಾಯಿಸಿ ಪೈಪ್ ಹಾಕಿಸಿದರು. ಈಗ ರಸ್ತೆಯತ್ತ ನೀರು ನುಗ್ಗದೆ ಚರಂಡಿಯಲ್ಲೇ ಹರಿಯುತ್ತಿದೆ. ಇದರಿಂದ ಮುಖ್ಯರಸ್ತೆ ಹಾಳಾಗುವುದೂ ತಪ್ಪಿದೆ.

ಇದೇ ಬಡಾವಣೆಯಲ್ಲಿ ಉದ್ಯಾನವನಕ್ಕೆಂದು ಸ್ಥಳ ಮೀಸಲಾಗಿದ್ದರೂ ಅದು ಅನುಷ್ಠಾನಗೊಂಡಿಲ್ಲ. ೨೦೦೮ರಲ್ಲಿ ಶರ್ಮಾ ಉದ್ಯಾನವನ ನಿರ್ಮಾಣಕ್ಕೆ ಅರ್ಜಿಕೊಟ್ಟು ಮುತುವರ್ಜಿವಹಿಸಿದ್ದರಿಂದ ಈ ವರ್ಷ ಹಣ ಮಂಜೂರಾಗಿ ಕೆಲಸ ಆರಂಭವಾಗಿದೆ.

ಸಾಗರ ಪಟ್ಟಣದಿಂದ ೪ ಕಿಲೋಮೀಟರ್ ದೂರದಲ್ಲಿರುವ ವಿಜಯನಗರಕ್ಕೆ ಸಾಗುವ ಪಾದಚಾರಿಗಳ ಮಾರ್ಗದಲ್ಲಿ ನಿರ್ಜನಪ್ರದೇಶವೊಂದಿದೆ. ಅಲ್ಲಿ ಈ ಹಿಂದೆ ಆಗಬಾರದ್ದು ಆಗಿಯೇ ಹೋಗಿ ಆ ದಾರಿಯಲ್ಲಿ ಆ ಭಾಗದ ಜನರು ಸಂಚರಿಸಲು ಹೆದರುತ್ತಿದ್ದರು. ಕಾಲ ಎಲ್ಲವನ್ನೂ ಮರೆಸುತ್ತದೆ,ಕ್ಷಮಿಸುತ್ತದೆ ಎನ್ನುವುದಕ್ಕೆ ಸಾಗರದ ಈ ದಾರಿಯೂ ಸೇರಿದೆ. ಇಂತಹ ಅತಿಸೂಕ್ಷ್ಮ ಪ್ರದೇಶದಲ್ಲಿ ಈಗ ಬೀದಿದೀಪ ಇದ್ದೂ ಇಲ್ಲದಂತಿದೆ. ಅತ್ಯಂತ ನಾಜೂಕಾದ ಅಷ್ಟೇ ಅಪಾಯಕಾರಿಯಾದ ಈ ಜಾಗದ ಗಂಭೀರತೆಯನ್ನರಿತು ಶರ್ಮಾ ಆಗಾಗ ಹಾಳಾಗದ ಬೀದಿದೀಪಗಳನ್ನು ವ್ಯವಸ್ಥಿತವಾಗಿ ಹಾಕಬೇಕೆಂದು ನಗರಸಭೆಯಲ್ಲಿ ಒತ್ತಾಯಿಸಿ ಹಾಕಿಸಿದ್ದಾರೆ.

ಹಾಗೆಯೇ ಸಾಗರ ನಗರದಲ್ಲಿ ನಗರಸಾರಿಗೆಯ ಅಗತ್ಯವಿದೆಯೆಂದು ನಗರಸಭೆಯಿಂದ ಹಿಡಿದು ಪ್ರಧಾನಮಂತ್ರಿ,ರಾಷ್ಟ್ರಾಧ್ಯಕ್ಷರವರೆಗೂ ಎಲ್ಲಾ ಹಂತದವರೆಗೂ ಮನವಿಯನ್ನು ಸಲ್ಲಿಸಿದ್ದಾರೆ. ಕೆಲವರಿಂದ ಪರಿಶೀಲಿಸಿ ಈಡೇರಿಸುವ ಭರವಸೆಯ ಉತ್ತರ ಕೂಡ ಬಂದಿದೆ.

“ಅರ್ಜಿಕೊಟ್ಟ ಮಾತ್ರಕ್ಕೆ ಇಂದು ಕೆಲಸ ಆಗುವುದಿಲ್ಲ. ಬಯ್ಯೋದ್ರಿಂದನೂ ಆಗೋಲ್ಲ. ಸ್ವತಃ ಕಛೇರಿಗೆ ಅಲೆದಲೆದಲೆದಲೆದು ಅಧಿಕಾರಿಗಳಿಗೆ ಸಮಸ್ಯೆಯ ಮನವರಿಕೆ ಮಾಡಿ ಅನುಷ್ಠಾನಕ್ಕೆ ಒತ್ತಡ ತಂದರೆ ಮಾತ್ರ ಕೆಲಸ ಆಗುತ್ತದೆ ಎಂಬುದು ಶರ್ಮಾ ಅವರ ಸ್ವಾನುಭವ.

ಹಲವಾರು ಮನವಿಗಳನ್ನು ಸಲ್ಲಿಸುತ್ತಾ ಹಲವಾರು ಬಾರಿ ನಗರಸಭೆಗೆ ಅಲೆಯುತ್ತಾ ಹಲವಾರು ಕೆಲಸಗಳನ್ನು ಸಮಾಜಕ್ಕಾಗಿ ಹೀಗೆ ಸದಾ ಸದ್ದಿಲ್ಲದೆ ಮಾಡುತ್ತಲೇ ಇರುತ್ತಾರೆ ಶ್ರೀಧರ ಶರ್ಮ. ನಿವೃತ್ತರಾಗಿದ್ದಾರೆ….ಅವರಿಗೇನೂ ಕೆಲಸವಿಲ್ಲ ಎಂದು ಭಾವಿಸಬೇಡಿ,ಸ್ವಂತ ಸ್ಟೇಷನರಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಬಿಡುವುಮಾಡಿಕೊಂಡು ಇದನ್ನೆಲ್ಲಾ ಮಾಡುತ್ತಾರೆ. ಈ ರೀತಿ ಸದ್ದಿಲ್ಲದೆ ಸಮರ್ಪಣೆಯಾಗುವ ಸಮಾಜಸೇವೆ ನಿಜಕ್ಕೂ ಅನುಸರಣೀಯ. ಹೀಗೆ ಮನೆಮನೆಗಳಲ್ಲಿ ಇಂತವರೊಬ್ಬರು ತಯಾರಾಗಿ ಸಾಮಾಜಿಕ ಸಮಸ್ಯೆಗಳನ್ನು ಅಧಿಕಾರಿಗಳ ಆಳಕ್ಕಿಳಿಸಿದರೆ ಅವರಿಗೆ ಆಕಳಿಸಲಿಕ್ಕೂ ಪುರುಸೊತ್ತಾಗುವುದಿಲ್ಲ ಅಲ್ಲವೇ? ಪ್ರಜೆಗಳೇ ಪ್ರಭುತ್ವ ಸಾಧಿಸಿದರೆ ಮಾತ್ರ ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸಾಧ್ಯ.

ಚಿನ್ಮಯ.ಎಂ.ರಾವ್ ಹೊನಗೋಡು

16-6-2011

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.