-ಫೋಟೋ ಮತ್ತು ಲೇಖನ- ಎನ್.ಡಿ.ಹೆಗಡೆ ಆನಂದಪುರಂ
ಕೃಷಿ ಕಾರ್‍ಯಕೈಗೊಂಡು ವಿವಿಧ ಬೆಳೆ ಬೆಳೆಯಬೇಕೆಂಬ ಇಚ್ಛೆಯುಳ್ಳವರು ಹಲವು ಕಠಿಣ ಪರಿಸ್ಥಿತಿಯಲ್ಲೂ ಕೃಷಿ ನಡೆಸುತ್ತಾರೆ. ಫಲವತ್ತಾದ ಮಣ್ಣಿನ ನೆಲದಲ್ಲಿ ನೀರಾವರಿ ಬಳಸಿ ಕೃಷಿ ಬೆಳೆಯವವರು ಹಲವರಾದರೆ ಇನ್ನು ಕೆಲವರು ಕೃಷಿ ಕಾರ್‍ಯ ನಡೆಸುವುದೇ ಇಲ್ಲ. ನೀರಿನ ಸೌಲಭ್ಯವಿಲ್ಲದ ಖುಷ್ಕಿ ನೆಲದಲ್ಲಿ ತರಕಾರಿ ಬೆಳೆಯುವುದು ಸವಾಲಿನ ಕಾರ್‍ಯ. ಶಿವಮೊಗ್ಗ ಜಿಲ್ಲೆ ಕುಂಸಿ ಸನಿಹದ ಹೊಸಕೆರೆ ಎಂಬ ಗ್ರಾಮದಲ್ಲಿ ಯುವ ರೈತ ಆನಂದ ಜವಾರಿ ತಳಿಯ ದೊಣ್ಣೆ ಮೆಣಸಿನ ಕೃಷಿ ನಡೆಸಿ ಖುಷ್ಕಿ ನೆಲದಲ್ಲಿ ಸಮೃದ್ಧ ಫಸಲು ಪಡೆಯುತ್ತಿದ್ದಾರೆ.
ಈ ಸ್ಥಳದಲ್ಲಿ ಸುಮಾರು ೫ ಎಕರೆ ವಿಸ್ತೀರ್ಣದ ಕೃಷಿ ಭೂಮಿ ಹೊಂದಿರುವ ಇವರು ಕಳೆದ ವರ್ಷ ಕೊಳವೆ ಬಾವಿ ತೆಗೆಸಿ ೨ ಇಂಚು ನೀರು ಪಡೆದಿದ್ದಾರೆ. ಹೊಲದ ಮೂಲೆಯ ಕೊಳವೆ ಬಾವಿಯಿಂದ ಪೈಪ್ ಲೈನ್ ಅಳವಡಿಸಿ ಈ ವರ್ಷ ಸಪ್ಟೆಂಬರ್ ತಿಂಗಳ ಕೊನೆ ವಾರದಲ್ಲಿ ದೊಣ್ಣೆ ಮೆಣಸಿನ ಕೃಷಿ ಆರಂಭಿಸಿ ಈಗ ಫಸಲು ಪಡೆಯುತ್ತಿದ್ದಾರೆ. ಶಿವಮೊಗ್ಗ-ಜೋಗ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಈ ಹೊಲದಲ್ಲಿ ಹೆದ್ದಾರಿ ಸನಿಹವೇ ಮೆಣಸಿನ ಸಸಿ ಬೆಳೆಸಿದ್ದಿ ಈ ಮಾರ್ಗದಲ್ಲಿ ಸಂಚರಿಸುವವರ ಗಮನವನ್ನು ಥಟ್ಟನೆ ಸೆಳೆಯುವಂತಿದೆ.
ಕೃಷಿ ಹೇಗೆ ?
ಒಂದು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಮೆಣಸಿನ ಸಸಿ ಬೆಳೆಸಿದ್ದಾರೆ.೨೦ ಅಡಿ ಉದ್ದ, ೨ ಅಡಿ ಅಗಲ ಮತ್ತು ಒಂದು ಅಡಿ ಎತ್ತರದ ಪಟ್ಟೆ ನಿರ್ಮಿಸಿ ಮೆಣಸಿನ ಸಸಿ ನೆಟ್ಟಿದ್ದಾರೆ. ಇದಕ್ಕೂ ಮೊದಲು ತೇವಾಂಶ ಇರುವ ಸ್ಥಳದಲ್ಲಿ ಸುಮಾರು ಅರ್ಧ ಕಿ.ಗ್ರಾಂ.ಮೆಣಸಿನ ಬೀಜ ಬಿತ್ತಿ ಅಗೆ ಸಸಿ ತಯಾರಿಸಿಕೊಂಡಿದ್ದರು. ಸುಮಾರು ೨೦ ದಿನವಾಗುತ್ತಿದ್ದಂತೆ ಅಗೆ ಸಸಿಗಳು ೩ ಇಂಚು ಎತ್ತರವಾಗುತ್ತಿದ್ದಂತೆ ಈ ಪಟ್ಟೆಗಳಲ್ಲಿ ಮೆಣಸಿನ ಸಸಿ ನಾಟಿ ಮಾಡಿದ್ದರು. ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲಿಗೆ ಒಂದು ಅಡಿ ಅಂತರದಲ್ಲಿ ಮೆಣಸಿನ ಸಸಿ ನೆಟ್ಟಿದ್ದಾರೆ. ಎಲ್ಲಾ ಗಿಡಗಳಿಗೂ ನೀರು ಸಿಗುವಂತೆ ಮೈಕ್ರೋ ಸ್ಪಿಂಕ್ಲರ್ ಅಳವಡಿಸಿದ್ದಾರೆ.
ಒಂದು ಎಕರೆ ವಿಸ್ತೀರ್ಣದಲ್ಲಿ ಸುಮಾರು ೪೦೦೦ ದೊಣ್ಣೆ ಮೆಣಸಿನ ಸಸಿ ನೆಟ್ಟಿರುವ ಇವರು ಗಿಡ ನಾಟಿ ಮಾಡುವಾಗ ಡಿಎಪಿ ಗೊಬ್ಬರ ನೀಡಿದ್ದರು. ನಂತರ ಒಂದುವರೆ ತಿಂಗಳ ಸುಮಾರಿಗೆ ಅಂದರೆ ಹೂವಾಗಿ ಮಿಡಿಯಾಗುತ್ತಿದ್ದಂತೆ ೧೯:೧೯ ಕಾಂಪ್ಲೆಕ್ಸ್ ಗೊಬ್ಬರ ಹಾಕಿ ಬೆಳೆಸಿದ್ದಾರೆ. ಈಗ ಮೆಣಸಿನ ಫಸಲು ಸಮೃದ್ಧವಾಗಿದ್ದು ವಾರಕ್ಕೊಮ್ಮೆ ಫಸಲು ಕೀಳುತ್ತಿದ್ದಾರೆ.
ಲಾಭ ಹೇಗೆ ?
ಒಂದು ಗಿಡದಿಂದ ೨ ವಾರಕ್ಕೆ ಸುಮಾರು ಒಂದು ಕಿ.ಗ್ರಾಂ.ಫಸಲು ದೊರೆಯುತ್ತಿದೆ. ಪ್ರತಿವಾರ ಸುಮಾರು ೬ ಕ್ವಿಂಟಾಲ್ ಫಸಲು ದೊರೆಯುತ್ತಿದೆ. ಶಿವಮೊಗ್ಗದ ತರಕಾರಿ ಮಾರುಕಟ್ಟೆಗೆ ಕ್ವಿಂಟಾಲ್ ಒಂದಕ್ಕೆ ಸರಾಸರಿ ರೂ.೨೦೦೦ ದಂತೆ ಮಾರಾಟ ಮಾಡಿ ಹಣ ಎಣಿಸುತ್ತಿದ್ದಾರೆ. ಇವರು ಬೆಳೆದ ಈ ಮೆಣಸು ಜವಾರಿ ತಳಿಯದಾಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿಂದ ಮರಾಟವಾಗುತ್ತಿದೆ. ಪ್ರತಿ ವಾರ ಸರಾಸರಿ ರೂ.೧೦ ರಿಂದ ೧೨ ಸಾವಿರ ಆದಾಯದಂತೆ ತಿಂಗಳಿಗೆ ಸರಾಸರಿ ರೂ.೪೦ ಸಾವಿರ ಆದಾಯಗಳಿಸುತ್ತಿದ್ದಾರೆ.ಒಮ್ಮೆ ಫಸಲು ಆರಂಭವಾದರೆ ಸುಮಾರು ೫ ರಿಂದ ೬ ತಿಂಗಳ ವರೆಗೆ ಅಂದರೆ ಮುಂದಿನ ಜೂನ್ ತಿಂಗಳ ವರೆಗೆ ಫಸಲು ಸಿಗುತ್ತದೆ ಎಂಬುದು ಆನಂದ ಅವರ ಅನುಭವದ ಮಾತು.
ಒಂದು ಎಕರೆ ವಿಸ್ತೀರ್ಣದ ಈ ಕೃಷಿಗೆ ಭೂಮಿ ಹದಗೊಳಿಸಿ ಪಟ್ಟೆ ನಿರ್ಮಿಸಿದ್ದು, ಬೀಜ ಖರೀದಿ, ಅಗೆ ತಯಾರಿ,ನಾಟಿಮಾಡುವಿಕೆ, ಗೊಬ್ಬರ, ನೀರಾವರಿಗೆ ಸ್ಪಿಂಕ್ಲರ್ ಅಳವಡಿಕೆ ಇತ್ಯಾದಿ ಕಾರ್‍ಯಗಳಿಗೆ ಇವರಿಗೆ ಸುಮಾರು ರೂ.೨೫೦೦೦ ವೆಚ್ಚ ತಗುಲಿದ್ದು ಈಗ ಪ್ರತಿ ವಾರ ಸರಾಸರಿ ರೂ.೧೨ ಸಾವಿರ ಆದಾಯ ದೊರೆಯುತ್ತಿದೆ. ಪ್ರತಿ ೧೫ ದಿನಕ್ಕೆ ಅಂದರೆ ಎರಡು ವಾರಕ್ಕೆ ಒಮ್ಮೆ ಪ್ರತಿ ಗಿಡಕ್ಕೆ ಸರಾಸರಿ ಸುಮಾರು ೫ ಗ್ರಾಂ. ನಷ್ಟು ಸುಫಲಾ ಮತ್ತು ಕಾಂಪ್ಲೆಕ್ಸ್ ಗೊಬ್ಬರ ನೀಡುತ್ತಿದ್ದು ಎರಡು ದಿನಕ್ಕೊಮ್ಮೆ ಸ್ಪಿಂಕ್ಲರ್ ಮೂಲಕ ನೀರು ಹಾಯಿಸುತ್ತಾರೆ.ಗೊಬ್ಬರ, ಬೇಸಾಯದ ಕೂಲಿ, ಮೆಣಸು ಕೀಳುವುದು, ಮಾರುಕಟ್ಟೆಗೆ ಸಾಗಣೆ ಎಲ್ಲ ಲೆಕ್ಕ ಹಾಕಿದರೂ ವಾರಕ್ಕೆ ರೂ.೧೫೦೦ ವೆಚ್ಚ ತಗುಲುತ್ತಿದ್ದು ಸರಾಸರಿ ಒಂದು ವಾರಕ್ಕೆ ರೂ.೧೦ ಸಾವಿರ ಹಣ ನಿವ್ಹಳ ಲಾಭವಾಗುತ್ತದೆ ಎಂದು ಅವರು ವಿವರಿಸುತ್ತಾರೆ.
ಮೆಣಸಿನ ಕೃಷಿಯಲ್ಲಿ ಯಾವ ಮಹಾ ಲಾಭ ದೊರೆತೀತು ಎಂದು ಗೇಲಿ ಮಾಡಿದ್ದ ಸುತ್ತಮುತ್ತಲಿನ ರೈತರು ಈಗ ಆಶ್ಚರ್ಯದಿಂದ ವೀಕ್ಷಿಸುವಂತೆ ಇವರು ಕೃಷಿ ನಡೆಸಿದ್ದಾರೆ. ಮಾಹಿತಿಗಾಗಿ ಅವರ ಮೊಬೈಲ್ ಸಂಖ್ಯೆ ೯೦೦೮೭೯೦೧೭೭ ನ್ನು ಸಂಪರ್ಕಿಸಬಹುದಾಗಿದೆ.
-ಫೋಟೋ ಮತ್ತು ಲೇಖನ- ಎನ್.ಡಿ.ಹೆಗಡೆ ಆನಂದಪುರಂ