-ಚಿನ್ಮಯ ಎಂ.ರಾವ್ ಹೊನಗೋಡು
ಇನ್ನು ಬಚ್ಚಿಡಲಾರೆ ಎದೆಯ ಗೂಡೊಳಗೆ
ನೂರಾರು ಕನಸುಗಳು
ಹೃದಯ ವೈಶಾಲ್ಯವಿದೆಯಾ ಹೇಳು
ಅವ್ಯಕ್ತ ಭಾವಗಳು ವ್ಯರ್ಥವಾಗದೆ ವ್ಯಕ್ತವಾಗಲಿ
ಕಣಿವೆ ಬತ್ತಲಾರದ ಸರೋವರವಾಗಲಿ
ನಗ್ನಸತ್ಯ ನಗ್ನವಾಗಲಿ
ನೋವೂ ಸವಿ ನೋವಾಗಲಿ…
ಇನ್ನು ಬಚ್ಚಿಡಲಾರೆ ಅಭ್ಯಾಸಬಲದಿಂದ
ನೋವೂ ಅಭ್ಯಾಸವಾಗಿಹೋಗಿದೆ
ನೋವಲ್ಲೂ ನೂರಾರು ನಲಿವುಗಳು
ನಲಿವಲ್ಲೂ ನೂರಾರು ನೋವುಗಳು
ಕೇಳಬೇಕೆನಿಸಿದೆಯಾ ಹೇಳು
ಹೇಳಬೇಕೆನಿಸಿದರೆ ಹೇಳು
ಅಗೋಚರಗಳೂ ಗೋಚರವಾಗಲಿ
ಕಣಿವೆಯಲಿ ಕಣಿ ಕೇಳದೆ ಸೋನೆ ಸುರಿಯಲಿ
ಬಗೆ ಬಗೆಯಾಗಿ ಹರಿಯುತ್ತಿರಲಿರಲಿ
ಬಗೆಹರಿಯುತ್ತಲಿರಲಿ
ನಗ್ನಸತ್ಯ ನಗ್ನವಾಗಲಿ
ನೋವೂ ಸವಿ ನೋವಾಗಲಿ…
ಇನ್ನು ಮುಚ್ಚಿಡಲಾರೆ ಆದಷ್ಟು ಬೇಗ
ಆದಷ್ಟು ಮುನ್ನುಡಿಯ ಬರೆಯಬೇಕಿದೆ
ಮೈಮರೆತು ಹೋದಾವು ನೂರಾರು ಹೊಳವುಗಳು
ಪುಟಗಳು ಖಾಲಿ ಇವೆಯಾ ಸ್ಫುಟವಾಗಿ ಹೇಳು
ಅಧರಗಳನ್ನು ಅದುರಿಸಿದರೆ
ಹೇಗೆ ತಾನೆ ಗೊತ್ತಾಗಬೇಕು ಹೇಳು
ಲೇಖನಿಯ ಕಡ್ಡಿಯಲ್ಲಿ ಶಾಯಿ ಪೂರ್ಣವಾಗಿ ತುಂಬಿದೆ
ಅಕ್ಷರಗಳನ್ನು ಚೆಲ್ಲುತ್ತಾ ಹೋದರೆ
ಮುನ್ನುಡಿಯಲ್ಲ.. ಮಹಾಕೃತಿಯೊಂದು
ಉದ್ಭವಿಸಿವುದೇನೋ ಅನಿಸುತ್ತಿದೆ
ಕಣಿವೆ ಅಷ್ಟು ಸ್ಫೂರ್ತಿದಾಯಕವಾಗಿದೆ
ಮುನ್ನುಡಿಯಿಂದ ಹಿಡಿದು ಎಲ್ಲಾ ಪುಟಗಳನ್ನೂ
ತಿರುವಿ ಶಾಯಿಯ ಹನಿಗಳನ್ನು
ಇನ್ನಿಲ್ಲದಂತೆ ಲೇಪಿಸಿ
ಬೆನ್ನುಡಿಗೂ ಅಕ್ಷರಗಳನ್ನು ಸವರಬಹುದು
ಆನಂತರವೂ ದಾಹ ನೀಗದೆ ಹಸಿವಾಗಬಹುದು
ನಗ್ನಸತ್ಯ ಈಗಲೇ ನಗ್ನವಾಗಲಿ
ನೋವೂ ಈಗಲೇ ಸವಿನೋವಾಗಲಿ
ಇನ್ನು ಹಸಿವಿನಿಂದ ಬಾಡಲಾರೆ
ಮತ್ತೆ ಮತ್ತೆ ಬೇಡಲಾರೆ
ಬೇಡವೆಂದೆನಿಸಿದರೆ ಹೇಳು
ಬೇಡಬೇಕೆನಿಸಿದರೂ ಬೇಡು
ತಡಮಾಡದೆ ಕಾಡುವಷ್ಟು ತಡಕಾಡು
ತನುವಿನ ಮಾತು ಕೇಳಿಕೊಂಡು
ಮನ ಹೇಳುತ್ತಿದೆ “ಕಣಿವೆಯಲ್ಲಿ
ಪೂರ್ಣ ಹುಡುಕಾಡು”
ಪಾರಿಜಾತದ ಕಂಪು ಮುತ್ತಿಕೊಳ್ಳಬಹುದು
ಹಾರಿ ಬರುವ ಹಕ್ಕಿಯ ಇಂಪು ಮೆತ್ತಿಕೊಳ್ಳಬಹುದು
ಜಾರಿ ನೀರೆಡೆಗೆ ಸಾಗುವ ಬಿದ್ದ ಹೂವೊಂದು
ಸುತ್ತಿಕೊಳ್ಳಬಹುದು
ಕೋರಿ ಕರಗದೆ ಉಳಿದ ಹಿಮವೊಂದು
ಕಂಬನಿ ಮಿಡಿಯುತ್ತಾ ಒತ್ತಿಕೊಳ್ಳಬಹುದು
ಸೋರಿ ಹೋಗುವ ಮುತ್ತಿನ ಹನಿಗಳನ್ನು
ಮಣಿಯದಂತಹ ಮಣಿಮಾಲೆ ಮಾಡಿ
ಮನ ತಣಿಯುವವರೆಗೂ ಬಿತ್ತಿಕೊಳ್ಳಬಹುದು
ಅಲ್ಲಿಯವರೆಗೂ….
ನಗ್ನಸತ್ಯ ನಗ್ನವಾಗುತ್ತಿರಲಿ
ನೋವೂ ಸವಿನೋವಾಗುತ್ತಿರಲಿ
ಜೀವನಾಪುರದ ಕಣಿವೆಯಲಿ…
-ಚಿನ್ಮಯ ಎಂ.ರಾವ್ ಹೊನಗೋಡು
January 29, 2012
**************