Written by : Dinakar Rao
ಪಕ್ಷಾಂತರಿ, ಸ್ವಾರ್ಥಿ, ಕುಲದ್ರೋಹಿ, ಸಂತಾನದ್ರೋಹಿ ಎಂದೆಲ್ಲ ಟೀಕೆ/ವಿವಾದಕ್ಕೊಳಗಾದ ವಿಭೀಷಣ, ರಾಕ್ಷಸ ಕುಲದವನಾದರೂ ಹುಟ್ಟಿನಿಂದ ಕೊನೆಯವರೆಗೆ ಅವನ ಕಣ ಕಣದಲ್ಲಿ ಹರಿದಿದ್ದು ಧರ್ಮ ಮಾತ್ರ. ಅಹಂಕಾರಿಯಾದ ರಾವಣ ತಪ್ಪುಗಳನ್ನು ಮಾಡುತ್ತಾ ಹೋದಾಗ ಅವನನ್ನು ನೇರವಾಗಿ ವಿರೋಧಿಸಿ, ಪ್ರತಿ ತಪ್ಪು ಹೆಜ್ಜೆಗಳನ್ನು ಖಂಡಿಸಿ, ಬುದ್ಧಿ ಹೇಳಿದ್ದು ತಮ್ಮ ವಿಭೀಷಣ ಮಾತ್ರ. ಮೋಸದಿಂದ ಸೀತೆಯನ್ನು ಅಪಹರಿಸಿದಾಗ, ಪತಿವ್ರತೆಯಾದ ಸೀತೆಯನ್ನು ಅಶೋಕವನದಲ್ಲಿ ಬಂಧಿಸಿದಾಗ ಇಂತಹ ನೀಚ ಕೆಲಸಗಳನ್ನು ಬಿಡು ಎಂದು ಪ್ರಾರ್ಥಿಸಿದ. ರಾಮನು ಸೇನೆಯೊಂದಿಗೆ ಬರುತ್ತಿದ್ದಾನೆಂಬ ವಿಷಯ ತಿಳಿದಾಗ ‘ಯುದ್ಧವನ್ನು ಬಿಡು. ರಾಮನಿಗೆ ಶರಣಾಗು. ಸೀತೆಯನ್ನು ಗೌರವ ಪೂರ್ವಕವಾಗಿ ಕಳಿಸಿಕೊಡು. ನಿನ್ನ ಅಧರ್ಮದಿಂದ ಲಂಕೆಗೂ, ಇಲ್ಲಿಯ ಪ್ರಜೆಗಳಿಗೂ ನೋವು ಕೊಡದಿರು’ ಎಂದು ಪರಿಪರಿಯಾಗಿ ಕೇಳಿಕೊಂಡ.
ರಾವಣನ ಕೆಟ್ಟ ಕೆಲಸಗಳಿಂದಾಗಿ ಮೊದಲಿಂದಲೂ ವಿಭೀಷಣನ ಮನಸ್ಸು ಅವನಿಂದ ದೂರವೇ ಇತ್ತು. ರಾಮನನ್ನು ನೋಡದೆಯೇ ಅವನಿಗೆ ಹತ್ತಿರವಾಗತೊಡಗಿದ್ದ, ಪ್ರೀತಿಸತೊಡಗಿದ್ದ. ಅಧರ್ಮಿಯಾದ ರಾವಣನನ್ನು ಧಿಕ್ಕರಿಸಿ ರಾಮನ ಬಳಿ ಧಾವಿಸಿದ. ತನ್ನವರಿಂದ ದೂರಾಗಿ, ತನ್ನನ್ನೇ ನಂಬಿ ಧರ್ಮದ ಉಳಿವಿಗಾಗಿ ಬಂದ ವಿಭೀಷಣನನ್ನು ಕೊಂಚವೂ ಶಂಕಿಸದೇ ರಾಮ ಅಪ್ಪಿಕೊಂಡ. ಅವನು ನಿಜವಾಗಿ ಬಯಸಿದ್ದು ಲಂಕೆಯ ಹಾಗೂ ತನ್ನವರ ಒಳಿತು. ಮೊದಲಿಗೆ ರಾವಣನಿಗೆ ಧರ್ಮಮಾರ್ಗವನ್ನು ಬೋಧಿಸಿ ಪ್ರಯತ್ನಿಸಿದ. ಕೊನೆಗೆ ಅವನ ನಾಶ ಮಾತ್ರ ಪರಿಹಾರವೆಂದು ಅರಿತ. ಅಧರ್ಮದ ನಾಶ ಕೇವಲ ರಾಮನಿಂದ ಎಂಬುದನ್ನು ತಿಳಿದ. ಅಂತ್ಯದಲ್ಲಿ ದುಷ್ಟ ರಾವಣನ ಸಂಹಾರವಾಗಿ ಅವನು ಬಯಸಿದ ಹಾಗೆ ಧರ್ಮಕ್ಕೆ ಜಯವಾಯಿತು. ಸಾವಿನೊಂದಿಗೆ ವೈರವೂ ಕಳೆಯಿತು. ನಂತರ ಆತ್ಮದಲ್ಲಿ ರಾಮನನ್ನು ತುಂಬಿಕೊಂಡು ಸಿಂಹಾಸನದಲ್ಲಿ ಕುಳಿತ ವಿಭೀಷಣ ಲಂಕೆಯನ್ನು ರಾಮರಾಜ್ಯವನ್ನಾಗಿಸಿದ.
ರಾಮಾಯಣ ಧಾರಾವಾಹಿಯಲ್ಲಿ ವಿಭೀಷಣ ಪಾತ್ರ ನಿರ್ವಹಿಸಿದವರು ಮುಖೇಶ್ ರಾವಲ್. ಇವರು ಮೂಲತಃ ರಂಗಭೂಮಿ ನಟರಾದರೂ, ನಂತರ ಹಿಂದಿ ಮತ್ತು ಗುಜರಾತಿ ಚಿತ್ರನಟರಾಗಿ ಗುರುತಿಸಿಕೊಂಡಿದ್ದರು. ಜಿದ್, ಲಹೂ ಕೆ ದೊ ರಂಗ್, ಸಟ್ಟಾ, ಔಜಾರ್, ಕಸಕ್ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಹಲವಾರು ಟಿವಿ ಸೀರಿಯಲ್ ಗಳಲ್ಲೂ ನಟಿಸಿದ್ದರು. ಕೆಲ ಸಮಯ ಬ್ಯಾಂಕ್ ಆಫ್ ಬರೋಡಾದ ಉದ್ಯೋಗಿಯಾಗಿದ್ದು, ಒಂದು ಟ್ರೈನ್ ಅಪಘಾತದಲ್ಲಿ ತನ್ನ 18ನೇ ವರ್ಷದ ಮಗ ಸಾವನ್ನಪ್ಪಿದಾಗ ಖಿನ್ನತೆಗೆ ಒಳಗಾಗಿ ಅದರಿಂದ ಪೂರ್ಣವಾಗಿ ಚೇತರಿಸಿಕೊಳ್ಳದೇ ರಾಜೀನಾಮೆ ನೀಡಿದ್ದರು. ಒಂದು ದಿನ ಮಹಾರಾಷ್ಟ್ರದ ಕಂಡಿವಲಿ ರೈಲ್ವೇ ಸ್ಟೇಷನ್ ಟ್ರಾಕ್ ನಲ್ಲಿ ಮುಖೇಶ್ ಅವರ ಮೃತದೇಹ ಸಿಕ್ಕಿತ್ತು.. ಅದು ಆತ್ಮಹತ್ಯೆಯೋ, ಅಪಘಾತವೋ ಎಂದು ದೃಢಪಟ್ಟಿರಲಿಲ್ಲ. 2016ರಲ್ಲಿ ತನ್ನ 65ನೇ ವಯಸ್ಸಿನಲ್ಲಿ ಪತ್ನಿ ಸರಳಾ ಹಾಗೂ ಇಬ್ಬರು ಪುತ್ರಿಯರಾದ ವಿಪ್ರ ಮತ್ತು ಆರ್ಯರನ್ನು ಅಗಲಿದ್ದರು.