ಶ್ರಾವಣಮಾಸ ಬಂದಾಗ ಮಾವು ಹೇಗೆ ಚಿಗುರುತ್ತದೆಯೋ ಅದೇ ರೀತಿ ಶ್ರಾವಣಮಾಸದಿಂದ ಹಬ್ಬಗಳೂ ಪ್ರಾರಂಭವಾಗುತ್ತದೆ. ನಮ್ಮ ದೇಶದಲ್ಲಿ ಆಚರಿಸುವ ಎಲ್ಲ ಹಬ್ಬಗಳಿಗೂ ತಮ್ಮದೇ ಆದ ಮಹತ್ವ, ವೈಶಿಷ್ಟ್ಯ, ಕಾರಣವಿದೆ. ಆಶಾಢಮಾಸದ ಅಮಾವಾಸ್ಯೆಯಂದು ಅಂದರೆ ಶ್ರಾವಣಮಾಸದ ಹಿಂದಿನ ದಿನ ಆಚರಿಸುವ ಹಬ್ಬವೇ ಭೀಮನ ಅಮಾವಾಸ್ಯೆ ಹಬ್ಬ.ಈ ದಿನದಂದು ಹೆಂಡತಿಯು ತನ್ನ ಗಂಡನನ್ನು ಭಕ್ತಿಯಿಂದ ಪೂಜಿಸಿ”ನನ್ನ ಗಂಡನಿಗೆ ಭೀಮನಂತೆ ಶಕ್ತಿ ಕರುಣಿಸು” ಎಂದು ದೇವರಲ್ಲಿ ಪ್ರಾರ್ಥಿಸಬೇಕು. ಇದುವೇ ಭೀಮನ ಅಮವಾಸ್ಯೆಯ ಒಂದು ವೈಶಿಷ್ಟ್ಯ.
ಪೌರಾಣಿಕ ಹಿನ್ನೆಲೆ :
ಒಮ್ಮೆ ಅರ್ಜುನನಿಗೂ ಭೀಮನಿಗೂ ವಾಗ್ವಾದ ನಡೆಯಿತು. ಆಗ ಅರ್ಜುನ “ನಾನು ಕೃಷ್ಣನಿಗೆ ಪ್ರಿಯ ಬಾವ, ಪಶುಪತಿಯಿಂದ ಪಾಶುಪತಾಸ್ತ್ರವನ್ನು ಪಡೆದಿದ್ದೇನೆ” ಎಂದು ಜಂಬದ ಮಾತುಗಳನ್ನಾಡುತ್ತಾನೆ. ಆಗ ಭೀಮನಿಗೆ ಕೋಪವುಂಟಾಗಿ “ನಾನೂ ಶಕ್ತಿಶಾಲಿ, ಮೂರುವರೆ ಘಳಿಗೆಯಲ್ಲಿ(1ಘಂಟೆ=2.5ಘಳಿಗೆ) ಪರಶಿವನನ್ನು ಧರೆ(ಭೂಮಿ)ಗೆ ಬರುವ ಹಾಗೆ ಮಾಡುತ್ತೇನೆ ಇದು ನನ್ನ ಶಪಥ” ಎಂದು ಪ್ರತಿಯಾಗಿ ನುಡಿಯುತ್ತಾನೆ. ಮರುಕ್ಷಣವೇ ತನ್ನ ಗದೆಯನ್ನು ಆಕಾಶಕ್ಕೆ ಎಸೆದು “ಶಂಭೋ” ಎಂದು ಅದೇ ಸ್ಥಳದಲ್ಲಿಅಂಗಾತ ಮಲಗಿಬಿಡುತ್ತಾನೆ. ಸ್ವಲ್ಪ ಸಮಯದಲ್ಲಿ ಪರಶಿವ ಪ್ರತ್ಯಕ್ಷನಾಗಿ “ನೀನು ನನ್ನ ಒಂದು ಅಂಶ, ನೀನು ಭೂಮಿಯಲ್ಲೇ ಅತ್ಯಂತ ಶಕ್ತಿಶಾಲಿ. ಭೂಮಿಯಲ್ಲಿ ಈ ದಿನವನ್ನು ನಿನ್ನ ಹೆಸರಿನಲ್ಲೇ ಕರೆಯುವಂತಾಗಲಿ” ಎಂದು ಅನುಗ್ರಹಿಸುತ್ತಾನೆ. ಆಗ ದ್ರೌಪದಿಯು ಭೀಮನನ್ನು ಭಕ್ತಿಯಿಂದ ಪೂಜಿಸುತ್ತಾಳೆ. ಆ ದಿನ ಆಶಾಢ ಮಾಸದ ಅಮಾವಾಸ್ಯೆ ಆಗಿತ್ತಂತೆ. ಆದ್ದರಿಂದಲೇ ಭೂಮಿಯಲ್ಲಿ ಆಶಾಢ ಅಮಾವಾಸ್ಯೆಯಂದು ಗಂಡನನ್ನು ಹೆಂಡತಿಯು ಆರಾಧಿಸುತ್ತಾಳೆ.
ಇದೇ ರೀತಿ ಇನ್ನೊಂದು ಕಥೆ ಇದೆ. ಒಮ್ಮೆ ಒಬ್ಬ ರಾಜನ ಮಗನು ಮರಣ ಹೊಂದುತ್ತಾನೆ.ಆಗ ಒಬ್ಬ ಜ್ಯೋತಿಷಿ “ನಿನ್ನ ಮಗನ ಹೆಣವನ್ನು ಬ್ರಾಹ್ಮಣ ಹುಡುಗಿಯ ಜೊತೆ ವಿವಾಹ ಮಾಡಿದರೆ ಅವನು ಬದುಕಬಹುದು” ಎಂದು ಹೇಳುತ್ತಾನೆ. ಆಗ ರಾಜನು ತನ್ನ ಮಗನನ್ನು ಉಳಿಸಲು “ತನ್ನ ಮಗನ ಹೆಣಕ್ಕೆ ಮಗಳನ್ನು ಕೊಟ್ಟು ಮದುವೆ ಮಾಡಿದವರಿಗೆ ಅರ್ಧ ರಾಜ್ಯವನ್ನು ಕೊಡುತ್ತೇನೆ”ಎಂದು ಡಂಗುರ ಸಾರುತ್ತಾನೆ. ಆಗ ಆ ಊರಿನ ಒಬ್ಬ ಬಡ ಬ್ರಾಹ್ಮಣ ರಾಜ್ಯದ ಆಸೆಗೆ ತನ್ನ 5 ಜನ ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ರಾಜಕುಮಾರನ ಹೆಣಕ್ಕೆ ಮದುವೆ ಮಾಡಿ ಕೊಡುತ್ತಾನೆ. ಅವಳನ್ನು ಮಾತ್ರ ಸ್ಮಶಾನದಲ್ಲಿ ಬಿಟ್ಟು ಬರುತ್ತಾರೆ.ಅಂದು ಆಶಾಢ ಮಾಸದ ಅಮಾವಾಸ್ಯೆ. ಆ ರಾತ್ರಿಯಲ್ಲಿ ಬ್ರಾಹ್ಮಣನ ಮಗಳು ಮರಳಿನಲ್ಲಿ ಶಿವಲಿಂಗ ಮಾಡಿ ಎರಡು ದೀಪ ಹಚ್ಚಿ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುತ್ತಾಳೆ. ಅವಳ ಆ ಭಕ್ತಿಯನ್ನು ಮೆಚ್ಚಿ ಪರಶಿವನು ಪ್ರತ್ಯಕ್ಷನಾಗಿ ಅವಳ ಗಂಡನಿಗೆ ಜೀವದಾನ ನೀಡುತ್ತಾನೆ. ಇದೂ ಕೂಡ ಈ ಹಬ್ಬದ ಆಚರಣೆಗೆ ಒಂದು ಹಿನ್ನೆಲೆ.
ಈ ದಿನದಂದು ಜ್ಯೋತಿರ್ಭೀಮೇಶ್ವರ ವ್ರತವನ್ನು ಮಾಡಬೇಕು. ಈ ವ್ರತಕ್ಕೆ ಪತಿಸಂಜೀವಿನಿ ವ್ರತ ಎಂತಲೂ ಕರೆಯುತ್ತಾರೆ. ಗಂಡನ ದೀರ್ಘಾಯುಷ್ಯಕ್ಕಾಗಿ ಈ ವ್ರತವನ್ನು ಮಾಡುತ್ತಾರೆ. ಸತತ ಒಂಬತ್ತು ವರ್ಷ ಈ ವ್ರತವನ್ನು ಮಾಡಿದರೆ ವಿಶೇಷ ಫಲವಿದೆ. ಈ ವ್ರತವನ್ನು ಮದುವೆಯಾಗದ ಹೆಣ್ಣುಮಕ್ಕಳೂ ಮಾಡಬಹುದು.ಅವರು ಮಾಡಿದರೆ ಭೀಮನಂತ ಗಂಡ ಸಿಗುತ್ತಾನೆ. 9 ದಾರಗಳಿಗೆ ಪೂಜೆ ಮಾಡಿ ಗಂಡನ ಕೈಗೆ ಕಟ್ಟಬೇಕು. ಈ ಪೂಜೆಗೆ ಯಾವುದೇ ಜಾತಿ ಧರ್ಮವಿಲ್ಲ.
ಈ ಹಬ್ಬಕ್ಕೆ ಒಂದೊಂದು ಸ್ಥಳದಲ್ಲಿ ಒಂದೊಂದು ಹೆಸರಿನಲ್ಲಿ ಕರೆಯುತ್ತಾರೆ. ಕೆಲವು ಕಡೆ ಭೀಮನ ಅಮಾವಾಸ್ಯೆ, ಕೆಲವು ಕಡೆ ಅಳಿಯನ ಅಮಾವಾಸ್ಯೆ, ಕೊಡೆ ಅಮಾವಾಸ್ಯೆ. “ಶಾಸ್ತ್ರಾತ್ ರೂಢಿ: ಬಲೀಯಸಿ” (ಶಾಸ್ತ್ರಗಳಿಗಿಂತ ರೂಢಿ0iÉುೀ ಬಲ) ಎನ್ನುವಂತೆ ಕೆಲವು ಕಡೆ ಅಳಿಯನನ್ನು ಮನೆಗೆ ಕರೆದು ಕೊಡೆ(ಛತ್ರಿ)ಯನ್ನು ಕೊಡುವ ರೂಢಿ ಇದೆ. ಆದ್ದರಿಂದಲೇ ಕೊಡೆ ಅಮಾವಾಸ್ಯೆ ಅಥವಾ ಅಳಿಯನ ಅಮಾವಾಸ್ಯೆ ಎನ್ನುತ್ತಾರೆ.
-VIDWAN VINAY BHAT
BIDRAKAAN
UTTARA KANNADA