ಭಕ್ತ ವತ್ಸಲ ಪರಶಿವ ತನ್ನ ಭಕ್ತರನ್ನು ಕಾಪಾಡಲು ಹಲವು ರೂಪಗಳಲ್ಲಿ ನೆಲೆಯೂರಿದ್ದಾನೆ. ಶಿವ,ಶಂಕರ,ಮಹೇಶ,ಇತ್ಯಾದಿ ಹೆಸರುಗಳಿಂದ ನೆಲೆಯಾದಂತೆ ಶಿವಮೊಗ್ಗ ಜಿಲ್ಲೆಯ ಆಯನೂರು ಗ್ರಾಮದಲ್ಲಿ ಶ್ರೀಸಿದ್ದೇಶ್ವರನಾಗಿ ನೆಲೆಯಾಗಿ ಭಕ್ತರಿಗೆ ಸರ್ವಸಿದ್ಧಿಗಳನ್ನು ದಪಾಲಿಸುತ್ತಾ ನೆಲೆಯಾಗಿದ್ದಾನೆ. ಇದು ಉದ್ಭವ ಸಿದ್ದೇಶ್ವರ ಲಿಂಗವಾಗಿದ್ದು ಕ್ಷೇತ್ರ ಅತಿ ಪುರಾತನವಾಗಿದೆ. ಶಿವಮೊಗ್ಗದಲ್ಲಿ ಪ್ರಸಿದ್ಧವಾದ ಪಂಚಶಿವ ಕ್ಷೇತ್ರಗಳಲ್ಲಿ ಒಂದಾದ ಮಲೆಶಂಕರದಿಂದ ಇದು ಸಮೀಪದಲ್ಲಿದೆ.
ಮಲೆಶಂಕರದ ಸಹ್ಯಾದ್ರಿ ಶ್ರೇಣಿಯಾದ ಸಮಖರಗುಡ್ಡದ ಸಾಲು ಈ ದೂಗುಲದಿಂದ ಸ್ವಲ್ಪ ದೂರದಲ್ಲಿ ಆರಂಭವಾಗುವುದು ಗಮನಾರ್ಹವಾಗಿದೆ. ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲ ಇತಿಹಾಸದಲ್ಲಿ ಹಲವು ಸಲ ಜೀರ್ಣೋದ್ಧಾರಗೊಂಡ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ. ಶಿವಮೊಗ್ಗದಿಂದ ಜೋಗ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಆಯನೂರಿನ ಮುಖ್ಯ ಬಸ್ ನಿಲ್ದಾಣದಿಂದ ಅನತಿ ದೂರದಲ್ಲಿದೆ ಈ ದೇಗುಲ. ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದ ಈ ದೇಗುಲವನ್ನು ಕಳೆದ 2 ವರ್ಷಗಳ ಹಿಂದೆ ಸಂಪೂರ್ಣವಾಗಿ ಪುನ:ನಿರ್ಮಾಣ ಮಾಡಿ ಪ್ರತಿಷ್ಠಾಪನಾ ಮಹೋತ್ಸವ ನಡೆಸಲಾಗಿದೆ.
ಕ್ರಿ.ಶ.ಸುಮಾರು 986 ನೇ ಇಸವಿಯಲ್ಲಿ ಅಂದಿನ ನಾತ ಪಂಥದ ಯೋಗಿಗಳಾದ ಶ್ರೀಮಚ್ಚೇಂದ್ರನಾಥರು ಇಲ್ಲಿ ಘೋರ ತಪಸ್ಸು ಮಾಡಿದ್ದರಂತೆ. ಇಲ್ಲಿನ ಕೋಹಳ್ಳಿ ಗ್ರಾಮದ ಜನರು ಭೀಕರ ರೋಗಗಳಾದ ಕುಷ್ಠ ,ತೊನ್ನು, ಇತ್ಯಾದಿ ರೋಗಗಳಿಗೆ ತುತ್ತಾಗಿದ್ದರಂತೆ. ಈ ಸಂದರ್ಭದಲ್ಲಿ ಶ್ರೀಮಚ್ಚೇಂದ್ರ ನಾಥರು ಇಲ್ಲಿಗೆ ಆಗಮಿಸಿ ದೀರ್ಘಕಾಲ ಧ್ಯಾನಸ್ಥರಾಗಿ ತಪಸ್ಸು ನಡೆಸಿದರಂತೆ. ಇದೇ ಸ್ಥಳದಲ್ಲಿ ಉದ್ಭವ ಸಿದ್ದೇಶ್ವರ ದೇವರು ಕಂಡು ಬಂದು ಶಾಂತಿಗಾಗಿ ಪ್ರಾರ್ಥಿಸಿದರಂತೆ.
ನಂತರ ಜನರು ರೋಗಗಳಿಂದ ಮುಕ್ತರಾಗಿ ಶಾಂತಿ ಉಂಟಾಯಿತಂತೆ. ಈ ಸ್ಥಳದಲ್ಲಿ ಸಿದ್ದೇಶ್ವರನಿಗೆ ನಿರಂತರ ಪೂಜೆ ನಡೆಸಲು ಅಪ್ಪಣೆ ಮಾಡಿ ಆ ಯೋಗಿಗಳು ಮೂಮದಿನ ಪ್ರಯಾಣ ಕೈಗೊಂಡರಂತೆ. ಅಲ್ಲಿಂದ ಮುಂದೆ ಇಲ್ಲಿ ಚಿಕ್ಕ ಗುಡಿ ಮತ್ತು ಪೂಜೆ ಪುನಸ್ಕಾರಗಳು ನಿರಂತರವಾಗಿ ನಡೆದು ಬಂದಿದೆ. ಕ್ರಿ.ಶ.1426 ರಲ್ಲಿ ಮೊದಲಬಾರಿಗೆ, 1714 ರಲ್ಲಿ ಎರಡನೇ ಬಾರಿಗೆ ಮತ್ತು 1892 ರಲ್ಲಿ ಮೂರನೇ ಬಾರಿಗೆ ಈ ದೇಗುಲದ ಜೀರ್ಣೋದ್ಧಾರ ಮತ್ತು ಪುನಃಪ್ರತಿಷ್ಠೆಗಳು ನಡೆದ ಬಗ್ಗೆ ದಾಖಲೆ ದೊರೆತಿದೆ. ದೇವಾಲಯದ ಆವರಣದಲ್ಲಿ ನಂದಿ, ನಾಗ, ನವಗ್ರಹಗಳು, ದೂಮ್ರಾವತಿ, ಕ್ಷೇತ್ರಪಾಲ, ಕಾಲಭೈರವ,ಗಣಪತಿ ತ್ರಿಪುರಸುಂದರಿ ದೇವಿಯ ಗುಡಿಗಳನ್ನು ನಿರ್ಮಿಸಲಾಗಿದೆ.
ದೇವರಿಗೆ ನಿತ್ಯ ಪೂಜೆ, ಮಹಾ ನೈವೇದ್ಯ ನಡೆಸಲಾಗುತ್ತಿದೆ. ಯುಗಾದಿ, ದೀಪಾವಳಿ, ಶರನ್ನವರಾತ್ರಿ, ಶ್ರಾವಣ ಮಾಸ ಪೂಜೆ, ಕಾರ್ತಿಕ ಮಾಸದ ಪೂಜೆ ಗಳನ್ನು ವಿಶೇಷವಾಗಿ ನಡೆಸಲಾಗುತ್ತಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ದೇವಸ್ಥಾನದ ಪ್ರತಿಷ್ಟಾಪನಾ ಮಹೋತ್ಸವದ ವಾರ್ಷಿಕೋತ್ಸವ ನಡೆಸಲಾಗುತ್ತಿದೆ. ಚರ್ಮರೋಗ ನಿವಾರಣೆ, ಸಂತಾನ ಪ್ರಾಪ್ತಿ, ಕುಟುಂಬದಲ್ಲಿ ಶಾಂತಿ, ವಿದ್ಯೆ, ಉದ್ಯೋಗ ಪ್ರಾಪ್ತಿ, ವಿವಾಹ ಸಂಬಂಧ, ಕೃಷಿ ಬೆಳೆಗಳ ಪ್ರಾಪ್ತಿಗಾಗಿ ಭಕ್ತರು ಬಗೆ ಬಗೆಯ ಹರಕೆ ಹೊತ್ತು ನಿತ್ಯವೂ ದೇವರ ದರ್ಶನಕ್ಕೆ ಆಗಮಿಸುತ್ತಾರೆ.
ಫೋಟೋ-ಫೋಟೋ ಮತ್ತು ಲೇಖನ- ಎನ್.ಡಿ,ಹೆಗಡೆ ಆನಂದಪುರಂ