ಪುಣ್ಯಕ್ಷೇತ್ರ

ಹನ್ನೆರಡುನೂರು ವರ್ಷಗಳ ಭವ್ಯವಾದ ಐತಿಹಾಸಿಕ ಪರಂಪರೆಯುಳ್ಳ ಉತ್ತರಕನ್ನಡದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ

PARAMPARA : Shreemajjagadguru Shankaracharya Shree Sonda Swarnavalli Maha Samsthanam

ಕರ್ಣಾಟಕದ ಧರ್ಮ ಸಂಸ್ಥಾನಗಳಲ್ಲಿ ಉತ್ತರಕನ್ನಡದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಮಹತ್ತರವಾದ ಸ್ಥಾನವಿದೆ. ಹನ್ನೆರಡುನೂರು ವರ್ಷಗಳ ಭವ್ಯವಾದ ಐತಿಹಾಸಿಕ ಪರಂಪರೆಯುಳ್ಳ ಈ ಮಹಾಗುರುಪೀಠವು ಭಾರತೀಯ ಸಂಸ್ಕೃತಿಯ ಉನ್ನತ ಆದರ್ಶಗಳನ್ನು ಪ್ರಸಾರ ಮಾಡುತ್ತ ಬಂದಿದೆ. ಭಾರತದ ಅದ್ವೈತ ಪೀಠಗಳಲ್ಲಿ ಸ್ವರ್ಣವಲ್ಲೀ ಮಹಾಸಂಸ್ಥಾನ ಪ್ರಮುಖವಾದದ್ದು. ಶ್ರೀ ಆದಿಶಂಕರರ ವೇದಾಂತಸಾರವನ್ನು, ಉಪದೇಶಾಮೃತವನ್ನು ಭಾವ ಗಂಗೆಯಾಗಿ ಹರಿಸುತ್ತ ಬಂದ ಈ ಗುರುಪೀಠ ಸಮನ್ವಯ ಸಂಸ್ಕೃತಿಯನ್ನು ಸಾರುತ್ತಲಿದೆ. ಭಾವೈಕ್ಯತೆಯನ್ನು ಸನಾತನ ಪರಂಪರೆಯ ಆದರ್ಶಗಳನ್ನೂ ಜನತೆಯ ಜೀವನದಲ್ಲಿ ಅಳವಡಿಸುವುದರಲ್ಲಿ ಅದು ಅದ್ವಿತೀಯ ಕಾರ್ಯಮಾಡಿದೆ.

ಸುಂದರವಾದ ನಿಸರ್ಗದ ಮಡಿಲಲ್ಲಿ ನಿತ್ಯಹರಿದ್ವರ್ಣಗಳಿಂದ ಕೂಡಿದ ವನಸಿರಿಯ ಮಡಿಲಲ್ಲಿ ಶಾಲ್ಮಲಾ ನದಿಯ ತೀರದಲ್ಲಿರುವ ಸ್ವರ್ಣವಲ್ಲೀ ಮಹಾ ಸಂಸ್ಥಾನಕ್ಕೆ ಪ್ರಾಚೀನಪರಂಪರೆಯಿದೆ. ಸಾಂಸ್ಕೃತಿಕವಾದ ಇತಿಹಾಸವಿದೆ. ಅದ್ವೈತ ಸಿದ್ಧಾಂತದ ಪ್ರವರ್ತಕರೂ ಭಾರತೀಯ ವೇದಾಂತದ ವಿಭೂತಿಪುರುಷರೂ ಆದ ಶ್ರೀಆದಿಶಂಕರಾಚಾರ್ಯಯರ ಅನುಜ್ಞೆಯಂತೆ ಶ್ರೀ ಭಾಸ್ಕರೇಂದ್ರ ಸರಸ್ವತಿಯವರ ಸಂಮುಖದಲ್ಲಿ ಗುಣನಿಧಿ ಎಂಬ ವಟುವು ಸಂನ್ಯಾಸ ದೀಕ್ಷೆ ಸ್ವೀಕರಿಸಿ ಶ್ರೀ ವಿಶ್ವವಂದ್ಯ ಸರಸ್ವತೀ ಎಂಬ ಅಭಿಧಾನ ಹೊಂದಿ ಸ್ವರ್ಣವಲ್ಲೀ ಗುರುಪೀಠಪರಂಪರೆಯ ಆದ್ಯಯತಿಗಳಾದರು. ಶ್ರೀ ವಿಶ್ವವಂದ್ಯ ಸರಸ್ವತಿಯವರಿಂದ ಈಗಿನ ಗಂಗಾಧರೇಂದ್ರ ಸರಸ್ವತೀ ಯತಿವರ್ಯರವರೆಗೆ ಐವತ್ನಾಲ್ಕು ಯತಿವರೇಣ್ಯರು ಈ ಮಹಾಗುರುಪೀಠದ ಪರಂಪರೆಯಲ್ಲಿ ಧರ್ಮಜ್ಯೋತಿಯನ್ನು ಬೆಳಗಿರುವುದು ಮಹತ್ತ್ವಪೂರ್ಣವಾದ ಅಂಶವಾಗಿದೆ. ಸ್ವರ್ಣವಲ್ಲೀ ಗುರುಪೀಠ ಪರಂಪರೆಯ ನಲವತ್ತೊಂದನೆ ಯತಿಗಳಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಬರೆದ “ಜ್ಞಾನದೀಪಿಕಾ” ಸಂಸ್ಕೃತಕೃತಿಯು ಮಠದ ಗುರುಪರಂಪರೆಯನ್ನು ವಿಸ್ತಾರವಾಗಿ ತಿಳಿಸುತ್ತದೆ.

ಪ್ರಕಾಂಡ ಪಂಡಿತರಾಗಿದ್ದ ಬೃಹತ್ ಗಂಗಾಧರೇಂದ್ರರು “ಪ್ರಣವಕಲ್ಪಿ” “ಸಂಸ್ಕೃತ ಚಂದ್ರೋದಯ” “ಶುಕಾಷೈಕಂ ವ್ಯಾಖ್ಯಾ” “ಸ್ವರಾಜ್ಯಸಿದ್ಧಿ” ಇವೇ ಮೊದಲಾದ ಸಂಸ್ಕೃತ ಕೃತಿಗಳನ್ನೇ ರಚಿಸಿದ್ದಾರೆ. ಅವರ “ಸ್ವರಾಜ್ಯಸಿದ್ಧಿ” ಗ್ರಂಥವನ್ನು ಕರ್ಣಾಟಕ ವಿಶ್ವವಿದ್ಯಾಲಯದಿಂದ ಬಿ .ಆರ್ ಮೋಡಕ್ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಶ್ರೀ ಗಂಗಾಧರೇಂದ್ರರು ರಚಿಸಿದ “ಜ್ಞಾನದೀಪಿಕೆ” ಸ್ವರ್ಣವಲ್ಲೀ ಪರಂಪರೆಯ ಅಧ್ಯಯನಕ್ಕೆ ಪ್ರಮುಖ ಆಕರ ಗ್ರಂಥವಾಗಿದೆ. ಸ್ವರ್ಣವಲ್ಲೀ ಮಹಾಸಂಸ್ಥಾನದ ಇತಿಹಾಸಕ್ಕೆ ಸಂಬಧಿಸಿದಂತೆ ಅಪೂರ್ವವಾದ ಆಕರ ಸಾಮಗ್ರಿಗಳಿವೆ. ಶಾಸನಗಳು,ತಾಮ್ರಶಾಸನಗಳು,೩೦ ಸಾವಿರಕ್ಕೂ ಅಧಿಕ ಐತಿಹಾಸಿಕ ಲೇಖನಗಳು,ಕಡತಗಳು,ಕೈಷಿಯತ್ತುಗಳು ಸ್ವರ್ಣವಲ್ಲೀ ಚರಿತ್ರೆಯನ್ನು ಬಿತ್ತರಿಸುತ್ತವೆ. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಐತಿಹಾಸಿಕ ದಾಖಲೆಗಳು ಎಂಬ ಬೃಹತ್ಸಂಪುಟವನ್ನು ಪ್ರಸಿದ್ಧ ಇತಿಹಾಸ ವಿದ್ವಾಂಸರಾದ ಡಾ. ಎ ಕೆ ಶಾಸ್ತ್ರಿಯವರು ಸಿದ್ಧಪಡಿಸಿಕೊಟ್ಟಿದ್ದು ಅದನ್ನೇ ಕರ್ಣಾಟಕರಾಜ್ಯ ಪತ್ರಾಗಾರ ಇಲಾಖೆ ಪ್ರಕಟಿಸಿದೆ.

ಸ್ವರ್ಣವಲ್ಲೀ ಮಹಾಸಂಸ್ಥಾನವು ಕಾಶಿ, ಉಜ್ಜಯಿನಿ, ಗೋಕರ್ಣ,ಕಡತೋಕೆ ಸಹಸ್ರಲಿಂಗ ಹೊನ್ನಹಳ್ಳಿ (ಸ್ವರ್ಣವಲ್ಲೀ) ಹೀಗೆ ಅದು ನಡೆದು ಬಂದ ಸ್ಥಳಗಳು ಅದರ ಐತಿಹಾಸಿಕ ಪರಂಪರೆಯ ದ್ಯೋತಕವಾಗಿದೆ.ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಪ್ರಾಚೀನ ಕಾಲದಿಂದಲೂ ರಾಜಮನ್ನಣೆ ಗೌರವಾದರಗಳು ಪ್ರಾಪ್ತವಾಗುತ್ತ ಬಂದಿವೆ. ಉಜ್ಜಯಿನಿಯ ದೊರೆ ವಿಕ್ರಮಾರ್ಕನು ವಿಶ್ವವಂದ್ಯ ಸರಸ್ವತಿಗಳ ಅನುಚರರಾದ ನಾರಾಯಣಣೇಂದ್ರ ಸರಸ್ವತಿಗಳಿಗೆ ವಿಕ್ರಮಾರ್ಕನು ಶಕ ಕ್ರಿ.96( ಕ್ರಿ. ಶ 905 ) ಕ್ರೋಧನಸಂವತ್ಸರದ ಚೈತ್ರಶುಕ್ಲ ಅಷ್ಟಮಿಯಂದು ಕಿರೀಟ, ಶ್ವೇತಚ್ಛತ್ರ, ಮನೆ, ಮಕರತೋರಣ, ವ್ಯಾಖ್ಯಾನಸಿಂಹಾಸನ ಮೊದಲಾದ ವಸ್ತು ವಡವೆಗಳನ್ನೂ ಬಿರುದಾವಳಿಗಳನ್ನೂ ನೀಡಿ ತಾಮ್ರಶಾಸನಗಳನ್ನು ಅರ್ಪಿಸಿ ಗೌರವಿಸಿದನು. ಪ್ರಥಮಗುರುಗಳಾದ ವಿಶ್ವವಂದ್ಯರನ್ನು ಹೊರತುಪಡಿಸಿ ಮುಂದಿನ ಹದಿನೇಳು ಗುರುಗಳು ವಿಕ್ರಮಾರ್ಕನಿಂದ ನಿರ್ಮಿಸಲ್ಪಟ್ಟು ಕಾಳೀಕಾ ದೇವಾಲಯದ ಸಮೀಪದಲ್ಲಿಯ ಮಠದಲ್ಲಿದ್ದರು.

ಭಾರತದ ಪುಣ್ಯಕ್ಷೇತ್ರವಾದ ಗೋಕರ್ಣದ ಬ್ರಾಹ್ಮಣವೃಂದದ ಅಪೇಕ್ಷೆಯಂತೆ ಮಠವು ಉಜ್ಜಯಿನಿಯಿಂದ ಗೋಕರ್ಣಕ್ಕೆ ಸ್ಥಳಾಂತರಿಸಲ್ಪಟ್ಟಿತು.ಹತ್ತೊಂಬತ್ತರಿಂದ ಇಪ್ಪತ್ತೈದರವರೆಗಿನ ಸ್ವಾಮಿಗಳು ಗೋಕರ್ಣ ಕ್ಷೇತ್ರದ ಮಠದಲ್ಲಿದ್ದರು. ಇಪ್ಪತ್ತಾರರಿಂದ ಇಪ್ಪತ್ತೆಂಟನೆಯ ಸ್ವಾಮಿಗಳು ಚಂದಾವರದ ಚಂದ್ರಸೇನನಿಂದ ನಿರ್ಮಿತವಾದ ಕಡತೋಕೆಯ ಮಠದಲ್ಲಿದ್ದರು.ಸ್ವರ್ಣವಲ್ಲೀ ಮಹಾಸಂಸ್ಥಾನ ದೇದೀಪ್ಯಮಾನವಾಗಿ ಬೆಳಗಿದುದು ಸ್ವಾದಿ ಅರಸರ ಮನೆತನದ ಕಾಲದಲ್ಲಿ ಎಂಬುದು ಈಗ ಜನಜನಿತವಾಗಿದೆ.ವಿಜಯನಗರ ಸಾಮ್ರಾಜ್ಯದ ಪ್ರಭುತ್ವದಲ್ಲಿದ್ದ ಸ್ವಾದಿ ಅರಸು ಮನೆತನ ಎರಡು ಶತಮಾನಕ್ಕೂ ಹೆಚ್ಚುಕಾಲ ರಾಜ್ಯಭಾರ ಮಾಡಿರುವುದು ಕಂಡುಬರುತ್ತದೆ.

ಸುಧಾಪುರದ ಅರಸರು ಮಾಡಿದ ಪ್ರಾರ್ಥನೆಯಂತೆ ಶಾಲ್ಮಲೀತೀರದ ಸಹಸ್ರಲಿಂಗ ಪುಣ್ಯಸ್ಥಳಕ್ಕೆ ಇಪ್ಪತ್ತೊಂಬತ್ತನೆಯ ಯತಿಗಳಾದ ವಿಶ್ವವಂದ್ಯರು ಕಡತೋಕೆಯಿಂದ ಸಹಸ್ರಲಿಂಗಕ್ಕೆ ಪರಿವಾರ ಸಮೇತ ಬಂದು ವ್ಯಾಖ್ಯಾನಸಿಂಹಾಸನವನ್ನೇರಿ ಆಶೀರ್ವದಿಸಿದರು.ಸ್ವಾದಿ ಅರಸನಾದ ಇಮ್ಮಡಿ ಅರಸಪ್ಪನಾಯಕ ( ಕ್ರಿ.ಶ.1555-1602) ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಗ್ರಾಮಗಳನ್ನು ದತ್ತುಬಿಟ್ಟು ಆಚಂದ್ರಾರ್ಕ ಧರ್ಮ ಕಾರ್ಯವನ್ನು ನಡೆಸಿಕೊಂಡು ಬರುವಂತೆ ಮಾಡಿದುದು ಈ ಗುರುಪೀಠದ ಪರಂಪರೆಯ ಉತ್ಕರ್ಷಕ್ಕೆ ಕಾರಣವಾಯಿತು. ಸ್ವಾದಿ ಅರಸರು ವೀರಶೈವ ಧರ್ಮಾನುಯಾಯಿಗಳಾಗಿದ್ದರೂ ಅದ್ವೈತ, ದ್ವೈತ ,ಜೈನ ಮೊದಲಾದ ಮಠಗಳ ಏಳಿಗೆಯನ್ನು ಬಯಸುವವರು.ಧರ್ಮಸಮನ್ವಯವು ಅವರ ಆಡಳಿತದ ವೈಶಿಷ್ಟ್ಯವಾಗಿತ್ತು. ಇಮ್ಮಡಿ ಅರಸಪ್ಪ ನಾಯಕ ಕ್ರಿ.ಶ. 1957ರಲ್ಲಿ ಬರೆಯಿಸಿದ ಸ್ವರ್ಣವ್ವಲ್ಲೀ ಮಠದ ಶಾಸನವು ಮಠದ ಚರಿತ್ರೆಯ ದೃಷ್ಟಿಯಿಂದ ಮಹತ್ತ್ವಪೂರ್ಣವಾದುದು.ಸ್ವರ್ಣವಲ್ಲೀ ಮಠದ ಇಪ್ಪತ್ತೊಂಬತ್ತನೆಯ ಯತಿಗಳಿಂದ ಮೂವತ್ತಮೂರನೆಯ ಯತಿಗಳವರೆಗೆ ಸಹಸ್ರ ಲಿಂಗದಲ್ಲಿ ಮಠವು ಪ್ರಧಾನ ಕೇಂದ್ರವಾಗಿ ಬೆಳೆಯಿತು.

ಇಮ್ಮಡಿ ಅರಸಪ್ಪ ನಾಯಕನು ಸ್ವರ್ಣವಲ್ಲೀಮಠದ ಯತಿಗಳ ಅಶೀರ್ವಾದದಿಂದ ಪುತ್ರಸಂತಾನ ಭಾಗ್ಯವನ್ನು ಪಡೆದನೆಂದೂ ಅವನ ಕಾಲದಲ್ಲೇ ಸಹಸ್ರಲೀಂಗದಿಂದ ಈಗಿನ ಸ್ಥಳದಲ್ಲಿ ಸ್ವರ್ಣವಲ್ಲೀ ಮಹಾಸಂಸ್ಥಾನ ಬರುವಂತೆ ಕಾಡು ಕಡಿಸಿ ಲಕ್ಷ್ಮೀನೃಸಿಂಹ, ಕಾಶೀ ವಿಶ್ವೇಶ್ವರ ದೇವಾಲಯಗಳನ್ನು ಕಟ್ಟಿಸಿದ ಸಂಗತಿಯು ಈ ಕೆಳಗಿನ ಶಾಸನದಿಂದ (ಕ್ರಿ. ಶ.1555)ತಿಳಿದುಬರುತ್ತದೆ.ಶ್ರೀಮಾನ್ ಆಳ್ವ ಮಹಾಪ್ರಭು ಸದ್ಧರ್ಮ ಸಿಂಹಾಸನಾಧೀಶ್ವರರಾದ ಶ್ರೀಅರಸಪ್ಪನಾಯಕರವರು …. ವಂಶಾಭಿವೃದ್ಧಿಯಾಗಲೆಂದು ನಮ್ಮ ವಂಶಸ್ಥರಿಂದ ಶಾಲ್ಮಲೀ ತೀರದಲ್ಲೂ ನಿರ್ಮಾಣವಾಗಿದ್ದ ಸಹಸ್ರಲಿಂಗ ಮಠದಲ್ಲೂ ಯೋಗಾನುಷ್ಠಾನದಿಂದಲೂ ಶ್ರೀನರಸಿಂಹದೇವರನ್ನೂ ಚಂದ್ರಮೌಳೇಶ್ವರದೇವರನ್ನೂ ಆರಾಧಿಸುತ್ತಲಿರುವಾಗ್ಗೆ ಸಹಸ್ರಲಿಂಗ ಮಠಕ್ಕೆ ಎರಡು ಮೂರು ಬಾರಿ ದಸ್ಸೂಪದ್ರವದಿಂದ ತಪೋಯೋಗಾನುಷ್ಠಾನಕ್ಕೆ ವಿಘ್ನವಿಲ್ಲದೆ ಸರಾಗದಿಂದ ನಡೆಯಬೇಕೆಂದು ಚಿತ್ತಕ್ಕೆ ಗೋಚರವಾದ ಕಾರಣ ಗೋಸೂರು ಅಡವಿ ಎಂಬ ಕಾನನ್ನು ಕಡಿಸಿ ಮಠವನ್ನು ಕಟ್ಟಿಸಿ ತನ್ಮಧ್ಯದಲ್ಲಿ ಶ್ರೀನರಸಿಂಹ ದೇವರಿಗೆ ಶ್ರೀ ಕಾಶೀವಿಶ್ವೇಶ್ವರ ದೇವರಿಗೆ ಶ್ರೀ ಶಂಕರಾಚಾರ್ಯರಿಗೆ ಹೀಗೆ ಶಿವಾಲಯವಾದ ದೇವಾಲಯವನ್ನು ನಿರ್ಮಿಸಿ ಈ ಮಠಕ್ಕೆ ಸ್ವರ್ಣವಲ್ಲೀ ನಾಮಧೇಯವನ್ನಿಟ್ಟು ಪೂಜೆ ವಿನಿಯೋಗ ನಿತ್ಯದಲ್ಲೂ ನಡೇಯಬೇಕೆಂದು ಸೋದಾ ಗ್ರಾಮಕ್ಕೆ ಹೊನ್ನವಳ್ಳೀ ಗ್ರಾಮವೆಂದು ಹೆಸರಿಸಿ ನಿರ್ಮಿಸಿ ಈ ಗ್ರಾಮವನ್ನು ನಾವೇ ಕಟ್ಟಿಸಿದ ಶ್ರೀಸ್ವರ್ಣವಲ್ಲೀಎಂಬ ಮಠವನ್ನೂ ಕೂಡ ನಮ್ಮ ವಂಶಸ್ಥರಿಗೆಲ್ಲ ಶಿವ ಸಾಯುಜ್ಯ ಮೋಕ್ಷಪದವು ಸ್ಥಿರವಾಗಬೇಕೆಂದು ಶ್ರೀಪಾದಂಗಳಿಗೆ ಸಹಿರಣ್ಯೋದಕ ಪೂರ್ವಕವಾಗಿ ಒಪ್ಪಿಸಿಕೊಟ್ಟು ಇದ್ದೇನೆ.

ಇಮ್ಮಡಿ ಅರಸಪ್ಪ ನಾಯಕ ಲಕ್ಷ್ಮೀನರಸಿಂಹ ದೇವಾಲಯ ಕಟ್ಟಿಸಿದ್ದನ್ನು ದೇವಾಲಯದ ಗೋಡೆಯಲ್ಲಿರುವ ತಿಗಳಾರಿ ಲಿಪಿಯಲ್ಲಿರುವ ಸಂಸ್ಕೃತ ಅಪೂರ್ಣ ಶಿಲಾಶಾಸನವು ತಿಳಿಸುತ್ತದೆ.ಇದರಲ್ಲಿ ಯೋಗಾನರಸಿಂಹ ಹಾಗೂ ನಮಸ್ಕರಿಸುತ್ತಿರುವ ಅರಸಪ್ಪ ನಾಯಕ ಶಿಲ್ಪವಿರುವುದನ್ನು ನಾವು ಕಾಣುತ್ತೇವೆ. ಸ್ವಾದಿ ಅರಸು ಮನೆತನಕ್ಕೆ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀರಕ್ಷೆ ಇರುವುದರಿಂದಲೇ ಅದು ತನ್ನ ಸಾಮ್ರಾಜ್ಯವನ್ನು ನಡೇಸಲು ಸಾಧ್ಯವಾಯಿತೆಂಬುದು ವಿದಿತವಾಗುತ್ತದೆ. ಸ್ವಾದಿ ಅರಸರು ಸ್ವರ್ಣವಲ್ಲೀ ಮಠದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಗಳಿಗೆ,ಯಜ್ಞಯಾಗಾದಿಗಳಿಗೆ ವಿಶೇಷ ಸಹಾಯ ಮಾಡುತ್ತಿದ್ದರೆಂಬುದು ಶಾಸನಗಳಲ್ಲಿ ವರ್ಣಿತವಾಗಿದೆ. ಸ್ವಾದಿ ಅರಸು ಮನೆತನದ ಸವಾಯಿ ರಾಮಚಂದ್ರನ (ಕ್ರಿ.ಶ.1665-82) ಕಾಲದಲ್ಲಿ ಕೆತ್ತಲಾದ ಸ್ವರ್ಣವಲ್ಲೀ ಮಠದ ಲಕ್ಷ್ಮೀನರಸಿಂಹ ದೇವಾಲಯದ ಬಲಪಕ್ಕಕ್ಕಿರುವ ಶಾಸನದಲ್ಲಿ “ವಿಶ್ವೇಶ್ವರೋ ಜಯತಿ ನರಸಿಂಹೋ ಜಯತಿ”ಎಂಬ ಆರಂಭದ ಸಾಲುಗಳು ಸ್ವರ್ಣವಲ್ಲೀ ಸಂಸ್ಥಾನದ ಆದರ್ಶವಾದ ಹರಿಹರ ಸಮನ್ವಯದ ಆದರ್ಶವನ್ನು ಸಾರುತ್ತವೆ. ಲಕ್ಷ್ಮೀನರಸಿಂಹ ಹಾಗೂ ಕಾಶೀ ವಿಶ್ವೇಶ್ವರ ಇವೆರಡೂ ದೇವಾಲಯಗಳು ಸ್ವರ್ಣವಲ್ಲೀ ಮಠದಲ್ಲಿ ಪ್ರತಿಷ್ಠಿತಗೊಂಡಿದ್ದು ಕರ್ಣಾಟಕ ಸಂಸ್ಕೃತಿಯ ಬಹುಮುಖ್ಯ ಆದರ್ಶವಾದ ಹರಿಹರ ಏಕೋಭಾವನೆಯ ಹಾಗೂ ಸಮನ್ವಯ ಸಿದ್ಧಾಂತದ ಆದರ್ಶವನ್ನು ಎತ್ತಿ ಹಿಡಿಯುತ್ತದೆ. ಅದ್ವೈತ ತತ್ತ್ವಸಿದ್ಧಾಂತದ ಕೇಂದ್ರಸಂಸ್ಥಾನದ ಸ್ವರ್ಣವಲ್ಲೀ ಮಠದಲ್ಲಿ ಹರಿಹರ ಸಮನ್ವಯವನ್ನು ಕಾಣುವುದಲ್ಲದೇ ಶಕ್ತಿದೇವತೆಯಾದ ರಾಜರಾಜೇಶ್ವರಿಯ ಉಪಾಸನೆಯ ಕೇಂದ್ರವನ್ನೂ ನಾವು ಕಾಣುತ್ತೇವೆ. ಹರಿಹರ ಸಮನ್ವಯ ಭಾವನೆ ಹವ್ಯಕ ಸಂಸ್ಕೃತಿಯ ಉದಾತ್ತತೆಯ ಪ್ರತೀಕವಾಗಿದೆ. ಸ್ವರ್ಣವಲ್ಲೀ ಮಠದಲ್ಲಿರುವ ಕಾಶೀವಿಶ್ವೇಶ್ವರ ಮತ್ತು ಲಕ್ಷ್ಮೀನರಸಿಂಹ ದೇವಾಲಯಗಳು ಪ್ರಾಚೀನ ಶಿಲ್ಪದ ದೃಷ್ಟಿಯಿಂದಲೂ ಮಹತ್ತ್ವ ಪಡೆಯುತ್ತದೆ.

ಸ್ವರ್ಣವಲ್ಲೀ ಮಹಾಸಂಸ್ಥಾನದ ಗುರು ಪರಂಪರೆಯಿಂದ ಪ್ರಭಾವಿತರಾದ ರಾಜವಂಶಗಳು ಅದಕ್ಕೆ ಭಕ್ತಿಶ್ರದ್ಧೆಗಳನ್ನು ನಿರಂತರವಾಗಿ ಸಲ್ಲಿಸುತ್ತ ಬಂದಿದ್ದಾವೆ.ಉಜ್ಜಯಿನಿಯ ವಿಕ್ರಮಾದಿತ್ಯ,ವಿಜಯನಗರದ ಅರಸರು, ಚಂದಾವರದ ಚಂದ್ರಸೇನ,ಸುಧಾಪುರದ ನರಸಿಂಹ ಭೂಪಾಲ ಸೋದೆಯ ಇಮ್ಮಡಿ ಅರಸಪ್ಪ ನಾಯಕ, ರಘುನಾಥ, ಮಧುಲಿಂಗ,ಮತ್ತು ಸದಾಶಿವ ನಾಯಕರು ಕೆಳದಿಯ ವೆಂಕಟಪ್ಪ ಮತ್ತು ಬಸಪ್ಪ ನಾಯಕರು ಭೂದಾನ ಸ್ವರ್ಣದಾನ ಮಾಡಿ ಸ್ವರ್ಣವಲ್ಲೀ ಮಠದ ಕೃಪಾಶೀರ್ವಾದ ಪಡೆದದ್ದು ಗಮನಿಸುವ ಅಂಶವಾಗಿದೆ.ಟಿಪ್ಪೂ ಬ್ರಿಟೀಶರೂ ಮಠಕ್ಕೆ ಗೌರವ ಸೂಚಿಸಿದ ಉಲ್ಲೇಖವಿದೆ. ಸ್ವರ್ಣವಲ್ಲೀ ಮಹಾಸಂಸ್ಥಾನವು ಸಮಸ್ತ ಗೋಕರ್ಣಮಂಡಲಕ್ಕೆ ಗುರುಪೀಠವಾಗುವುದರ ಜೊತೆಗೆ ಘಟ್ಟದ ಮೇಲಿನ 16 ಸೀಮೆ ಮತ್ತು ಘಟ್ಟದ ಕೆಳಗಿನ ಕೆಲ ಪ್ರದೇಶಗಳನ್ನೊಳಗೊಂಡು ಧರ್ಮದೀಪವಾಗಿ ಬೆಳಗುತ್ತಲಿದೆ. ಸ್ವರ್ಣವಲ್ಲೀಮಹಾಸಂಸ್ಥಾನಕ್ಕೆ ಹವ್ಯಕರು ಪ್ರಮುಖ ಶಿಷ್ಯಕೋಟಿಯಾಗಿದ್ದರೂ ರಾಮಕ್ಷತ್ರಿಯರು, ಸರ್ವಧರ್ಮಕ್ಕೆ ಸೇರಿದ ಅಪಾರ ಭಕ್ತಕೋಟಿಯಿದೆ. ವಿವಿಧ ಜನಾಂಗ ಜನಸಮುದಾಯಕ್ಕೆ ಸೇರಿದ ಭಕ್ತರು ಸ್ವರ್ಣವಲ್ಲೀ ಮಠಕ್ಕೆ ನಡೆದುಕೊಳ್ಳುವುದರಿಂದ ಇದು ನಮ್ಮ ಮಠವೆಂಬ ಪ್ರೀತಿಗೆ ಪಾತ್ರವಾಗಿದೆ. ಸ್ವರ್ಣವಲ್ಲೀ ಮಠಕ್ಕೆ ಸರ್ವಮತದ ಜನರು ಬಂದು ತಮ್ಮ ಭಕ್ತಿ ಶ್ರದ್ಧೆಯನ್ನು ತೋರಿಸುತ್ತಾರೆ. ಸರ್ವಧರ್ಮ ಸಮಭಾವವೇ ದೊಡ್ಡ ಆದರ್ಶವಾಗಿ ಇಲ್ಲಿ ಕಾಣುತ್ತದೆ.

Source :  http://swarnavalli.in/

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.