ಹೊಸ ವರ್ಷದ ಆರಂಭದ ದಿನ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ನಾನಿ ಮೂವತ್ತನೇ ಸಿನಿಮಾ ಇಂದು ಅಧೀಕೃತವಾಗಿ ಲಾಂಚ್ ಆಗಿದೆ. ಕೆಲ ದಿನಗಳ ಹಿಂದೆ ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಾನಿಯೊಂದಿಗೆ ಮುಂದಿನ ಸಿನಿಮಾ ಮಾಡೋದಾಗಿ ಮಾಹಿತಿ ಹಂಚಿಕೊಂಡಿತ್ತು. ಆದ್ರೆ ಸಿನಿಮಾ ನಿರ್ದೇಶಕರು, ತಾರಾಬಳಗ, ತಂತ್ರಜ್ಞರು ಯಾವುದರ ಬಗ್ಗೆಯೂ ತಿಳಿಸಿರಲಿಲ್ಲ. ಇದೀಗ ಹೊಸ ವರ್ಷದ ಆರಂಭದ ದಿನ ಚಿತ್ರತಂಡ ವೀಡೀಯೋ ತುಣುಕನ್ನು ಬಿಡುಗಡೆ ಮಾಡುವ ಮೂಲಕ ನಾನಿ ಮೂವತ್ತನೇ ಸಿನಿಮಾವನ್ನು ಅಧೀಕೃತವಾಗಿ ಲಾಂಚ್ ಮಾಡಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.
ನಾನಿ ಮೂವತ್ತನೇ ಸಿನಿಮಾಗೆ ಶೌರ್ಯುವ್ ಆಕ್ಷನ್ ಕಟ್ ಹೇಳುತ್ತಿದ್ದು, ನಿರ್ದೇಶಕನಾಗಿ ಇದು ಇವರ ಮೊದಲ ಸಿನಿಮಾವಾಗಿದೆ. ಎಮೋಶನಲ್ ಫ್ಯಾಮಿಲಿ ಎಂಟಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾದ ವಿಭಿನ್ನ ಕಥಾಹಂದರ ಒಳಗೊಂಡಿದೆ. ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದು, ಚಿತ್ರದ ಟೈಟಲ್ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.
ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಡಿ ಚೆರುಕುರಿ ವೆಂಕಟ ಮೋಹನ್, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ನಾನಿ ಮೂವತ್ತನೇ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಯುವ ಹಾಗೂ ಪ್ರತಿಭಾವಂತ ತಂತ್ರಜ್ಞರು ಈ ಚಿತ್ರದ ಭಾಗವಾಗಲಿದ್ದು, ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್ ಚಿತ್ರಕ್ಕಿರಲಿದ್ದು, ‘ಜೆರ್ಸಿ’, ‘ಶ್ಯಾಮ್ ಸಿಂಗ ರಾಯ್’ ಸಿನಿಮಾ ನಂತರ ನಾನಿ ಜೊತೆ ಇದು ಇವರ ಮೂರನೇ ಸಿನಿಮಾವಾಗಿದೆ. ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ.