ಕನ್ನಡಪುಣ್ಯಕ್ಷೇತ್ರ

ಪಶ್ಚಿಮ ಘಟ್ಟದ ಸುಂದರ ದಟ್ಟಾರಣ್ಯದಲ್ಲಿ ಬಾಳೆಬರೆ ಚಂಡಿಕಾಂಬಾ ದೇಗುಲ

(12-5-2013 ರಿಂದ 14-5-2013ರ ವರೆಗೆ ಜಾತ್ರೋತ್ಸವ)

ಶಿವಮೊಗ್ಗ ಮತ್ತು ದಾವಣಗೆರೆ ,ಹಾವೇರಿ ಜಿಲ್ಲೆಗಳಿಂದ ನೇರವಾಗಿ ಕುಂದಾಪುರ ಮತ್ತು ಉಡುಪಿಗಳನ್ನು ಸಂಪರ್ಕಿಸುವ ನೇರ ಹಾಗೂ ಸನಿಹದ ಮಾರ್ಗವೆಂದರೆ ಹೊಸನಗರದ ಮಾಸ್ತಿಕಟ್ಟೆಯ ಮೂಲಕ ಹಾದು ಹೋಗುವ ಬಾಳೆಬರೆ ಘಾಟಿ. ಈ ಘಾಟಿ ರಸ್ತೆ ತಿರುವುಮುರುವುಗಳ ಜೊತೆಗೆ ದಟ್ಟಾರಣ್ಯದ ಸುಂದರ ನೈಸರ್ಗಿಕ ನೋಟ, ಕಣಿವೆಯ ವಿಹಂಗಮ ದೃಶ್ಯ ಭೂಗರ್ಭದಲ್ಲಿ ವಿದ್ಯುತ್ ಉತ್ಪಾದಿಸುವ ವಾರಾಹಿ ಜಲ ವಿದ್ಯುತ್ ಯೋಜನೆ, ಬಾಳೆಬರೆ ಜಲಪಾತ ಇತ್ಯಾದಿಗಳನ್ನು ಹೊಂದಿದೆ.

ಈ ಮಾರ್ಗದ ಘಾಟಿರಸ್ತೆಯ ಕಡಿದಾದ ಇಳಿಜಾರಿನ ತಿರುವಿನ ರಸ್ತೆಯಲ್ಲಿ ಶ್ರೀಚಂಡಿಕಾಂಬಾ ದೇಗುಲವಿದೆ. ಕೇರಳದ ದೇವಾಲಯದ ಮಾದರಿ ಹೊಂದಿರುವ ಈ ದೇಗುಲ ಹಲವು ಪರಿವಾರ ದೇವತೆಗಳ ಗುಡಿಗಳಿಂದ ಕೂಡಿ ದೇವರ ವನದಂತೆ ಕಂಗೊಳಿಸುತ್ತದೆ. ಈ ದೇಗುಲದಲ್ಲಿ ಪ್ರತಿ ವರ್ಷ ವೈಶಾಖ ಶುದ್ಧ ಅಕ್ಷಯ ತದಿಗೆಯಂದು ಜಾತ್ರೋತ್ಸವ ವೈಭವದಿಂದ ನಡೆಯುತ್ತಿದ್ದು ಅರಭ್ಯದ ಮೂಲೆ ಮೂಲೆಗಳಿಗೆ ಗಂಟೆ, ಜಾಗಟೆ,ಮಂಗಳವಾದ್ಯ ಹಾಗೂ ವೇದ ಘೋಷಗಳ ನಿನಾದ ಹರಡುತ್ತದೆ.

ಚಂಡಿಕಾಂಬೆ ನೆಲೆಯಾದ ಈ ಕ್ಷೇತ್ರವನ್ನು ಬಹು ಹಿಂದಿನಿಂದಲೂ ಚಂಡಿಕಾವನ ಎಂದು ಕರೆಯಲಾಗುತ್ತಿದೆ. ಸಮೀಪದಲ್ಲಿಯೇ ಕಡಿದಾದ ಕಣಿವೆಯಲ್ಲಿರುವ ಶ್ರೀಸಿದ್ಧಿವಿನಾಯಕ ದೇವರ ಸನ್ನಿಧಿಯಿದ್ದು ಜಾತ್ರೋತ್ಸವದ ಮೊದಲ ದಿನ “ಗಣಯಾಗ” ರಾತ್ರಿ ಕಲಾತತ್ವ ಹೋಮ ನಡೆಯುತ್ತದೆ. ಅಕ್ಷಯ ತದಿಗೆಯಂದು ಶ್ರೀಚಂಡಿಕಾಂಬಾ ದೇವರ ಮಹಾರಥೋತ್ಸವ ಮತ್ತು ರಾಜಬೀದಿ ಉತ್ಸವಗಳು ನಡೆಯುತ್ತವೆ, ಈ ದಿನ ಬೆಳಿಗ್ಗೆಯಿಂದ ದೇಗುಲದ ಆವರಣದಲ್ಲಿ ಶ್ರೀಚಂಡಿಕಾಯಾಗ ನಡೆದು ಮಧ್ಯಾಹ್ನ ಪೂರ್ಣಾಹುತಿ ನಡೆಯುತ್ತದೆ. ದೇಗುಲದ ಆವರಣದಲ್ಲಿ ಆ ದಿನ ರಾತ್ರಿ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯುತ್ತಿದ್ದು ಖ್ಯಾತ ಕಲಾವಿದರು ದೇವಿಯ ಸೇವೆ ಎಂದು ತಿಳಿದು ಪ್ರದರ್ಶನ ನೀಡಿ ಹರಕೆ ಒಪ್ಪಿಸುತ್ತಾರೆ.

ದೇಗುಲದ ಮಹಾತ್ಮೆ:

ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿರುವ ಈ ದೇಗುಲ ಹಲವು ಜಿಲ್ಲೆಗಳ ಭಕ್ತರನ್ನು ಸದಾ ಸೆಳೆಯುತ್ತದೆ. ದೇವರ ಶಕ್ತಿ, ಮಹಿಮೆ ಮತ್ತು ನಂಬಿದವರಿಗೆ ಅಭಯ ದೊರೆಯುವ ಪ್ರತೀತಿಗಳಿಂದ ನಿತ್ಯವೂ ಭಕ್ತರು ಆಗಮಿಸುತ್ತಾರೆ. ರಾಜ್ಯ ಹೆದ್ದಾರಿಯ ಸನಿಹವೇ ಇಳಿಜಾರಿನ ಪ್ರದೇಶದಲ್ಲಿ ನಿರ್ಮಾಣವಾದ ಈ ದೇಗುಲದ ಬಳಿ ಎಲ್ಲಾ ವಾಹನಗಳೂ ನಿಂತು ಪೂಜೆ ಸಲ್ಲಿಸಿ ಮುಂದೆ ಸಾಗುವುದು ಇಲ್ಲಿನ ವಾಡಿಕೆ. ಹೀಗೆ ಮಾಡುವುದರಿಂದ ಪ್ರಯಣ ಸುಖಕರವಾಗುತ್ತದೆ ಎಂಬ ದೃಢ ವಿಶ್ವಾಸ ನೆಲೆಯೂರಿದೆ.

ಈಗಿರುವ ದೇಗುಲದಿಂದ ಸ್ವಲ್ಪ ದೂರದಲ್ಲಿ ಪ್ರಾಚೀನ ಕಾಲದಿಂದಲು ಚಾಮುಂಡೇಶ್ವರಿ ದೇವರ ಸ್ವರೂಪಿಯಾದ ಚಂಡಿಕಾಂಬಾ ದೇಗುಲವಿತ್ತು. ಆಸ್ಥಳದಲ್ಲಿ ಬಿದನೂರು ಅರಸರ ಚಿಕ್ಕಕೋಟೆ, ವಿವಿದ ದೇಗುಲಗಳ ಪವಿತ್ರ ಸ್ಥಳ, ಪುಷ್ಕರಣಿಗಳು ಇದ್ದವು. ವಾರಾಹಿ ನದಿಯ ಮೂಲ ಸ್ಥಳ ಇದಾಗಿದ್ದು ನದಿಯ ಉಗಮದಲ್ಲಿಯೇ ಈ ಚಂಡಿಕಾಂಬೆ ನೆಲೆಯಾಗಿದ್ದಳು ಎನ್ನಲಾಗಿದೆ. ವಾರಾಹಿ ನದಿಗೆ ಚಕ್ರಾ ಅಣೆಕಟ್ಟು ನಿರ್ಮಿಸಿದಾಗ ಆ ಸ್ಥಳ ಮುಳುಗಡೆಯಾಗಿ ದೇವರನ್ನು ಸ್ಥಳಾಂತರ ಗೊಳಿಸಿ ಬಾಳೆಬರೆ ಘಾಟಿಯ ಗುಡ್ಡದಲ್ಲಿ ದೇವರ ಕಲ್ಲು ಇಡಲಾಗಿತ್ತು.

ಸುಮಾರು 70 ವರ್ಷಗಳ ಹಿಂದೆ ಈ ಮಾರ್ಗದಲ್ಲಿ ವಾಹನ ಚಾಲಕರಾಗಿ ಸಂಚರಿಸುತ್ತಿದ್ದ ಕೇರಳ ಮೂಲದ ಕೃಷ್ಣ ನಂಬಿಯಾರ್ ಅವರಿಗೆ ವಿಶ್ರಾಂತಿ ಪಡೆಯಲು ನಿಂತಾಗಲೆಲ್ಲ ಪದೇ ಪದೇ ದೇವರ ಆವಾಸವಿರುವುದಾಗ ಎಚ್ಚರಿಕೆಯಾಗುತ್ತಿತ್ತು. ಸ್ತ್ರೀ ರೂಪದಲ್ಲಿ ಮತ್ತು ಮಹಾ ಯೋಗಿಯ ರೂಪದಲ್ಲಿ ದೇವರು ಕಾಣಿಸಿಕೊಂಡು ದೇವರ ಗುಡಿ ನಿರ್ಮಿಸಲು ಆದೇಶ ನೀಡುತ್ತಿತ್ತು. ಈ ಬಗ್ಗೆ ವಿವಿಧ ಜ್ಯೋತಿಷಿಗಳಲ್ಲಿ ಕೇಳಿ ತಿಳಿದ ನಂಬಿಯಾರ ಕೊನೆಗೂ ಹೆದ್ದಾರಿ ಪಕ್ಕದಲ್ಲಿ ಏಕ ಶಿಲೆಯಲ್ಲಿ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ಮೂರ್ತಿ ನಿಲ್ಲಿಸಿ ಪೂಜೆ ಆರಂಭಿಸಿದರು.

ತಮ್ಮ ಚಾಲಕ ವೃತ್ತಿ ತ್ಯಜಿಸಿ ದೇವಿಯ ಪೂಜೆ ಮತ್ತು ಸೇವೆಗಾಗಿ ನೆಲೆನಿಂತರು. ಆಗ ಪದೆ ಪದೇ ಕನಸಿನಲ್ಲಿ ವಿವಿಧ ಪರಿವಾರ ದೇವತೆಗಳ ಬಗ್ಗೆ ದೇವಿಯಿಂದ ಅಪ್ಪಣೆಯಾಗಿ ಘಾಟಿಯ ಈ ಸ್ಥಳದಲ್ಲಿ ಚಂಡಿಕಾಂಬೆ ಗುಡಿ ಅಕ್ಕಪಕ್ಕದಲ್ಲಿ ಪ್ರತಿ ವರ್ಷ ಒಂದೊಂದಾಗಿ ಶ್ರೀಸಾಂಬಸದಾಶಿವ, ಶ್ರೀವೀರಭದ್ರ ಸ್ವಾಮಿ ,ಶ್ರೀದತ್ತಾತ್ರೇಯ ಸ್ವಾಮಿ,ಶ್ರೀಬೇತಾಳ, ಶ್ರೀವಿಷ್ಣು, ಶ್ರೀಹಯಗುಳಿ ದೇವರುಗಳ ಗುಡಿ ನಿರ್ಮಿಸಿ ಪ್ರತಿಷ್ಠಾಪಿಸಿದರು. ಚಂಡಿಕಾಂಬಾ ದೇಗುಲದ ಅನತಿ ದೂರದಲ್ಲಿ ಶ್ರೀಸಿದ್ಧಿವಿನಾಯಕ, ಶ್ರೀಸುಬ್ರಹ್ಮಣ್ಯ ಮತ್ತು ಶ್ರೀನಾಗದೇವತೆಗಳ ಆಲಯ ನಿರ್ಮಿಸಲಾಗಿದೆ. ಈ ಎಲ್ಲಾ ದೇವತೆಗಳಿಗೆ ನಿತ್ಯ ತ್ರಿಕಾಲ ಪೂಜೆ, ಮಹಾನೈವೇದಯ ಸಮರ್ಪಣೆ ನಡೆಯುತ್ತದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ದೇವರಿಗೆ ನಮಸ್ಕರಿಸದೆ ಸಾಗಿದರೆ ಹಿಂದೆ ಹುಲಿ ಅಡ್ಡ ಬರುತ್ತಿತ್ತಂತೆ. ಈಗ ಸಹ ಹಾಗೆಯೆ ಸಾಗಿದರೆ ಅಪಘಾತ ಇನ್ನಿತರ ಅಪಾಯ ಸಂಭವಿಸುತ್ತದೆ ಎಂಬ ನಂಬಿಕೆ ಇದೆ.

ಈ ದೇವಾಲಯ ಪ್ರತಿ ವರ್ಷ ಅಭಿವೃದ್ಧಿಗೊಳ್ಳುತ್ತಿದ್ದು ಯಾತ್ರಿಕರಿಗೆ ಅಗತ್ಯ ವಿವಿಧ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ದೇಗುಲದಿಂದ ಅರ್ಧ ಕಿ.ಮೀ.ದೂರದಲ್ಲಿ ಸುಮಾರು 200 ಅಡಿ ಎತ್ತರದಿಂದ ಧುಮುಕುವ ಬಾಳೆಬರೆ ಜಲಪಾತವಿದೆ.ಇದು ವಾರಾಹಿ ದೇವತೆಯ ತೀರ್ಥವೆಂಬ ನಂಬಿಕೆ ಸಹ ಇದೆ. ಪ್ರವಾಸಿಗರು ಜಲಪಾತ, ದೇಗುಲ ಮತ್ತು ಸುಂದರ ಪಶ್ಚಿಮಘಟ್ಟದ ಸಾಲುಗಳ ವೀಕ್ಷಣೆಗೆ ಇಲ್ಲಿಗೆ ಆಗಮಿಸುತ್ತಾರೆ.

ಫೋಟೋ ಮತ್ತು ಲೇಖನ- ಕಲಾವತಿ ಹೆಗಡೆ ಆನಂದಪುರಂ

9-5-2013

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.