ಪ್ರಿಯ ಕನ್ನಡಿಗರೇ..”ಕನ್ನಡ ಟೈಮ್ಸ್”..ಏನಿದು ಅರ್ಧ ಕನ್ನಡ ಇನ್ನರ್ಧ ಆಂಗ್ಲ ಭಾಷೆ ! ಇದು ಹೀಗೇಕೆ ಎಂದು ಆಲೋಚಿಸುವಿರಾ? ವಾಸ್ತವದ ಸಂಗತಿಯೇನೆಂದರೆ ನಮ್ಮ ಕನ್ನಡಿಗರ ಇಂದಿನ ಪರಿಸ್ಥಿತಿಯೂ ಮನೋಸ್ಥಿತಿಯೂ ಇದೇ ಆಗಿದೆ. ಇತ್ತ ಕನ್ನಡವನ್ನೂ ಸರಿಯಾಗಿ ಅಪ್ಪಿಕೊಳ್ಳದೆ ಅತ್ತ ಆಂಗ್ಲಭಾಷೆಯನ್ನೂ ಪೂರ್ಣವಾಗಿ ಒಪ್ಪಿಕೊಳ್ಳದೆ ಎರಡು ತೀರಗಳ ನಡುವೆ ತೂಗುಯ್ಯಾಲೆಯಲ್ಲಿ ನಿಂತು ಯಾವ ತೀರ ಸೇರಬೇಕೆಂದು ತೀರದ ಸಂದೇಹದಲ್ಲೇ ಕಾಲ ಕಳೆಯುತ್ತಿದ್ದೇವೆ. ನಮ್ಮ ತೀರ…ನಮ್ಮೂರೇ ನಮಗೆ ಚೆಂದ. ನಮ್ಮ ತನವೇ ನಮಗಂದ. ನಮ್ಮ ನಾಡು ನುಡಿಯ ಕೊಂಡಿಯನ್ನು ಕಳಚಿಕೊಂಡು ಪರಕೀಯತೆಯನ್ನು ಪರಿಪೂರ್ಣವಾಗಿ ಕೊಂಡುಕೊಳ್ಳುವುದಕ್ಕಿಂತ ಮೊದಲು ನಮ್ಮದು ನಮಗಿರಲಿ. ಮೊದಲು ನಮ್ಮದು ನಮ್ಮೊಳಗಿರಲಿ. ಆ ನಂತರದಲ್ಲಿ ವಿಶ್ವನುಡಿಯಾದ ಆಂಗ್ಲಭಾಷೆಯನ್ನೂ ಸ್ವಾಗತಿಸಿ ಅಪ್ಪಿಕೊಳ್ಳುವಂತಹ ಹೃದಯವೈಶಾಲ್ಯತೆ ನಮಗಿರಲಿ. ಕನ್ನಡದ ಬಗ್ಗೆ ಪ್ರೀತಿ ಅಭಿಮಾನ ಸದಾ ನಮ್ಮಂತರಂಗದಲ್ಲಿರಲಿ. ಬಹಿರಂಗದ ಆಡಂಬರವೂ ಬೇಡ..ದುರಭಿಮಾನವೂ ಬೇಡ. ಕನ್ನಡವೇ ಶ್ರೇಷ್ಠ..ಬೇರೆಲ್ಲಾ ನಿಕೃಷ್ಠ. ಈ ಭಾಷೆ ಮಾತ್ರ ಇಲ್ಲಿರಲಿ. ಬೇರಾವುದೂ ಇಲ್ಲಿ ವಾಸ ಮಾಡುವುದೇ ಬೇಡ ಎಂದು ಅತಿಯಾದ ಹೋರಾಟ ಮಾಡಲೂ ಬರುವುದಿಲ್ಲ. ಅದು ಯುವಜನಾಂಗದ ಚಿಂತನೆಗಳ ಮೇಲೆ ಬಲಾತ್ಕಾರ ಆಕ್ರಮಣ ಅತಿಕ್ರಮಣವಾಗುತ್ತದೆ. ಹಾಗೆ ಮಾಡುವುದರಿಂದ ಕನ್ನಡವು ಮತ್ತೂ ಹಿಂದಾಗುವ ಹಿಂದುಳಿಯುವ ಅಪಾಯವೂ ಇದೆ !
ಇಂದು ಕನ್ನಡವನ್ನು ಪೂರ್ಣಪ್ರಮಾಣದಲ್ಲಿ ಎಲ್ಲೆಲ್ಲೂ ಅನುಷ್ಠಾನಗೊಳಿಸಲಾಗದಂತಹ ನಗ್ನಸತ್ಯದ ಅರಿವು.. ಇತಿಮಿತಿಯ ಅರಿವು.. ನಮಗಿರಬೇಕಾಗುತ್ತದೆ. ಬಾಯಲ್ಲಿ ನಾವು ಎಷ್ಟೇ ಕನ್ನಡ..ಕನ್ನಡ..ಕನ್ನಡ ಎಂದು ಬೊಬ್ಬೆ ಹೊಡೆದರೂ ವ್ಯಾವಹಾರಿಕವಾಗಿ ಇಂದಿನ ಆಧುನಿಕ ಜಗತ್ತಿನಲ್ಲಿ ಪೂರ್ಣವಾಗಿ ಕನ್ನಡವನ್ನು ಬಳಕೆಗೆ ತರಲಾಗದಂತಹ ಸಂದಿಗ್ಧ ಪರಿಸ್ಥಿಯಲ್ಲಿ ಇಂದು ನಾವಿದ್ದೇವೆ. ಇಂತಹ ಸೂಕ್ಷ್ಮ ಸಂದರ್ಭವನ್ನೂ ಸಂಕ್ರಮಣ ಕಾಲವನ್ನೂ ಎಡವಿ ಬಿಳದಂತೆ ಎದುರಿಸುವ ಜಾಣ್ಮೆ ಹಾಗು ತಾಳ್ಮೆ ಇವೆರಡೂ ನಮಗಿರಬೇಕಾಗಿದೆ. ಏಕೆಂದರೆ “ಗ್ಲೋಬಲ್ ವಿಲೇಜ್” ಎಂಬ ಹಿಂದೆಂದಿಗಿಂತಲೂ ಸವಾಲಾಗಿರುವ ಇಂದಿನ ಪರಿಕಲ್ಪನೆಯಲ್ಲಿ ನಮ್ಮವರು.. ನಮ್ಮ ಕನ್ನಡಿಗರು ಇಂದು ವಿಶ್ವದೆಲ್ಲೆಡೆ ವಿಶ್ವದ ವಿಭಿನ್ನ ಭಾಷೆಯವರೊಡನೆ ವ್ಯವಹರಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ವಿಶ್ವ ಭಾಷೆ ಎಂದಿದ್ದರೂ ಆಂಗ್ಲಭಾಷೆಯೇ. ಹಾಗೆಂದು ನಮ್ಮದನ್ನು ಮರೆತು ಆಂಗ್ಲ ಭಾಷೆಯನ್ನೇ ಮೆರೆಸಬೇಕೆಂದು ಇದರರ್ಥವಲ್ಲ. ನಮ್ಮದನ್ನು ಮರೆಯದೆ..ಮೊದಲು ನಮ್ಮದನ್ನು ಮೆರೆಸಿ..ಆನಂತರದಲ್ಲಿ ಬೇರೆಯವರೊಟ್ಟಿಗೆ ಬೆರೆಯ ಬೇಕಾದರೆ ಆ ಕ್ಷಣಕ್ಕೆ ಮಾತ್ರ ಆಂಗ್ಲ ಭಾಷೆ ನಮ್ಮಲ್ಲಿ ಬೆರೆತುಕೊಳ್ಳಲಿ…ಅಡ್ಡಿಯಿಲ್ಲ. ಹಾಗೆ ಜೊತೆಗೂಡಿದಾಗ ಆಂಗ್ಲ ಭಾಷೆ ಅಥವಾ ಬೇರೆ ಯಾವುದೇ ಭಾಷೆಯವರಿಗೂ ಕನ್ನಡ ನುಡಿಯ ಸೊಬಗನ್ನೂ ಸೌಂದರ್ಯವನ್ನೂ ನಮ್ಮವರು ತೋರಿಸುವಂತಾಗಲಿ. ಅಂತಹ ಮನಸ್ಸು ನಮ್ಮದಾಗಲಿ. ನಮ್ಮ ಮನಸ್ಸು ಹಾಗೆ ಅದಕ್ಕೆ ಅಣಿಗೊಳ್ಳಲಿ.
ಅಂತೆಯೇ “ಕನ್ನಡ ಟೈಮ್ಸ್” ಎಂಬಲ್ಲಿ “ಕನ್ನಡ” ಮೊದಲು…ಆ ಮೇಲೆ “ಟೈಮ್ಸ್” ಎಂಬುದು ಆಂಗ್ಲ ಭಾಷೆಯ ಪದವಾಗಿದೆ. ಈ ಶೀರ್ಷಿಕೆಯ ಪ್ರಕಾರ “ಟೈಮ್ಸ್” ಎಂದಾಗ ಆಂಗ್ಲ ಭಾಷೆಯವರೂ ಅಥವಾ ವಿಪರೀತ ಆಂಗ್ಲಭಾಷೆಯ ಹುಚ್ಚಿರುವ ಕನ್ನಡಿಗರೂ ಒಮ್ಮೆ ಅದರ ಹಿಂದಿರುವ “ಕನ್ನಡ”ದತ್ತ ಗಮನ ಹರಿಸುತ್ತಾರೆ ! ಕನ್ನಡವನ್ನು ಮರೆತ ಕನ್ನಡದವರಿಗೇ ಕನ್ನಡವನ್ನು ನೆನೆಪು ಮಾಡಿಕೊಡುವುದು ಹಾಗು ಕನ್ನಡೇತರ ವಿಶ್ವದ ಜನರೂ ಒಮ್ಮೆ “ಕನ್ನಡ”ದೆಡೆಗೆ ತಿರುಗಿ ನೋಡುವಂತೆ ಮಾಡುವುದು “ಕನ್ನಡ ಟೈಮ್ಸ್”ನ ಉದ್ದೇಶ. ಇದು ಕೇವಲ ಎರಡು ಭಾಷೆಗಳ ಎರಡು ಪದಗಳ ಸಮೀಕರಣದ ಸಮಯೋಚಿತ ವಿಶ್ಲೇಷಣೆ ಮಾತ್ರವಲ್ಲ…ಅವೆರಡರ ಹಿಂದಡಗಿರುವ ಅಗಾಧವಾದ ಭಾವನೆಗಳ ಅನಾವರಣ !
ಕನ್ನಡದತ್ತ ಗಮನ ಹರಿಸುವುದು ತುರ್ತಾಗಿ ಆಗ ಬೇಕಾದ ಕೆಲಸವಾದರೆ ಅದರ ಮುಂದಿನ ಹಂತವಾಗಿ ಕನ್ನಡ ಸಾಹಿತ್ಯದ ಬಗ್ಗೆ ಗಹನವಾಗಿ ಗಮನಹರಿಸಬೇಕಾಗಿರುವುದು ಅದಕ್ಕಿಂತ ಹೆಚ್ಚಿನ ತೂಕದ ಇನ್ನೊಂದು ಜವಾಬ್ದಾರಿಯ ಹಂತ. ಅದನ್ನು ನಾವು ನೀವೆಲ್ಲಾ ಒಗ್ಗೂಡಿ…ಅದರಲ್ಲೂ ಯುವಜನಾಂಗ ನಡೆಸಿಕೊಡಲೇಬೇಕಾದ ಮಾತೃಸೇವೆಯಾಗಿದೆ. ಹುಟ್ಟುತ್ತಲೇ ಭಾವನೆಗಳನ್ನು ಹಂಚಿಕೊಳ್ಳಲು ನಮಗೆಲ್ಲಾ ಬಳುವಳಿಯಾಗಿ ಬಂದಿರುವ ಈ ಭಾಷೆಯ ಸಂಬಂಧ ತೀರಿಸಲಾಗದಷ್ಟು ಋಣ ನಮ್ಮ ಮೇಲಿದೆ. ಈ ನಿಲ್ಲದ ನಿರಂತರ ಮಹತ್ಕಾರ್ಯಕ್ಕೆ “ಕನ್ನಡ ಟೈಮ್ಸ್” ಎಂಬ ತ್ರೈಮಾಸಿಕ ಪತ್ರಿಕೆ ಒಂದು ಮಾಧ್ಯಮವಾಗಿ ನಮ್ಮ ನಿಮ್ಮೆಲ್ಲರ ಮಧ್ಯೆ ಸ್ನೇಹಸೇತುವಾಗಲು ಕಾತರವಾಗಿದೆ. ಕನ್ನಡಿಗರನ್ನು ಪರಸ್ಪರ ಇನ್ನೂ ಸನಿಹಗೊಳಿಸಿಕೊಳ್ಳಲು ಸಂವಹನ ಸಾಧನ ಈ “ಕನ್ನಡ ಟೈಮ್ಸ್”. ಕನ್ನಡ ಸಾಹಿತ್ಯದ ಅಭಿರುಚಿಯನ್ನು ಇನ್ನೂ ಸಮೃದ್ಧಗೊಳಿಸಲು ಇದೊಂದು ಸವಿರುಚಿಯ ಅಕ್ಷರಭೋಜನ ! ಹಿರಿಯ ಸಾಹಿತಿಗಳ ಸಾಹಿತ್ಯದೌತಣ… ಕಿರಿಯ ನವಪೀಳಿಗೆಯ ಹೊಸ ಹೊಂಗನಸುಗಳ ನವನವೀನ ಭಾವನೆಗಳ ಕಚಗುಳಿ..ಕವನ ಹನಿಗವನಗಳ ದೀಪಾವಳಿ..ಬಣ್ಣದ ಲೋಕದ ಬಣ್ಣಿಸಲಸದಳ ಚಿತ್ರ ವಿಚಿತ್ರರಂಗದ ರಂಗು ರಂಗಿನ ಬಣ್ಣದೋಕುಳಿ…ಪುಣ್ಯಕ್ಷೇತ್ರಗಳ ಕಿರಣಾವಳಿ…ವಿಶೇಷ ಪ್ರವಾಸಿ ತಾಣಗಳ ಬಗ್ಗೆ ಸಂಪೂರ್ಣ ಮಾಹಿತಿ….ಆ ಮೂಲಕ ಪ್ರವಾಸಿಗರು ಅಲ್ಲಿಡಲು ದಾಳಿ…ಹೀಗೆ ನವರಸಗಳ ರಸಾಯನ ನಮ್ಮ ನಿಮ್ಮೆಲ್ಲರ ಈ “ಕನ್ನಡ ಟೈಮ್ಸ್”. ಜೊತೆಗೆ ಕನ್ನಡ ನಾಡಿನ ಸಮೃದ್ಧ ಜಾನಪದ ಜಗತ್ತಿನ ಪರಿಚಯ, ಕನ್ನಡ ನಾಡು ನುಡಿ ಇತಿಹಾಸದ ಅವಲೋಕನ, ವರ್ತಮಾನದ ಆತ್ಮಾವಲೋಕನ, ಭವಿಷ್ಯದ ಯೋಜನೆಗಳಿಗೊಂದು ಸ್ಪಷ್ಟ ಆಕಾರ ನೀಡುವತ್ತ ಚಿಂತನ ಮಂಥನ…ಇವೆಲ್ಲಾ “ಕನ್ನಡ ಟೈಮ್ಸ್”ನಲ್ಲಿ ಅಡಕವಾಗಿಸಬೇಕೆಂಬುದೇ ನಮ್ಮ ಪ್ರಯತ್ನ.
ಪತ್ರಿಕೆ ಇಡೀ ಸಮುದಾಯದ ದನಿಯಾಗುತ್ತದೆ ವಿನಹ ಇದು ಯಾರೊಬ್ಬರ ವಯಕ್ತಿಕ ಕಥೆ-ವ್ಯಥೆಗಳನ್ನು ಬರೆದುಕೊಳ್ಳುವುದಕ್ಕಲ್ಲ. ಅಥವಾ ಆಗದವರ ವಿರುದ್ಧ ಬರೆದುಕೊಳ್ಳುತ್ತಾ ಹಗೆತನವನ್ನು ಸಾಹಿತ್ಯದ ಮೂಲಕ ಸಾಧಿಸುತ್ತಾ ತಾಯಿ ಶಾರದೆ ನಮಗಿತ್ತ ಅಕ್ಷರದ ಪಾವಿತ್ರ್ಯತೆಯನ್ನು ಅಪವಿತ್ರ ಮಾಡುವುದಕ್ಕಲ್ಲ. ಹಣಕ್ಕಾಗಿ ಸಚ್ಚಿಂತನೆಗಳನ್ನು ಮಾರಿಕೊಂಡು ಪತ್ರಿಕೆಯ ಮಾರಾಟವನ್ನು ಹೆಚ್ಚಿಸಿಕೊಳ್ಳುವ ಇರಾದೆ “ಕನ್ನಡ ಟೈಮ್ಸ್”ಗೆ ಖಂಡಿತಾ ಇಲ್ಲ. ಆ ರೀತಿಯಾಗಿ ಪತ್ರಿಕೆಯನ್ನು ರೂಪಿಸಿ ಜನಾಭಿರುಚಿಯ ಮೌಲ್ಯವನ್ನು ಕೆಳಮುಖ ಇಳಿಮುಖ ಮಾಡುವ ಅಥವಾ ಈ ಸಮಾಜದ ಹಾದಿಯನ್ನು ತಪ್ಪಿಸಿ ಸ್ವಾಸ್ಥ್ಯವನ್ನು ಹಾಳುಗೆಡಿಸುವ ದುರುದ್ದೇಶವೂ ಈ ಪತ್ರಿಕೆಗಿಲ್ಲ. ಅಥವಾ ಈ ಪತ್ರಿಕೆಯನ್ನು ಯಾರದ್ದೋ ವಿರುದ್ಧ ಸವಾಲಿಗೂ ಆರಂಭಿಸುತ್ತಿರುವುದಲ್ಲ. ಪತ್ರಿಕೆಗೆ ಅಥವಾ ಪತ್ರಿಕೆಗೆ ಸಂಬಂಧಿಸಿದವರಿಗೆ ಯಾರ ವಿರುದ್ಧವೂ ಹಗೆತನ ಇರುವುದಿಲ್ಲ. ಬದಲಿಗೆ ದ್ವೇಷಿಸುವವರನ್ನೂ ಈ ಪತ್ರಿಕೆ ಪ್ರೀತಿಯಿಂದಲೇ ಪ್ರೀತಿಸುತ್ತದೆ ! ದ್ವೇಷದಿಂದ ನಮ್ಮ ವಯಕ್ತಿಕ ನೆಮ್ಮದಿಯನ್ನು ನಾಶ ಮಾಡಿಕೊಳ್ಳಬಹುದೇ ವಿನಹ ಬೇರೆ ಯಾರನ್ನೋ ನಾಶ ಮಾಡಲಾಗುವುದಿಲ್ಲ…ಅಂತಿಮವಾಗಿ ಏನನ್ನೂ ಸಾಧಿಸಲಾಗುವುದಿಲ್ಲ. ಪ್ರೀತಿಯಿಂದ ಮಾತ್ರ ಎಲ್ಲರನ್ನೂ ಎಲ್ಲವನ್ನೂ ಈ ವಿಶ್ವದಲ್ಲಿ ಗೆಲ್ಲಬಹುದು. ಅದೇ ನಮ್ಮ ಕನ್ನಡಿಗರ ಗುಣ. ಕುವೆಂಪು ಅವರು ನೀಡಿದ “ವಿಶ್ವಮಾನವ” ಎಂಬ ಪದದ ಭಾವಾರ್ಥಕ್ಕೆ ಕನ್ನಡಿಗರಾದ ನಾವೆಲ್ಲಾ ಸಾರ್ಥಕ್ಯ ನೀಡೋಣ.
ಪ್ರೀತಿಯಿಂದ
ಚಿನ್ಮಯ ಎಂ.ರಾವ್
ಹೊನಗೋಡು
Monday, August 13, 2012, 3:41:14 PM