ಕವಿಸಮಯ

ನಾವು ಸಾಕ್ಷರರಲ್ಲ..!

-ಚಿನ್ಮಯ ಎಂ.ರಾವ್ ಹೊನಗೋಡು

ಮುಖ ನೋಡಿ ಮಣೆ ಹಾಕುವವರು ನಾವು
ಅಂತರಂಗಗಳು ಮುಖಾಮುಖಿಯಾಗದಿರಬಹುದು
ಮೂಕವಾಗಿಯೇ ಒಂದಷ್ಟು ಭಾವಗಳು
ಅಕ್ಷರಗಳಾಗಿ ವಿನಿಮಯವಾಗಬಹುದು
ಅನುಮಾನವಾಗುತ್ತಿದೆ
ನಿಜವಾಗಿಯೂ ನಾವು ಸಾಕ್ಷರರಾ?
ಒಂದು ಪಕ್ಷ ಬರೀ ಅಕ್ಷರಗಳನ್ನೋದಿ
ಪ್ರತಿಕ್ರಿಯಿಸದ ನಾವು
ಜಾಣಮೌನವನ್ನು ಜಾಣ್ಮೆ
ಎಂದುಕೊಳ್ಳುತ್ತೇವೆ ಎಂದಾದರೆ
ಒಂದೊಂದು ಅಕ್ಷರಗಳ ಹಿಂದಿರುವ
ಒಳದನಿ ನಮಗೆ ಕೇಳಿಸದ
ಕಿವುಡರು ನಾವು ಎಂದಾದರೆ
ನಾವು ಸಾಕ್ಷರರಲ್ಲ..!
ಅನಾಯಾಸವಾಗಿ ನಮ್ಮೆಡೆಗೆ ಬಂದ
ಅನಂತ ಸ್ನೇಹಕ್ಕೆ ನಾವು
ಪ್ರತಿಸ್ಪಂದಿಸುವುದಿಲ್ಲ ಎಂದಾದರೆ
ನಮ್ಮನ್ನು ಅನಕ್ಷರಸ್ಥರ ಸಾಲಿನಲ್ಲಿ
ಸೇರಿಸಬಹುದಲ್ಲವೇ?
ಸಜ್ಜನರ ಪ್ರೀತಿಯನ್ನು ಪಡೆಯಲೂ
ಪುಣ್ಯ ಮಾಡಿರಬೇಕು
ಸಜ್ಜನರನ್ನು ದುರ್ಜನರೆಂದು
ತಪ್ಪಾಗಿ ತಿಳಿಯಲು
ನಾವು ಹಿಂದೆಲ್ಲೋ ಪಾಪ ಮಾಡಿರಬೇಕು

ಛೇ..ಅನಕ್ಷರಸ್ಥರ ಸಾಲಿನಲ್ಲಿ
ನಮ್ಮನ್ನು ಸೇರಿಸಲು ಹೋಗಿ
ಎಂಥಾ ತಪ್ಪಾಯಿತು
ಅನಕ್ಷರಸ್ಥರಿಗೇ ಹೆಚ್ಚು ಭಾವನೆಯಿದೆ
ಅಕ್ಷರಸ್ಥರೆಂಬ ಹೆಚ್ಚುಗಾರಿಕೆಯಿರುವ
ನಮಗೇ ನಿರ್ಭಾವುಕತೆಯಿದೆ
ಎಲ್ಲವೂ ತಿಳಿದಿದೆ ಎನ್ನುತ್ತಾ
ಎಲ್ಲವನ್ನೂ ತೊಳೆದುಕೊಂಡಿರುತ್ತೇವೆ
ಎಲ್ಲವನ್ನೂ ಚೆನ್ನಾಗಿ ಓದುವ ನಾವು
ಅನಕ್ಷರಸ್ಥರಂತೆ ಇನ್ನೊಬ್ಬರ
ಒಳಮನಸ್ಸನ್ನು
ಸರಿಯಾಗಿ ಓದಲು ಬರುವುದಿಲ್ಲ !
ಅಕ್ಷರರೂಪದಲ್ಲಿರುವ ಭಾವನೆಗಳನ್ನು
ಸರಿಯಾಗಿ ಅರ್ಥಮಾಡಿಕೊಳ್ಳಲು ಬರುವುದಿಲ್ಲ
ಭಾವನೆಗಳು ಅಕ್ಷರಾತೀತವಾಗಿದೆಯೆಂದು
ನಮಗೆ ಇನ್ನೂ ಸರಿಯಾಗಿ ಅರ್ಥವಾಗಿಲ್ಲ
ಕಣ್ ತೆರೆದು ನೋಡದ ನಮಗೆ
ಒಳಗಣ್ಣಂತೂ ಇಲ್ಲವೇ ಇಲ್ಲ
ನಾವು ಸಜ್ಜನರ ಪ್ರೀತಿಯನ್ನು ಪಡೆಯಲು
ಪುಣ್ಯ ಮಾಡಿರಬೇಕು
ದುರ್ಜನರಿಂದ ಮೋಸ ಹೋಗಲು
ಹಿಂದೆಲ್ಲೋ ಪಾಪ ಮಾಡಿರಬೇಕು

ಕಾಣದೆ.. ಕಂಡವರು ಹೇಳಿದ್ದನ್ನೇ
ಕಂಡಕಂಡವರಿಗೆ ಕಂಡುಕೇಳರಿಯದ ರೀತಿಯಲ್ಲಿ
ಅರಿವಿಲ್ಲದೆ ಹರಡು(ಟು)ತ್ತಾ
ಪ್ರಚಂಡ ಜ್ನಾನವಿದೆಯೆಂಬ
ಪರಿಜ್ನಾನದಲ್ಲಿರುವ ಮಹಾಮೂರ್ಖರು ನಾವು
ನಾವು ಸಾಕ್ಷರರಾ?!
ಸತ್ಯದ ಒಳಮನೆಗೆ ಕಾಲಿಡದೆ
ಸುಳ್ಳಿನ ನೆರೆಮನೆಯಲ್ಲೇ ಕಾಲಕಳೆಯುವ
ಬಾಯಿಚಪಲಕ್ಕೆ ಯಾರನ್ನೋ ಕಲೆಳೆವ
ಕುರುಡರು ಕಂಡಿರುವುದಕ್ಕೆ ಕಿವಿಗೊಡುವ
ನಾವು ಸಾಕ್ಷರರಾ?!

ಇಲ್ಲ…ಖಂಡಿತಾ..ನಾವು ಸಾಕ್ಷರರಲ್ಲ..
ಆಂತರ್ಯದಿಂದ ಪ್ರೀತಿಸುವ ಅಕ್ಷರಗಳನ್ನು
ನಾವು ಕಲಿಯಬೇಕಿದೆ
ಪ್ರೇಮವೆಂಬ ಅಕ್ಷರಗಳನ್ನು ಜೋಡಿಸಿ
ಪದಗಳ ಭಾವಪದರಗಳನ್ನು
ಭಾವಾಂತರಂಗದಿಂದ ಭಾವಿಸಿಕೊಳ್ಳಬೇಕಾಗಿದೆ
ಅಂತರಂಗಗಳು ಪರಸ್ಪರ
ಮುಖನೋಡಿ ಮಣೆಹಾಕಿಕೊಳ್ಳಬೇಕಾಗಿದೆ
ಧ್ಯೇಯವಾಕ್ಯಗಳನ್ನು ಆತ್ಮಾವಲೋಕನದಿಂದ
ಪಾಠ ಮಾಡಿಸಿಕೊಂಡು ಅವುಗಳನ್ನು
ಅಳವಡಿಸಿಕೊಳ್ಳುವ
ಪರಿಪಾಠ ಬೆಳೆಸಿಕೊಳ್ಳಬೇಕಾಗಿದೆ
ಸಾರ್ಥಕವಾದ ಸಾಲುಗಳನ್ನು ದಿನಂಪ್ರತಿ
ಜೀವನದ ಪುಟಗಳಲ್ಲಿ ಬರೆಯುತ್ತಾ
ಬದುಕೆಂಬ ಬಂಗಾರವನ್ನು
ಮಹಾಕಾವ್ಯವನ್ನಾಗಿಸಬೇಕಾಗಿದೆ
ಬುದ್ಧಿವಂತರೆಂದು ಕೊಚ್ಚಿಕೊಳ್ಳುವ ನಾವು
ಬುದ್ಧಿಗೆ ಭಾವದ ಲೇಪವನ್ನೂ
ಹಚ್ಚಿಕೊಳ್ಳಬೇಕಾಗಿದೆ
ಆಗ ಮಾತ್ರ ನಾವು ಸಾಕ್ಷರರು..
ಅಲ್ಲಿಯವರೆಗೂ ಸಾಕ್ಷರೆಂಬ
ಭ್ರಮೆಯಲ್ಲಿ ಬದುಕುವವರು..
ಅನಕ್ಷರತೆಯನ್ನು ಸಾಕುವವರು..!
-ಚಿನ್ಮಯ ಎಂ.ರಾವ್ ಹೊನಗೋಡು

Thursday, ‎January ‎19, ‎2012
*********

Back to top button

Adblock Detected

Please consider supporting us by disabling your ad blocker