ಕನ್ನಡ ಟೈಮ್ಸ್-ವಿಕಿಪೀಡಿಯ

ಕನ್ನಡ ವಿಕಿಪೀಡಿಯಾ ಕಾರ್ಯಾಗಾರದ ಮೂಲಕ ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ಸಂಸ್ಥೆಯ ಉದ್ಘಾಟನೆ

ಕಳೆದ ಜುಲೈ 28 ಭಾನುವಾರ (28-7-2013) ಯುವ ಸಂಗೀತ ನಿರ್ದೇಶಕ ಚಿನ್ಮಯ ಎಂ.ರಾವ್ ಹೊನಗೋಡು ಇವರು ಸಂಸ್ಥಾಪಿಸಿರುವ “ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ (ರಿ.)” ಎಂಬ ಸಮಾಜ ಸೇವಾ ಸಂಸ್ಥೆ ಕನ್ನಡ ವಿಕಿಪೀಡಿಯಾ ಕಾರ್ಯಾಗಾರದ ಮೂಲಕ ಉದ್ಘಾಟನೆಗೊಂಡಿತು. ಸಾಗರದ ಖಾಸಗಿ ಹೋಟೆಲ್ ಒಂದರ ಮಹಡಿಯ ಮೇಲಿರುವ “ಮಧುರಶ್ರೀ” ಸಭಾಂಗಣದಲ್ಲಿ ನಡೆದ ಈ ಸರಳ ಸುಂದರ ಸಮಾರಂಭವನ್ನು ಕರ್ನಾಟಕ ರಾಜ್ಯ ವಿಧಾನ ಸಭಾಧ್ಯಕ್ಷರಾದ ಹಾಗು ಸಾಗರ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಕಾಗೋಡು ತಿಮ್ಮಪ್ಪನವರು ಉದ್ಘಾಟಿಸಿದರು.

Kannada Times Ngo Inauguration With Wikipedia Workshop Photos Clicked By Arun Ghate 15ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ಕಾಗೋಡು ತಿಮ್ಮಪ್ಪನವರು ತಂತ್ರಜ್ಞಾನ ಬೆಳೆಯುತ್ತಿರುವ ಇಂದಿನ ಈ ಆಧುನಿಕ ಜಗತ್ತಿನಲ್ಲಿ ಕನ್ನಡ ಹಾಗು ಕನ್ನಡಿಗರೂ ಕೂಡ ಮುನ್ನಡೆಯಬೇಕಾಗಿರುವುದು ಅತ್ಯಂತ ಅವಶ್ಯಕವೆನಿಸುತ್ತದೆ ಎಂದರು. ಈ ನಿಟ್ಟಿನಲ್ಲಿ ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ಹಾಗು ಕನ್ನಡ ವಿಕಿಪೀಡಿಯಾ ಸಂಸ್ಥೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡದ ಲೇಖಕರನ್ನು ಅಂತರಜಾಲ ಪ್ರಪಂಚಕ್ಕೆ ಪರಿಚಯಿಸುತ್ತಿದೆ, ಇದು ಶ್ಲಾಘನೀಯ ಇದರ ಸದುಪಯೋಗವನ್ನು ನಮ್ಮ ಎಲ್ಲಾ ಲೇಖಕರೂ ಪಡೆದು ಅಂತರಜಾಲದ ಕನ್ನಡ ವಿಶ್ವಕೋಶವನ್ನು ಸಮೃದ್ಧಗೊಳಿಸಬೇಕೆಂದು ಕರೆ ನೀಡಿದರು.

ಸಂಸ್ಕೃತ ಇಂಗ್ಲೀಷಿಗಿಂತ ಮೊದಲೇ ನಮ್ಮಲ್ಲಿ ಬಳಕೆಯಲ್ಲಿದ್ದ ಭಾಷೆಯಾಗಿತ್ತು. ಆಂಗ್ಲರ ಪ್ರವೇಶದಿಂದ ಇಂಗ್ಲೀಷ್ ಭಾಷೆ ಮುಂದಾಗಿ ಸಂಸ್ಕೃತಕ್ಕೆ ಹಿನ್ನಡೆಯಾಯಿತು. ಯಾವುದೇ ಭಾಷೆ ತಂತ್ರಜ್ಞಾನದಲ್ಲೂ ಬಳಕೆಯಾದರೆ ಮಾತ್ರ ದೀರ್ಘಕಾಲ ಜನಮಾನಸದಲ್ಲಿ ಉಳಿಯುತ್ತದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಸಮೃದ್ಧ ಕನ್ನಡ ಸಾಹಿತ್ಯ ನಮ್ಮ ಕಣ್ಣೆದುರು ಜನರ ಬಳಕೆಯಿಂದ ದೂರವಾಗದಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ದಿಶೆಯಲ್ಲಿ ಕನ್ನಡ ವಿಕಿಪೀಡಿಯಾ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.

ಮುಖ್ಯ ಅತಿಥಿಯಾಗಿದ್ದ ಸಾಹಿತಿ ಡಾ.ನಾ.ಡಿಸೋಜ ಮಾತನಾಡಿ, ಈ ಹಿಂದೆ ಜ್ಞಾನವನ್ನು ಪಡೆಯಲು ಧರ್ಮ, ಸಂಪ್ರದಾಯ, ಜಾತಿ, ಶ್ರೀಮಂತ ಬಡವನೆಂಬ ಬೇಧ ಅಡ್ಡಗೋಡೆಯಾಗಿತ್ತು. ಆದರೆ ಆಧುನಿಕ ತಂತ್ರಜ್ಞಾನದಿಂದಾಗಿ ಇದು ಇಂದು ವಿಶ್ವದ ಎಲ್ಲರ ಸ್ವತ್ತಾಗಿದೆ. ಕನ್ನಡ ಅಂತರಜಾಲ ವ್ಯವಸ್ಥೆಯೊಡನೆ ನಾವೂ ಸೇರಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.

Kannada Times Ngo Inauguration With Wikipedia Workshop Photos Clicked By Arun Ghate 18ಕನ್ನಡ ವಿಕಿಪೀಡಿಯಾ ಸಂಪಾದಕ ಹಾಗು ಕನ್ನಡ ತಂತ್ರಾಂಶ ಪಂಡಿತ ಡಾ.ಯು.ಬಿ ಪವನಜ ಮಾತನಾಡಿ, ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಭವ್ಯ ಇತಿಹಾಸವಿದೆ. ಕನ್ನಡ ಮಾತನಾಡುವವರ ಸಂಖ್ಯೆ ಸುಮಾರು 5 ಕೋಟಿ ಇದೆ. ಕರ್ನಾಟಕದ ಸಾಕ್ಷರತೆ ಶೇಕಡ 75 ಇದೆ. ಕನ್ನಡ ಭಾಷೆಯ 8 ಲೇಖಕರುಗಳಿಗೆ ಭಾರತದ ಸರ್ವೋಚ್ಚ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕೇಂದ್ರ ಸರಕಾರವು ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿದೆ. ಇವೆಲ್ಲ ಕನ್ನಡದ ಹಿರಿಮೆ ಗರಿಮೆಗಳನ್ನು ಸಾರುತ್ತವೆ.

ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಅಂತರಜಾಲ ಬಳಕೆದಾರರಲ್ಲಿ ಹೆಚ್ಚು ಮಂದಿ ಅಂತರಜಾಲವನ್ನು ಮಾಹಿತಿಯ ಹುಡುಕುವಿಕೆಗಾಗಿ ಬಳಸುತ್ತಾರೆ. ಸಹಜವಾಗಿಯೇ ಕನ್ನಡಿಗರಿಗೆ ಅಂತರಜಾಲದಲ್ಲಿ ಕನ್ನಡ ಭಾಷೆಯಲ್ಲಿ ಎಲ್ಲ ವಿಷಯಗಳ ಮಾಹಿತಿ ಬೇಕಾಗಿದೆ. ಅಂತರಜಾಲದಲ್ಲಿ ಮಾಹಿತಿಯ ಪ್ರಮುಖ ಜಾಲತಾಣ ವಿಕಿಪೀಡಿಯ. ಇದು ಕನ್ನಡದಲ್ಲೂ ಇದೆ.

ಜುಲೈ 2003ರಲ್ಲಿ ಪ್ರಾರಂಭವಾದ ಕನ್ನಡ ವಿಕಿಪೀಡಿಯದಲ್ಲಿ ಸದ್ಯ ಸುಮಾರು 14,000 ಲೇಖನಗಳಿವೆ. ಇತರೆ ಭಾರತೀಯ ಭಾಷೆಗಳಿಗೆ ಹೋಲಿಸಿದರೆ (ತೆಲುಗು – 52,000 , ತಮಿಳು – 52,000, ಮಲಯಾಳಂ – 30,000, ಬೆಂಗಾಳಿ – 25,000 , ಹಿಂದಿ – 97,000) ಕನ್ನಡ ಭಾಷೆ ತುಂಬ ಹಿಂದಿದೆ. ಕನ್ನಡ ವಿಕಿಪೀಡಿಯದಲ್ಲಿ 14677 ಲೇಖನಗಳಿವೆ. 371 ಜನ ಸಂಪಾದಕರು, 38 ಜನ ಸಕ್ರಿಯ ಸಂಪಾದಕರಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕಾಗಿದೆ. ಕನ್ನಡ ವಿಕಿಪೀಡಿಯಕ್ಕೆ ಭಾಷೆ ಮತ್ತು ಸಾಂಸ್ಕೃತಿಕವಾಗಿ ತುಂಬ ಶ್ರೀಮಂತವಾಗಿರುವ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಸಂಪೂರ್ಣ ಮಾಹಿತಿ ಸೇರಿಸಬೇಕಾಗಿದೆ. ಈಗಾಗಲೆ ಇರುವ ಹಲವು ಅರೆಬರೆ ಲೇಖನಗಳನ್ನು ಸರಿಪಡಿಸಿ ಪೂರ್ತಿ ಮತ್ತು ನಿಖರವಾದ ಮಾಹಿತಿ ಸೇರಿಸಬೇಕಾಗಿದೆ.

Kannada Times Ngo Inauguration With Wikipedia Workshop Photos Clicked By Arun Ghate 24ಅಮೇರಿಕಾ ಮೂಲದ ಒಂದು ಲಾಭೇತರ ಸಂಸ್ಥೆಯಾದ (ಎನ್.ಜಿ.ಒ) ವಿಕಿಮೀಡಿಯಾ ಫೌಂಡೇಶನ್ ಫೆÇ್ಲೀರಿಡಾ ರಾಜ್ಯದ ಕಾನೂನಿನ ಅನ್ವಯ ತನ್ನ ಆಡಳಿತವನ್ನು ನಿರ್ವಹಿಸುತ್ತಿದೆ. ವ್ಯಾಪಾರಿ ಮನೋಭಾವದಿಂದ ಹೊರತಾದ ಈ ಸಮಾಜ ಸೇವಾ ಸಂಸ್ಥೆ ತನ್ನ ತಾಣದಲ್ಲಿ ವಾಣಿಜ್ಯ ಸಂಬಂಧಿ ಜಾಹಿರಾತುಗಳನ್ನು ಯಾವುದೇ ಕಾರಣಕ್ಕೂ ಪ್ರಕಟಿಸುತ್ತಿಲ್ಲ. ಯಾವುದೇ ವಿಚಾರಕ್ಕೂ ಶುಲ್ಕವನ್ನು ನೀಡದೆ ಉಚಿತಚಾಗಿ ಈ ವಿಶ್ವಕೋಶದಿಂದ ಹೇಗೆ ಮಾಹಿತಿಯನ್ನು ಪಡೆಯಬಹುದೋ ಹಾಗೆಯೇ ಈ ಜ್ಞಾನಸಾಗರಕ್ಕೆ ಲೇಖಕರೂ ತಮ್ಮ ತಮ್ಮ ಲೇಖನವನ್ನು ಕೊಡುಗೆಯಾಗಿ ನೀಡಬೇಕೆಂಬುದು ವಿಕಿಪೀಡಿಯಾ ಸಂಸ್ಥೆಯ ಆಶಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಟೈಮ್ಸ್ ಸಂಸ್ಥೆಯ ಅಧ್ಯಕ್ಷ ಹಾಗು ಸಮಾಜ ಸೇವಕ ಶ್ರೀ ಜಿ.ಟಿ ಶ್ರೀಧರ ಶರ್ಮ ಮುಂದಿನ ವರ್ಷ ಸಾಗರ ತಾಲೂಕಿನಿಂದ ಯಾವ ಲೇಖಕರು ಅತಿ ಹೆಚ್ಚು ಲೇಖನಗಳನ್ನು ಕನ್ನಡ ವಿಕಿಪೀಡಿಯಾಕ್ಕೆ ಕೊಡುಗೆಯಾಗಿ ನೀಡುತ್ತಾರೋ ಅಂಥವರಿಗೆ ತಾವು ವಯಕ್ತಿಕವಾಗಿ ಬಹುಮಾನವನ್ನು ನೀಡುವುದಾಗಿ ಘೋಷಿಸಿದರು.

ಈ ಸಮಾರಂಭದಲ್ಲಿ ವೇದಿಕೆಯಲ್ಲಿದ್ದವರಿಗೆ ಹಾರತುರಾಯಿಯ ಬದಲಿಗೆ ಕನ್ನಡ ಪುಸ್ತಕಗಳನ್ನು ನೀಡುವ ಮೂಲಕ ಕನ್ನಡ ಟೈಮ್ಸ್ ಸಂಸ್ಥೆ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು. ಈ ಸಂದರ್ಭದಲ್ಲಿ ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿ.ಟಿ ಸ್ವಾಮಿ, ಲೆಕ್ಕ ಪರಿಶೋಧಕ ಬಿ.ವಿ ರವೀಂದ್ರ ನಾಥ್, ಯುವ ರಾಜಕೀಯ ಮುಖಂಡರಾದ ವೀಣಾ ಅರುಣಾಚಲ, ತಿ.ನಾ ಶ್ರೀನಿವಾಸ್, ಜ್ಯೋತಿ ಮುರಳಿಧರ್ ಚಿನ್ಮಯ ಎಂ.ರಾವ್ ಹೊನಗೋಡು ಹಾಗು ಕನ್ನಡ ಟೈಮ್ಸ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು. ಪತ್ರಕರ್ತ ದೀಪಕ್ ಸಾಗರ್ ಕಾರ್ಯಕ್ರಮವನ್ನು ನಿರೂಪಿಸಿದರು. ಯುದಯೋನ್ಮುಖ ಗಾಯಕ ಅರುಣ್ ಘಾಟೆ ಪ್ರಾರ್ಥನಾ ಗೀತೆಯನ್ನು ಹಾಡಿದರು. ಕೆ.ಎಸ್ ರಾಘವೇಂದ್ರ ಸ್ವಾಗತಿಸಿದರು. ಒಂದೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಸಭಾಂಗಣ ಭರ್ತಿಯಾಗಿದ್ದು ಕನ್ನಡಿಗರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿತ್ತು.

28-72013
************

 

 

Back to top button