-ತೃಪ್ತಿ ಹೆಗಡೆ
ಯುವಲೇಖಕಿ-ಪತ್ರಕರ್ತೆ
ಚೆಲುವೆ ಎಂದರೆ ಸರಿಯೇ?
ಒಲವ ಸುರಿಸುವ ಮಳೆಯೇ?
ನಗುವ ರತ್ನದ ಗಣಿಯೆ?
ಮಾತು ಜೇನಿನ ಹನಿಯೇ?
ಏನವಳ ಹೆಸರು?
ಬಡವಗೊಲಿದಿಹ ನಿಧಿಯೇ?
ಬರಿದು ಬದುಕಿನ ಸಿರಿಯೇ?
ಪ್ರೀತಿ ಹರಿಸುವ ಸುಧೆಯೇ?
ಸವಿಯು ತುಂಬಿದ ಮಧುವೇ ?
ಏನವಳ ಹೆಸರು?
ಹೊಸ ಬೆಳಕ ಉಷೆಯೇ?
ಶಶಿ ನಗುವ ನಿಶೆಯೇ?
ಮುಸ್ಸಂಜೆ ಮಲ್ಲಿಗೆಯೇ?
ತಂಗಾಳಿ ಪರಿಮಳವೇ?
ಏನವಳ ಹೆಸರು?
ಹೊಳೆವ ಕಣ್ಣಿನ ಕನಸೇ?
ಒಲುಮೆ ತುಂಬಿದ ಮುನಿಸೇ?
ಜೀವಜಾತ್ರೆಯ ಸೊಗಸೇ?
ಅವಳ ಒಲವಿದು ನನಸೇ?
ಏನವಳ ಹೆಸರು?
ಬಾಳಹಾದಿಯ ಸುಮವೇ?
ಹೂಬನದ ಸಿರಿಲತೆಯೇ?
ಹಸಿರಿನೊಳಗಿನ ಉಸಿರೇ?
ಚೈತ್ರನೊಲುಮೆಯ ಚಿಗುರೇ?
ಏನವಳ ಹೆಸರು?
ಕಳೆದ ನೋವಿನ ಜಾಡೇ?
ಬದುಕ ನಲಿವಿನ ಬೀಡೆ?
ನಗುವ ನಾಳಿನ ಗೂಡೇ?
ಈ ದಿನದ ಸವಿ ಹಾಡೇ?
ಏನವಳ ಹೆಸರು?