ಸಂಪ್ರದಾಯ

ಗ್ರಾಮೀಣ ಸೊಗಡಿನ ಹಬ್ಬ ನಾಗರ ಪಂಚಮಿ

-ಕೆಳದಿ ವೆಂಕಟೇಶ್ ಜೋಯಿಸ್

ಪ್ರಾಚೀನ ಸಂಸ್ಕೃತಿಯಲ್ಲಿ ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ ಅನೇಕ ದಿವ್ಯ ಶಕ್ತಿಗಳ ಸಂಕೇತಗಳ ಪೂಜೆ ಮಾಡುವುದು ರೂಢಿಯಲ್ಲಿರುವಂತೆ ನಾಗಪೂಜೆಯೂ ಪರಂಪರಾಗತವಾಗಿ ಬಂದುದಾಗಿದೆ. ಆದಿಕಾಲದಿಂದಲೂ ನಾಗಾರಾಧನೆ ಇತ್ತೆಂಬುದನ್ನು ಸಿಂಧು ನಾಗರೀಕಥೆಯಲ್ಲಿ ದೊರೆತ ಅವಶೇಷಗಳು ಹೇಳುತ್ತವೆ. ಶೈವ, ಶಾಕ್ತ, ವೈಷ್ಣವ, ಬೌದ್ಧ, ಜೈನ ಎಲ್ಲ ಸಮುದಾಯಗಳಲ್ಲಿಯೂ, ಸಂಪ್ರದಾಯಗಳಲ್ಲಿಯೂ ನಾಗಪೂಜೆ ಇದೆ.

ಆರ್ಯರಿಗೂ ಮೊದಲು ದ್ರಾವಿಢರಲ್ಲಿ ಈ ಪೂಜೆ ಬಳಕೆಯಲ್ಲಿದ್ದು ಅನಂತರದಲ್ಲಿ ಆರ್ಯರು ಇದನ್ನು ಇದನ್ನು ಪುರಾಣಗಳಲ್ಲಿ ಸೇರಿಸಿಕೊಂಡಿರಬೇಕು. ಇಂದ್ರನು ಸರ್ಪಾಕಾರನಾಗಿದ್ದ ವೃತ್ರಾಸುರನನ್ನು ಕೊಂದು ಹಾಕಿದ ನಾಗ ಸಂಹಾರದ ವಿಷಯದ ಉಲ್ಲೇಖದಲ್ಲಿ ಋಗ್ವೇದದಲ್ಲಿ ನಾಗಪೂಜೆಯ ಕುರಿತು ಬರುತ್ತದೆ. ನಾಗನಲ್ಲಿ ಕುಂಡಲಿನೀ ಶಕ್ತಿಯ ಪ್ರಕಾರಗಳೂ ಇಲ್ಲಿ ಬರುತ್ತದೆ. ಇದರಿಂದ ಈ ಮೊದಲೂ ನಾಗನ ಆರಾಧನೆ ಇದ್ದಿರಬಹುದು. (ಋ ಸಂ.೨-೩೦) ಪುರಾಣದಲ್ಲಿ ಕೃಷ್ಣನು ಕಾಳಿಂಗ ಮರ್ಧನ ಮಾಡಿದ ಕಥೆ ಬರುತ್ತದೆ. ಸರ್ಪಗಳಿಗೆ ನಮಸ್ಕಾರ ಮಾಡಿರುವುದನ್ನು ತೈತ್ತರೀಯ ಮತ್ತು ವಾಜಸನೇಯ ಸಂಹಿತೆಗಳಲ್ಲಿ ಕಾಣಬಹುದು. ಆಶ್ಲೇಷಾ ನಕ್ಷತ್ರಕ್ಕೆ ಅಧಿದೇವತೆಯದ ಸರ್ಪಕ್ಕೆ ಸ್ವಾಹಾಕಾರವನ್ನು ಹೇಳಿರುವುದನ್ನು ನಕ್ಷತ್ರ ಸೂತ್ರದ ಮಂತ್ರವೊಂದು ತಿಳಿಸುತ್ತದೆ. ತಕ್ಷಕ, ದೃತರಾಷ್ಟ್ರ, ಪಾರಾವತ ಮುಂತಾದ ಸರ್ಪಗಳ ಹೆಸರುಗಳನ್ನು ಅಥರ್ವಣವೇದ ಉಲ್ಲೇಖಿಸುತ್ತದೆ. ಕಾಠಕದಲ್ಲಿ ಸರ್ಪಗಳನ್ನು ಪಂಚಜನರಲ್ಲಿ ಒಬ್ಬರಂತೆ ಪರಿಗಣಿಸಿರುವುದನ್ನು ಕಾಠಕದಲ್ಲಿ ಪರಿಗಣಸಿರುವುದಿದೆ. ಇದೆಲ್ಲವೂ ವೇದಗಳ ಕಾಲದಲ್ಲಿ ಮತ್ತು ಇತಿಹಾಸ, ಪುರಾಣಗಳಲ್ಲಿ ಸರ್ಪಗಳು ದೇವ, ಗಂಧರ್ವ, ಪಿತೃಗಳಂತೆ ಒಂದು ಪ್ರತ್ಯೇಕ ವರ್ಗವೆಂದು ಪರಿಗಣಿಸಲ್ಪಟ್ಟಿದ್ದವು ಎಂದೆನ್ನಬಹುದು. ಅರ್ಜುನ ನಾಗಕನ್ಯೆ ಉಲೂಪಿಯನ್ನು ವಿವಾಹವಾಗಿದ್ದನು. ಜನಮೇಜಯ ರಾಜ ತಾನು ಮಾಡಿಸುತ್ತಿದ್ದ ಸರ್ಪಯಜ್ಞವನ್ನು ಆಸ್ತಿಕ ಮಹರ್ಷಿಯ ಸಲಹೆ ಪಡೆದು ನಿಲ್ಲಿಸಿದ್ದು ಶ್ರಾವಣ ಶುದ್ಧ ಪಂಚಮಿ ದಿನ ಎನ್ನುವವರಿದ್ದಾರೆ.

ಕೃಷ್ಣ ಯಜುರ್ವೇದದಲ್ಲಿ ಬರುವ

ಶ್ರಾವಣೇ ಪಂಚಮೀ, ಶುಕ್ಲಾ ಸಂಪ್ರೋಕ್ತಾ ನಾಗಪಂಚಮೀ|
ಯೇ ತಸ್ಯಾಂ ಪೂಜಯಂತೀಹ ನಾಗಾನ್ ಭಕ್ತಿ ಪುರಸ್ಸರಾಃ||
ನ ತೇಷಾಂ ಸರ್ಪತೋ ವೀರ, ಭಯಂ ಭವತಿ ಕುತ್ರಚಿತ್

ಈ ಮಂತ್ರವು ಶ್ರಾವಣ ಶುದ್ಧ ಪಂಚಮಿ ನಾಗಪಂಚಮಿ. ನಾಗಾರಾಧನೆ ಮಾಡುವವರಿಗೆ ಭಯವಿಲ್ಲ ಎಂದು ಹೇಳುತ್ತದೆ. ಕೃಷ್ಣ ಯಜುರ್ವೇದದ ಮಂತ್ರವಾದ

ನಮೋ ಅಸ್ತು ಸರ್ಪೇಭ್ಯೋ ಯೇಕೇಚ ಪೃಥಿವೀ ಮನು|
ಯೇ ಅಂತರಿಕ್ಷೇ ಯೇ ದಿವೀತೇಭ್ಯಃ ಸರ್ಪೇಭ್ಯೋ ನಮಃ ||

ಇದರ ಮೂಲಕ ಭೂಮಿ ಅಂತರೀಕ್ಷ, ಅಶ್ವತ್ಥ ವೃಕ್ಷಗಳಲ್ಲಿ ವಾಸಿಸುವ ಸರ್ಪಗಳಿಗೆ ಸಾಷ್ಟಾಂಗ ನಮಸ್ಕಾರವನ್ನು ಹೇಳುವುದರಿಂದ ಪುತ್ರ ಪೌತ್ರಾದಿ ಸಂಪತ್ತು ಲಭಿಸುತ್ತದೆಂದು ಹೇಳುತ್ತದೆ.

ನಾಗ ಪೂಜೆ ಶ್ರಾವಣದಲ್ಲಿ ಮಾತ್ರವಲ್ಲ. ಪುಷ್ಯ ಮಾಸದಲ್ಲಿ ಷಷ್ಠಿ ಎಂದು ಆಚರಿಸಲ್ಪಡುತ್ತದೆ. ಅಂದು ಅರಳಿಮರದ ಬುಡದಲ್ಲಿ ಪ್ರತಿಷ್ಠಾಪಿಸಿರುವ ನಾಗರನಿಗೆ ಪೂಜೆ ಮಾಡುವ ಪದ್ಧತಿ ಇದೆ. ಪಂಚಮಿಯಂದು ತಂಬಿಟ್ಟು ಅರ್ಪಿಸಿ, ಸಹೋದರರಿಗೆ ಬೆನ್ನಿಗೆ ಪೂಜೆ ಮಾಡುವುದರ ಮೂಲಕ ನೀನೊಂಟಿಯಲ್ಲಿ ನಿನ್ನ ಬೆನ್ನ ಹಿಂದೆ ನಾವಿದ್ದೇವೆ ಎಂದು ನೆನಪಿಸುವ ಪರಿ ಸಂಬಂಧವನ್ನು ಗಟ್ಟಿಯಗಿ ಉಳಿಸುವಂತಹುದಾಗಿದೆ. ಷಷ್ಠಿಯಲ್ಲಿ ಬ್ರಹ್ಮಚಾರಿಯನ್ನು ಕರೆದು ಅವನಿಗೆ ಪಾದಪೂಜೆ ಮಾಡಿ ಹಾಲು ಹಣ್ಣು, ಬಟ್ಟೆಗಳನ್ನು ದಾನವಾಗಿ ಕೊಡುವುದರ ಮೂಲಕ ನಾಗನಿಗೆ ಸಂಪನ್ನಗೊಳಿಸುವ ಆರಾಧನೆ ನಗರ ಪ್ರದೇಶದಲ್ಲಿ ಆಚರಣೆಯಲ್ಲಿದೆ. ಶ್ರಾವಣ ಮಾಸ ನಾಗದೇವತೆ ಪ್ರಸನ್ನವಾಗಲು ಅನುಕೂಲಕರವಾದ ಒಳಹೊರ ಪ್ರಕೃತಿಗಳ ಸನ್ನಿವೇಶ ಇರುವ ಕಾಲ. ಹಾಗಾಗಿ ಆ ದಿನಕ್ಕೆ ಮತ್ತು ಅಂದಿನ ಪೂಜೆಗೆ ವಿಶೇಷತೆ ಬಂದಿದೆ. ನಾಗದೇವತೆಯನ್ನು ಯಜ್ನೋಪವೀತದಲ್ಲಿಯೂ ಆವಾಹನೆ ಮಾಡಿ ಪೂಜಿಸುವ, ಮಂಗಳ ಕಾರ್ಯಗಳಲ್ಲಿ ಕಟ್ಟಿಕೊಳ್ಳುವ ಕಂಕಣದಲ್ಲಿಯೂ ವಾಸುಕಿದೇವಾತಾಭ್ಯೋನಮಃ ಎಂದು ನಾಗದೇವತೆಯ ಆವಾಹನೆ ಮಾಡುವ ಸಂಪ್ರದಾಯವಿದೆ. ಲೋಕ ವ್ಯವಹಾರದಲ್ಲಿ ಹೆಡೆ ಇರುವ, ಪದ್ಮ ಗುರುತು ಇರುವಂತಹ ಹಾವುಗಳು ನಾಗರ ಹಾವು ಎಂದು ಕರೆಯಲ್ಪಡುತ್ತವೆ. ಉಳಿದವು ಸರ್ಪ ಎನಿಸಿಕೊಳ್ಳುತ್ತವೆ.

ನಾಗ ಪೂಜೆ ಮಾಡುವ ಸಂಪ್ರದಾಯವನ್ನು ರೂಢಿಗೆ ತಂದವರು ಸನಾತನ ಭಾರತೀಯ ಮಹರ್ಷಿಗಳು. ಇವರು ತಮ್ಮನ್ನು ಮನುಷ್ಯರೆಂದೂ ನಾಗವನ್ನು ದೇವತೆಗಳೆಂದು ಕರೆದರು ವಿಷ್ಣು ಶಿವ ಮೊದಲಾದ ದೇವತೆಗಳಿಗೆ ಹಾಸಿಗೆ, ಆಭರಣ ಮೊದಲಾದ ರೂಪದಲ್ಲಿ ಹಾವನ್ನು ಕಲ್ಪಿಸಿಕೊಂಡಿದ್ದಾರೆ. ಇವು ಆದಿಶೇಷ ಅಂದರೆ ಐದು ಹೆಡೆಗಳು, ಏಳು ಹೆಡೆಗಳು, ಸಾವಿರ ಹೆಡೆಗಳು, ಪುರುಷಾಕಾರ ಮತ್ತು ಸರ್ಪಾಕಾರ ಎರಡೂ ಸೇರಿರುವ ಮೂರ್ತಿ. ಕುಂಡಲಿನೀ ನಾಗ ನಾರಾಯಣನ ಹಾಸಿಗೆ. ಪೀಠ, ಪದುಕೆ. ಬಟ್ಟೆ. ಛತ್ರಿ, ಮಣಿದೀಪ. ಶಿವನಿಗೆ ನಾಗಾಭರಣ. ಗಣೇಶನಿಗೆ ಕಟ್ಟು. ಗರುಢ ದೇವರ ಕಂಕಣ. ಕಟಿಬಂಧ. ಬುಜಕೀರ್ತಿ, ವಾಸುಕಿಯೇ. ಕುಂಡಲಿನೀ ಶಕ್ತಿಯ ಪ್ರತೀಕವಾಗಿ, ತ್ರಿಪುರ ಸಂಹಾರ ಕಾಲದಲ್ಲಿ ಮೇರುವೆಂಬ ಬಿಲ್ಲಿನ ಹೆಡೆಯಗಿ, ಸಮುದ್ರ ಮಂಥನ ಕಾಲದಲ್ಲಿ ಮಂದ್ರ ಪರ್ವತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ದ್ವಜದ ಚಿಹ್ನೆಯಗಿ, ಭೂಮಿಯನ್ನು ಹೊತ್ತ ಆದಿಶೇಷನಾಗಿ, ಪಾರ್ಶ್ವನಾಥ ತೀರ್ಥಂಕರನ ಶಿರೋಲಾಂಛನವಾಗಿ, ಕ್ಷ್ಮಣ, ಬಲರಾಮ, ಸುಬ್ರಹ್ಮಣ್ಯರ ಅನನ್ಯ ಸ್ವರೂಪವಾಗಿ ನಾಗನನ್ನು ಕಾಣಬಹುದು. ನಾಗರ ಹಾವನ್ನು ಹೋಲುವಂಥ ಜಡೆಯನು ಹೆಣೆದು ಕೊಳ್ಳುವುದು ಭಾರತೀಯರಲ್ಲಿ ರೂಡಿಯಲ್ಲಿತ್ತು.

ನಾಗ ಪೂಜೆ ಭಾರತದಲ್ಲಿ ಮಾತ್ರವಲ್ಲ. ಚೀನಾ, ಆಫ್ರಿಕ, ಅಮೇರಿಕಾ ಅರಣ್ಯ ಪ್ರದೇಶ ಹೀಗೆ ಹಲವು ಕಡೆಗಳಲ್ಲಿ ಸಂಪ್ರದಾಯವಾಗಿ ಮುಂದುವರೆದು ಬಂದಿದೆ. ಉತ್ತರ ಕರ್ನಾಟಕದಲ್ಲಿ ಪಂಚಮಿ ಅತಿ ದೊಡ್ಡ ಹಬ್ಬ. ಅಂದು ಹೆಣ್ಣು ಮಕ್ಕಳನ್ನು ಆಹ್ವಾನಿಸಿ ಉಡುಗೊರೆ ನೀಡಿ ಗೌರವಿಸುತ್ತಾರೆ. ಪಂಜಾಬಿನಲ್ಲಿ ಸರ್ಪ ದೇವತೆಯ ಸೂಚಕವಾಗಿ ಗೋಡೆಯ ಮೇಲೆ ಕಪ್ಪು ಚಿತ ಬರೆದರೆ ಉತ್ತರ ಪ್ರದೇಶದಲ್ಲಿ ಗೋಡೆಯ ಮೇಲೆ ಸರ್ಪ ಮತ್ತು ಗರುಡನ ಚಿತ್ರ ಬರೆಯುತ್ತಾರೆ. ಇದು ಮನೆಗೆ ಸರ್ಪಭಾಧೆಯಿಲ್ಲ ಎಂದು ನಂಬಿಗೆಗಾಗಿ. ಮಹಾರಾಷ್ಟ್ರದಲ್ಲಿ ಹುತ್ತಕ್ಕೆ ಹಾಲೆರೆದು ಅಕ್ಕಿ ಹಾಕಿ ಪೂಜಿಸುತ್ತಾರೆ. ಮನೆಯ ಬಾಗಿಲಲ್ಲಿ ಆಸ್ತಿಕ ಎಂದು ರುಷಿಯ ಹೆಸರು ಬರೆಯುವುದರಿಂದ ಸರ್ಪ ಒಳಗೆ ಬರುವುದಿಲ್ಲ ಎಂಬ ನಂಬಿಕೆ ದೇಶದೆಲ್ಲೆಡೆ ಇದೆ. ಈ ಹಬ್ಬ ಒಂದು ಕಡೆ ಭಯ ನಿವಾರಕ, ಇನ್ನೊಂದು ಕಡೆ ಹೆಣ್ಣಿನ ತವರಿನ ಪ್ರೀತಿ ಸಂಕೇತವಾಗಿ ಬೆಳೆದು ಬಂದಿದೆ. ಹಸಿರುತುಂಬಿ ಕಂಗೊಳಿಸುವ ಮಳೆಗಾಲದಲ್ಲಿ ಬರುವ ಶ್ರಾವಣ ಮಾಸದಲ್ಲಿ ಹಾವುಗಳ ಕಾಟ ಸ್ವಲ್ಪ ಹೆಚ್ಚು. ಇವುಗಳ ಬಾಧೆ ತಟ್ಟದಿರಲಿ ಎಂಬ ಉದ್ದೇಶದಿಂದ ಈ ಪೂಜೆ ಬಂದಿರಬಹುದೆಂಬ ಅಭಿಪ್ರಾಯವೂ ಇದೆ. ಹಾವುಗಳಿದ್ದ ಹೊಲಗಳಲ್ಲಿ ಬೇರೆ ಕ್ರಿಮಿ ಕೀಟಗಳ ಬಾಧೆಯಿಲ್ಲ ಇದೂ ಧನ ಧಾನ್ಯ ರಕ್ಷಕನಾಗಿದ್ದ ನಾಗನಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ಪೂಜೆ ಪ್ರಾರಂಭವಾಗಿರಬಹುದು. ಅಲ್ಲಿ ಸಂತಾನ ಪ್ರಾಪ್ತಿ, ರೋಗನಿವಾರಣೆ, ಯೋಗಸಿದ್ಧಿಗಳಿಗಾಗಿ ನಾಗ ಪೂಜೆ ರೂಢಿಯಲ್ಲಿ ಬಂದಿರುವುದಕ್ಕೆ ಕಾರಣ ಆಗಿರಬಹುದು.

ಜಾನಪದ ಸಾಹಿತ್ಯದಲ್ಲಿ ನಮಗೆ ನಾಗರ ಪಂಚಮಿಹಬ್ಬದ ಕುರಿತು ಸಾಕಷ್ಟು ಮಾಹಿತಿ ಲಭ್ಯವಾಗುತ್ತದೆ. ಜನಪದದಲ್ಲಿ ಹೋದ ಬಾರಿ ಪಂಚಮ್ಯಾಗ, ಬೇಕಾದ್ದು ಮಾಡಿದೆನವ್ವ, ನೆನಪಾಗಿ ಕಾಡುತೈತಿ ನನಗೊಟ್ಟಿ, ಅದರ ಏನು ಸುಟ್ಟಿ ಎಂಬುದಾಗಿ ಹೆಣ್ಣುಮಗಳೊಬ್ಬಳು ಹಬ್ಬವನ್ನು ನೆನಪಿಸಿಕೊಳ್ಳುವ ಪರಿ ಬರುತ್ತದೆ. ನಾಗರ ಪಂಚಮಿ ಹೆಣ್ಣು ಮಕ್ಕಳ ಹಬ್ಬವಾಗಿ ಪ್ರಾಮುಖ್ಯತೆ ಪಡೆದಿದೆ. ಗಂಡನ ಮನೆಯನ್ನು ಬೆಳಗಲು ಹೋದ ಹೆಣ್ಣಿಗೆ ಪಂಚಮಿ ಹಬ್ಬ ತವರಿನ ಕಡೆ ಮನಸ್ಸನ್ನು ವಾಲಿಸು ಹಬ್ಬ. ತವರಿನವರು ತನ್ನನ್ನು ಹಬ್ಬಕ್ಕೆ ಕರೆದೊಯ್ಯಲು ಬರುವ ದಾರಿಯನ್ನೇ ಎದುರು ನೋಡುತ್ತಿರುತ್ತಾಳೆ. ಅವರ ರುವಿಕೆಗೆ ಚಡಪಡಿಸುತ್ತಿರುತ್ತಾಳೆ. ಅವರು ಬರುವುದು ತಡವಾದರೆ ತನ್ನನ್ನು ಕರೆಯಲು ಬಾರದ ಅವರನ್ನು ತಾಯಿ ತಂದಿ ಇವರು ನಾಯಿ ಮಾರಿಯವರು ಮಾಯೆ ಇಲ್ಲದ ಮರತಾರ ಬಿಟ್ಟಿ, ಹೊಡಿಸಬೇಕ ಕಟ್ಟಿ ಎಂದು ಗರತಿ ಶಪಿಸುತ್ತಾಳೆ. ತನ್ನನ್ನು ಕರೆದೊಯ್ಯಲು ಬಂದ ಅಣ್ಣನನ್ನು ಕಂಡು ಹಿಗ್ಗಿ ಅತ್ತೆ ಮಾವಂದಿರಿಗೆ ವಂದಿಸಿ, ಗಂಡನ ಅನುಮತಿ ಪಡೆದು ನಾ ಮಾತ್ರ ಹೋಗತಿನಿ ನೀವು ಮಾತ್ರ ಕಳುಹಬೇಕು ಸಂಶಾ ಬಿಟ್ಟು ಮನದಾನ ಸಿಟ್ಟು ಎಂದು ಕೋರುತ್ತಾಳೆ. ಹಿಗ್ಗಿನಲಿ ಅಣ್ಣನ ಜೊತೆ ಗೊಂಡ್ಯಾದ ಹಣಿ ಪಟ್ಟಿ ಒನ ಹಂಡ ಹೋರಿಗಳ ಶೃಂಗರಿಸಿದ ಬಂಡಿಯಲ್ಲಿ ಅಣ್ಣನ ಜೊತೆ ಕುಳಿತು ತವರಿಗೆ ಹೊರಡುತ್ತಾಳೆ. ಅವಳಿಗೆ ತನ್ನ ಗೆಳತಿಯರೊಡನೆ ಆಡಿದ ನೆನಪು, ತನ್ನ ವಾರಿಗೆಯವರ, ತನ್ನ ಬಾಲ್ಯ ಗೆಳತಿಯರ ಜೊತೆಯಲ್ಲಿ ಪಂಚಮಿಯಲ್ಲಿ ಆಡಿದ ಜೋಕಾಲಿ, ಕೈಗಳಿಗೆ ಹಚ್ಚಿಕೊಂಡ ಮದರಂಗಿಯನ್ನು ನೆನಪಾಗುತ್ತದೆ. ಇದನ್ನು ನಾವು ಇಂದೂ ಹಳ್ಳಿಗಳಲ್ಲಿ ಕಾಣಬಹುದು. ಹಿಂದಿನ ಆ ದಿನಗಳನ್ನು ಮೆಲುಕು ಹಾಕಿಸಲು ಅವಕಾಶ ಕಲ್ಪಿಸಿಕೊಡುವ ಹಬ್ಬ ಈ ನಾಗರ ಪಂಚಮಿ ಹಬ್ಬ.

ಈ ಹಬ್ಬಕ್ಕೆ ಸಂಬಂಧಿಸಿದಂತೆ ಒಂದೆರೆಡು ಕಥೆಗಳೂ ರೂಢಿಯಲ್ಲಿದೆ. ರೈತನೊಬ್ಬ ಹೊಲದಲ್ಲಿ ಉಳುವಾಗ ಹಾವಿನ ಮರಿಗಳು ನೇಗಿಲಿಗೆ ಸಿಕ್ಕಿ ಸತ್ತವಂತೆ. ಇದನ್ನು ತಿಳಿದ ತಾಯಿ ನಾಗಿಣಿ ರೈತನ ಮನೆಗೆ ಹೋಗಿ ಅವರ ಮನೆಯವರನ್ನೆಲ್ಲಾ ಕಚ್ಚಿ ಸಾಯಿಸಿತಂತೆ. ಸಾಲದೆಂಬಂತೆ ಮದುವೆಯದ ರೈತನ ಮಗಳನ್ನು ಕಚ್ಚಲು ಅವಳ ಮನೆಯತ್ತ ಹೋಯಿತಂತೆ. ಅಲ್ಲಿ ಅವಳು ಮಣ್ಣಿನ ನಾಗರ ಮಾಡಿ ಹಾಲೆರೆದು ಪೂಜಿಸುತ್ತಿದ್ದಳಂತೆ. ಇದನ್ನು ಕಂಡು ಮನಸ್ಸು ಕರಗಿ ನಿನ್ನ ಮನೆಯವರನ್ನೆಲ್ಲ ಕೊಂದು ನಿನ್ನನ್ನೂ ಕೊಲ್ಲಲು ಇಲ್ಲಿಗೆ ಬಂದೆ. ನಿನ್ನ ಪೂಜೆಯಿಂದ ಸಂತೋಷಗೊಂಡಿದ್ದೇನೆ. ನಿನಗೆ ಏನು ವರ ಬೇಕೆಂದು ಕೇಳಿತಂತೆ. ಅವಳು ತಾಯಿ, ತಂದೆ, ತವರಿನವರನ್ನು ಬದುಕಿಸುವಂತೆ ಕೇಳಿದಳಂತೆ. ನಾಗಿಣಿ ವಿಷವನ್ನು ಹಿಂಪಡೆದು ಅವರನ್ನು ಬದುಕಿಸಿದಳಂತೆ. ಅಂದು ಶ್ರಾವಣ ಶುದ್ಧ ಪಂಚಮಿ ಆಗಿತ್ತೆಂದೂ, ಅದಕ್ಕಾಗಿ ಈ ಹಬ್ಬ ಹುಟ್ಟಿತೆಂದೂ, ಹೆಣ್ಣುಮಕ್ಕಳು ತವರಿಗೆ ಹೋಗುವುದು ರೂಢಿಯಲ್ಲಿ ಬಂದಿತೆಂದೂ ಕಥೆ ಹೇಳುತ್ತದೆ. ಇದೇ ರೀತಿ ಬಡ ಕುಟುಂಬದಲ್ಲಿ ಹುಟ್ಟಿದ ಸುಂದರಿಯೊಬ್ಬಳು ಸುದೈವದಿಂದ ಸಿರಿವಂತಳಾದಳಂತೆ. ಅಣ್ಣ ನಾಗರ ಪಂಚಮಿಗೆ ಅವಳನ್ನು ಊರಿಗೆ ಕರೆದೊಯ್ಯಲು ಬಂದಾಗ ದರಿದ್ರದಿಂದ ಕೂಡಿದ ಅಣ್ಣನಿಗೆ ಆಭರಣದಿಂದ ಕಂಗೊಳಿಸುತ್ತಿದ್ದ ತಂಗಿಯನ್ನು ಕಂಡು ಅವಳ ಆಭರಣಕ್ಕೆ ಪೀಡಿಸಿ ಕೊಡಲು ಒಪ್ಪದಾಗ ಅವಳನ್ನು ಕೊಲ್ಲಲು ಕಲ್ಲೊಂದನ್ನು ಎತ್ತಲು ಹೋದನಂತೆ. ಅದರ ಕೆಳಗಿದ್ದ ನಾಗರ ಅವನಿಗೆ ಕಚ್ಚಿ ತಂಗಿಯನ್ನು ಉಳಿಸಿತಂತೆ. ಅಣ್ಣನ ಸಾವಿನಿಂದ ನೊಂದ ತಂಗಿ ನಾಗನನ್ನು ಪ್ರಾರ್ಥಿಸಿ ಅಣ್ಣನ ಜೀವವನ್ನು ಮರಳಿ ಪಡೆದಳಂತೆ. ಅಂದು ಶ್ರಾವಣ ಶುದ್ಧ ಪಂಚಮಿ ಆಗಿತ್ತಂತೆ. ಈ ಕಥೆಗಳು ನಾಗರ ಪಂಚಮಿ ಹಬ್ಬ ಹೆಣ್ಣುಮಕ್ಕಳಿಗೆ ಏಕೆ ವಿಶೇಷ ಎನ್ನುವುದನ್ನು ಹೇಳುತ್ತವೆ.

ಪಂಚಮಿ ಹಬ್ಬಕ ಉಳಿದಾವ ದಿನ ನಾಕ
ಅಣ್ಣ ಬರಲಿಲ್ಲ ಯಕ ಕರಿಯಾಕ?

ಎಂದು ಅಣ್ಣನ ಬರವನ್ನೇ ಕಾಯುವುದನ್ನು ಜನಪದ ಹಾಡುಂದು ಹೀಗೆ ಹೇಳುತ್ತದೆ.

ಜೋಡಿಯವರು ಗೆಳತ್ಯಾರು, ನೋಡುವರು ನನದಾರಿ, ನಾನಾತರದ ಸೀರೆ ಉಡುವವರ, ನನ್ನ ಕರೆಯುವರು ಎಂಬುದಾಗಿ ಹಬ್ಬದ ಬಗ್ಗೆ ಹಗಲು ಕನಸು ಕಾಣುತ್ತ ಮೈಮರೆತಿರುವಾಗ ಅವಳಿಗೆ ತವರು ಮನೆ ಬಂದಿದ್ದೇ ಗೊತ್ತಾಗುವುದಿಲ್ಲ. ಅಣ್ಣ ತಂಗಿಯನ್ನು ಎಚ್ಚರಗೊಳಿಸಿ ತವರು ಮನೆ ತೋರಿಸಿದಾಗ ತನ್ನ ಬರವನ್ನೇ ಕಾಯುತ್ತಿದ್ದ ಹೆತ್ತಮ್ಮನನ್ನು ಕಂಡು ಚಂಗನೆ ಬಂಡಿಯಿಂದ ಹಾರಿ ಅಮ್ಮನನ್ನು ಸಂಭ್ರಮದಿಂದ ತಬ್ಬಿಕೊಳ್ಳುತ್ತಾಳೆ. ಬೆಳೆದು ನಿಂತ ತಮ್ಮಂದಿರೊಡನೆ ಮಾತನಾಡಿ ನಲಿಯುತ್ತಾಳೆ. ಆ ಕ್ಷಣ ಅವಳಿಗೆ ತನ್ನ ತವರ ಮನೆ ಸ್ವರ್ಗವಾಗಿ ಕಾಣುತ್ತದೆ.

ಅಂದು ಹಬ್ಬದ ದಿವಸ ಹುತ್ತಪ್ಪ ನಾಗಪ್ಪನಿಗೆ ಪೂಜೆ ಮಾಡಿ ಹಾಲು ಹೊಯ್ಯುವ ದಿನ ಗೆಳತಿಯರೊಡನೆ ಕೂಡಿ

ನಾಗರ ಪಂಚಮಿ ನಾಡಿಗೆ ದೊಡ್ಡದು
ನಾಡ ನಾಯರು ಕೂಡೋಣ, ಎಲೆ ಗೆಳತಿ
ನಾಗಪ್ಪಗ ಹಾಲ ಎರಿಯೋಣ

ನಾಗಪ್ಪಗ ಹಾಲ ಹೊಯ್ಯೋಣ
ನಾಗರ ಹೆಡಿಯಂಗ ಆಡೋಣ
ನಾಗರ ಪಂಚಮಿ ನಾಡ ಹೆಣ್ಣಿಗೆ ಹಬ್ಬ
ನಾಗಪ್ಪಗ ಹಾಲ ಎರಿಯೋಣ ನನಗೆಣತಿ
ನಾಗರ ಹೆಡಿಯಂಗ ಆಡೋಣ.

ಹಾರೂತಿ ನಿನ ಬಣ್ಣ ಹಾಲ ಕಾಸಿದ ಗಿಣ್ಣ
ಕಾಜಿನ ಬಳೆಯು ಕೈತುಂಬ ಹಾಕ್ಕೊಂಡು
ನಾಗಪ್ಪಗ ಹಾಲ ಎರೆದಾಳೋ

ಗುರುದೇವ ನಿಮಪಾಲ ಹರಹರನೆ
ನಿಮಪಾಲ ಶರಣರಿಗೆ ಹಾಲು
ಹಿರಿಯರಿಗೆ ಎರೆಯೋಣ ಕಿರಿಯರಿಗೆ ಹಾಡಿ ಹರಿಸೋಣ

ವಾರೀಗಿ ಗೆಳತೇರ ಕೇರಿಯ ಕೆಳೆದೇರ
ಸೇರಿ ಒಂದೆಡೆ ಕೋಡೋಣ ಜೋಕಾಲಿ
ತೂರಿ ಜೀತವ ಆಡೋಣ
ಇದು ಹೆಣ್ಣು ಮಕ್ಕಳ ಹಬ್ಬ. ಮಾಂಗಲ್ಯಪ್ರದ, ಸಂತಾನಪ್ರದ ಎಂದು ನಂಬಿಗೆ.

ನಾಗರ ಪಂಚಮಿ ನಾಡಹೆಣ್ಣಿಗೆ ಹಬ್ಬ
ನಾಗಪ್ಪಗ್ಹಾಲ ಎರೆಯೋಣ ನನ್ ಗೆಳತಿ
ನಾಗರ ಹೆಡಿಹಾಂಗ ಆಡೋಣ

ಅಳ್ಳಿಟ್ಟು ತಂಬಿಟ್ಟು ಮಾಡಿಟ್ಟ ಎಳ್ಳುಂಡೆ
ದಳ್ಳುರಿ ಕಣ್ಣ ಹಣೆಯಾನ ಕೊರಳಾನ
ನಾಗ ನಿನಗೆಡೆಯೋ ಕೈಮುಗಿರೋ||

ಹೊಸ ಸೀರೆ, ಕುಪ್ಪಸ ತೊಟ್ಟುಕೊಂಡು ಮುಡಿಯನ್ನು ಸಿಂಗರಿಸಿಕೊಂಡು ಕೈತುಂಬ ಬಳೆ ತೊಟ್ಟು ಸಿಂಗಾರವಾಗಿ ನಾಗಪ್ಪನಿಗೆ ಹಾಲೆರೆಯುವ ಗರತಿತನ್ನ ಗೆಳತಿಯರನ್ನು ಸಡಗರ, ಸಂಭ್ರಮದಿಂದ ನಾಗನ ಹಾಲೆರೆಯಲು ಕರೆಯುತ್ತಾಳೆ. ಹೀಗೆ ಹಾಲು ಎರೆಯುವಾಗ ಎಲ್ಲರಿಗೂ ಪಾಲು ಸಲ್ಲಲೆಂದು ಪ್ರಾರ್ಥಿಸುತ್ತಾಳೆ. ತಂಬಿಟ್ಟು, ಎಳ್ಳುಂಡೆ ನೈವೇದ್ಯ ಮಾಡುತ್ತಾಳೆ. ತಾನೂ ತಿಂದು ಗೆಳತಿಯರಿಗೂ ಕೊಡುತ್ತಾಳೆ. ಗೆಳತಿಯರನ್ನು ಜೋಕಾಲಿ ಆಡಲು ಕರೆಯುತ್ತಾಳೆ. ಹೀಗೆ ಆಡುವಾಗ ತನ್ನ ಗಂಡನ ಮಯ ಸುದ್ಧಿಗಳನ್ನು ಹಂಚಿಕೊಳ್ಳುತ್ತಾಳೆ. ಇದು ನಮ್ಮ ಜಾನಪದರು ನಾಗರ ಪಂಚಮಿಯ ಬಗೆಗೆ ಹಾಡಿದ ಒಂದು ಹಾಡು.

ಪಂಚಮಿ ಬರಲೆವ್ವ ಮಂಚ ಕಟ್ಟಲಿ ಮನಿಗೆ
ಕೆಂಚಿ ಗೆಳತೇರು ಕೂಡಾಲಿ ನಮಜೀಕ
ಮಿಂಚಿ ಮುಗಿಲಿಗಿ ಏರಾಲಿ.

ನಮ್ಮ ಜೋಕಾಲಿಯ ಜೀಕು ಮುಗಿಲು ಮುಟ್ಟಲಿ ಎಂದು ಗರತಿ ಹಬ್ಬ ಮುಗಿದ ನಂತರ ಮುಂದಿನ ಹಬ್ಬಕ್ಕೆ ಮತ್ತೆ ಕೂಡೋಣವೆಂದು ಗೆಳತಿಯರಿಗೆ ಹೇಳುವುದಿದೆ. ನಾಗರ ಪಂಚಮಿ ನಮ್ಮ ಹಳ್ಳಿಗರ ಒಂದು ವಿಶಿಷ್ಟವಾದ ಹಬ್ಬ. ಪಂಚಮಿ ಹಬ್ಬದ ಸೊಗಸನ್ನು ನಾವು ಹಳ್ಳಿಗಳಲ್ಲಿ ಮಾತ್ರ ಕಾಣಲು ಸಾಧ್ಯ.
10-8-2013
********

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.