ನಾಯಕ-ನಾಯಕಿ

ಎರಡು ದೋಣಿಯ ಪಯಣದಲಿ..ದಿಶಾ ಯಶಸ್ಸಿನೆಡೆಗೆ..?!

Disha Kannada Actress Article 3ಓದೋ ವಯಸ್ಸಿನಲ್ಲಿ ಓದಿನ ಕಡೆ ಮಾತ್ರ ಗಮನ ಹರಿಸು..ಮತ್ತಿನ್ನೇನೂ ಮಾಡೋದು ಬೇಡ ಎಂದು ಪಾಲಕರು ಮಕ್ಕಳ ಅಭ್ಯಾಸವನ್ನು ಪಾಲನೆ ಮಾಡೊದೇ ಹೆಚ್ಚು. ಇನ್ನು ಓದಿನ ಜೊತೆ ಸೈಡಲ್ಲಿ ಹಾಡು, ಡ್ಯಾನ್ಸು, ಕ್ರೀಡೆಗೆ ಪ್ರೋತ್ಸಾಹಿಸಿದರೆ ಅದೇ ಹೆಚ್ಚು. ಅಂತಹುದರಲ್ಲಿ ಮುದ್ದಿನ ಮಗಳಿಗಿರುವ ಸಿನಿಮಾ ನಾಯಕಿಯಾಗಬೇಕೆಂಬ ಆಸೆಯನ್ನು ಓದಿನ ಜೊತೆ ಜೊತೆಗೇ ಮಾಡು..ಅಭ್ಯಂತರವಿಲ್ಲ ಎಂದು ತಂದೆ-ತಾಯಿ ಹೇಳುತ್ತಾರೆಂದರೆ ಅಂತಹ ಪಾಲಕರಿಗೆ ಮಕ್ಕಳು ಎಷ್ಟು ಋಣಿಯಾಗಿದ್ದರೂ ಕಡಿಮೆಯೇ. ಇಂತಹ ಪ್ರಕರಣದಲ್ಲಿ ಮಗಳಿಗೂ ಸ್ವಲ್ಪ ಸವಾಲು ಹೆಚ್ಚೇ. ಓದು ಹಾಗು ನಟನೆಯನ್ನು ಏಕಕಾಲಕ್ಕೆ ಸರಿದೂಗಿಸಿಕೊಂಡು ಹೋಗಲು ಇಂತವರಿಗೆ ಎಷ್ಟು ಸಹನೆ, ಸಮಾಧಾನ, ಸಮಯ ಇದ್ದರೂ ಕಡಿಮೆಯೇ. ಈ ಮೂರನ್ನೂ ಸ್ವಲ್ಪ ಹೆಚ್ಚೇ ಎಂಬಂತೆ ಹೊಂದಿರುವಾಕೆ ಮಾತ್ರ ಇಷ್ಟು ಚಿಕ್ಕ ವಯಸ್ಸಲ್ಲೇ ನಾಲ್ಕು ಚಿತ್ರಗಳ ನಾಯಕಿಯಾಗಿ ನಟನೆಯನ್ನೂ ನಿಭಾಯಿಸಲು ಸಾಧ್ಯ. ಇಂತಹ ಕಷ್ಟಸಾಧ್ಯವನ್ನು ಸುಲಭಸಾಧ್ಯವನ್ನಾಗಿಸಿಕೊಂಡವಳೇ ದಿಶಾ ಪೂವಯ್ಯ ಎಂಬ ದಶ ದಿಕ್ಕುಗಳಲ್ಲೂ ತನ್ನ ಸೌಂದರ್ಯವನ್ನು ದರ್ಶನ ಮಾಡಿಸುತ್ತಿರುವ ಸುಂದರಿ.

Disha Kannada Actress Article 2ಕಾಫೀ ಎಸ್ಟೇಟಿನಿಂದ ಸಿನಿಮಾ ಎಸ್ಟೇಟಿಗೆ..

ಮಡಿಕೇರಿಯ ಮುಕ್ಕೋಡ್ಲು ಎಂಬ ಹಳ್ಳಿಯ ಕಾಫೀ ಎಸ್ಟೇಟ್‌ನಿಂದ ಸ್ಟೇಟ್ ಲೆವೆಲ್ಲಿನಲ್ಲಿ ಮಿಂಚುತ್ತಿರುವ ದಿಶಾ ಎಂಬ ಕಣ್ಣಂಚ ಸುಳಿಮಿಂಚು ಮಡಿವಂತಿಕೆಯನ್ನು ಮಡಿಚಿಟ್ಟು ಅಡಿಯಿಂದ ಮುಡಿವರೆಗೂ ತನ್ನ ಗ್ಲಾಮರ್ ಅನ್ನು ತೋರುತ್ತಾ ನೋಡುಗರು ಬೆರಗಾಗುವಂತೆ ಮಾಡುತ್ತಿದ್ದಾಳೆ !

ಹತ್ತನೆಯ ತರಗತಿಯವರೆಗೂ ಕುಶಾಲನಗರದಲ್ಲಿ ಕುಶಾಲವಾಗಿ ಓದಿಕೊಂಡು ಪಿ.ಯು.ಸಿಗೆ ಬೆಂಗಳೂರಿಗೆ ಬಂದ ದಿಶಾಳಿಗೆ ಗಾಂಧೀನಗರದ “ಹುಡುಗರು” ಚಿತ್ರರಂಗದ ದಾರಿ ತೋರಿಸಿದರು.
ನಟಿ ರಾಧಿಕಾಳನ್ನು ಸ್ವಲ್ಪ ಹೋಲುವ ಈ ಮುಖ ನಿಮಗೆ ನೆನಪಿರಬಹುದು, ಹುಡುಗರು ಚಿತ್ರದ ಫೈಟ್ ಸೀನೊಂದಕ್ಕೂ ಮೊದಲು ವಿಶಾಲ್‌ನೊಟ್ಟಿಗೆ ನಟಿಸಿದ ಮದುಮಗಳೇ ಈ ದಿಶಾ.

ಚಿಕ್ಕ ಮಗುವಿನಿಂದಲೂ ನಟಿಯಾಗಬೇಕೆಂಬ ಮಗಳ ಆಸೆಗೆ ನೀರೆರೆದು ದಿಶಾಳ ಕನಸನ್ನು ಚಿಗುರುವಂತೆ ನೋಡಿಕೊಂಡ ಪೂವಯ್ಯ ದಂಪತಿಗಳು ಇಂದು ನಗುವ ಅಂದವಾದ ಹೂವೊಂದನ್ನು ಈ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಈ ಹೂವು ತನ್ನ ಕೀರ್ತಿಯ ಕಂಪನ್ನು ಚಿತ್ರಜಗತ್ತಿನಲ್ಲಿ ಪಸರಿಸುತ್ತಾ ಜನಮನವನ್ನು ರಂಜಿಸಿದರೆ ಅದೇ ಆ ಹೂವಿನ ಸೃಷ್ಟಿಕರ್ತರಿಗೆ ಸಾರ್ಥಕ್ಯ ನೀಡುತ್ತದೆ. ಈಗಾಗಲೇ ಸಾರ್ಥಕತೆಯ ಆರಂಭ ಆರಂಭವಾಗಿದೆ ಎನ್ನಬಹುದು ದಿಶಾ ಒಪ್ಪಿಕೊಂಡು ನಟಿಸುತ್ತಿರುವ ಸಾಲು ಸಾಲು ಚಿತ್ರಗಳ ಬಗ್ಗೆ ಕೇಳಿದರೆ.

Disha Kannada Actress Article 1ಬಿ.ಸಿ.ಎ ತಲೆ ಬಿಸಿಯೇನಲ್ಲ

ತುಂಬಾ ಶಾಂತಸ್ವಭಾವದ ಸದಾ ಹಸನ್ಮುಖಿ ದಿಶಾ ಈಗ ಏಕಕಾಲಕ್ಕೆ ಎರಡು ದೋಣಿಯ ಮೆಲೆ ಪಯಣಿಸುತ್ತಿದ್ದಾಳೆ. ಆಕೆಯ ಸಮಯ ಪರಿಪಾಲನೆ ಹಾಗು ಎರಡರಲ್ಲೂ ಇರುವ ಶ್ರದ್ಧೆಯನ್ನು ನೋಡಿದರೆ ದೋಣಿ ಮುಳುಗದೆ ಎರಡೂ ಗೆಲುವಿನ ದಡ ಸೇರುವಂತೆ ಗೋಚರಿಸುತ್ತಿದೆ. ಬಿ.ಸಿ.ಎ ಎರಡನೆಯ ಸೆಮಿಸ್ಟರ್‌ನಲ್ಲಿ ಓದುತ್ತಿರುವ ದಿಶಾ ಬಿಡುವು ಮಾಡಿಕೊಂಡು ಚಿತ್ರೀಕರಣದಲ್ಲೂ ಭಾಗವಹಿಸುತ್ತಿದ್ದಾಳೆ. ಅದರ ಫಲಶೃತಿಯಾಗಿ ಹುಡುಗರು ಚಿತ್ರದ ನಂತರ ಅಗಮ್ಯ. ಸ್ಲಮ್. ಗ್ಯಾಂಬ್ಲರ್ ಹಾಗು ಚಾರ್ಮುಡಿ ಚಿತ್ರಗಳಲ್ಲಿ ಈಕೆ ನಾಯಕಿಯಾಗಿ ನಟಿಸಿದ್ದೇ ಸಾಕ್ಷಿ !

Disha Kannada Actress Article 5ಅಗಮ್ಯ ಚಿತ್ರದ ಭೂತ ಅಭಿನಯದಲ್ಲೂ ಕಾಡಿದಾಗ !

ಭೂತಕ್ಕೆ ಹೆದರಿ ಓಡಿ ಬರುತ್ತಾ ಚೇಸಿಂಗ್ ಸನ್ನಿವೇಶವೊಂದರಲ್ಲಿ ಸೀದಾ ಬಂದು ಕೋಣೆಯೊಳಗೆ ಅಡಗಿಕೊಳ್ಳುವಾಗ ನಿಜಕ್ಕೂ ಯಾವುದೋ ಅಗೋಚರ ದುಷ್ಟ ಶಕ್ತಿಯ ಅಸ್ತಿತ್ವ ತನ್ನ ಸುತ್ತ ಇದೆಯೇನೋ ಎಂಬಂತೆ ದಿಶಾಳಿಗೆ ಭಾಸವಾಯಿತಂತೆ ! ಆಗ ಉಂಟಾದ ಸಹಜವಾದ ಹೆದರಿಕೆಯ ಭಾವ ದೃಶ್ಯದ ನೈಜತೆಗೆ ಸಹಕಾರಿಯಾಗಿದ್ದನ್ನು ರೋಚಕವಾಗಿ ನೆನಪಿಸಿಕೊಳ್ಳುತ್ತಾಳೆ ದಿಶಾ. ಯಾವುದೇ ಚಿತ್ರದ ಚಿತ್ರೀಕರಣದಲ್ಲಿ ದಿಶಾ ಪೂರ್ಣವಾಗಿ ತೊಡಗಿಸಿಕೊಂಡು ಪಾತ್ರಕ್ಕೆ ನ್ಯಾಯ ಸಲ್ಲಿಸಲು ಹವಣುತ್ತಾಳೆ ಎಂದು ಆಕೆಯನ್ನು ನಿರ್ದೇಶಿಸಿದ ಹಲವಾರು ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದು ಬೆಳೆಯುವ ನವ ನಟಿಯಲ್ಲಿರಬೇಕಾದ ಲಕ್ಷಣ. ಕೇವಲ ಲಕ್ಷಣವಾಗಿದ್ದರೆ ಮಾತ್ರ ಸಾಲದು ಇಂಥಹ ಲಕ್ಷವೂ ಇದ್ದರೊಳಿತಲ್ಲವೆ? ಅದು ದಿಶಾಳಲ್ಲಿದೆ ಎಂದೆನಿಸುತ್ತದೆ. ಹಾಗಾಗಿ ಚಿತ್ರರಂಗದಲ್ಲಿ ಆಕೆ ಬಹು ಎತ್ತರಕ್ಕೆ ಬೆಳೆಯಬಹುದೆಂದು ನಮಗನ್ನಿಸುತ್ತದೆ.

ಚಿನ್ಮಯ ಎಂ.ರಾವ್ ಹೊನಗೋಡು
8-8-2012

Back to top button

Adblock Detected

Please consider supporting us by disabling your ad blocker