ಸಂಗೀತ

ಸಂಗೀತ ಸಾಧಕ..ಸಾರಂಗಿ ಮಾಂತ್ರಿಕ..ಉಸ್ತಾದ್ ಫಯಾಜ್ ಖಾನ್

ಉಸ್ತಾದ್ ಫಯಾಜ್ ಖಾನ್…ಈ ಹೆಸರು ಕೇಳಿದಾಕ್ಷಣ ಸಂಗೀತಪ್ರಿಯರ ಮನಸ್ಸು ಉಲ್ಲಾಸಗೊಂಡು ಕಿವಿಗಳು ಒಮ್ಮೆ ನೆಟ್ಟಗಾಗುತ್ತವೆ. ಇನ್ನು ಹಿಂದುಸ್ಥಾನಿ ಸಂಗೀತ ಆಸ್ವಾದಕರ ಕಿವಿಗಳಿಗಂತೂ ಒಮ್ಮೆ ಕೀಲಿ ಕೊಟ್ಟಂತಾಗಿ ಹಳೆಯ ಕಾಲಕ್ಕೆ ಹೋಗಿಬರುತ್ತವೆ.
ಹೌದು ಆಗ್ರಾ ಘರಾಣೆಯ ಗಾನದಿಗ್ಗಜ ಫಯಾಜ್ ಖಾನ್ ಒಬ್ಬರಾದರೆ ಕಿರಾನಾ ಘರಾಣೆಯ ಇಬ್ಬರು ಜೋಡಿ ಗಾಯಕರಲ್ಲಿ ಒಬ್ಬರು ನಿಯಾಜ್ ಅಹಮದ್ ಖಾನ್ ಇನ್ನೊಬ್ಬರು ಫಯಾಜ್ ಅಹಮದ್ ಖಾನ್. ಫಯಾಜ್ ಖಾನ್ ಹಾಗು ಫಯಾಜ್ ಅಹಮದ್ ಖಾನ್ ಇವರಿಬ್ಬರೂ ಕಾಲವಾದ ಮಹಾತ್ಮರು.

ಆದರೆ ಧಾರವಾಡದ ಸಂಗೀತಗಾರ ಉಸ್ತಾದ್ ಅಬ್ದುಲ್ ಖಾದರ್ ಖಾನ್ ಅವರ ಸುಪುತ್ರ ಉಸ್ತಾದ್ ಫಯಾಜ್ ಖಾನ್ ನಮ್ಮ ಈ ಕಾಲದ ಅಪ್ರತಿಮ ಸಾರಂಗಿ ವಾದಕ..ಸ್ವರ ಸಾಧಕ..ಸುಮಧುರ ಗಾಯಕ ! ನಮ್ಮೆದುರು ನಲಿದಾಡುತ್ತಿರುವ ನಡೆದಾಡುತ್ತಿರುವ ಸಂಗೀತ ಸರಸ್ವತಿ ! ಹಿಂದಿನ ಫಯಾಜ್ ಖಾನ್‌ಗಳ ಹೆಸರನ್ನು ಒಮ್ಮೆ ನೆನಪಿಸಿಕೊಳ್ಳುವಂತೆ ಮಾಡುವ..ಮುಂದೊಮ್ಮೆ ಆ ಇಬ್ಬರ ಜೊತೆಗೆ ತನ್ನ ಹೆಸರನ್ನೂ ಜನ ನೆನಪಿಸಿಕೊಳ್ಳುವಂತೆ ಸಾಧನೆ ಮಾಡಿರುವ, ಸಂಗೀತ ಕ್ಷೇತ್ರದ ಜೀವಂತ ದಂತಕಥೆ…ಸಾರಂಗಿಯಂಥಹ ಅತ್ಯಪರೂಪದ ಅತ್ಯಪೂರ್ವ ತಂತಿ ವಾದ್ಯದ ವಾದನದಲ್ಲಿ ಔನ್ನತ್ಯಕ್ಕೇರಿದಂತಹ ಸಾರ್ಥಕತೆ ನಮ್ಮ ನಿಮ್ಮೆಲ್ಲರ ಉಸ್ತಾದ್ ಫಯಾಜ್ ಖಾನ್ ಅವರದು.

ಹೀಗೆ ಶಾಸ್ತ್ರೀಯ ಸಂಗೀತ ಪರಂಪರೆಯ ಪರಿಕರಗಳಿಂದ ಈ ಫಯಾಜ್ ಖಾನ್ ಅವರನ್ನು ಪರಿಚಯಿಸಿದ್ದಾಯಿತು. ಇನ್ನು ತೀರಾ ಸರಳವಾಗಿ ಜನಸಾಮಾನ್ಯರ ದಿಕ್ಕಿನಿಂದ ಇವರಾರೆಂದು ನಿಮಗೆ ಪರಿಚಯಿಸಬೇಕೆಂದರೆ ಇತ್ತೀಚೆಗೆ ವರ್ಷಾನುಗಟ್ಟಲೆ ಪ್ರಸಾರವಾಗಿದ್ದ ಕಿರುತೆರೆಯ ಜನಪ್ರಿಯ ಧಾರಾವಾಹಿ “ಲಕುಮಿ”ಗೆ ..ಲಕುಮಿ..ಚಂದದ ಬಾಲೆ..ಚಂದನ ಮಾಲೆ…ಎಂದು ಶೀರ್ಷಿಕೆ ಗೀತೆಯನ್ನು ಭಾವಪೂರ್ಣವಾಗಿ ಹಾಡಿದ ಕಂಚಿನ ಕಂಠದ ಗಾಯಕ !
ನಾವು ನೀವೆಲ್ಲಾ ಕೇಳುವ ಎ. ಆರ್ ರೆಹಮಾನ್ ಸಂಗೀತದಲ್ಲಿ ಹಾಗು ಇನ್ನಿತರ ಚಿತ್ರಗೀತೆಗಳಲ್ಲಿ ಹಿನ್ನೆಲೆಯಲ್ಲಿ ಕೇಳಿಬರುವ ಮನಮಿಡಿಯುವ ಅತ್ಯದ್ಭುತ ಸಾರಂಗಿ ವಾದನಕ್ಕೆ ಫಯಾಜ್ ಖಾನ್ ಅವರ ಕೈಬೆರಳುಗಳದ್ದೇ ಕೈಚಳಕ! ಚಲನಚಿತ್ರ ಸಂಗೀತದಲ್ಲಂತೂ ಫಯಾಜ್ ಏಕಮೇವಾದ್ವಿತೀಯ ಸಾರಂಗಿ ವಾದಕ !
ಈ ಮಾತನ್ನು ಅನಿವಾರ್ಯವಾಗಿ ಹೇಳುವಷ್ಟು ಅನಿವಾರ್ಯತೆ ಏಕಿದೆಯೆಂದರೆ ಇಡೀ ದಕ್ಷಿಣ ಭಾರತದ ಚಲನಚಿತ್ರ ಸಂಗೀತಕ್ಕೆ ಫಯಾಜ್ ಅವರ ಸಾರಂಗಿ ವಾದನ ಅನಿವಾರ್ಯವಾಗಿ ಬೇಕೇ ಬೇಕು !….ಏಕೆಂದರೆ ಅವರನ್ನು ಬಿಟ್ಟು ಬೇರಾರೂ ಇಲ್ಲ…ಹಾಗಾಗಿ ಫಯಾಜ್ ಏಕಮೇವ..ಅದ್ವಿತೀಯ…!
ಇದು ಇಂದಿನ ಸಂಗೀತಕ್ಷೇತ್ರದ ದುರಾದೃಷ್ಟವಾದರೆ ಅವರೊಬ್ಬರಾದರೂ ಇದ್ದಾರಲ್ಲ..ಅದೇ ನಮ್ಮ ಅದೃಷ್ಟ..ಅದೇ ನಮ್ಮ ಸೌಭಾಗ್ಯ. ಫಯಾಜ್ ಅವರ ಸಾರಂಗಿ ನುಡಿಸುವಿಕೆಯಿಂದ ಆಕರ್ಷಿತರಾಗಿ ಇತ್ತೀಚೆಗೆ ಅದೂ ಕೆಲವೇ ಕೆಲವರು ಶಾಸ್ತ್ರೀಯವಾಗಿ ಸಾರಂಗಿ ವಾದನದಲ್ಲಿ ತಯಾರಾಗುತ್ತಿರುವುದು ಆಶಾದಾಯಕ ಸಂಗತಿ.

ಫಯಾಜ್ ಖಾನ್ ಸಂಗೀತಕ್ಕೆ ಬೆಲೆ?…ನೀವು ಸಂಗೀತಕ್ಕೆ ನೀಡುವ ಬೆಲೆ..

ಫಯಾಜ್ ಖಾನ್ ತುಂಬಾ ದುಬಾರಿಯಂತೆ…ದುರ್ಲಬವಂತೆ..ಅವರನ್ನು ಸಂಗೀತ ಕಾರ್ಯಕ್ರಮಕ್ಕೆ ಕರೆಸಲು ಆಗುವುದಿಲ್ಲವಂತೆ…ಕೈಗೇ ಸಿಗುವುದಿಲ್ಲವಂತೆ..ಇಂತಹ ಅಂತೆ ಕಂತೆಗಳ ಆಪಾದನೆಗಳ ಕಂತೆ ಸಾಮಾನ್ಯ ಎಲ್ಲಾ ದೊಡ್ಡ ಸಂಗೀತಗಾರರ ಮೇಲೂ ಇದ್ದೇ ಇರುತ್ತದೆ. ಅದಕ್ಕೆ ಫಯಾಜ್ ಏನು ಹೊರತಲ್ಲ. ಆದರೆ ಇವರು ಬೇರೆಲ್ಲರಿಗಿಂತಲೂ ಹೊರತು ಎಂಬುದಂತೂ ಸವಿಯಾದ ಸತ್ಯ !

ಫಯಾಜ್ ಅವರು ತನ್ನ ಕಛೇರಿಗೆ ಅಷ್ಟೇ ಕೊಡಿ..ಇಷ್ಟೇ ಕೊಡಿಯೆಂದು ಆಯೋಜಕರಿಗೆ ಕಷ್ಟ ಕೊಡುವಂತವರಲ್ಲ. ಆದರೆ ಆಯೋಜಕರು ಸಂಗೀತವನ್ನು ಎಷ್ಟರ ಮಟ್ಟಿಗೆ ಇಷ್ಟಪಡುತ್ತಾರೆಂದು ಅವರ ಮಾತಿನಲ್ಲೇ ಗಮನಿಸಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಸಂಗೀತಕ್ಕೆ ಆಯೋಜಕರು ಎಷ್ಟು ಬೆಲೆ ಕೊಡುತ್ತಾರೆ ಎಂಬುದನ್ನು ಆಳವಾಗಿ ಅಳೆದು ಅವರಿಗೆ ಬೆಲೆ ಕಟ್ಟುತ್ತಾರೆ. ಆಯೋಜಕರ ಉದ್ದೇಶ ಧ್ಯೇಯ ಫಯಾಜ್ ಅವರಿಗೆ ಇಷ್ಟವಾದರೆ ಎಷ್ಟಾದರೂ ಕೊಡಿ ಪರವಾಗಿಲ್ಲ ಎಂದು ಅವರ ಪರವಾಗಿ ನಿಂತು ತಮ್ಮ ಬೆಲೆಯನ್ನೂ ಹೆಳುವುದಿಲ್ಲ ! ಇದೇ ಬೆಲೆ ಕಟ್ಟಲಾಗದ ಸಂಗೀತದ ಲಕ್ಷಣ ಅಲ್ಲವೇ ?!

ಇತ್ತೀಚೆಗಷ್ಟೇ ಶಿವಮೊಗ್ಗದ ನಿನಾದ ಸಂಸ್ಥೆಯ ಬಿ.ಆರ್ ಮಧುಸೂದನ ಅವರ ಕರೆಗೆ ಓಗುಟ್ಟು ನಾನ್ ಕಮರ್ಷಿಯಲ್ ಸಂಗೀತ ಪ್ರತಿಭೆಯ ಶೋಧ ಕಾರ್ಯಕ್ರಮದಲ್ಲಿ ಫಯಾಜ್ ಭರಪೂರ ಒಂದು ದಿನ ಜನಸಾಮಾನ್ಯರಾಗಿ ಬೆರೆತುಬಿಟ್ಟರು! ಹೊಸ ಗಾಯಕರಲ್ಲೂ ಹೊಸತನವನ್ನು ಅರಸುತ್ತಾ ಮೈಮರೆತು ಕುಳಿತುಬಿಟ್ಟರು! ಆಚೆ ವರ್ಷ ಮುಂಗಾರಿನಲ್ಲಿ ಸಾಗರದ ತಬಲ ಶಾಲೆಯೊಂದರ ವಾರ್ಷಿಕೋತ್ಸವದಲ್ಲಿ ರಾತ್ರಿಪೂರಾ ಹಿಂದುಸ್ಥಾನಿ ಸಂಗೀತದ ಗಾನಾಮೃತವರ್ಷಿಣಿಯನ್ನು ಹರಿಸಿ ಹೋದರು! ಸಾರಂಗಿಯನ್ನು ತಮ್ಮ ಕೊರಳಿನಲ್ಲಿ ನುಡಿಸಿ ಸಾರಂಗಿ ಶೈಲಿಯ ಗಾಯನದ ರಂಗನ್ನು ತೋರಿಸಿಹೋದರು!

ಕನ್ನಡ ಚಿತ್ರರಂಗದಲ್ಲಿ ಈ ಅನರ್ಘ್ಯರತ್ನದ ಬಳಕೆ…ಸೂಕ್ತ ರೀತಿಯಲ್ಲಿ ಆಗಿಲ್ಲವೇಕೆ?!

“ನಮ್ಮ ಕನ್ನಡ ಚಿತ್ರರಂಗದ ದುರಂತವೋ…ಕನ್ನಡಿಗರ ದುರಾದೃಷ್ಟವೋ ಗೊತ್ತಿಲ್ಲ. ಬೆರಳಣಿಕೆಯಷ್ಟು ಮಂದಿಯನ್ನು ಹೊರತುಪಡಿಸಿ ಸಂಗೀತವನ್ನೇ ಸಾಧನೆ ಮಾಡದವರೆಲ್ಲಾ ಇಲ್ಲಿ ಮಹಾನ್ ಸಂಗೀತ ನಿರ್ದೇಶಕರಾಗಿಬಿಟ್ಟಿದ್ದಾರೆ..!” ಎಂದು ಫಯಜ್ ಬೇಸರದಿಂದ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುವಾಗ ನಮಗೂ ಬೇಸರವಾಗದೇ ಇರದಿರದು. “ಸಂಗೀತ ಗೊತ್ತಿಲ್ಲದವರೇ ಇಲ್ಲಿ ಸಂಗೀತ ನಿರ್ದೇಶಕರಾಗುವುದು…ಚಿತ್ರ ಸಂಗೀತವೇ ಬೇರೆ ” ಎಂದು ಆಕಸ್ಮಿಕವಾಗಿ ಖ್ಯಾತಿ ಪಡೆದ ಸಂಗೀತ ನಿರ್ದೇಶಕನೊಬ್ಬ ಸೊಕ್ಕಿನಲ್ಲಿ ಫಯಾಜ್ ಅವರೆದುರು ಹೀಯಾಳಿಸಿದಾಗ ಫಯಾಜ್ ಮುಖ ಮೂತಿ ನೋಡದೆ ಎಲ್ಲ ಕಲಾವಿದರೆದುರೇ ಅವರಿಗೆ ಜಾಡಿಸಿದ್ದಾರಂತೆ..” ಸಂಗೀತ ನಿರ್ದೇಶಕರಾಗಲು ನೀವೇನು ಸಂಗೀತ ಸಾಧನೆ ಮಾಡಿದ್ದೀರಿ? ನಿಮಗೇನು ಅರ್ಹತೆಯಿದೆ? ಚಿತ್ರಸಂಗೀತದ ದಾರಿ ತಪ್ಪಿಸಿದ್ದಲ್ಲದೆ ಈ ರೀತಿಯಾಗಿ ಬೇಜವಾಬ್ದಾರಿಯುತವಾಗಿ ಮಾತಾಡಿ…ಬಾಲಿಷ ಹೇಳಿಕೆಗಳನ್ನು ನೀಡಿ ಸಮಾಜದ ಹಾದಿ ತಪ್ಪಿಸಬೇಡಿ..” ಎಂದು ಮುಲಾಜಿಲ್ಲದೆ ಗುಡುಗಿದ್ದಾರಂತೆ. ಅಂದೇ ಕಡೆ..ಆ ನಂತರ ಸಂಗೀತ ಗೊತ್ತಿಲ್ಲದ ಯಾವ ಸಂಗೀತ ನಿರ್ದೇಶಕನೂ ಇವರೆದುರು ನಿಲ್ಲಲು ಹೆದರುವಂಥಹ ಪರಿಸ್ಥಿತಿ ನಿರ್ಮಾಣವಾಯಿತು! ಅಡ್ಡ ದಾರಿಯಿಂದ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಸಂಗೀತ ನಿರ್ದೇಶಕರಿಗೆ ನೇರವಾಗಿ ಚಾಟಿಯೇಟ ಬೀಸುವ ಛಾತಿ ಇರುವುದು ಪ್ರಾಯಶಹ ಫಯಾಜ್ ಖಾನ್ ಅಂತಹ ನೇರ ನಿಷ್ಠೂರವಾಗಿಗಳಿಗೆ ಮಾತ್ರ !

ರೀರೆಕಾರ್ಡಿಂಗ್‌ನಲ್ಲಿ ಇನ್ನೊಬ್ಬ ಇದೇ ರೀತಿಯ ಸಂಗೀತ ನಿರ್ದೇಶಕ ನಿಯಂತ್ರಣಾ ಕೊಠಡಿಯಲ್ಲಿ ಧ್ವನಿಗ್ರಾಹಕನ ಜೊತೆ ಕುಳಿತು ಒಳಗೆ ಸಾರಂಗಿ ನುಡಿಸಲು ತಯಾರಾಗಿ ಕುಳಿತ ಫಯಾಜ್ ಅವರಿಗೆ ಆದೇಶ ಕೊಟ್ಟನಂತೆ. ಈಗೊಂದು ಹಾಸ್ಯದ ಸೀನ್ ಬರುತ್ತದೆ. ಅದಕ್ಕೆ ತುಣುಕೊಂದನ್ನು ನುಡಿಸು ಎಂದನಂತೆ !
ಆಗ ” ಸಂಗೀತ ನಿರ್ದೇಶಕರೇ..ತಾವು ಸಾರಂಗಿ ವಾದ್ಯವನ್ನಾದರೂ ಹೇಗಿರುತ್ತದೆಯೆಂದು ನೋಡಿದ್ದೀರಾ? ಅದರಿಂದ ಹೊರಹೊಮ್ಮುವ ಭಾವ ಎಂಥದ್ದು ಎಂಬ ಅರಿವು ತಮಗಿದೆಯಾ? ಬನ್ನಿ ತೋರಿಸುತ್ತೇನೆ..” ಎಂದು ಫಯಾಜ್ ಹೇಳಿದಾಗ ಬೆಚ್ಚಿಬಿದ್ದ ಸಂಗೀತ ನಿರ್ದೇಶಕ ಅದನ್ನು ತೋರಿಸಿಕೊಳ್ಳದೇ ಮತ್ತೆ ತನ್ನ ದೊಡ್ಡಸ್ತಿಕೆಯನ್ನೇ ತೋರಿಸಿದನಂತೆ ! ನಿಮ್ಮ ಸಂಗೀತಕ್ಕೆ ನುಡಿಸುವ ಅಗತ್ಯ ನನಗಿಲ್ಲ ಎಂದು ಅಲ್ಲಿಂದ ಕಾಲ್ಕಿತ್ತ ಫಯಾಜ್ ಮುಂದೊಮ್ಮೆ ಅವರು ಕರೆದರೂ ಹೋಗಲಿಲ್ಲವಂತೆ !

ಹೀಗೆ ಇಂಥವರ ಜೊತೆ ನಡೆದ ವಿಚಿತ್ರ ಘಟನೆಗಳಿಂದ ಮನ ನೊಂದ ಭಾವಜೀವಿ ಫಯಾಜ್ ಕನ್ನಡ ಚಿತ್ರಸಂಗೀತದಲ್ಲಿ ಸಂಗೀತವೇ ಗೊತ್ತಿಲ್ಲದವರಿಂದ ಆಗುತ್ತಿರುವ ಅಭಾವವನ್ನೂ ಅಭಾಸವನ್ನೂ ವ್ಯಥೆಪಟ್ಟು ವಿಶ್ಲೇಷಿಸುತ್ತಾರೆ. ಹಾಗೆಯೇ ಕನ್ನಡದ ಕೆಲವೇ ಕೆಲವು ಒಳ್ಳೆಯ ಸಂಗೀತ ನಿರ್ದೇಶಕರೊಟ್ಟಿಗೆ ಕೆಲಸ ಮಾಡಿದ..ನುಡಿಸಿದ…ಹಾಡಿದ..ಮಧುರಕ್ಷಣಗಳನ್ನೂ ನೆನೆದು ಸಾರ್ಥಕಭಾವವನ್ನು ಹೊರಹಾಕುತ್ತಾರೆ.

ಅದೇನೇ ಇರಲಿ….ಒಂದಂತೂ ಸತ್ಯ. ಫಯಾಜ್ ಖಾನ್ ಎಂಬ ಅತ್ಯಮೋಘ ಸಂಗೀತಜ್ನಾನಿಯ ಪ್ರತಿಭೆಯನ್ನು ಕನ್ನಡ ಚಿತ್ರರಂಗ ಬಳಸಿಕೊಳ್ಳದಿದ್ದರೆ ಅದು ಕನ್ನಡ ಚಿತ್ರರಂಗಕ್ಕೇ ನಷ್ಟ ಹೊರತು ಖಂಡಿತಾ ಫಯಾಜ್ ಖಾನ್ ಅವರಿಗಲ್ಲ. ನೆರೆಯ ಚಿತ್ರರಂಗಗಳು ಅವರನ್ನು ಈಗಾಗಲೇ ತಮ್ಮ ಆಸ್ತಿಯೆಂದು ಆಲಂಗಿಸಿಕೊಂಡಿರುವಾಗ..ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಅವರು ವಿರಾಜಮಾನರಾಗಿ ವಿಹರಿಸುತ್ತಿರುವಾಗ ಕನ್ನಡ ಚಿತ್ರರಂಗದಲ್ಲಿ ಇವರ ಪೂರ್ಣ ಬಳಕೆ ಯಾವಾಗ?!
ನಿರ್ಮಾಪಕ-ನಿರ್ದೇಶಕರು ಈ ಸಂಗೀತ ಸಾಮ್ರಾಟನನ್ನು ಗಂಭೀರವಾಗಿ ಪರಿಗಣಿಸುವಂತಾದರೆ ಕನ್ನಡ ಚಿತ್ರರಂಗದಲ್ಲಿ ಫಯಾಜ್ ಖಾನ್ ಶೈಲಿಯ ಸಂಗೀತ ಪ್ರಕಾಶಿಸುವುದರಲ್ಲಿ ಸಂಶಯವೇ ಇಲ್ಲ. ಇದು ಎಲ್ಲಾ ಸಂಗೀತಪ್ರಿಯರ ಆಶಯ ಕೂಡ.

ಲೇಖನ-ಚಿನ್ಮಯ ಎಂ.ರಾವ್ ಹೊನಗೋಡು
ಚಿತ್ರ ಕೃಪೆ- ಅಂತರ್ಜಾಲ
‎Wednesday, ‎May ‎9, ‎2012

Dr.Chinmaya Rao

Dr.Chinmaya M.Rao who is the Founder, Editor and Publisher of KANNADA TIMES, who is from Honagodu, Sagar taluk, Shimoga district, is a significant figure in the world of music. Though born in a family of agriculturists, Rao showed love for music and literature throughout his childhood. For more details visit : https://www.facebook.com/chinmaya.m.rao
Back to top button

Adblock Detected

Please consider supporting us by disabling your ad blocker