ಬೆಂಗಳೂರು : ನಗರದ ರಾಜರಾಜೇಶ್ವರಿನಗರದಲ್ಲಿರುವ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ೨೦೧೬-೧೭ನೆಯ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವ ಇದೇ ಶನಿವಾರ ಮಾರ್ಚ್ ನಾಲ್ಕರಂದು ರಾಜರಾಜೇಶ್ವರಿನಗರದ ಬಿ.ಎಸ್.ಎನ್.ಎಲ್ ಕಛೇರಿಯ ಎದುರಿನಲ್ಲಿರುವ ಶ್ರೀ ರಾಜೇಶ್ವರಿ ವಿದ್ಯಾಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.
ಅಂದು ಮಧ್ಯಾಹ್ನ ಮೂರು ಗಂಟೆಗೆ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಂಠದಲ್ಲಿ ಪಿಳ್ಳಾರಿ ಗೀತೆಗಳು ಹಾಗೂ ಸಂಚಾರಿ ಗೀತೆಗಳನ್ನು ಹಾಡುವುದರ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಹಿರಿಯ ಸಂಗೀತ ಕಲಾವಿದ ಕಲಾಶ್ರೀ ವಿದ್ವಾನ್ ಹೊಸಹಳ್ಳಿ ಅನಂತ ಅವಧಾನಿ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇಸ್ರೋ ಲೇಔಟಿನಲ್ಲಿರುವ ತಮ್ಮ ಮನೆಯನ್ನು ಸಂಗೀತ ತರಗತಿಯ ಶಾಖೆಯೊಂದಕ್ಕೆ ಬಿಟ್ಟುಕೊಟ್ಟಿರುವ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಅಗ್ನಿ ಶ್ರೀಧರ್, ಹಿರಿಯ ಉದ್ಯಮಿ ಹಾಗೂ ಶೃಂಗಗಿರಿ ಷಣ್ಮುಖ ದೇವಾಲಯದ ಅಧ್ಯಕ್ಷರಾದ ಡಾ. ಆರ್. ಅರುಣಾಚಲಮ್, ನಗರ ಪಾಲಿಕೆಯ ಸದಸ್ಯೆ ನಳಿನಿ ಮಂಜುನಾಥ್ ಹಾಗೂ ಸುಗಮ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಂಜೆ ೬-೩೦ಕ್ಕೆ ಸಮಾರೋಪ ಸಮಾರಂಭ :
ಸಂಜೆ ೬-೩೦ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬೆಂಗಳೂರು ಮೇಯರ್ ಜಿ.ಪದ್ಮಾವತಿ, ಕರ್ನಾಟಕ ಲೋಕಾಯುಕ್ತ ಎ.ಡಿ.ಜಿ.ಪಿ ಡಾ. ಪರಶಿವಮೂರ್ತಿ, ಪ್ರಖ್ಯಾತ ಕಿರುತೆರೆ ಕಲಾವಿದ ಅಗ್ನಿಸಾಕ್ಷಿ ಧಾರಾವಾಹಿಯ ರಾಜೇಶ್ ಧೃವ, ನಗರ ಪಾಲಿಕೆಯ ಮಾಜಿ ಸದಸ್ಯ ಜಿ.ಹೆಚ್ ರಾಮಚಂದ್ರ, ಬಿ.ಬಿ.ಎಂ.ಪಿ ಯೋಜನಾ ಸಮಿತಿಯ ಅಧ್ಯಕ್ಷೆ ಮಂಜುಳಾ ನಾರಾಯಣ ಸ್ವಾಮಿ ಹಾಗೂ ಕೆನ್‌ಶ್ರೀ ಶಾಲೆಯ ಮುಖ್ಯಸ್ಥೆ ರೋಹಿಣಿ ಕೃಷ್ಣನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಗೀತದ ತರಗತಿಗಳನ್ನು ನಡೆಸಲು ತಮ್ಮ ತಮ್ಮ ಮನೆಗಳನ್ನು ಬಿಟ್ಟು ಕೊಟ್ಟುರುವವರಿಗೆ ಸನ್ಮಾನವೂ ನಡೆಯಲಿದೆ. ಕಡೆಯದಾಗಿ ಮತ್ತೆ ಅಕಾಡೆಮಿಯ ಎಲ್ಲಾ ವಿದ್ಯಾರ್ಥಿಗಳು ಏಕಕಂಠದಲ್ಲಿ ಪಿಳ್ಳಾರಿ ಗೀತೆಗಳು ಹಾಗೂ ಸಂಚಾರಿ ಗೀತೆಗಳನ್ನು ಹಾಡುವುದರ ಮೂಲಕ ಕಾರ್ಯಕ್ರಮ ಮುಕ್ತಾಯವಾಗಲಿದೆ.

ಯುವ ಸಂಗೀತ ನಿರ್ದೇಶಕ ಹಾಗೂ ದಕ್ಷಿಣಾದಿ ಶಾಸ್ತ್ರೀಯ ಸಂಗೀತ ಕಲಾವಿದ ಚಿನ್ಮಯ ಎಂ.ರಾವ್ ಅವರ ಪರಿಕಲ್ಪನೆಯಲ್ಲಿ ೨೦೧೫ರಲ್ಲಿ ಸಂಸ್ಥಾಪಿಸಲ್ಪಟ್ಟ ಸಂಸ್ಥೆಯೇ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಿವಿಧ ಶಾಖೆಗಳನ್ನು ಹೊಂದಿದ್ದು ಅಲ್ಲೆಲ್ಲಾ ಸ್ವತಹ ಚಿನ್ಮಯ ಎಂ.ರಾವ್ ಅವರೇ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠವನ್ನು ಮಾಡುತ್ತಿದ್ದಾರೆ. ಸಂಸ್ಥೆಯ ಪ್ರಾಂಶುಪಾಲಕರಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ವಿಶೇಷವಾಗಿ ಯುವಪೀಳಿಗೆಗೆ ಹಸ್ತಾಂತರಿಸುತ್ತಿದ್ದಾರೆ. ಯುವಪೀಳಿಗೆಯನ್ನು ಶಾಸ್ತ್ರೀಯ ಸಂಗೀತದ ಸಾಧನೆಯತ್ತ ಕೊಂಡೊಯ್ಯಲು ಸಂಸ್ಥೆ ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.
1-3-2017







