ಕೃಷಿ-ಖುಷಿ

ರಬ್ಬರ್ ನಡುವೆ ಸುವರ್ಣಗಡ್ಡೆ:ಆದಾಯದ ಜೊತೆಗೆ ರಬ್ಬರ್ ಪೋಷಣೆ

ಕ್ರಿಯಾಶೀಲ ರೈತ ಸದಾ ಒಂದಿಲ್ಲೊಂದು ಬೇಸಾಯದಲ್ಲಿ ತೊಡಗುತ್ತಾ ಹಲವು ಪ್ರಯೋಗದಲ್ಲಿ ಶ್ರಮಿಸುತ್ತಾನೆ.ಮಾರುಕಟ್ಟೆಯ ಧಾರಣೆಯ ಬೆನ್ನು ಹತ್ತಿ ಹಲವು ರೈತರು ಯಾವುದೋ ಒಂದೆ ಬೆಳೆಯನ್ನು ಅತ್ಯಧಿಕ ಬೆಳಯಲು ಹವಣಿಸುವುದು ಸಹಜ.ಸಾಕಷ್ಟು ಬಂಡವಾಳ ತೊಡಗಿಸಿ, ಅಧಿಕ ಇಳುವರಿ ಪಡೆದಾಗ ಧಾರಣೆ ಕುಸಿತಗೊಂಡು ರೈತರು ಹತಾಶರಾಗುವುದು ಸಾಮಾನ್ಯ.ಮುಂದಾಲೋಚನೆಯುಳ್ಳ ರೈತ ಪ್ರಮುಖ ಬೆಳೆಯ ಜೊತೆ ಉಪ ಬೆಳೆಯನ್ನು ಮಿಶ್ರವಾಗಿ ಬೆಳೆದು ಯಶಸ್ಸಾಧಿಸಲು ಪ್ರಯತ್ನಿಸುತ್ತಾನೆ.6 -7 ವರ್ಷಗಳ ನಂತರ ಫಸಲು ಸಿಗುವ ರಬ್ಬರ ಜೊತೆ ಸುವರ್ಣ ಗಡ್ಡೆ ಬೆಳೆದು ವರ್ಷಾನುವರ್ಷ ನಿಗದಿತ ಆದಾಯ ದೊರಕಿಸಿಕೊಳ್ಳಲು ಸಾಧ್ಯ.

ರಬ್ಬರ್ ಕೃಷಿ ಕೈಗೊಂಡ ರೈತರು ಗಿಡದ ಸಂರಕ್ಷಣೆಗೆ ಸತತ ಪ್ರಯತ್ನ ನಡೆಸುವುದು ಅನಿವಾರ್ಯ.ಬೇಸಿಗೆಯಲ್ಲಿ ತಗಲುವ ಆಕಸ್ಮಿಕ ಬೆಂಕಿ,ಮಳೆಗಾಲದಲ್ಲಿನ ವಿಪರೀತ ಕಳೆ ಮತ್ತು ಜಾನುವಾರುಗಳ ಹಾವಳಿಯಿಂದ ರಬ್ಬರ ತೋಟದ ಕಡೆಗೆ ನಿರಂತರ ನಿಗಾ ಅಗತ್ಯ.ಅದಕ್ಕಾಗಿ ರಬ್ಬರ್ ಸಸಿ ನೆಟ್ಟ ವರ್ಷದಿಂದಲೇ ಉಪಬೆಳೆಯಾಗಿ ಶುಂಠಿ, ಗೆಣಸು,ತರಕಾರಿ , ಮೆಣಸು ಇತ್ಯಾದಿ ಬೆಳೆ ಬೆಳೆಯಬಹುದು.ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ವಡಗೆರೆ ರೈತ ರವಿಕುಮಾರ್ ರಬ್ಬರ್ ನಡುವೆ ಸುವರ್ಣಗಡ್ಡೆ ಬೆಳೆಯ ಕೃಷಿ ಕೈಗೊಂಡಿದ್ದಾರೆ.ಸಾಕಷ್ಟು ನೀರಿನ ಆಶ್ರಯವಿಲ್ಲದ ಇವರ ಕೃಷಿ ಭೂಮಿ ಈಗ ಹಸಿರಿನಿಂದ ನಳನಳಿಸುತ್ತಿದೆ.ಹಲವು ವರ್ಷ ಪಾಳು ಬಿದ್ದಿದ್ದ ಭೂಮಿಯಲ್ಲಿ ಇವರು ಧೈರ್ಯದಿಂದ ರಬ್ಬರ್ ಕೃಷಿಗೆ ಮುಂದಾಗಿದ್ದಾರೆ.ಬೇರೆ ಯಾವುದು ಹೆಚ್ಚಿನ ಆದಾಯವಿಲ್ಲದ ಕಾರಣ ರಬ್ಬರ ಸಸಿಗಳನ್ನು ಫಸಲು ಬರುವವರೆಗೆ 6 ವರ್ಷಗಳ ಕಾಲ ಪೋಷಣೆ ಮಾಡುವುದು ಹೇಗೆಂದು ಚಿಂತಿಸುತ್ತಿದ್ದ ಇವರಿಗೆ ಸುವರ್ಣಗಡ್ಡೆ ಕೃಷಿ ನಡೆಸುವ ಉಪಾಯ ಹೊಳೆದಿದೆ.

ಒಂದು ಎಕರೆ ರಬ್ಬರ್ ತೋಟದಲ್ಲಿ ಸುಮಾರು 1000 ಸುವರ್ಣ ಗಡ್ಡೆ ಸಸಿಗಳನ್ನು ನೆಡಲು ಸಾಧ್ಯ.ರಬ್ಬರ್ ಗಿಡದಿಂದ ಸುತ್ತಲೂ 2 ಅಡಿ ಅಂತರ ಕಾದುಕೊಂಡು ಈ ಸಸಿಗಳನ್ನು ನಾಟಿ ಮಾಡಬೇಕು.ಪ್ರತಿ ಬೀಜವನ್ನು 4 ಘಿ 4 ಅಡಿ ಅಂತರದಲ್ಲಿ ನೆಡಬೇಕು.ಸರಾಸರಿ 150 ರಿಂದ 200 ಗ್ರಾಂ.ತೂಕದ ಬೀಜಗಳನ್ನು ಹಾಕಿದರೆ 6 ತಿಂಗಳಿಗೆ 15 ರಿಂದ 18 ಕಿ.ಗ್ರಾಂ.ತೂಕದ ಸುವರ್ಣ ಗಡ್ಡೆ ಬೆಳೆಯುತ್ತದೆ.ಮೇ ಅಂತ್ಯದಿಂದ ಜೂನ್ –ಜುಲೈ ತಿಂಗಳು ಸುವರ್ಣ ಗಡ್ಡೆ ಬೀಜ ಹಾಕಲು ಸೂಕ್ತ ಸಮಯವಾಗಿದ್ದು ಜನವರಿ- ಫೆಬ್ರವರಿ ಸುಮಾರಿಗೆ ಫಸಲು ಸಿದ್ಧವಾಗುತ್ತದೆ.

ಬೀಜಗಳು 20 ರಿಂದ 25 ದಿನಕ್ಕೆ ಮೊಳಕೆಯೊಡೆದು ಎಲೆ ಕಾಣಿಸಿಕೊಳ್ಳುತ್ತದೆ.ಬೀಜ ಹಾಕುವಾಗ ಸಗಣಿ ಗೊಬ್ಬರ ಹಾಕಿ ನೆಟ್ಟು ಹಸಿರು ಸೊಪ್ಪು ಅಥವಾ ಒಣ ಹುಲ್ಲನ್ನು ಮುಚ್ಚಿ ಸ್ವಲ್ಪ ಮಣ್ಣು ಹಾಕಬೇಕು. ಬೀಜಗಳು 20 ರಿಂದ 25 ದಿನಕ್ಕೆ ಮೊಳಕೆಯೊಡೆದು ಎಲೆ ಕಾಣಿಸಿಕೊಳ್ಳುತ್ತದೆ.ಆಗ ಮಣ್ಣನ್ನು ಎತ್ತರಿಸಿ ಗೊಬ್ಬರ ನೀಡಬೇಕು.ಸಗಣಿ ಗೊಬ್ಬರ ಅಥವಾ ಪೊಟಾಶ್ ಅಂಶವಿರುವ ಗೊಬ್ಬರ ನೀಡಬೇಕು.ಪ್ರತಿ ಗಿಡಕ್ಕೆ ಸರಾಸರಿ 50 ರಿಂದ 100 ಗ್ರಾಂ. ಯೂರಿಯಾ ಮತ್ತು ಪೊಟ್ಯಾಶ್ ಮಿಶ್ರಣದ ಗೊಬ್ಬರವನ್ನು ಒಂದು ತಿಂಗಳಿಗೆ ಒಮ್ಮೆಯಂತೆ ಎರಡು ಸಲ ನೀಡಿದರೆ ಉತ್ತಮ ಫಸಲು ದೊರೆಯುತ್ತದೆ.ಸಾಮಾನ್ಯವಾಗಿ 4 ರಿಂದ 5 ಅಡಿ ಎತ್ತರದ ವರೆಗೆ ಬೆಳೆಯುವ ಸುವರ್ಣಗಡ್ಡೆ ಸಸ್ಯಗಳು 6 ತಿಂಗಳಲ್ಲಿ ಎಲೆ ಹಣ್ಣಾಗಿ ಕಳಚಿ ಬೀಳುತ್ತವೆ.ಇದು ಗಡ್ಡೆ ಬಲಿತ ಸಂಕೇತವಾಗಿದೆ.

ಆನಂತರ ಮಾರುಕಟ್ಟೆ ಧಾರಣೆ ಅನುಸರಿಸಿ ಯಾವಾಗ ,ಎಷ್ಟು ತಿಂಗಳ ನಂತರ ಬೇಕಾದರೂ ಕೀಳ ಬಹುದು.ಸಾಮಾನ್ಯವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಸುವರ್ಣಗಡ್ಡೆಗೆ ಕಿಲೋ ಒಂದಕ್ಕೆ 20 ರಿಂದ 25 ರೂ.ವರೆಗೂ ಧಾರಣೆಯಿದೆ,ಕೇರಳದಲ್ಲಿ 35 ರಿಂದ 40 ವರೆಗೂ ಧಾರಣೆ ದೊರೆಯುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಅಲ್ಲಿನ ಮಾರುಕಟ್ಟೆಗೆ ಸಾಗಿಸಿದರೆ ಉತ್ತಮ ಬೆಲೆ ಸಿಗುತ್ತದೆ.ಕೇರಳಿಯನ್ನರಿಗೆ ಓಣಂ ಹಬ್ಬಕ್ಕೆ ಸುವರ್ಣಗಡ್ಡೆ ಬೇಕೇ ಬೇಕು.ಸುವರ್ಣಗಡ್ಡೆಯಿಂದ ಪಲ್ಯ, ಸಾಂಬಾರ್, ಚೆಟ್ನಿ, ಉಪ್ಪಿನಕಾಯಿ, ಪಾಯಸ ಇತ್ಯಾದಿ ರುಚಿಕರ ಅಡುಗೆ ಸಿದ್ಧಪಡಿಸಲಾಗುತ್ತದೆ.

ಒಂದು ಎಕರೆ ರಬ್ಬರ್ ತೋಟದಲ್ಲಿ ಸರಾಸರಿ 1000 ಸುವರ್ಣಗಡ್ಡೆ ಸಸಿಗಳನ್ನು ನೆಟ್ಟರೆ ಕನಿಷ್ಠ ಎಂದರೆ 150 ರಿಂದ ಕ್ವಿಂಟಾಲ್ ಸುವರ್ಣಗಡ್ಡೆ ಬೆಳೆಯಬಹುದಾಗಿದ್ದು ಕಿ.ಗ್ರಾಂ.ಗೆ ರೂ.15 ರೂ.ಧಾರಣೆ ದೊರೆತರೂ 2.25 ಲಕ್ಷ ಹಣ ದೊರೆಯುತ್ತದೆ.ಎಲ್ಲ ಖರ್ಚುಗಳನ್ನು ಕಳೆದರೂ ನಿವ್ಹಳ 1.80 ಲಕ್ಷ ರೂ.ಆದಾಯ ಗಳಿಸಬಹುದು.ಸುಮ್ಮನೆ ರಬ್ಬರ್ ಗಿಡ ಹಾಕಿ ಕಾಲ ಕಳೆಯುವ ಬದಲು ವರ್ಷ ವರ್ಷ ಇಂತಹ ಕೃಷಿ ಕೈಗೊಂಡು ಆದಾಯ ಗಳಿಸಬಹುದು ಎನ್ನುತ್ತಾರೆ ರವಿಕುಮಾರ್.ನಿಗದಿತ ಆದಾಯದ ಜೊತೆಗೆ ರಬ್ಬರ್ ಸಸಿಗೂ ಸಹ ಗೊಬ್ಬರ ದೊರೆತು ಚೆನ್ನಾಗಿ ಬೆಳೆಯುತ್ತದೆ.ಹೇಗಿದೆ ಇವರ ಉಪಾಯ ಅಲ್ಲವೇ?
ರವಿಕುಮಾರ್ ಅವರ ಮೊಬೈಲ್ ಸಂಖ್ಯೆ-9945945282

ಲೇಖನ ಮತ್ತು ಫೋಟೋ-ಎನ್.ಡಿ.ಹೆಗಡೆ ಆನಂದಪುರಂ

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.