ಚಿತ್ರಸಂಗೀತ

ಹಾಡು ಹೊಸ ಹಾಡು :  ಕೃಷ್ಣನ್ ಮ್ಯಾರೇಜ್ ಸ್ಟೋರಿ

ಹಾಡು ಹೊಸ ಹಾಡು

ಚಿತ್ರಕೃಷ್ಣನ್ ಮ್ಯಾರೇಜ್ ಸ್ಟೋರಿ

ಸಂಗೀತ: ವಿ.ಶ್ರೀಧರ್           

ನಿರ್ದೇಶಕ:ನೂತನ್ ಉಮೇಶ್

ಮುಸ್ಸಂಜೆ ಮಾತುಚಿತ್ರದ ಮೂಲಕ ಕನ್ನಡ ಚಿತ್ರಸಂಗೀತದಲ್ಲಿ ಮನೆ ಮಾತಾದ ವಿ.ಶ್ರೀಧರ್ ಕೃಷ್ಣನ್  ಲವ್ ಸ್ಟೋರಿಯಲ್ಲಿ ಮತ್ತೊಮ್ಮೆ ವಿಕ್ಟರಿಯನ್ನು ಪ್ರದರ್ಶಿಸಿದ್ದರು. ಹಾಡುಗಳನ್ನು  ಕೇಳುತ್ತಿದ್ದಂತೆಯೇ ಇದು ವಿ.ಶ್ರೀಧರ್ ಅವರ  ಸಂಗೀತವಲ್ಲವೇ? ಎನ್ನುವಷ್ಟರ ಮಟ್ಟಿಗೆ ತಮ್ಮ ಸ್ಟೈಲ್‌ನ ಸೀಲ್ ಅನ್ನು ಒತ್ತಿ ಫೀಲ್ ಬತ್ತಿ ಹೊಗದಂತೆ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ ವಿ.ಶ್ರೀಧರ್ . ಅದೇ ಓಟದಲ್ಲಿ ಮುಂದಾಗಿ ತಾನೊಬ್ಬ ಭರವಸೆಯ ಸಂಗೀತ ನಿರ್ದೇಶಕ ಎಂಬುದನ್ನುಕೃಷ್ಣನ್ ಮ್ಯಾರೇಜ್ ಸ್ಟೋರಿ ಯ ಹಾಡುಗಳಲ್ಲೂ ಮೂಡಿಸಿದ್ದಾರೆ. ಬನ್ನಿ ಈಗೊಮ್ಮೆ ಆ ಚಿತ್ರದ ಹಾಡುಗಳಲ್ಲಿ ವಿಹರಿಸೋಣ.

.ನಿದ್ದೆ ಬಂದಿಲ್ಲ..

 ಶ್ರೀಧರ್ ಅವರೇ ಮುದ್ದಾಗಿ ಗೀಚಿರುವ ಕಚಗುಳಿ ಇಡುವ ಹಾಡು ಇದು. ಟಪಾಂಗುಚಿ ದಾಟಿಯಲ್ಲೇ ಸಾಗುವ ಈ ಹಾಡು ನಾಳೆ ಮದುವೆ ಮಾಡಿಸಿಕೊಳ್ಳುವವನ/ಳ ಹಿಂದಿನ ರಾತ್ರಿಯ ಪಾಡು! ಇಂತಹ ವಿಚಿತ್ರ ಸನ್ನಿವೇಶಕ್ಕೊಂದು ಹಾಡು ಬರೆಸಿದ ನಿರ್ದೇಶಕರಿಗೆ  ಕನ್ನಡಿಗ ಹ್ಯಾಟ್ಸ್ ಆಫ್ ಹೇಳಲೇ ಬೇಕು.ಮದುವೆಯ ಹಿಂದಿನ ದಿನ ವಧುವರರಿಗೆ ಉಂಟಾಗುವ ಆನಂದ-ಆತಂಕ,ಕುತೂಹಲ-ತಳಮಳ,ಕನಸು-ಕತ್ತಲು,ಬಯಕೆ-ಭ್ರಮೆ..ಹೀಗೆ..ಏನೇನೋ ಆಗಿ ನ್ಶೆಟ್‌ಔಟ್ ಆಗುವ ..ಎಲ್ಲರ ಲೈಫ್‌ನಲ್ಲೂ ಅನುಭವಿಸುವ  ಅನುಭವ ಈ ಹಾಡಿನಲ್ಲಿದೆ. ಮಿಕಾ ಸಿಂಗ್, ಚೈತ್ರಾ, ನಂದಿತಾ,ಅನುರಾಧಾ ಭಟ್ ಹಾಡಿರುವ ಇದನ್ನು ಕೇಳಿದರೆ ಮದುವೆಯಾದವರೆಲ್ಲಾ ಒಮ್ಮೆ ತಮ್ಮ ತಮ್ಮ ಮದುವೆಯ ಹಿಂದಿನ ರಾತ್ರಿಗೆ ಹೋಗಿ ಬರುವುದು ಗ್ಯಾರಂಟಿ. ಮದುವೆ ಮನೆಯ ಫೀಲ್ ಕೊಡುವ ಮಂಗಳವಾದ್ಯ ನಾಗಸ್ವರದ ವಾದನ ಹಾಡಿನ ಅಂತ್ಯದಲ್ಲಿ ಚೆನ್ನಾಗಿ ಬಂದಿದೆ.

. ಸಂಜೆ ಮಬ್ಬು ರಾತ್ರಿಲಿ..

ಹಳೇ ಹಿಂದಿ ಹಾಡಿನಿಂದ ಇನ್‌ಸ್ಪೈರ್ ಆದಂತೆ ಕಾಣುವ ಈ ಹಾಡಿನ ರಾಗಸಂಯೋಜನೆ ಅತ್ಯಧ್ಭುತವಾಗಿ ಮೂಡಿಬಂದಿದೆ. ಅದಕ್ಕೆ ಪೂರಕವಾಗಿ ರಿದಮ್ ಹಾಗು ಗಿಟಾರ್‌ನ ರಿದಮ್ ಸಕತ್ತಾಗಿ ಕೇಳುತ್ತದೆ. ಶ್ರೀಧರ್ ನಿಜಕ್ಕೂ ಘಟಾನುಘಟಿ ಜಂಯಂತ್ ಕಾಯ್ಕಿಣಿ ಅವರೊಡನೆ ಸ್ಪರ್ಧೆಗೆ ನಿಂತವರಂತೆ ಈ ಹಾಡನ್ನು ಬರೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ  ಸಂಗೀತ ನಿರ್ದೇಶಕರೇ ಈ ಮಟ್ಟಕ್ಕೆ ಹಾಡುಬರೆದಿರುವ ಕ್ರೆಡಿಟ್ ಪ್ರಾಹಶಃ ಹಂಸಲೇಖ ಬಿಟ್ಟರೆ ವಿ.ಶ್ರೀಧರ್ ಅವರಿಗೆ ಸಲ್ಲುತ್ತದೆ ಎಂದರೆ ಅದು ಅತಿಶಯೋಕ್ತಿಯೇನಲ್ಲ.

ಸಂಜೆ ಮಬ್ಬು ರಾತ್ರಿಲಿ..’ ಎಂದು ಸೋನು ನಿಗಮ್ ಹಾಡುವ ರೋಮ್ಯಾಂಟಿಕ್ ಗೀತೆ ಯುವಕರ ಯೌವನದ ಆಸೆಗೆ ಒತ್ತಾಸೆ ನೀಡುತ್ತದೆ. ನಮ್ಮೂರ ರಾತ್ರಿ ದಟ್ಟ ಕಪ್ಪು, ಭಯವು ಸ್ವಲ್ಪ ನನ್ನ ಅಪ್ಪುಎನ್ನುವಂತಹ ಕಾಮನೆಯ ಸಾಲುಗಳಿಗೆ ನ್ಯಾಯ ಸಲ್ಲಿಸುತ್ತಾ ಹಾಡಿನ ತುಂಬಾ ಮಾದಕತೆಯ ಟಚ್ ನೀಡುತ್ತಾ ಹೋಗುವ ಅನುರಾಧಾ ಭಟ್ ಪರಭಾಷಾ ಗಾಯಕಿಯರಿಗಿರುವ ಅಪಾರ ಬೇಡಿಕೆಯನ್ನು ಕು(ಕ)ಸಿಯುವಂತೆ ಮಾ(ಹಾ)ಡಿದ್ದಾರೆ.

ಇನ್ನು ಸಾಹಿತ್ಯದಲ್ಲಿ ಶ್ರೀಧರ್ ಲಾಂದ್ರಎನ್ನುವ ಅಚ್ಚ ಕನ್ನಡದ  ಪದಕ್ಕೆ ವಿಶೇಷ ಬೆಳಕು ನೀಡಿದ್ದಾರೆ. ಅದರಲ್ಲೂ ಲಾಂದ್ರ ಏಕೋ ನಾಚಿಕೊಂಡಿದೆ ,ಚಂದ್ರನ ಮೇಲೆ ಇಣುಕಿ ನೋಡಿದೆ‘  ಎನ್ನುವ ಸಾಲುಗಳಲ್ಲಿ ದ್ವಿತೀಯಾಕ್ಷರ ಪ್ರಾಸವನ್ನು ಸಹಜವಾಗಿ ಸುಂದರಗೊಳಿಸಿದ್ದಾರೆ.(ಅಂದರೆ ಲಾಂದ್ರ ಹಾಗು ಚಂದ್ರ ಎನ್ನುವಲ್ಲಿ ಎರಡನೇ ಅಕ್ಷರ ‘ದ್ರ’ ಪ್ರಾಸ.)

.ಅಯ್ಯೋ ರಾಮ ರಾಮ..

ಪಾಶ್ಚಾತ್ಯ ಶೈಲಿಯ ಈ ರಾಗಕ್ಕೆ ಕೋಳಿ ಕೇಳಿ ಮಸಾಲೆ ಅರೆಯ ಬೇಕಾ? ಎನ್ನುವಂತೆ ಮಸಾಲೆ ಸಾಹಿತ್ಯವನ್ನು ಚೆನ್ನಾಗಿ ಅರೆ(ಬರೆ)ದಿದ್ದಾರೆ. ಹೈ ಪಿಚ್ ನ ಗಿಟಾರ್ ಸೂಪರ್ ಎನಿಸುತ್ತದೆ. ಖಾಲಿ ಆಗುವ ಜಾಲಿ ತುಂಬಲು ಬೇಕು ಹುಡುಗಿ ಅನ್ನೋ ಪೆಟ್ರೋಲು..ಮೋಜು ಮಾಡುವ ಏಜಿಗ್ಯಾತಕೆ ಬ್ರೇಕು ಕ್ಲಚ್ಚು ಅನ್ನೊ ಕಂಟ್ರೋಲು ಈ ಲೈನ್‌ಗಳು ತುಂಬಾ ಡಿಫ್‌ರೆಂಟ್ ಅನಿಸುತ್ತದೆ.

ಇಂಥ ಹಾಡುಗಳನ್ನು ಜಾಲಿಯಾಗಿ ಹಾಡಲು ನಮ್ಮ ಕನ್ನಡದಲ್ಲೇ ಸಿಂಗರ್ಸ್ ಇದ್ದಾರೆ ಎಂದು ಹರ್ಷ,ಅಪೂರ್ವ,ಆಕಾಂಕ್ಷ  ಇವರುಗಳನ್ನು  ಶ್ರೀಧರ್ ಮುಖ್ಯವಾಹಿನಿಗೆ ತಂದು ನಿಲ್ಲಿಸಿದ್ದಾರೆ.

.ಪಾರಿಜಾತದ  ಸುಗಂಧ..

ಕನ್ನಡ ಚಿತ್ರಗೀತೆಗಳ ಹೂರಣವಿಷ್ಟೇ.. ಎನ್ನುವ ಹೊತ್ತಲ್ಲಿ  ತಮ್ಮದೇ ಆದ ಹೊಸ ಕಲ್ಪನೆಗಳ ಸಾಲನ್ನು ಹೊತ್ತು ಬಂದವರು ಜಯಂತ್ ಕಾಯ್ಕಿಣಿ. ಕನ್ನಡ ಚಿತ್ರಗೀತೆಗಳಿಗೆ ಹೊಸ ಭಾಷ್ಯ ಬರೆದ  ಜಯಂತ್ ಅವರ ಒಂದೊಂದು ಗೀತೆಗಳಿಗೂ ಬೃಹತ್ ಭಾಷ್ಯವನ್ನೇ ಬರೆಯಬಹುದು,ಅಷ್ಟಿರುತ್ತದೆ.  ಅದರೊಳಗೆ ಗೂಢ,ನಿಗೂಢ,ಅರ್ಥ,ಭಾವಾರ್ಥಗಳು,ಅವರ ಹಾಡುಗಳನ್ನು ವರ್ಣಿಸಲೂ ವಿಶೇಷ ತಾಕತ್ತುಬೇಕು.ಈ ಚಿತ್ರಕ್ಕೆ ಅವರು ಬರೆದ ಹಾಡೂ ಅಷ್ಟೆ..ರವಿ ಕಾಣದ್ದೂ ಜಯಂತ್ ಕಂಡರು ಎಂಬಂತಿದೆ..ಏಕೆಂದರೆ ಅವರು ಈ ಚಿತ್ರಕ್ಕಾಗಿ ಬರೆದ ಹಾಡು ಕೇಳಿ ..’ಪಾರಿಜಾತದ ಸುಗಂಧ ಮಾತನಾಡಿದೆ‘.. ಪಾರಿಜಾತದ ಪರಿಮಳವನ್ನು..ಪ್ರಿಯತಮೆಗೆ ಹೋಲಿಸಿ.. ಅಷ್ಟಲ್ಲದೆ ಆ ಪರಿಮಳ ಮಾತಾನಾಡಿದೆ..ಎನ್ನುತ್ತಾರೆ ಕವಿ. ಅತ್ಯಧ್ಭುತ ಕಲ್ಪನೆ ಅಲ್ಲವೆ? ಇದು ಪರಿಪೂರ್ಣ ಪ್ರೇಮಗೀತೆಗೊಂದು ಮಾದರಿ. ಲವ್ ಸಾಂಗ್ ಬರೆಯುವ ಯುವ ಪೀಳಿಗೆಗೆ ಜಯಂತ್ ತೋರಿಸಿ ಕೊಟ್ಟಿದ್ದಾರೆ  ಆರೋಗ್ಯಕರ ದಾರಿ!

ಇಷ್ಟು ಸೊಗಸಾಗಿ ನಾವು ಹಾಡುವಾಗ ಬೇರೆ ಭಾಷೆಯ  ಗಾಯಕರ ಅರೆ ಬೆಂದ ಕನ್ನಡದ ಗಾಯನ ಬೇಕೇನ್ರಿ ?  ಎನ್ನುವಂತಿದೆ ರಾಜೇಶ್ ಕೃಷ್ಣನ್ ಹಾಗು ಲಕ್ಷೀ ಮನಮೋಹನ್  ವಾಯ್ಸ್.. ಪೀಸ್ ಫುಲ್ ಆಗಿ ಫೀಲ್ ಫುಲ್ ಆಗಿ ಶ್ರೀಧರ್ ಟ್ಯೂನ್ ಮಾಡಿರುವ ಈ ಹಾಡನ್ನು ನೀವು ಬಿಲ್‌ಕುಲ್  ಆಗಿ ಕೇಳಲೇ ಬೇಕು. ಮೋಹದಲ್ಲಿ ಮೌನಕೂಡ ಸ್ಪೂರ್ತಿದಾಯಕ..,ಕದ್ದು ಮುಚ್ಚಿ ಸೇರುವಲ್ಲಿ ಹೂವಿನುತ್ಸವ/ ನನ್ನ ಆಸೆಗೀಗ ನೀನೆ ಒಂದು ರೂಪಕ, ನೀನು ಸಿಕ್ಕ ಜಾಗವೆಲ್ಲ ಚೆಂದ ಸ್ಮಾರಕ/ ನಿನ್ನ ಧ್ಯಾನ ನೀ ಬಂದು ಭಂಗಮಾಡಿದೆ .., ಇಂತಹ ಮನಮೋಹಕ ಸಾಲುಗಳು ಹಾಗೇ ಮನಸ್ಸಿನಲ್ಲಿ ನಿಂತು ಬಿಡುತ್ತವೆ.

 

.ಮೈ ಹಾರ್ಟ ಇಸ್ ಬೀಟಿಂಗ್..

ಸಂತೋಷ್ ವೆಂಕಿ ಧ್ವನಿ ಇರುವ ಇದರ ಮೊದಲ ಸಾಲು ಕೇಳುತ್ತಿದ್ದಂತೇ ಇದೇನು ಇಂಗ್ಲೀಷ್  ಹಾಡಾ?ಅನಿಸುತ್ತದೆ..”ಆಗಗ ನಂಗೆ ಎಲ್ಲೆಲ್ಲೂ ಹೀಗೆ, ನೀ ಕಾಣೋ ಹಾಗಿ ಅನಿಸೋದು ಯಾಕೆ ಯಾಕೆ? ಎಂದು  ಎರಡನೇ ಸಾಲು ಬರುವಾಗ ಸಿಡಿ ಕವರ್ ತೆಗೆದು ನೋಡಿದಾಗ ಹೋ.. ಇದು ಕವಿರಾಜ್ ಬರೆದಿರೋ  ಹಾಡಾ .. ಒಂಥರಾ ಚೆನ್ನಾಗಿದೆ ಅನಿಸುತ್ತದೆ. ಆಗಾಗ ಬರುವ “ಆಗಾಗ ನಂಗೆ..”ಪಚಿಂಗ್  ಸಾಲುಗಳು ಪಂಚ್ ಆಗುತ್ತವೆ.

. ಜನ್ಮವು..

ಶ್ರೀಧರ್ ಅವರೇ ಬರೆದಿರುವ.. ಪ್ರೇಮಿಗಳು ಒಬ್ಬರಿಗೊಬ್ಬರು ಆಗುವ..ಈ ಪ್ಯಾಥೋ ಗೀತೆಯನ್ನು ಸೋನು ನಿಗಮ್ ಹಾಗು ಶ್ರೇಯಾ ಘೋಷಾಲ್ ಭಾವಪೂರ್ಣವಾಗಿ ಹಾಡಿದ್ದಾರೆ. ಮೊದಲ ಚರಣಕ್ಕೆ ಮುನ್ನ ಬರುವ ಸ್ಯಾಕ್ಸೋಫೋನ್ ವಾದನ ಹಾಗು ಎರಡನೇ ಚರಣಕ್ಕೂ ಮುನ್ನ ಬರುವ ಕೊಳಲು ವಾದನ, ಆಲಾಪ್ ಗಾಯನ ಹಾಡಿಗೆ ಹೊಸ ಕಳೆ ತಂದು ಕೊಟ್ಟಿದೆ. ನಿನ್ನ  ಪ್ರೀತಿ ಪಡೆದ ಋಣ ನನ್ನಲ್ಲಿದೆ ಎನ್ನುವ ಇನಿಯನಿಗೆ ನಿನ್ನ ಋಣವು  ನನ್ನಲ್ಲೂ ಇದೆಎಂದು ಹೇಳುವುದು ಅರ್ಥಪೂರ್ಣವಾಗಿದೆ. ಎರಡನೇ ಚರಣದ ಅಂತ್ಯದಲ್ಲಿ ಆರಂಭವಾಗುವ ಪಲ್ಲವಿಯ  ಶೃತಿಯನ್ನು ಒಂದು ಮನೆ ಏರಿಸಿ ಹಾಡಿಸಿರುವುದು ಸಂಗೀತನಿರ್ದೇಶಕರ  ಜಾಣ್ಮೆ ತೋರಿಸುತ್ತದೆ. ಈ ಪ್ರಯೋಗ ಕನ್ನಡದಲ್ಲಿ ಹೊಸತು. ಸಾಂಗ್‌ನ ಪಿಚ್ ಏರಿಸಿದ್ದರಿಂದ ಎಂಡಿಂಗ್‌ನಲ್ಲಿ ಸಾಹಿತ್ಯದ ಭಾವಕ್ಕೆ ಹೊಂದಿಕೊಂಡಂತಾಗಿ ಹಾಡು ಒಮ್ಮೆಲೇ ನಿಲ್ಲುತ್ತದೆ ! ನಮ್ಮ ಮನಸ್ಸಿನಲ್ಲಿ ಈ ಚಿತ್ರದ ಹಾಡುಗಳು ಹಾಗೇ ನಿಲ್ಲುತ್ತವೆ.

ಲೇಖನಚಿನ್ಮಯ ಎಂ.ರಾವ್.ಹೊನಗೋಡು.

August 20th, 2011

****************

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.