ಪ್ರವಾಸಸ್ಮಾರಕ

ಜೋಗ ಜಲಪಾತದ ಸನಿಹದ ಮಾವಿನಗುಂಡಿಯಲ್ಲೊಂದು ಮಹಿಳಾ ಸತ್ಯಾಗ್ರಹ ಸ್ಮಾರಕ

1ಪೋಟೋ ಮತ್ತು ಲೇಖನ- ಎನ್.ಡಿ,ಹೆಗಡೆ ಆನಂದಪುರಂ

ವಿಶ್ವ ವಿಖ್ಯಾತ ಜೋಗ ಜಲಪಾತದ ಸಮೀಪ ಮಾವಿನಗುಂಡಿಯಲ್ಲಿ ಅತಿ ವಿಶಿಷ್ಟ ಸ್ಮಾರಕವೊಂದನ್ನು ರೂಪಿಸಲಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ ನಿರಾಕರಣೆ ಚಳುವಳಿಯಲ್ಲಿ ಪಾಲ್ಗೊಂಡು ಬ್ರಿಟೀಷರಿಂದ ಸೆರೆವಾಸ ಅನುಭವಿಸಿದ ಗ್ರಾಮೀಣ ಮಹಿಳೆಯರ ದಿಟ್ಟ ಹೋರಾಟದ ಸತ್ಯದ ಚಿತ್ರಣ ಈ ಸ್ಮಾರಕದ ಪ್ರಮುಖ ತಿರುಳಾಗಿದೆ.

ಜೋಗದಿಂದ ಕೇವಲ ೪ ಕಿ.ಮೀ.ದೂರದ ಮಾವಿನಗುಂಡಿ ಈಗ ಪ್ರವಾಸಿಗರ ಸಂದರ್ಶನಾ ಸ್ಥಳವಾಗಿ ಬದಲಾಗಿದೆ. ಜೋಗ-ಹೊನ್ನಾವರ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ ಈ ಸ್ಮಾರಕ ಆಕರ್ಷಕ ರಚನೆಯಿಂದ ಬಹು ದೂರದಿಂದಲೇ ಪ್ರವಾಸಿಗರನ್ನು ಸೆಳೆಯುವಂತಿದೆ.
ಕಳೆದ ೨ ವರ್ಷಗಳಿಂದ ಈ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗಿದ್ದು ಕರ್ನಾಟಕ ಅರಣ್ಯ ಇಲಾಖೆಗೆ ಸೇರಿದ ಈ ಸ್ಥಳದಲ್ಲಿ ಬಹು ವರ್ಷಗಳ ಹಿಂದೆ ಪೋಲೀಸ್ ಹೊರಠಾಣೆ ಇತ್ತು. ಈ ಠಾಣೆ ರದ್ದಾದ ನಂತರ ಕಟ್ಟಡ ಬಳಕೆಯಿಲ್ಲದೆ ಶಿಥಿಲಗೊಂಡು ಹಂಚು ಮತ್ತು ಕಲ್ಲುಗಳು ಉದುರಿ ಬಿದ್ದು ಅಳಿದು ಹೋಗುವ ಹಾದಿಯಲ್ಲಿತ್ತು.

5ಈ ಸ್ಥಳವನ್ನು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಶಿರಸಿ ವಿಭಾಗ ಮತ್ತು ಬೆಂಗಳೂರಿನ ಪಶ್ಚಿಮಘಟ್ಟ ಕಾರ್ಯಪಡೆ ಜಂಟಿಯಾಗಿ ಈ ಸ್ಥಳದಲ್ಲಿ ವಿಶಿಷ್ಟ ಸ್ಮಾರಕ ಹಾಗೂ ಆಕರ್ಷಕ ಪುತ್ತಳಿಗಳನ್ನು ನಿರ್ಮಿಸಲು ಕಾರ್ಯಪ್ರವೃತ್ತವಾಯಿತು. ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಹಾಗೂ ಕರ ನಿರಾಕರಣೆಯಲ್ಲಿ ಮಹಿಳೆಯರ ದಿಟ್ಟ ಹೋರಾಟವನ್ನು ಪ್ರಚುರಪಡಿಸುವುದು ಈ ಸ್ಮಾರಕ ಮುಖ್ಯ ಧ್ಯೇಯವಾಗಿದೆ.

೧೯೩೦ ರಿಂದ ೧೯೩೫ ರವರಗೆ ದೇಶದಲ್ಲೆಲ್ಲೆಡೆ ಕರ ನಿರಾಕರಣೆ ಮತ್ತು ಅಸಹಕಾರ ಚಳುವಳಿ ಜೋರಾಗಿತ್ತು. ಬೆಂಗಳೂರು ಸನಿಹದ ಕನಕಪುರದ ವೆಂಕಟರಾಮಯ್ಯ ಮತ್ತು ಅವರ ಪತ್ನಿ ಗೌರಮ್ಮ ೪-೫ ವರ್ಷಗಳ ಕಾಲ ಸಿದ್ದಾಪುರದಲ್ಲಿ ನೆಲೆಸಿ ಸುತ್ತಮುತ್ತ ಗ್ರಾಮೀಣ ಪ್ರದೇಶದಲ್ಲಿ ಚಳುವಳಿ ಚುರುಕುಗೊಳಿಸಿದರು. ಸಿದ್ದಾಪುರ, ತಡಗಳಲೆ, ಕಾನಲೆ, ದೊಡ್ಮನೆ, ತ್ಯಾಗಲಿ,ಹಣಜಿಬೈಲು, ಕುಳಿಬೀಡು,ಗುಂಜಗೋಡು,ಹೊಸಕೊಪ್ಪ, ಹೆಗ್ಗಾರು ಇತ್ಯಾದಿ ಪ್ರದೇಶದಲ್ಲಿ ಪುರುಷರಷ್ಟೇ ಅಲ್ಲ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚಳುವಳಿಯಲ್ಲಿ ಧುಮುಕಿದರು.

2ಈ ಸಮಯದಲ್ಲಿ ಮಾವಿನಗುಂಡಿಯಲ್ಲಿ ನಡೆದ ಮಹಿಳೆಯರ ಉಪವಾಸ ಸತ್ಯಾಗ್ರಹ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ೧೯೩೨ರ ಮೇ ೧೮ ರಂದು ಆಗಿನ ಆಂಗ್ಲ ಸರ್ಕಾರಕ್ಕೆ ಕರ ನೀಡದ ರೈತರ ಎಮ್ಮೆಗಳನ್ನು ರಸ್ತೆ ಕಾಮಗಾರಿ ಹೊಣೆ ಹೊತ್ತ ಓರ್ವ ಕಾರಕೂನ ಹಾಗೂ ಒಬ್ಬ ಹವಾಲ್ದಾರ್ ವಶಪಡಿಸಿಕೊಂಡು ಸಾಗಿಸಿದರು. ಇದನ್ನು ಪ್ರತಿಭಟಿಸಿ ಬಸುರಿ, ಬಾಣಂತಿ, ವಯೋವೃದ್ಧ ಮಹಿಳೆಯರೂ ಸೇರಿ ಹಲವರು ಉಪವಾಸ ಸತ್ಯಾಗ್ರಹ ಆರಂಭಿಸಿದರು. ತ್ಯಾಗಲಿ ಭುವನೇಶ್ವರಮ್ಮ (೩೨ ದಿನ ಉಪವಾಸ), ಕಲ್ಲಾಳ ಲಕ್ಷ್ಮಮ್ಮ (೨೨ ದಿನ ಉಪವಾಸ) ನಡೆಸಿದರು. ಇವರ ಜೊತೆಗೆ ಪ್ರತಿ ದಿನ ಸರತಿಯಂತೆ ದೊಡ್ಮನೆ ಮಹಾದೇವಮ್ಮ ,ಕುಳಿಬೀಡು ಗಣಪಮ್ಮ , ಹಣಜಿಬೈಲು ದುಗ್ಗಮ್ಮ, ಕುಳಿಬೀಡು ಭಾಗೀರಥಮ್ಮ,ಕಲ್ಲಾಳ ಕಾವೇರಮ್ಮ, ಹೊಸಕೊಪ್ಪ ಸೀತಮ್ಮ, ಗುಂಜಗೋಡು ಮಾದೇವಮ್ಮ, ಹೆಗ್ಗಾರು ದೇವಮ್ಮ ಉಪವಾಸ ಸತ್ಯಾಗ್ರಹ ನಡೆಸಿದ ದಾಖಲೆ ಇದೆ. ಈ ಸ್ಮಾರಕದ ಫಲಕದಲ್ಲಿ ಇವರುಗಳ ಕಾರ್ಯವನ್ನು ಸ್ಮರಿಸಿ ಈಗ ಈ ಸ್ಥಳದಲ್ಲಿ ಶಾಸನ ಬರೆಯಲಾಗಿದೆ.
(ರಂಗನಾಥ ದಿವಾಕರ ಅವರ ಕರನಿರಾಕರಣೆಯ ವೀರ ಕಥೆ ಎಂಬ ಪುಸ್ತಕದಲ್ಲಿ ಇಲ್ಲಿನ ಚಳಿವಳಿಯ ವಿವರ ದಾಖಲಾಗಿದೆ.)

ಇಲ್ಲಿನ ಈ ವಿಶಿಷ್ಟಪೂರ್ಣ ಸ್ಮಾರಕದಲ್ಲಿ ಮಹಿಳಾ ಸತ್ಯಾಗ್ರಹಿಗಳ ಮೂರ್ತಿ ರಚಿಸಲಾಗಿದೆ. ಘಟನೆಯ ದೃಶ್ಯವನ್ನು ಬಿಂಬಿಸಲಾಗಿದೆ. ಮಹಿಳೆಯರನ್ನು ಕಾರಾಗ್ರಹಕ್ಕೆ ಹಾಕಿದ ದೃಶ್ಯ ರೂಪಿಸಲಾಗಿದೆ. ಹುಬ್ಬಳಿಯ ಉತ್ಸವ್ ರಾಕ್ ಗಾರ್ಡನ್ ನ ಕಲಾವಿದರು ಇಲ್ಲಿ ದುಡಿದು ನೈಜತೆಯ ಚಿತ್ರಣ ನೀಡಿದ್ದಾರೆ.

7೨ ವರ್ಷಗಳ ಹಿಂದೆ ಶಿರಸಿ ಅರಣ್ಯ ವಿಭಾಗದ ಆಗಿನ ಡಿ.ಎಫ್.ಓ .ಆಗಿದ್ದ ಮನೋಜ್ ಕುಮಾರ್ ತ್ರಿಪಾಠಿ ಹಾಗೂ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಇವರ ಸತತ ಪ್ರಯತ್ನದಿಂದ ಈ ಸ್ಮಾರಕ ರೂಪುಗೊಳ್ಳುವಂತಾಗಿದೆ. ಸ್ಮಾರಕದ ಸನಿಹವೇ ವನ ದೇವತೆ ಮೂರ್ತಿ, ಕಾರಂಜಿ, ಕೊಕ್ಕರೆ ಇತ್ಯಾದಿ ಪಕ್ಷಿಗಳ ಓಡಾಟದ ಭಂಗಿ ಇತ್ಯಾದಿ ರೂಪಿಸಲಾಗುತ್ತಿದೆ. ಈ ವರಗೆ ಸುಮಾರು ೯ ಲಕ್ಷ ರೂ.ವೆಚ್ಚ ಮಾಡಲಾಗಿದ್ದು ಇನ್ನೂ ಹಲವು ಕಾಮಗಾರಿಗಳು ನಡೆಯುತ್ತಲೇ ಇದೆ.
ಜೋಗಕ್ಕೆ ಆಗಮಿಸಿದ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿದರೆ ಕರ ನಿರಾಕರಣೆ ಚಳುವಳಿಯ ರೋಮಾಂಚನಕಾರಿ ಅನುಭವವಾಗುತ್ತದೆ.

ಪೋಟೋ ಮತ್ತು ಲೇಖನ- ಎನ್.ಡಿ,ಹೆಗಡೆ ಆನಂದಪುರಂ

30-8-2012

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.