ಸಂಗೀತ ಸಮಯ

ಭಾರತೀಯ ಶಾಸ್ತ್ರೀಯ ಕಲೆಗಳಲ್ಲಿ ಸಾಧನೆಗೈದವರು ಯಾವುದೇ ಕ್ಷೇತ್ರದಲ್ಲೂ ಉನ್ನತಿ ಸಾಧಿಸಬಹುದು

ಬೆಂಗಳೂರು: ಸೃಜನ ಸಾಂಸ್ಕೃತಿಕ ಸಮೂಹದ ವತಿಯಿಂದ ಬಸವನಗುಡಿಯ ನ್ಯಾಷನಲ್ ಕಾಲೇಜಿನ, ಗಾಂಧಿ ನೆಹರು ರಂಗಮ೦ದಿರಲ್ಲಿ ದಿನಾಂಕ ೨ ಮಾರ್ಚ್ ೨೦೨೫ರಂದು, ಸಂಜೆ ೪:೩೦ ಗಂಟೆಗೆ ಆಯೋಜಿಸಲಾಗಿದ್ದ ೨೩ನೇ ವಾರ್ಷಿಕೋತ್ಸವ, ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂದು ಎಲ್ಲರನ್ನು ಆಕರ್ಷಿಸಿತು.

ಈ ಕಾರ್ಯಕ್ರಮಕ್ಕೆ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಶ್ರೀಮತಿ ಸಹನ ಬಾಳ್ಕಲ್‌ರವರು ಮತ್ತು ಡಾ|| ಅನುಷಾ ಎ ರಾವ್ ಹೃದ್ರೋಗ ತಜ್ಞರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

೨೦೨೩-೨೪ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪರೀಕ್ಷೆಯಲ್ಲಿ ೯೩%ಗೂ ಅಧಿಕ ಅಂಕ ಗಳಿಸಿದ ಸೃಜನದ ೧೮ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

ಶ್ರೀಮತಿ ಸಹನ ಬಾಳ್ಕಲ್ ಮಾತನಾಡಿ, ಸೃಜನದ ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿದರು. ಭಾರತೀಯ ಶಾಸ್ತ್ರೀಯ ಕಲೆಗಳಿಗೆ, ಅದರಲ್ಲೂ ಸಂಗೀತಕ್ಕೆ ಅಪಾರವಾದ ಶಕ್ತಿಯಿದೆ, ಇದರಲ್ಲಿ ಸಾಧನೆಗೈದವರು ಯಾವುದೇ ಕ್ಷೇತ್ರದಲ್ಲೂ ಉನ್ನತಿ ಸಾಧಿಸಬಹುದು ಎಂದರು. ಪ್ರತಿಭಾನ್ವಿತರಾದ ಸೃಜನ ವಿದ್ಯಾರ್ಥಿಗಳು ನಾಗರಿಕ ಸೇವಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಗುರಿಯಿರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಡಾ|| ಅನುಷಾ ಎ ರಾವ್ ರವರು ಮಾತನಾಡಿ ತಾವು ಸೃಜನದ ವಿದ್ಯಾರ್ಥಿನಿಯಾಗಿದ್ದಾಗಿನ ದಿನಗಳನ್ನು ನೆನಪಿಸಿಕೊಳ್ಳುತ್ತಾ, ನರಹರಿ ದೀಕ್ಷಿತ್ ರವರ ಬೋದನಾ ಶೈಲಿ, ಶಿಸ್ತು,ಸಮಯ ಪಾಲನೆ, ವಿದ್ಯಾರ್ಥಿಗಳಲ್ಲಿ ಅವರಿಗೆ ಇರುವ ಕಾಳಜಿಯನ್ನು ಶ್ಲಾಘಿಸಿದರು. ಆರೋಗ್ಯ ಕಾಯ್ದುಕೊಳ್ಳುವಲ್ಲಿ ಸಂಗೀತದ ಪಾತ್ರವನ್ನು ಓರ್ವ ವೈದ್ಯೆಯಾಗಿ ಪ್ರೇಕ್ಷಕರ ಮನಮುಟ್ಟುವಂತೆ ತಿಳಿಸಿದರು, ಮುಂದಿನ ವರ್ಷಗಳಲ್ಲಿ ಇದೇ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸುವಂತೆ ಆಗಬೇಕು ಎಂದು ಹಾರೈಸಿದರು. ತಾವು ದೀಕ್ಷಿತ್ ರವರ್ ತರಗತಿಯಲ್ಲಿ ಕಲಿತ ಹಾಡನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಎಲ್ಲರ ಮನಸನ್ನು ಗೆದ್ದರು.

ಸೃಜನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ನರಹರಿ ದೀಕ್ಷಿತ್ ರವರು ಮುಖ್ಯ ಅತಿಥಿಗಳನ್ನು ಹಾಗೂ ನೆರೆದಿದ್ದ ಪ್ರೇಕ್ಷಕರನ್ನು ಸ್ವಾಗತಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೯೮.೫% ಪಡೆದು ಸಾಧನೆಗೈದ ಪೂಜ ವಿ ಪ್ರತಿಭಾ ಪುರಸ್ಕೃತರ ಪರವಾಗಿ ಮತ್ತು ಶ್ರೀ ಶ್ರೀಕಾಂತ್ ಅವರು ಪುರಸ್ಕೃತ ಪೋಷಕರ ಪರವಾಗಿ ಮಾತನಾಡಿದರು.

ಸೃಜನದ ವಿದ್ಯಾರ್ಥಿಗಳ ಸಮೂಹ ಗಾಯನ ಮತ್ತು ನೃತ್ಯ ಪ್ರದರ್ಶಗಳು ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿತು. ಶ್ರೀಮತಿ ಪಾರ್ವತಿ ನರಹರಿ ದೀಕ್ಷಿತ್ ರವರು ವಂದನಾರ್ಪಣೆಯನ್ನು ನೆರವೆರಿಸಿದರು.

ಯೂಟ್ಯೂಬ್ ನಲ್ಲಿ ನೇರಪ್ರಸಾರಗೊಂಡ ಕಾರ್ಯಕ್ರಮವನ್ನು ದೇಶ ವಿದೇಶಗಳಲ್ಲಿ ನೆಲೆಸಿರುವ ಸೃಜನದ ವಿದ್ಯಾರ್ಥಿಗಳು ಮತ್ತು ಪೋಷಕರಾದಿಯಾಗಿ ನೂರಾರು ಕಲಾಭಿಮಾನಿಗಳು ವೀಕ್ಷಿಸಿದರು.

ಸೃಜನ ಸಂಗೀತ ಶಾಲೆಯ ಸಮಸ್ತ ವಿದ್ಯಾರ್ಥಿ ಮತ್ತು ಪೋಷಕವೃಂದ ಉಪಸ್ಥಿತರಿದ್ದರು.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.