ನಾಯಕ-ನಾಯಕಿ

ದಾರಿ ಬಿಡಿ ಬಂದಳು ಮೋಹಕ ತಾರೆ ಅಂಬಿಕಾ

ಲೇಖನ-ಚಿನ್ಮಯ.ಎಂ.ರಾವ್ ಹೊನಗೋಡು.

24-5-2011

“ಚಳಿ ಚಳಿ ತಾಳೆನು ಈ ಚಳಿಯ..ಅಹಾ..ಒಹೋ..” ಚಕ್ರವ್ಯುಹ ಚಿತ್ರದ ಈ ಹಾಡಿಗಾಗಿಯೇ ಅಂದು ಥಿಯೇಟರ್ ತುಂಬುತ್ತಿತ್ತು! ಪ್ರಣಯದ ಮತ್ತನ್ನು ಏರಿಸಿದ್ದ ಎಂಬತ್ತರ ದಶಕದ ಈ ಗೀತೆ ಇಂದಿಗೂ ರಸಿಕರಿಗೆ ಜೀವ ತುಂಬುತ್ತಿದೆ. ಕೋಮಾದಲ್ಲಿರುವ ಮುದುಕರಿಗೂ ಕಾಮನೆಯ ಟಾನಿಕ್ ನೀಡಿ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಈ ಹಾಡಿಗೆ ಇನ್ನೂ ವಯಸ್ಸಾಗಿಲ್ಲ. ಅಂದು ಇದೇ ಹಾಡಿಗೆ ಮೈಚಳಿ ಬಿಟ್ಟು ಅಂಬಿಯೊಡನೆ ಕುಣಿದು ಪಡ್ಡೆಹೈಕಳ ನಂಬಿಕೆಗೆ ಪಾತ್ರವಾಗಿ ಪಾತ್ರದೊಳಗೆ ಹೊಕ್ಕುಹೋಗಿದ್ದ ಚತುರ್ಭಾಷಾ ಮೋಹಕ ತಾರೆ ಅಂಬಿಕಾಳಿಗೂ ಇನ್ನೂ ವಯಸ್ಸಾದಂತಿಲ್ಲ! ಈಕೆ ನಡೆದು ಬರುತ್ತಿದ್ದರೆ ಇಂದೂ ಕೂಡ ಬೇಸಿಗೆಯ ಉರಿಬಿಸಿಲು ತಂಪಾಗಿಬಿಡುತ್ತದೆ. ಚಳಿಗಾಲ ಬಂದು ಮೈಚಳಿ ಹೆಚ್ಚಾಗುತ್ತದೆ. ಈ ಸುರಸುಂದರಿಯನ್ನು ಮೈಯೆಲ್ಲ ಕಣ್ಣಾಗಿ ನೋಡಿ ಅಂದಿನ-ಇಂದಿನ ಯುವಕರು ಎಂದೆಂದಿನ ಯುವಕರಾಗಿಬಿಡುತ್ತಾರೆ!
ಹೌದು….ಒಂದು ಕಾಲದಲ್ಲಿ ಕನ್ನಡಚಿತ್ರರಂಗವನ್ನು ಗಡಗಡ ನಡುಗಿಸಿದ್ದ ಈ ಸಹಜಸುಂದರಿ ಈಗ ಮತ್ತೆ ಕನ್ನಡಿಗರೆದುರು ದಿಢೀರ್ ಪ್ರತ್ಯಕ್ಷವಾಗುತ್ತಿದ್ದಾರೆ.ಹೇಗೆಂದು ಕೇಳುತ್ತೀರಾ?

ಶಾಕ್-ಕಶ್ಯಪ್

ಕನ್ನಡದ ಕಿರುತೆರೆಗೆ ಆಗಾಗ ಸ್ವೀಟ್‌ಶಾಕ್ ನೀಡುತ್ತಲೇ ಬಂದಿರುವ ಪ್ರಖ್ಯಾತ ನಿರ್ದೇಶಕ ಅಶೋಕ್ ಕಶ್ಯಪ್, ಕನ್ನಡದ ಕಲಾರಸಿಕರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡಿ ಮೈಮರೆಯಲಿ ಎಂದು ಅಂಬಿಕಾ ಅವರನ್ನು ಪ್ರೀತಿಂದ ಕರೆತಂದಿದ್ದಾರೆ. ಸೂಪರ್ ಕ್ಯಾಮೆರಾಮನ್ ಅಶೋಕ್ ಹೊಸ ಕ್ಯಾಮೆರಾಗಳಿಗೆ ಹಳೆ ಸುಂದರಿಯನ್ನು ಪರಿಚುಸಿದ್ದಾರೆ.
“ನಾನೇ ಅಂಬಿಕೆ….ನನ್ನ ಮೇಲಿರಲಿ ನಿಮಗೆ ನಂಬಿಕೆ…” ಎಂದು ಪ್ರೀತಿಯ “ಅಮ್ಮಾಜಿ”ಯಾಗಿ ಸುವರ್ಣವಾಹಿನಿಯಲ್ಲಿ ಪ್ರತಿರಾತ್ರಿ ಒಂಬತ್ತಕ್ಕೆ “ಪ್ರೀತಿಯಿಂದ” ಧಾರವಾಹಿಯಲ್ಲಿ ಅಂಬಿಕಾ ಕಾಣಿಸಿಕೊಳ್ಳುತ್ತಿದ್ದಾರೆ. “ನಿಮ್ಮಾಣೆ ನಾನು ಕಾಣೆಯಾಗಿಲ್ಲ,ಅಭಿನಯವೇ ನನ್ನ ಮನೆ” ಎಂದು ಕನ್ನಡಿಗರ ಪ್ರೀತಿಗೆ ಕನ್ನಡಿ ಹಿಡಿಯುತ್ತಿದ್ದಾರೆ.

ಅಂದದ ಗುಟ್ಟು-ಈಗ ರಟ್ಟು

ತೀರ್ಥಹಳ್ಳಿಯ ಕೋಟೆಗದ್ದೆಯಲ್ಲಿ “ಪ್ರೀತಿಯಿಂದ ಧಾರವಾಹಿಯ ಚಿತ್ರೀಕರಣದಲ್ಲಿ ಅಂಬಿಕಾ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಎಲ್ಲರ ಬಂಧುವಾಗಿದ್ದಾರೆ. ಸೆಟ್‌ನಲ್ಲಿ ಪ್ರತಿಯೊಬ್ಬರಿಗೂ ಅಕ್ಷರಶಹಃ ಪ್ರೀತಿಯ “ಅಮ್ಮಾಜಿ”ಯಾಗಿದ್ದಾರೆ. ಬಹುತೇಕ ಹೊಸಬರೇ ನಟಿಸುತ್ತಿರುವ ಈ ಧಾರವಾಹಿಯ ಕಲಾವಿದರಿಗೆ ನಟನೆಯ ಪಾಠ ಹೇಳಿಕೊಡುತ್ತಾ ಶಿಕ್ಷಕಿಯಾಗಿದ್ದಾರೆ. ಒಂದೊಂದೇ ಶಾಟ್‌ಗೆ ಓಕೆ ಮಾಡಿ, ಸಾಕೆ? ಇನ್ನೂ ಬೇಕೆ? ಎಂದು ಹೂನಗೆ ಚೆಲ್ಲುತ್ತಿದ್ದಾರೆ. ನಿನ್ನೆ ಮೊನ್ನೆ ಬಂದು ಬಿಂಕ ಪಡುತ್ತಿರುವವರನ್ನು ಮಂಕಾಗಿಸಿದ್ದಾರೆ. ತಾನು ಮೇಲಿರುವ ತಾರೆಯಲ್ಲ…ನೆಲದ ಮೇಲಿರುವ ತಾರೆ ಎಂದು “ಡೌನ್ ಟು ಅರ್ಥ” ಆಗಿ ಆರ್ಥಪೂರ್ಣವಾಗಿದ್ದಾರೆ. ನಿರಂತರ ಧನಾತ್ಮಕ ಚಿಂತನೆಯೇ ತನ್ನ ಸೌಂದರ್ಯಸಾಧನವೆನ್ನುತ್ತಾರೆ. ಆಶಾವಾದವೇ ತನ್ನ ಸದಾ ಅಂದದ, ಸದಾ ಆನಂದದ ಗುಟ್ಟೆಂದು ಗುಟ್ಟಾಗಿ ರಟ್ಟು ಮಾಡುತ್ತಿದ್ದಾರೆ!

ಇಂತಿಪ್ಪ ತುಂಬು ಕಂಗಳ ಚೆಲುವೆ ಅಂಬಿಕಾ ತನ್ನ ಮಾದಕ ನೋಟದ ಹಿಂದೆ ಮಾಗಿದ ಚಿಂತನೆಗಳನ್ನು ತುಂಬಿಸಿಕೊಂಡಿದ್ದಾರೆ ಎಂಬುದೇ ಹಳೆನಟಿಯ ಹೊಸ ವಿಶೇಷ. ಕಲಾಭಿಮಾನಿಗಳು ತನ್ನನ್ನು ಮೆಚ್ಚಿನ ನಟಿಯಾಗಿಯೇ ಮನತುಂಬಿ ಹಾರೈಸಿದ್ದಾರೆ. ಹಾಗೆಯೇ ಮುನ್ನಡೆಯುತ್ತೇನೆ.ಇದೇ ತನ್ನ ವೃತ್ತಿ,ಜೀವಾಳ. ಬೇರೆ ಇನ್ನೇನನ್ನೂ ಮಾಡಲಾರೆ ಎಂದು ಖಡಾಖಂಡಿತವಾಗಿ ಮಾತನ್ನು ತುಂಡು ಮಾಡುತ್ತಾರೆ. ಚಿತ್ರರಂಗದ ಬಗ್ಗೆ ಚಿತ್ರರಂಗದವರೇ ಅಸಹ್ಯವಾಗಿ ಮಾತನಾಡುವುದಕ್ಕೆ ಬೇಸರವಾಗುತ್ತಾರೆ. ಅಂತವರು ಇಲ್ಲೇ ಏಕೆ ಬೀಡು ಬಿಟ್ಟು ಬೇಡವಾದ್ದನ್ನು ಹರಡಬೇಕು? ಚಿತ್ರರಂಗ ಅವರ ಪಾಲಿಗೆ ಸರಿಯಿಲ್ಲ ಎಂದಾದರೆ ಬಿಟ್ಟುಬಿಡಬಹುದಲ್ಲ ಎಂದು ಕಿಡಿಕಾರುತ್ತಾರೆ. ಚಿತ್ರರಂಗದ ಬಗ್ಗೆ ಗೌರವ ಇರುವವರು ಮಾತ್ರ ಇಲ್ಲಿದ್ದರೆ ಸಾಕು ಎಂದು ಮೃದುವಾದ ಬೆರಳಿನಿಂದ ಜಾರಿದ ಕನ್ನಡಕವನ್ನು ಸಂಪಿಗೆಯಂತಹ ನಾಸಿಕದೆ ಮೆಲೇರಿಸಿ ಸಿಟ್ಟನ್ನು ಒಮ್ಮೆಲೇ ಸುಟ್ಟು ಶಾಂತದೇವತೆಯಾಗುತ್ತಾರೆ.

ಶಾಟ್ ಕಟ್ ಆದಮೇಲೆ ನಟಿಸುವ ಜಾಯಮಾನ ನಮ್ಮ ಅಂಬಿಕಾ ಅವರಿಗೆ ಗೊತ್ತೇ ಇಲ್ಲ. ನೇರ ನುಡಿ,ನೇರ ನಡೆ. ತನಗೆ ಮಾತನಾಡಲು ಬರುವ ಎಲ್ಲಾ ಭಾಷೆಯ ಮೇಲೂ ಅಂಬಿಕಾ ಅವರಿಗೆ ಪ್ರೀತಿ-ಅಭಿಮಾನ. ಕನ್ನಡವನ್ನು ಚೆನ್ನಾಗಿಯೇ ಮಾತನಾಡುವ ಅಂಬಿಕಾ ಅವರನ್ನು ಕನ್ನಡೇತರರಂತೆ ನಟಿಸುತ್ತಿರುವ ಕನ್ನಡದ ಇತರ ನಟಿಯರು ಒಮ್ಮೆ ಪಾದ ಮುಟ್ಟಿ ನಮಸ್ಕರಿಸಿ ಬರುವುದು ಒಳ್ಳೆಯದೆನಿಸುತ್ತದೆ. ತೆರೆಮರೆಗೆ ಸರಿದಿದ್ದ ಅಂಬಿಕಾ ಮತ್ತೆ ನಯನದಿ ಮಿಂಚನ್ನು ತುಂಬಿಕೊಂಡು ಕನ್ನಡದ ಕಿರುತೆರೆ-ಬೆಳ್ಳಿತೆರೆಗಳಲ್ಲಿ ಮೆರೆಯಲಿ ಎಂಬುದೇ ಅಂಬಿಕಾಭಿಮಾನಿಗಳ ಅಭಿಪ್ರಾಯ…ಮನಮೋಹಕ ಆಶಯ.

ಲೇಖನ-ಚಿನ್ಮಯ.ಎಂ.ರಾವ್ ಹೊನಗೋಡು.

24-5-2011

***************************

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.