ನಮ್ಮ ಸಂಸ್ಥೆ ವಾರ್ತೆ

ಕನ್ನಡ ಟೈಮ್ಸ್ ಸಂಸ್ಥೆಯ ಆಡಿಯೋ ವಿಭಾಗಕ್ಕೆ ಮಾಜಿ ಉಪಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಕೆ.ಎಸ್ ಈಶ್ವರಪ್ಪನವರಿಂದ ಚಾಲನೆ

ಶಿವಮೊಗ್ಗ : ದೇಶದ ಸಂಸ್ಕೃತಿಗೆ ಜಗತ್ತಿನಲ್ಲೇ ಮಹತ್ತರ ಸ್ಥಾನವಿದೆ. ಭಾರತದ ಹಿರಿಮೆ ಮತ್ತು ಗರಿಮೆ ಇವೆರಡು ದೇಶದ ಸಂಸ್ಕೃತಿಯ ಮೂಲಕ ಇಡೀ ಪ್ರಪಂಚಕ್ಕೆ ಪರಿಚಯವಾಗಿದೆ. ವೇದ, ಉಪನಿಷತ್ತುಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಇಡೀ ಮಾನವ ಕುಲದ ಒಳಿತಿಗಾಗಿ ಋಷಿಮುನಿಗಳಿಂದ ರಚಿತವಾಗಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಕೆ.ಎಸ್ ಈಶ್ವರಪ್ಪ ಹೇಳಿದರು.

ಇತ್ತೀಚೆಗಷ್ಟೆ (23-9-2013) ಯುವ ಸಂಗೀತ ನಿರ್ದೇಶಕ ಚಿನ್ಮಯ ಎಂ.ರಾವ್ ಹೊನಗೋಡು ಇವರು ಸಂಸ್ಥಾಪಿಸಿರುವ “ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ಸಂಸ್ಥೆ”ಯ ಆಡಿಯೊ ವಿಭಾಗ “ಕನ್ನಡ ಟೈಮ್ಸ್ ಏವಿ ಜೋನ್” ಅನ್ನು ನಗರದ ನವ್ಯಶ್ರೀ ಸಂಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಇಂದು ಪದವಿ ಹಾಗು ಹಣಕ್ಕೆ ಮಾತ್ರ ಬಹಳ ಮಹತ್ವ ಸಿಗುತ್ತಿರುವುದು ನಿಜಕ್ಕೂ ದೌರ್ಭಾಗ್ಯಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. ವಿದೇಶಿ ಭಕ್ತರೂ ಭಗವದ್ಗೀತೆ ಹಾಗು ಭಾರತೀಯ ಸಂಸ್ಕೃತಿಯಲ್ಲಿರುವ ಅಂಶಗಳನ್ನು ಅಧ್ಯಯನ ಮಾಡುತ್ತಿರುವಾಗ ನಮ್ಮಲಿಯ ಕೆಲವೇ ಕೆಲವು ಬೆರಳೆಣಿಕೆಯಷ್ಟು ಜನ ಪ್ರಚಾರಕ್ಕಾಗಿ ಇದರ ವಿರುದ್ಧ ಟೀಕೆ ಮಾಡುತ್ತಿರುವುದು ವಿಷಾದಕರ ಸಂಗತಿ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ನಮ್ಮ ನಾಡು ನುಡಿ ಹಾಗು ಸಂಸ್ಕೃತಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕನ್ನಡ ಟೈಮ್ಸ್ ಸಂಸ್ಥೆ ಹಾಗು ನಿನಾದ ಪ್ರತಿಷ್ಠಾನದ ಯೋಜನೆಗಳು ನಮಗೆಲ್ಲಾ ಹೆಮ್ಮೆಯ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ಕನ್ನಡ ಟೈಮ್ಸ್ ಸಂಸ್ಥೆಯ “ಮಂಗಳೋದಯ-ವೇದಿಕ್ ಚಾಂಟ್ಸ್ ಫಾರ್ ಡೈಲಿ ಲೈಫ್” ಎಂಬ ಮೊದಲ ಪ್ರಾಯೋಗಿಕ ಅಡಕ ಮುದ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಬಿ ಭಾನುಪ್ರಕಾಶ್ ಜಾತಿ, ಮತ, ಕುಲ, ವರ್ಣ ಮೀರಿದ ಸಂಸ್ಕೃತಿ ಭಾರತದ್ದಾಗಿದೆ. ಅದು ನಿರಂತರ ಹರಿಯುವ ನೀರಿನಂತೆ. ವಿಶ್ವಕ್ಕೇ ಮಾತೃಸ್ಥಾನದಲ್ಲಿ ಭಾರತೀಯ ಸಂಸ್ಕೃತಿ ನಿಂತಿದೆ ಎಂದರು.

ಸಾಹಿತ್ಯ, ಪರಿಸರ, ಸಂಸ್ಕೃತಿ, ಪತ್ರಿಕೋದ್ಯಮ ಮುಂತಾದವುಗಳನ್ನು ಒಟ್ಟುಗೂಡಿಸಿ ಈ ನಾಡಿಗೆ ಮುಟ್ಟಿಸಲು ಈ ಸಂಸ್ಥೆ ಪ್ರಾರಂಭವಾಗಿದೆ ಎಂದು ಕನ್ನಡ ಟೈಮ್ಸ್ ಸಂಸ್ಥೆಯ ಅಧ್ಯಕ್ಷ ಜಿ.ಟಿ ಶ್ರೀಧರ ಶರ್ಮ ಪ್ರಾಸ್ತಾವಿಕವಾಗಿ ತಿಳಿಸಿದರು.

ಮಂಗಳೋದಯ ಅಡಕ ಮುದ್ರಿಕೆಯ ಬಗ್ಗೆ ಮಾತನಾಡಿದ “ಕನ್ನಡ ಟೈಮ್ಸ್”ನ ಸಂಸ್ಥಾಪಕರಾದ ಯುವ ಸಂಗೀತ ನಿರ್ದೇಶಕ ಚಿನ್ಮಯ ಎಂ.ರಾವ್ ಹೊನಗೋಡು ಯಾವುದೇ ಕೃತಕ ವಾದ್ಯಗಳನ್ನು ಬಳಸದೆ ಅತ್ಯಂತ ಸಹಜವಾಗಿ ಸರಳವಾಗಿ ಇದನ್ನು ಧ್ವನಿಮುದ್ರಿಸಿರುವುದೇ ಇದರ ವಿಶೇಷ. ವೇದವೆಂಬುದು ಸಂಗೀತಕ್ಕೆ ಮೂಲ. ವೇದದಲ್ಲೇ ಸಂಗೀತವಿದೆ. ವೇದವೆಂಬುದು ಒಂದು ಸ್ವತಂತ್ರವಾದ ಸಂಗೀತ. ಇದಕ್ಕೆ ಯಾವುದೇ ಸಂಗೀತ ವಾದ್ಯಗಳನ್ನು ಮಿಶ್ರಣಗೊಳಿಸಿ ಆಡಂಬರಗೊಳಿಸುವ ಅವಶ್ಯಕತೆಯಿಲ್ಲ.

ವ್ಯಕ್ತಿಯೊಬ್ಬ ನಮ್ಮೆದುರು ಕುಳಿತು ವೇದಪಠಣ ಮಾಡಿದರೆ ಅದೆಷ್ಟು ಸಹಜಸೌಂದರ್ಯದಿಂದ ಕೂಡಿರುತ್ತದೆ, ಅದೆಷ್ಟು ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತದೆ ಎಂಬುದನ್ನು ಅರಿಯಲು ಪ್ರಾಯೋಗಿಕವಾಗಿ ಈ ರೀತಿಯಾಗಿ ವಾದ್ಯರಹಿತವಾಗಿ ಧ್ವನಿಮುದ್ರಿಸಲಾಗಿದೆ. ಇದರ ಪರಿಣಾಮ ಹಾಗು ಫಲಿತಾಂಶವನ್ನು ಗಮನಿಸಿಕೊಂಡು ಮುಂದಿನ ಧ್ವನಿಮುದ್ರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಮಹಾನಗರಗಳಲ್ಲಿ ಮಾತ್ರ ನೆಲೆಸಿರುವ ಧ್ವನಿಮುದ್ರಣ ವ್ಯವಸ್ಥೆಯನ್ನು ಗ್ರಾಮೀಣ ಭಾಗದಲ್ಲೇ ಮಾಡಿಕೊಳ್ಳುತ್ತಿರುವ ಕನ್ನಡ ಟೈಮ್ಸ್ ಸಂಸ್ಥೆ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿರುವ ಅವಕಾಶವಂಚಿತ ಪ್ರತಿಭಾನ್ವಿತ ಜಾನಪದ, ಶಾಸ್ತ್ರೀಯ ಹಾಗು ಸಾಂಪ್ರದಾಯಿಕ ಸಂಗೀತಗಾರರನ್ನು ಧ್ವನಿಮುದ್ರಿಕೆಗಳ ಮೂಲಕ ಲೋಕಕ್ಕೆ ಪರಿಚಯಿಸುವ ಆಶಯ ಹೊಂದಿದೆ. ಈ ಆಶಯವನ್ನು ಮೂರ್ತ ರೂಪಗೊಳಿಸಲು ಇದೊಂದು ಆರಂಭಿಕ ಕಾರ್ಯಕ್ರಮವಷ್ಟೇ. ಕಲಾಭಿಮಾನಿಗಳು ಹಾಗು ಸಹೃದಯರು ಸಲಹೆ ಸೂಚನೆಗಳನ್ನು ನೀಡಿ ನಮ್ಮ ಸದುದ್ದೇಶಗಳನ್ನು ಶ್ರೀಮಂತಗೊಳಿಸಬೇಕೆಂದು ತಿಳಿಸಿದರು.

ಮಂಗಳದೋಯ ಅಡಕ ಮುದ್ರಿಕೆಗೆ ಕಂಠದಾನವನ್ನು ಮಾಡಿರುವ ವಿದ್ವಾನ್ ಎಸ್.ನಾರಾಯಣ ಭಟ್ ವೇದವೆಂಬುದು ಭಾರತೀಯರ ಸಂಪತ್ತು. ಇದನ್ನು ಪೂಜಿಸಿ ಅಧ್ಯಯನ ಮಾಡುವ ಅಗತ್ಯ ನಮ್ಮೆಲ್ಲರಿಗೂ ಇದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ನಿನಾದ ಪ್ರತಿಷ್ಠಾನದ ಬಿ.ಆರ್ ಮಧುಸೂಧನ ಮಾತನಾಡುತ್ತಾ ತಮ್ಮ ಸಂಸ್ಥೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಸದುದ್ದೇಶ ಹೊಂದಿದ್ದು ಇದನ್ನು ಕಾರ್ಯಗತಗೊಳಿಸಲು ಕನ್ನಡ ಟೈಮ್ಸ್ ಸಂಸ್ಥೆಯ ಇಂತಹ ಮುಂದಿನ ಎಲ್ಲಾ ಯೋಜನೆಗಳಿಗೆ ಬೆನ್ನೆಲುಬಾಗಿ ಸಹಕರಿಸಲಿದೆ ಎಂದರು.

ಅಧ್ಯಕ್ಷತೆ ವಹಿಸಿ ಅಂತಿಮವಾಗಿ ಮಾತನಾಡಿದ ಅಭ್ಯುದಯ ಸಂಸ್ಥೆಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಎಂ.ಬಿ.ಎ ಪದವಿ ಪಡೆದಿರುವ ಕನ್ನಡ ಟೈಮ್ಸ್ ಸಂಸ್ಥೆಯ ಸಂಸ್ಥಾಪಕರಾದ ಚಿನ್ಮಯ ಮಹಾನಗರಿಯಲ್ಲಿ ನೆಲೆಸಿ ಬಹುದೊಡ್ಡ ಉದ್ಯೋಗದಲ್ಲಿದ್ದು ಕೈ ತುಂಬ ಹಣ ಗಳಿಸಬಹುದಿತ್ತು. ಅವೆಲ್ಲವನ್ನು ಬಿಟ್ಟು ಗ್ರಾಮೀಣ ಭಾಗದಲ್ಲೇ ನೆಲೆಸಿ ತಮ್ಮ ಸಂಗೀತ ಹಾಗು ಸಾಹಿತ್ಯದ ಮೂಲಕ ಇಂತಹ ಸಮಾಜಸೇವೆಯನ್ನು ಆರಂಭಿಸಿರುವುದು ಶ್ಲಾಘನೀಯ. ಅವರ ಸಂಸ್ಥೆಯ ಎಲ್ಲಾ ಚಟುವಟಿಕೆಗಳನ್ನು ಪೆÇ್ರೀತ್ಸಾಹಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹೊಸಳ್ಳಿಯ ವಿದ್ವಾನ್ ಅನಂತಾವಧಾನಿ, ಸಾಗರದ ನಾಟ್ಯಾಚಾರ್ಯ ವಿದ್ವಾನ್ ಗೋಪಾಲ್, ನಿನಾದ ಸಂಸ್ಥೆಯ ಕಲಾವಿದರು ಹಾಗು ಮತ್ತಿತರರು ಉಪಸ್ಥಿತರಿದ್ದರು. ಚಿನ್ಮಯ ಎಂ.ರಾವ್ ಪ್ರಾರ್ಥನಾಗೀತೆಯನ್ನು ಹಾಡಿದರು. ರಾಜು ಭಾಗವತ್ ಕಾಸ್ಪಾಡಿ ನಿರೂಪಿಸಿದರು.

23-9-2013

**************

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.