ಚಿತ್ರಸಂಗೀತ

ಪಿ..ಬಿ ಶ್ರೀನಿವಾಸ್ ಗಾಯನದಲ್ಲಿ ಶಾಸ್ತ್ರೀಯತೆ-ಒಂದು ಅವಲೋಕನ

chinmaya-m-rao-with-p-b-shrinivas-1– ಚಿನ್ಮಯ ಎಂ.ರಾವ್ ಹೊನಗೋಡು

ಹುಟ್ಟಿದ್ದು ಆಂಧ್ರ, ನೆಲೆಸಿದ್ದು ಚೆನ್ನೈ, ಹಿನ್ನೆಲೆ ಗಾಯಕರಾಗಿ ಪ್ರವೇಶಿಸಿದ್ದು ಮಲಯಾಳಮ್‌ನಿಂದ, ಹೆಚ್ಚು ವಿಜೃಂಭಿಸಿದ್ದು ನಮ್ಮ ಕನ್ನಡ ಚಿತ್ರಗೀತೆಗಳಿಂದ, ಹಾಡಿದ್ದು ಹತ್ತಾರು ಭಾಷೆಗಳಲ್ಲಿ, ಪಾಂಡಿತ್ಯ ಎಂಟು ಭಾಷೆಗಳಲ್ಲಿ, ಕವಿ, ಲೇಖಕ ಎಲ್ಲಕ್ಕಿಂತ ಹೆಚ್ಚಾಗಿ ಆದರ್ಶವ್ಯಕ್ತಿ ಇವಿಷ್ಟು ಕಾರಣಗಳು ಸಾಕಲ್ಲವೆ ಗಾಯಕನೊಬ್ಬ ಸರ್ವವ್ಯಾಪಿಯಾಗಲು ?!

ಒಬ್ಬ ಹಿನ್ನೆಲೆ ಗಾಯಕನ ಗಾಯನದಲ್ಲಿನ ವೈವಿಧ್ಯತೆಗೆ ಅನುಸಾರವಾಗಿ ಸಂಗೀತ ನಿರ್ದೇಶಕರ ಗಾಯಕ, ನಾಯಕ ನಟರ ಗಾಯಕ, ನಿರ್ದೇಶಕ ಅಥವಾ ನಿರ್ಮಾಪಕರ ಗಾಯಕ ಹೀಗೆ ಹಲವು ಆಯಾಮಗಳಿಂದ ಗುರುತಿಸುವುದುಂಟು. ಆದರೆ ಪಿ.ಬಿ ಶ್ರೀನಿವಾಸ್ ಎಂಬ ಸಂಗೀತ ಲೋಕದ ಐತಿಹಾಸಿಕ ವ್ಯಕ್ತಿತ್ವ ಆ ಎಲ್ಲಾ ಆಯಮಗಳಿಂದಲೂ ಒಮ್ಮೆಲೇ ಆರಾಧಿಸಲ್ಪಡುವ ಏಕಮೇವಾದ್ವಿತೀಯ ಗಾಯಕ ಎಂದರೆ ಅದೇನು ಅತಿಶಯೋಕ್ತಿಯ ಪರಿಧಿಯೊಳಗೆ ಬರಲಾರದು ! ಆ ಎಲ್ಲಾ ಆಯಮಗಳಿಂದಲೂ ಪೂರ್ತಿ ಅಂಕ ಪಡೆಯುತ್ತಿದ್ದ ಪಿ.ಬಿ.ಎಸ್ ಸಾರ್ವಕಾಲಿಕ ಎನಿಸುವಂತಹ ದಾಖಲಾರ್ಹ ಗೀತೆಗಳನ್ನು ನಮಗಿತ್ತು ಸರ್ವಜನಪ್ರಿಯ ಗಾಯಕರಾಗಿ ಮೆರೆದು ಈಗ ದೈಹಿಕವಾಗಿ ಮಾತ್ರ ಕಣ್ಮರೆಯಾಗಿದ್ದಾರೆ. ಅವರು ಹಾಡಿರುವ ಹಾಡುಗಳಿಂದ ಇನ್ನು ಮುಂದೆ ಸದಾ ಜೀವಂತವಾಗಿರುತ್ತಾರೆ. ಸಮಸ್ತ ಸಂಗೀತಾಭಿಮಾನಿಗಳ ಭಾವಾಂತರಾಳದೊಳಗೆ ಝೇಂಕರಿಸುವ ಗುಣ ಹೊಂದಿದ್ದ ಅವರ ಕಂಠಮಾಧುರ್ಯ ಹಾಗು ಗಾಯನ ಶೈಲಿಯಲ್ಲಿ ಧನಾತ್ಮಕವಾಗಿ ಚಿಂತನೆಗೊಳಪಡುವಂತಹ ಸಂಗತಿಗಳು ಸಾಕಷ್ಟಿವೆ. ಪ್ರತಿವಾದಿ ಭಯಂಕರ ಶ್ರೀನಿವಾಸ್ ಅವರ ಪ್ರತೀ ಹಾಡೂ ಕೂಡ ಸಂಗೀತಾಸಕ್ತರಿಗೆ ಸಂಗೀತ ವಿದ್ಯಾರ್ಥಿಗಳಿಗೆ ಅಧ್ಯಯನದ ವಸ್ತುಗಳೇ. ಅವರ ಒಂದೊಂದು ಹಾಡೂ ಕಡೆದಿಟ್ಟ ಒಂದೊಂದು ಸುಂದರ ಕಲಾಕೃತಿಗಳು. ಲಕ್ಷಾಂತರ ಗೀತಶಿಲ್ಪಗಳಿಂದ ಸಂಗೀತ ಶಾರದೆಗೆ ಬೃಹತ್ ದೇವಾಲಯವನ್ನೇ ನಮಗಾಗಿ ಕಟ್ಟಿಟ್ಟು ಇಹಲೋಕವನ್ನು ಪಿ.ಬಿ. ಎಸ್ ತ್ಯಜಿಸಿದ್ದಾರೆ ಎಂದು ನಿರಾಂತಕವಾಗಿ ವ್ಯಾಖ್ಯಾನಿಸಬಹುದು. ಅಂತಹ ಹಾಡುಗಳನ್ನು ಆಸ್ವಾದಿಸುವ ಮೂಲಕ ಎಂತಹ ನಾಸ್ತಿಕನಿಗೂ ತಾಯಿ ಶಾರದೆಯ ಗುಡಿಯೊಳಗೆ ಕಾಲಿಟ್ಟು ಆಕೆಯನ್ನು ದರ್ಶಿಸಿದ ಅನುಭವ ಆಗುತ್ತದೆ. ಇದು ದಿಟವೆಂಬಂತೆ “ತಾಯಿ ಶಾರದೆ ಲೋಕ ಪೂಜಿತೆ..ತೇ ನಮೋಸ್ತು ನಮೋಸ್ತುತೆ..”ಎಂಬ ಹಾಡನ್ನು ಕೇಳುವಾಗ ಭಾವಪೂರ್ಣವಾಗಿ ಒಳಮನಸ್ಸು ವಿದ್ಯಾಧಿದೇವತೆ ಶಾರದೆಗೆ ನಮಿಸುತ್ತದೆ ಅಲ್ಲವೇ ?! ಅಹುದು…ಭಾವಪರವಶತೆಯಿಂದ ಎಂಥವರನ್ನೂ ವಶೀಕರಿಸಿಕೊಳ್ಳುವ ಜಾಯಮಾನವಿದೆ ಪಿ.ಬಿ ಅವರ ಗಾಯನಕ್ಕೆ !

ಇಂತಹ ಅಪರೂಪದ ಅದ್ಭುತ ಶಕ್ತಿ ಅವರ ಗಾಯನದಲ್ಲಿ ಒಡಮೂಡಲು ಮೂಲಕಾರಣ ಅವರ ಶಾಸ್ತ್ರೀಯ ಸಂಗೀತ ಸಾಧನೆ ! ಹೌದು…ಆಂಧ್ರಪ್ರದೇಶದ ಕಾಕಿನಾಡದಲ್ಲಿ ಫಣೀಂದ್ರಸ್ವಾಮಿ ಹಾಗು ಶೇಷಗಿರಿಯಮ್ಮ ದಂಪತಿಗಳ ಸುಪುತ್ರನಾಗಿ ಜನಿಸಿದ ಇದೇ ಪಿ.ಬಿ ಶ್ರೀನಿವಾಸ್ ಸುಪ್ರಸಿದ್ಧ ವೀಣಾ ವಾದಕ ಏಮನಿ ಶಂಕರ ಶಾಸ್ತ್ರಿಯವರ ಗರಡಿಯಲ್ಲಿ ತಯಾರಾದ ಶಾಸ್ತ್ರೀಯ ಸಂಗೀತ ಗಾಯಕ. ಸಾಮಾನ್ಯವಾಗಿ ಗಾಯನದಲ್ಲಿನ ವೈವಿಧ್ಯತೆಯನ್ನು ಸಂಗೀತ ವಾದ್ಯಗಳ ವಾದನ ಶೈಲಿಯನ್ನಾಧರಿಸಿಯೂ ವಿಶ್ಲೇಷಿಸುತ್ತಾರೆ. ಕೊಳಲು ಶೈಲಿಯ ಗಾಯನ, ಹಾರ್ಮೋನಿಯಮ್ ಶೈಲಿಯ ಗಾಯನ, ಪಿಟೀಲು ಅಥವಾ ವೀಣಾ ಶೈಲಿಯ ಗಾಯನ ಹೀಗೆ ಹಲವು ಬಗೆ. ಕಲಿಸುವ ಸಂಗೀತ ಗುರುಗಳ ವಾದ್ಯ ಅಥವ ಬಾನಿಯಿಂದಲೂ ಇದು ಕಲಿಯುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಪಿ.ಬಿ.ಎಸ್ ಅವರ ಗುರುಗಳು ವೀಣಾವಾದಕರಾಗಿದ್ದರಿಂದ ಗಾಯನದಲ್ಲಿ ಇವರು ಸಹಜವಾಗಿ ವೀಣೆಯ ಶೈಲಿಯನ್ನು ಮೈಗೂಡಿಸಿಕೊಂಡರು ಎನ್ನಬಹುದು. ವೀಣಾ ವಾದನಕ್ಕೊಂದು ವಿಶೇಷವಿದೆ. ಅದೇನೆಂದರೆ ಸ್ವರಕಂಪನಗಳಲ್ಲಿ ವೀಣೆಯ ಶೈಲಿ ಅತ್ತ ಹಾರ್ಮೋನಿಯಮ್‌ನಂತೆ ಗಮಕರಹಿತವಾಗಿ ನೇರ ಕಠೋರವೂ ಅಲ್ಲ, ಇತ್ತ ವೇಣು ಅಥವಾ ಪಿಟೀಲಿನಂತೆ ಹೆಚ್ಚು ಗಮಕಭರಿತವೂ ಅಲ್ಲ. ಹಾಗಾಗಿ ಇದು ಗಾಯಕರು ಅಳವಡಿಸಿಕೊಳ್ಳಬಹುದಾದಂತಹ ಹಾಗು ಕೇಳುಗರು ಮತ್ತೆ ಮತ್ತೆ ಕೇಳಬೇಕೆನಿಸುವಂತಹ ಅತ್ಯಾಕರ್ಷಕ ಶೈಲಿ. ಈ ಹದವನ್ನೇ ನಾವು ಪಿ.ಬಿ.ಎಸ್ ಅವರ ಗಾಯನದಲ್ಲಿ ಗಮನಿಸಬಹುದು. ಈ ಪರಿಯ ಪಾಕಪ್ರಕ್ರಿಯೆಯಲ್ಲಿ ಉತ್ಕೃಷ್ಟ ಸ್ಥಿತಿಯನ್ನು ಮುಟ್ಟಿದ ಮೊದಲ ಭಾರತೀಯ ಹಿನ್ನೆಲೆ ಗಾಯಕ ಎಂದರೆ ಅದು ಪಿ.ಬಿ.ಎಸ್ ಮಾತ್ರ. ಇದಕ್ಕೆ ಅವರ ಶಾರೀರ ಕೂಡ ಒತ್ತಾಸೆ ನೀಡಿತ್ತು ಎಂಬುದೇ ಅವರ ಹಾಗು ನಮ್ಮ ನಿಮ್ಮೆಲ್ಲರ ಸೌಭಾಗ್ಯ. ನಾಭಿಹೃತ್ಕಂಠದಿಂದ ಹೊರಹೊಮ್ಮುತ್ತಿದ್ದ ಪಿ.ಬಿ ಅವರ ನಾದ ಹಾಡು ನಿಂತೊಡನೆಯೂ ಕಡೆಯ ಅಕ್ಷರದ ತುದಿಯಲ್ಲಿ ವೀಣೆಯ ತಂತಿಯಂತೆ ಕ್ಷಣಕಾಲ ಝೇಂಕರಿಸುತ್ತಿತ್ತು ! ಅದೇ ಅವರ ಗೀತಮಾಧುರ್ಯದ ವಿಶೇಷ !

ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಸಾವಕಾಶವಾಗಿ ಅವರೊಡನೆ ಆಪ್ತ ಸಮಾಲೋಚನೆ ನಡೆಸುವ ಸದವಕಾಶ ನನಗೊದಗಿ ಬಂದಿತ್ತು. ಚೆನ್ನೈನ ಅವರ ಅಚ್ಚುಮೆಚ್ಚಿನ ವುಡ್ ಲ್ಯಾಂಡ್ ಹೋಟೆಲ್‌ನಲ್ಲಿ ಅವರಿಗಾಗಿಯೇ ನಿತ್ಯವೂ ಅದರ ಮಾಲಿಕರು ಕಾದಿರಿಸುತ್ತಿದ್ದ ಮೇಜೊಂದರಲ್ಲಿ ಅಂದು ನಮ್ಮ ಚಿಂತನೆಗಳು ಬೆಳಗಿನ ಉಪಹಾರದೊಡನೆ ವಿಹರಿಸಲಾರಂಭಿಸಿತು. ಹಳೆ ಪೀಳಿಗೆಯ ಹೆಮ್ಮರದ ಬೇರು ಹೊಸ ಚಿಗುರಿಗೆ ನೀರೆರೆದು ಪೋಷಿಸಬೇಕೆಂಬ ಅವರ ತುಡಿತ ಅವರ ಮಾತಲ್ಲಿ ಎಲ್ಲೂ ಮುಚ್ಚುಮರೆ ಹಮ್ಮು ಬಿಮ್ಮು ಇಲ್ಲದೆ ಹೊರಹೊಮ್ಮಿತ್ತು. ಅಂದು ನನ್ನೊಡನೆ ಎಲ್ಲವನ್ನೂ ಹಂಚಿಕೊಳ್ಳಬೇಕೆಂಬುದರ ಹಿಂದೆ ಚಲನಚಿತ್ರ ಸಂಗೀತ ಮತ್ತೆ ಶಾಸ್ತ್ರೀಯತೆಯ ದಾರಿ ಹಿಡಿದರೆ ಒಳಿತು..ಇಲ್ಲದಿರೆ ಕೆಡುಕು ಎಂಬ ಕಾಳಜಿ ಎದ್ದು ಕಾಣುತ್ತಿತ್ತು !

ಹಿಂದಿನ ಸಂಗೀತಕ್ಕೂ ಇಂದಿನ ಸಂಗೀತಕ್ಕೂ ಏನು ವ್ಯತ್ಯಾಸ ನಿಮಗೆ ಕಾಣುತ್ತಿದೆ ಎಂದು ನಾನವರನ್ನು ಪ್ರಶ್ನಿಸಿದಾಗ “ಆಗ ರಾಗ….ಈಗ ವೇಗ…” ಎಂದು ವಿಷಾದ ವ್ಯಕ್ತಪಡಿಸಿದರು ! ಮುಂದುವರೆದು ಮಾತನಾಡಿದ ಅವರು ಅಂದು ಎಲ್ಲಾ ಹಾಡುಗಳು ರಾಗವನ್ನಾಧರಿಸಿ ತಯಾರಾಗುತ್ತಿದ್ದವು…ಇಂದು ರಾಗವೊಂದನ್ನು ಬಿಟ್ಟು ಬೇರೆ ಎಲ್ಲವನ್ನೂ ಆಧರಿಸಿಕೊಂಡು ಚಲನಚಿತ್ರ ಸಂಗೀತ ಮುಂದೆ ಸಾಗುತ್ತಿದೆ. ಮುಂದೆ ಮುಂದೆ ಸಾಗುತ್ತಿದೆ…ಆದರೆ ಅದೆಷ್ಟು ಗೀತೆಗಳು ಹಿಂದಿನಂತೆ ಚಿರಾಯುವಾಗಿ ಕೇಳುಗರ ಮನದಲ್ಲಿ ಇಂದು ನೆಲೆ ನಿಲ್ಲುತ್ತಿವೆ ಎಂಬ ಅವರ ಪ್ರೆಶ್ನೆಯ ಹಿಂದೆ ಪ್ರತೀ ಗೀತೆಯ ಗಾಯನದ ಹಿಂದೆ ಪಿ.ಬಿ ಅದೆಷ್ಟು ಶಾಸ್ತ್ರೀಯತೆಯನ್ನು ಹುಡುಕುತ್ತಿದ್ದರು ಹಾಗು ಅನುಭವಿಸಿ ಹಾಡುತ್ತಿದ್ದರು ಎಂಬುದು ನಮಗೆ ಗೊತ್ತಾಗುತ್ತದೆ. ಅಂತೆಯೇ ಗಾಂಭೀರ್ಯದಿಂದ ಕೂಡಿದ ಅವರ ಈ ನುಡಿಮುತ್ತು ನಮ್ಮ ಇಂದಿನ ಚಲನಚಿತ್ರ ಸಂಗೀತಗಾರರಿಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ ಅಲ್ಲವೇ?

10-9-2013

************

Dr.Chinmaya Rao

Dr.Chinmaya M.Rao who is the Founder, Editor and Publisher of KANNADA TIMES, who is from Honagodu, Sagar taluk, Shimoga district, is a significant figure in the world of music. Though born in a family of agriculturists, Rao showed love for music and literature throughout his childhood. For more details visit : https://www.facebook.com/chinmaya.m.rao
Back to top button

Adblock Detected

Please consider supporting us by disabling your ad blocker