ಸ್ಯಾಂಡಲ್ ವುಡ್

31 ಗೋವು ದತ್ತು ಪಡೆದ ಚಿತ್ರನಟ ಸುದೀಪ್

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸರ್ಕಾರಿ ಗೋಶಾಲೆಗಳಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆಯುತ್ತೇನೆ ಎಂದು ಚಿತ್ರನಟ ಸುದೀಪ್ ಹೇಳಿದರು.

ಇಂದು ತಮ್ಮ ನಿವಾಸದಲ್ಲಿ ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರೊಂದಿಗೆ ಗೋಪೂಜೆ ನೇರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗೋಸಂಕುಲ ಸಂರಕ್ಷಣೆಯಲ್ಲಿ ಮಹತ್ವದ ಕೆಲಸ ಮಾಡುತ್ತಿದೆ ಎಂದರು.

ನನ್ನನ್ನು ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ನೇಮಕ ಮಾಡಿ ಸರ್ಕಾರ ನನ್ನ ಜವಾಬ್ದಾರಿ ಹೆಚ್ಚಿಸಿದೆ. ನನ್ನನ್ನು ನೇಮಕ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಪ್ರಭು ಚವ್ಹಾಣ್ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ. ಸಾರ್ವಜನಿಕರು, ಚಿತ್ರರಂಗದ ಕಲಾವಿದರು, ಸಾರ್ವಜನಿಕ ಸಂಘ ಸಂಸ್ಥೆಗಳು ಗೋವುಗಳನ್ನು ದತ್ತು ಪಡೆಯಬೇಕು ಎಂದು ಸುದೀಪ್ ಮನವಿ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಹುಟ್ಟುಹಬ್ಬದಂದು 11 ಗೋವು ದತ್ತು ಪಡೆದು, ತಮ್ಮ ಕನಸಿನ ಕೂಸಾದ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದರು. ನಾನು ಕೂಡ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆದಿದ್ದೇನೆ ಎಂದು ಸಚಿವ ಪ್ರಭು ಚವ್ಹಾಣ್ ಅವರು ವಿವರಿಸಿದಾಗ ನಾನು ಕೂಡ ನಿಮ್ಮಂತೆ ದತ್ತು ಪಡೆಯುತ್ತಿದ್ದೇನೆ ಎಂದು ಸುದೀಪ್ ಅವರು ಸಚಿವರಿಗೆ ತಿಳಿಸಿದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ನಂತರ 100 ಸರ್ಕಾರಿ ಗೋಶಾಲೆ ಸ್ಥಾಪಿಸಲಾಗುತ್ತಿದೆ.‌ ರಾಷ್ಟ್ರದಲ್ಲಿಯೇ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಪ್ರಾಣಿ ಕಲ್ಯಾಣ ಮಂಡಳಿ, ಪ್ರಾಣಿ ಸಹಾಯವಾಣಿ ಕೇಂದ್ರ, ಪಶು ಸಂಜೀವಿನಿ ಆ್ಯಂಬುಲೆನ್ಸ್, ಗೋಮಾತಾ ಸಹಕಾರ ಸಂಘ, ಆತ್ಮ ನಿರ್ಭರ ಗೋಶಾಲೆ ಸ್ಥಾಪನೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ತಿಳಿಸಿದರು.

ಜಾನುವಾರುಗಳ ದತ್ತು ಯೋಜನೆಯಡಿ ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳ ಪ್ರತಿ ಜಾನುವಾರಿಗೆ ವಾರ್ಷಿಕ ರೂ.11,000/- (ರೂಪಾಯಿ ಹನ್ನೊಂದು ಸಾವಿರ ಮಾತ್ರ)ಗಳು, ಜಾನುವಾರುಗಳಿಗಾಗಿ ಆಹಾರ ಪೂರೈಕೆಗೆ ಯೋಜನೆಯಡಿ ಸಾರ್ವಜನಿಕರು ತಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಿ (ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಇತ್ಯಾದಿ) ರಾಸುಗಳಿಗೆ ಒಂದು ದಿನಕ್ಕೆ ರೂ.70ಗಳು, ಗೋಶಾಲೆಗಳಿಗೆ ದೇಣಿಗೆ ಮತ್ತು ಗೋಶಾಲೆ ನಿರ್ವಹಣೆ ಯೋಜನೆಯಡಿ ಸಾರ್ವಜನಿಕರು ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳಿಗೆ ಕನಿಷ್ಠ ರೂ.10/- ಯಿಂದ ತಮ್ಮ ಶಕ್ತಾನುಸಾರ ಎಷ್ಟು ಬೇಕಾದರೂ ಮೂಲಭೂತ ಸೌಕರ್ಯ ಹಾಗೂ ಇತರೆ ವೆಚ್ಚಗಳಿಗಾಗಿ ದೇಣಿಗೆ ನೀಡಬಹುದು. ಈ ಯೋಜನೆಗೆ 80 ಜಿ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಸಚಿವರು ಪುಣ್ಯಕೋಟಿ ಯೋಜನೆ ಕುರಿತು ಮಾಹಿತಿ ನೀಡಿದರು.

ಗೋಶಾಲೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ, ಸಾರ್ವಜನಿಕರ ಸಹಕಾರದಿಂದ ಯಾವುದೇ ಅಡಚಣೆಯಿಲ್ಲದೇ ನಡೆಸುವುದು ಈ ಯೋಜನೆ ಉದ್ದೇಶ. ಗೋವು ದತ್ತು, ಗೋಶಾಲೆಗೆ ದೇಣಿಗೆ ಮತ್ತು ಜಾನುವಾರುಗಳಿಗೆ ಆಹಾರ ಯೋಜನೆಯಡಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಗೋವುಗಳ ಪಾಲನೆಗೆ ಅವಕಾಶ ಕಲ್ಪಿಸಲಾಗಿದೆ. ತಾವು ಸರ್ಕಾರದೊಂದಿಗೆ ಕೈಜೋಡಿಸಿ ಗೋಸಂಕುಲ ಸಂರಕ್ಷಣೆಯಲ್ಲಿ ಭಾಗವಹಿಸಬೇಕು ಎಂದು ಪ್ರಭು ಚವ್ಹಾಣ್ ಅವರು ಚಿತ್ರನಟ ಸುದೀಪ್ ಅವರಿಗೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಚಿತ್ರನಟ ಸುದೀಪ್ ಅವರಿಗೆ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ ನೇಮಕಾತಿ ಪತ್ರ ವಿತರಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಇಲಾಖೆ ಕಾರ್ಯದರ್ಶಿ ಡಾ.ಸಲ್ಮಾ ಕೆ.ಫಾಹೀಮ್, ಆಯುಕ್ತೆ ಎಸ್.ಅಶ್ವಥಿ, ಅಪರ ನಿರ್ದೇಶಕ ಡಾ.ಶ್ರೀನಿವಾಸ್,ವೀರಲೋಕ ಬುಕ್ಸ್ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ ಸೇರಿದಂತೆ ಹಲವರಿದ್ದರು.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.