ಕೃಷಿ-ಖುಷಿ

ಫಲದ…ಸಾವಯವ ಕೃಷಿಗೆ ಕೊಡುಗೆ ಅಗಾಧ

ಕಾರ್ಯಕ್ರಮವೊಂದರಲ್ಲಿ ಶಾಸಕರೊಬ್ಬರು “ಸಾಯುವ ಕೃಷಿ..ಸಾಯುವ ಕೃಷಿ “ಎಂದು ಪದೆ ಪದೇ ಹೇಳುತ್ತಿದ್ದರು. ಪಾಪ ಅವರ ನಾಲಿಗೆ ಹೊರಳುತ್ತಿರಲಿಲ್ಲ ಅದು ಬೇರೆ ವಿಷಯ. ಆದರೆ ಕೃಷಿಯಂತೂ ಸಾಯುತ್ತಿರುವುದು ನಿಜ. ಅದರಲ್ಲೂ ಸಾವಯವ ಕೃಷಿ ಎಂದರೆ ಕೇಳುವವರೇ ಇಲ್ಲ. ಒತ್ತುವರಿ ಮಾಡುತ್ತಾ, ರಾಸಾಯನಿಕ ಬೀಜ-ಗೊಬ್ಬರ ಹಾಕುತ್ತಾ, ಕಾಡನ್ನೇ ನಾಡಾಗಿಸುತ್ತಾ ಊರು ಉದ್ಧಾರ ಮಾಡುವವರೆ ನಮ್ಮಲ್ಲಿ ಹೆಚ್ಚು. ಬೆಳೆಯಲಿ ಬಿಡಿ, ಆಹಾರೋತ್ಪನ್ನಗಳ ಕೊರತೆ ನೀಗಲಿ ಎಂದು ಸರಕಾರಗಳೂ ಶಾಮೀಲಾಗಿ ವಿಷ ಆಹಾರ ಉಣ್ಣಿಸಿದ್ದು ಇತಿಹಾಸ. ಆದರೂ ರೈತರೇನು ಆರ್ಥಿಕವಾಗಿ ಸಬಲರಾಗಲಿಲ್ಲ ಇದೇ ಮೋಸ. ರೈತನೂ ಗ್ರಾಹಕನೂ ವಿಷ ರಹಿತ ಆಹಾರ ತಿನ್ನಲಾಗಲಿಲ್ಲ. ಇವರಿಬ್ಬರ ದಾರಿ ತಪ್ಪಿಸಿದ ಸರಕಾರ ಹಾಗು ಮಧ್ಯವರ್ತಿಗಳಿಗೆ ಹಣ ತಿನ್ನದೆ ತಿಂದ ಅನ್ನ ಜೀರ್ಣವಾಗುತ್ತಿರಲಿಲ್ಲ.

ಆದರೆ ಸಮಾಧಾನಕರ  ಸಂಗತಿ ಎಂದರೆ ಈಗಿನ ಕರ್ನಾಟಕ ರಾಜ್ಯ ಸರಕಾರ  ಸಾವಯವ ಕೃಷಿ ಮಿಷನ್ ಸ್ಥಾಪಿಸಿ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವತ್ತ ಗಮನ ಹರಿಸಿದೆ. ಆದರೆ ಈ ಮೊದಲೇ ೧೯೯೯ರಲ್ಲೇ ಸಿ ಎಂ. ನಾರಾಯಣ ಶಾಸ್ತ್ರಿ ಅವರಿಂದ ಸ್ಥಾಪನೆಯಾದ ಫಲದ ಸಂಸ್ಥೆ ಈ ನಿಟ್ಟಿನಲ್ಲಿ ಹತ್ತಾರು ವರ್ಷಗಳ ಕಾಲ  ಶ್ರಮಿಸಿ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಶೋಭಿಸುತ್ತಿದೆ.

ಫಲದ-ಫಲಪ್ರದ

ಸಾವಯವ ಕೃಷಿ ಉತ್ಪನ್ನಗಳ ರಫ್ತು ಮಾರುಕಟ್ಟೆಯಲ್ಲಿ ಮು೦ಚೂಣಿಯಲ್ಲಿರುವ, ಬೆ೦ಗಳೂರಿನ ಫಲದ ಆಗ್ರೋ ರೀಸರ್ಚ್ ಫೌ೦ಡೇಶನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಕಳೆದ ಒ೦ದು ದಶಕಕ್ಕೂ ಮೇಲ್ಪಟ್ಟ ಅವಧಿಯಲ್ಲ್ಲಿ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸಾವಯವ ಕೃಷಿ ಮಾಡುವುದರಿ೦ದ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳುವ ಬಗ್ಗೆ ರೈತರಿಗೆ ಮಾರ್ಗದರ್ಶನ ಕೊಡುತ್ತ ಬ೦ದಿದೆ. ಸತತವಾಗಿ ಕಳೆದ ೩ ವರ್ಷ ಗಳಿ೦ದ ಈ ಕ೦ಪೆನಿಯು ಫೆಡರೇಶನ್ ಆಪ್ಹ್ ಕರ್ನಾಟಕ ಚೇ೦ಬರ್ ಆಪ್ಹ್ ಕಾಮರ್ಸ್ ಅ೦ಡ್ ಇ೦ಡಸ್ಟ್ರೀಸ್ ಅವರಿಂದ  ಪ್ರಶಸ್ತಿ ಪಡೆಯುತ್ತಾ ಬ೦ದಿದೆ. ಈ ಬಾರಿಯೂ ಕ೦ಪೆನಿಯ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಇತ್ತೀಚೆಗೆ ಬೆ೦ಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆ ಪ್ರಶಸ್ತಿ ಸ್ವೀಕರಿಸಿತು.

ಸಾವಯವ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ವ್ಯವಸ್ಥೆ ಒದಗಿಸುವಲ್ಲಿ ಮತ್ತು ರೈತರಿಗೆ ಹೆಚ್ಚಿನ ಬೆಲೆ ಕೊಡಿಸುವಲ್ಲಿ ಮಹತ್ವಪೂರ್ಣ ಕೆಲಸ ಮಾಡುತ್ತಾ ಪ್ರಗತಿಯಪಥದಲ್ಲಿ ದಾಪುಗಾಲು ಹಾಕುತ್ತಿರುವ ಕ೦ಪೆನಿಗೆ, ಇನ್ನಷ್ಟು ಸಾಧನೆ ಮಾಡಲು ಈ ಪ್ರಶಸ್ತಿಯಿ೦ದ ಪ್ರೋತ್ಸಾಹ ದೊರೆತಿದೆ.

ಸಾವಯವ ಗೊಬ್ಬರ ತಯಾರಿಕೆ ಹಾಗು ಮಣ್ಣಿನ ಫಲವತ್ತತೆಯನ್ನು ಕಾಪಾಡುವ  ಉದ್ದೇಶದಿಂದ ಸ್ಥಾಪಿತವಾದ ಫಲದ ಸಂಸ್ಥೆ ಇಂದು ಕರ್ನಾಟಕ ಹಾಗು ದೇಶದಾದ್ಯಂತ ತನ್ನದೇ ಆದ ರೈತ ಸಮೂಹವನ್ನು ಬೆಳೆಸುತ್ತಿದೆ.

ಭಾರತ  ಹಳ್ಳಿಗಳ ದೇಶ,ಅದರಲ್ಲೂ ಸಣ್ಣ ಹಿಡುವಳಿದಾರರೆ ಈ ದೇಶದ ಬೆನ್ನೆಲುಬು,ಹಾಗಾಗಿ ಪುಟ್ಟ ಪುಟ್ಟ ಜಮೀನಿರುವ ರೈತರನ್ನೇ ಕೇಂದ್ರಿಕರಿಸುತ್ತಾ ಬಂದಿದೆ ಫಲದ ಸಂಸ್ಥೆ.

    ಆಯ್ದ ಹಳ್ಳಿಗಳಲ್ಲಿ ರೈತರ ಸಭೆ ಸೇರಿಸಿ ಫಲದ ಸಂಸ್ಥೆಯ ಪ್ರತಿನಿಧಿಗಳು ಸಾವಯವ ಕೃಷಿಯ ಬಗ್ಗೆ ಮೊದಲು ಜಾಗೃತಿ ಮೂಡಿಸುತ್ತಾರೆ. ಜಾಗೃತರಾದ ರೈತರ ಭೂಮಿಗೆ ಭೇಟಿ ನೀಡಿ ಅದು ಸಾವಯವ ಕೃಷಿಗೆ ಸೂಕ್ತವೇ? ಎಂದು ಪರೀಕ್ಷಿಸುತ್ತಾರೆ. ಅಕ್ಕಪಕ್ಕದ ಜಮೀನಿನಿಂದ ಇವರ ಸಾವಯವ ಕೃಷಿಗೆ ದುಷ್ಪರಿಣಾಮ ಬೀರಬಹುದೆ? ಎಂದೂ ಗಮನಿಸುತ್ತಾರೆ.ಕುಟುಂಬದಲ್ಲಿ ಎಲ್ಲರೂ ಸಾವಯವ ಕೃಷಿಗೆ ಸಮಾನ ಮನಸ್ಕರಾಗಿದ್ದಾರೆಯೆ ಎಂದು ಅವರನ್ನೆಲ್ಲಾ ಸಂದರ್ಶಿಸುತ್ತಾರೆ, ಏಕೆಂದರೆ ಅಪ್ಪ ಸಾವಯವ ಮಗ ರಾಸಾಯನಿಕ ಎಂದಾದರೆ ಒಂದೇ ಭೂಮಿಯಲ್ಲಿ ಎರಡು ವಿಧವಾಗುತ್ತದೆ. ಹೀಗಾದಲ್ಲಿ ಉತ್ಪನ್ನ ಪೂರ್ಣ ಸಾವಯವ ಆಗುವುದಿಲ್ಲ ಎನ್ನುತ್ತಾರೆ ಫಲದ ಸಂಸ್ಥೆಯ ಉಮೇಶ್ ಅಡಿಗರು. ಹೀಗೆ ಸಂಸ್ಥೆಯ ನಿಯಮಗಳಿಗೆ ಸರಿ ಹೊಂದಿದಲ್ಲಿ ಅವರಿಗೆ ಸಂಸ್ಥೆಯ ಸದಸ್ಯತ್ವ ನೀಡಲಾಗುತ್ತದೆ.

ಫಲದಾಯಕ… ನಿರಾಳ ಸಾವಯವ ಕೃಷಿಕ

ಒಮ್ಮ ನೀವು ‘ಫಲದ’ ಸದಸ್ಯರಾದರೆ ಸಂಸ್ಥೆಯೇ ಪ್ರತಿ ಹಂತದಲ್ಲಿಯೂ ನಿಮಗೆ ಸೂಕ್ತ ಮಾರ್ಗದರ್ಶನವನ್ನು ನೀಡುತ್ತದೆ. ಬಿತ್ತನೆಬೀಜ ಅಥವಾ ಸಸಿ ವಿತರಣೆ,ಅದಕ್ಕೆ ಸಾವಯವ ಗೊಬ್ಬರ,ಕೃಷಿ ಹಾಗು ಕೊಯ್ಲಿನ ವಿಧಾನ,ಸಂಸ್ಕರಣೆ,ಪರಿಷ್ಕರಣೆ,ಉತ್ಪನ್ನದ ಅಂತಿಮ ಪರೀಕ್ಷೆ  ಇಷ್ಟೆಲ್ಲಾ ಆಗಿ ದೃಢೀಕರಣವಾದ ನಂತರ ರಫ್ತಾಗುತ್ತದೆ.

    ಅಯ್ಯೋ ನಾವು ಸಾವಯವ ಬೆಳೆಯುವುದೇ ಕಷ್ಟ,ಬೆಳೆದರೂ ಅದನ್ನು ಉತ್ತಮ ಬೆಲೆಗೆ ಯಾರು ತಾನೇ ಖರೀದಿ ಮಾಡಿಯಾರು? ಎಲ್ಲಿ ಕೊಡಬೇಕು?  ಹೆಚ್ಚು ಬೆಳೆ-ಬೆಲೆ ಬರುವುದೋ ಇಲ್ಲವೋ?ಇಂತಹ ಯಾವುದೇ ಆತಂಕವೂ ರೈತನಿಗೆ ಇರುವುದಿಲ್ಲ.ಸಂಸ್ಥೆಯೇ ಅದರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದು ಕೊಳ್ಳುತ್ತದೆ. ಅಂದರೆ ಈ ಸರಪಳಿಯಲ್ಲಿ ಬೆಳೆಯನ್ನು ಬೆಳೆದು ಅದನ್ನು ಕೊಡುವವರೆಗೂ ರೈತ ನಿರಾಳವಾಗಿರಬಹುದು.

ವೈಜ್ಞಾನಿಕವಾಗಿ ದೃಢೀಕೃತವಾದ ಸಾವಯವ ಗೊಬ್ಬರದಿಂದ ಅತಿ ಹೆಚ್ಚು ಬೆಳೆ ತೆಗೆದು,ಅತಿ ಹೆಚ್ಚು ಹಣ ತೆಗೆದು ಕೊಳ್ಳುತ್ತಿರುವ ಫಲದಾ ಸಂಸ್ಥೆಯ  ದೊಡ್ಡ ರೈತರ ಸಮೂಹವೇ ಇದಕ್ಕೆ ಸಾಕ್ಷಿ.

      ರೈತರ ಹಾಗು ಬಳಕೆದಾರರ ನಡುವೆ ನಂಬಿಕೆಯ ಸೇತುವೆಯನ್ನು ನಿರ್ಮಿಸಿರುವ ಫಲದ ಮಧ್ಯವರ್ತಿಗಳ ಮಧ್ಯಸ್ಥಿಕೆಗೆ ಬ್ರೇಕ್ ಹಾಕಿದೆ. ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಆಗಲೇ ಫಲದ ಸಂಸ್ಥೆ ಯಶಸ್ವಿಯಾಗಿ ಮಾಡುತ್ತಿದೆ.

ಫಲದ ಉತ್ಪನ್ನಗಳನ್ನು ನಮ್ಮ ದೇಶಕ್ಕಿಂತ ವಿದೇಶಿಯರೇ ಮುಗಿಬಿದ್ದು ಖರೀದಿಸುತ್ತಿದ್ದಾರೆಂದರೆ ಫಲದ ಉತ್ಪನ್ನಗಳ ಗುಣಮಟ್ಟವನ್ನು ನೀವೇ ಊಹಿಸಿಕೊಳ್ಳಬಹುದು.

ಫಲ’ದಾರಿ’-ಮಾದರಿ

‘ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಮಾತಿದೆ,ಆದರೆ ಇದು ನಾವು ಅನ್ನಪೂರ್ಣೆ ಎಂದು ಪೂಜಿಸುವ ಅನ್ನಕ್ಕೂ, ಆರೋಗ್ಯ ನೀಡುವ ಔಷಧಕ್ಕೂ ವಿಸ್ತಾರಗೊಂಡರೆ ವಿಷವನ್ನು ವ್ಯಾಪಾರ ಮಾಡಿದಂತೆ. ಇದಕ್ಕಿಂತ ವಿನಾಶಕಾರಿ ದೊಡ್ಡ ದ್ರೋಹ ಇನ್ನೊಂದಿಲ್ಲ. ಜಾಹಿರಾತುಗಳನ್ನು ನೋಡಿ ಮಾರುಹೋಗಿ ಮಾರುಕಟ್ಟೆಯಲ್ಲಿ ಅಂದವಾಗಿ ಪ್ಯಾಕಾಗಿರುವುದೇ ಶ್ರೇಷ್ಠವಾದದ್ದೆಂದು ಭಾವಿಸುವ ನಮಗೆ ಅವುಗಳೆಲ್ಲಾ ೧೦೦ ಕ್ಕೆ ೯೫ ರಷ್ಟು ಪರೋಕ್ಷವಾಗಿ ನಮಗೆ ವಿಷ ಉಣಿಸುತ್ತಿದೆ ಎಂಬ ಸತ್ಯ ಮನದಟ್ಟಾದರೆ ಮತ್ತೆ ಸಾವಯವ ಉತ್ಪನ್ನ ಬಯಸುತ್ತೇವೆ.ಆಗ ಸಾವಯವಕ್ಕೆ ಮತ್ತೆ ಬೇಡಿಕೆ ಬರುತ್ತದೆ. ಬೇಡಿಕೆ ಹೆಚ್ಚಾದಾಗ ರೈತ ಅದನ್ನೇ ಬೆಳೆಯುತ್ತಾನೆ. ಯಾರೋ ಹಾಕಿದ ಹಸಿರುಕ್ರಾಂತಿ ಎಂಬ ಭ್ರಮೆಯ ಟೋಪಿಯನ್ನು ತೆಗೆದೆಸೆದು ಭಾರತವನ್ನು ಸಂಪೂರ್ಣ ಸಾವಯವ ಕೃಷಿ ದೇಶವನ್ನಾಗಿಸಿದರೆ ಮಾತ್ರ ಭಾರತದ ರೈತ ವಿಶ್ವಕ್ಕೆ ಮಾದರಿಯಾಗುತ್ತಾನೆ ಅಲ್ಲವೇ?

ಸಾಯುವ ಕೃಷಿ ಸಾವಯವ ಕೃಷಿ ಆಗಲಿ.

http://www.phaladaagro.com/

ಚಿನ್ಮಯ ಎಂ.ರಾವ್ ಹೊನಗೋಡು

Friday, ‎July ‎1, ‎2011

******************

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.